ನಿತ್ಯ 8 ಕಿಮೀ ಕಾಲ್ನಡಿಗೆ ತಪ್ಪಿದ್ದಲ್ಲ!
ಇದ್ದೂ ಇಲ್ಲದಂತಾಗಿದೆ ಬಸ್ ಸೌಲಭ್ಯ ; ನೂರಕ್ಕೂ ಹೆಚ್ಚು ಮಕ್ಕಳಿಗೆ ತೊಂದರೆ
Team Udayavani, Jun 6, 2022, 11:56 AM IST
ತೆಲಸಂಗ: ಸಮೀಪದ ಕನ್ನಾಳ ಗ್ರಾಮದಿಂದ ಓದಿಗಾಗಿ ತೆಲಸಂಗ ಗ್ರಾಮಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇದ್ದೂ ಇಲ್ಲದಂತಾಗಿದ್ದು, ನಿತ್ಯ ಬರುವಾಗ 4, ಹೋಗುವಾಗ 4ರಂತೆ ಒಟ್ಟು 8 ಕಿ.ಮೀ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತೊಂದರೆ ಅನುಭವಿಸುತ್ತಿದ್ದಾರೆ.
ತೆಲಸಂಗದಿಂದ 6 ಕಿಮೀ ಅಂತರದ ಬನ್ನೂರ ಗ್ರಾಮಕ್ಕೆ ತೆರಳಿ, ಬನ್ನೂರಿಂದ 4 ಕಿಮೀ ಅಂತರದ ಕಕಮರಿ ಗ್ರಾಮಕ್ಕೆ ತೆರಳಿ ಅಲ್ಲಿಂದ 7 ಕಿಮೀ ಅಂತರದ ಕನ್ನಾಳ ಗ್ರಾಮ ತಲುಪುವ ವ್ಯವಸ್ಥೆ ಸಾರಿಗೆ ಸಂಸ್ಥೆ ಮಾಡಿಕೊಟ್ಟಿದೆ. ಶಾಲೆಗೆ ಬರುವಾಗಲೂ ಹೀಗೆಯೇ. ಕೇವಲ 4 ಕಿಮೀ ಕ್ರಮಿಸಿದರೆ ಕನ್ನಾಳ ಗ್ರಾಮ ಸೇರುವ ವಿದ್ಯಾರ್ಥಿಗಳು, 17 ಕಿಮೀ ಸುತ್ತಿ ಬರುವುದೆಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಾಗಿದೆ ಎನ್ನುತ್ತಾರೆ ಸ್ಥಳಿಯ ಪಾಲಕರು. ಹೀಗಾಗಿ ಬಸ್‌ನಲ್ಲಿ ಯಾರೂ ಕೂಡುವುದಿಲ್ಲ. ಓದಿಗಾಗಿ ಕಾಲ್ನಡಿಗೆಯಲ್ಲಿಯೇ ತೆಲಸಂಗಕ್ಕೆ ಓಡಾಡುತ್ತಿದ್ದಾರೆ. ನೇರವಾಗಿ ಕನ್ನಾಳ ಗ್ರಾಮಕ್ಕೆ ಬಸ್ ಓಡಿಸಬೇಕೆಂಬುದು ಪಾಲಕರ ಒತ್ತಾಯವಾಗಿದೆ.
ಭಯದಲ್ಲಿ ವಿದ್ಯಾರ್ಥಿನಿಯರು: ಶಾಲಾ-ಕಾಲೇಜಿಗೆ ಹೆಣ್ಮಕ್ಕಳು ಭಯದಲ್ಲಿಯೇ ಬಂದು ಹೋಗುವಂತಾಗಿದೆ. ಕನ್ನಾಳ ರಸ್ತೆಯಲ್ಲಿ ಮದ್ಯದಂಗಡಿ ಇದ್ದು, ಮದ್ಯ ಕುಡಿಯಲು ನೂರಾರು ಜನ ಇದೇ ರಸ್ತೆಯಲ್ಲಿ ಬಂದು ಹೋಗುತ್ತಾರೆ. ಹೊಲಗಳ ಮಧ್ಯೆ ಇರುವ ಈ ರಸ್ತೆಯಲ್ಲಿ ಮದ್ಯ ಸೇವಿಸಿದವರು, ಅಪರಿಚಿತರ ಓಡಾಟದ ನಡುವೆ ವಿದ್ಯಾರ್ಥಿನಿಯರು ಉಸಿರು ಗಟ್ಟಿ ಹಿಡಿದುಕೊಂಡೇ ಹೋಗುವಂತಾಗಿದೆ. ಗ್ರಾಮ ತಲುಪುವವರೆಗೂ ಏನಾಗತ್ತೋ ಎಂಬ ಭಯದಲ್ಲಿ ಮನೆ ಸೇರುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿನಿಯರು.
ಅಭ್ಯಾಸ ಯಾವಾಗ? ಬೆಳಿಗ್ಗೆ ಎದ್ದು ಮನೆಗೆಲಸ ಮಾಡಿಕೊಂಡು ಶಾಲಾ ಕಾಲೇಜಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳು 4 ಕಿಮೀ ನಡೆಯುತ್ತಲೇ ದಣಿಯುತ್ತಿದ್ದಾರೆ. ಇಡಿ ದಿನ ಶಾಲೆಯಲ್ಲಿ ಪಾಠ ಕೇಳಬೇಕು. ಮತ್ತೆ ನಡೆದು ಮನೆ ಸೇರಿದ ನಂತರ ಮನೆಗೆಲಸಕ್ಕೆ ಕೈ ಜೋಡಿಸುವಷ್ಟರಲ್ಲಿ ಸಾಕಾಗಿರುತ್ತದೆ. ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.
ಕನ್ನಾಳ ಗ್ರಾಮದ ನೂರಕ್ಕೂ ಹೆಚ್ಚು ಮಕ್ಕಳ ಓದಿಗೆ ಅನುಕೂಲ ಅನುಕೂಲವಾಗುವಂತೆ ಈ ಮಾರ್ಗವಾಗಿ ಬಸ್ ಓಡಿಸಬೇಕಿದೆ.
ಕಳೆದ ವರ್ಷ ಮನವಿ ಮಾಡಿದ್ದಕ್ಕೆ ಸಾರಿಗೆ ಸಂಸ್ಥೆ ಕನ್ನಾಳ ಗ್ರಾಮಕ್ಕೆ ಒಂದು ಬಸ್ ಓಡಿಸಿತ್ತು. ಪ್ರಸಕ್ತ ವರ್ಷವೂ ಅಥಣಿ ಸಾರಿಗೆ ಸಂಸ್ಥೆ ಅಧಿಕಾರಿಗೆ ಬಸ್ ಓಡಿಸಲು ವಿನಂತಿ ಪತ್ರ ಬರೆಯುತ್ತೇವೆ. –ಡಿ.ಎಮ್.ಘೋರ್ಪಡೆ, ಪ್ರಾಚಾರ್ಯರು ಬಿ.ವಿ.ವಿ.ಸಂಘ ತೆಲಸಂಗ
ಕಳೆದ ವರ್ಷವೂ ಈ ತೊಂದರೆ ತಪ್ಪಲಿಲ್ಲ. ಪ್ರಸಕ್ತ ವರ್ಷವೂ ನಿತ್ಯ 8 ಕಿಮೀ ನಡದುಕೊಂಡೇ ಹೋಗುತ್ತೇವೆ. ಈ ಮಾರ್ಗವಾಗಿ ಬಸ್ ಓಡಿಸಿ. ಇಲ್ಲವೇ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕನ್ನಾಳ ಗ್ರಾಮದಲ್ಲಿಯೇ ಇರುವುದರಿಂದ ಸರಕಾರ 9-10ನೇ ತರಗತಿ, ಪಿಯು ಕಾಲೇಜು ತೆರೆದು ಗ್ರಾಮೀಣ ಮಕ್ಕಳ ಓದಿಗೆ ಅನಕೂಲ ಮಾಡಿಕೊಡಬೇಕು. -ಬೀರಪ್ಪ ಅಸ್ಕಿ, ಪಿಯು ಕಾಲೇಜು ವಿದ್ಯಾರ್ಥಿ, ಕನ್ನಾಳ.
–ಜೆ.ಎಮ್.ಖೋಬ್ರಿ ತೆಲಸಂಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.