ಸುಧಾರಣೆ-ಜನಪ್ರಿಯತೆ ನಡುವೆ ಸಮತೋಲನ ಕಾಯ್ದುಕೊಂಡ ಬಜೆಟ್
Team Udayavani, Feb 2, 2023, 6:00 AM IST
ಕೇಂದ್ರ ಸರಕಾರದ 2023-24ನೇ ಸಾಲಿನ ಬಜೆಟ್ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಅನಿವಾರ್ಯತೆಗಳಿಗೆ ಸ್ಪಂದಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಚುನಾವಣ ವರ್ಷವಾಗಿರುವುದರಿಂದ ಈ ಬಾರಿ ಕೇಂದ್ರ ಸರಕಾರ ತನ್ನ ಸುಧಾರಣ ನೀತಿಗಳಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಜನಪ್ರಿಯತೆಯತ್ತ ವಾಲಿರುವುದಕ್ಕೆ ಬಜೆಟ್‌ನಲ್ಲಿನ ಅನೇಕ ಘೋಷಣೆಗಳೇ ಸಾಕ್ಷಿ. ಆದರೂ ಎಲ್ಲರನ್ನೂ ಒಳಗೊಂಡ ಸಂತುಲಿತ ಬಜೆಟ್ ಅನ್ನು ನೀಡಲು ಸರಕಾರ ಕಸರತ್ತು ನಡೆಸಿರುವುದಂತೂ ಸ್ಪಷ್ಟ.
ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿದ ಬಳಿಕ ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದ ಜನಸಾಮಾನ್ಯರು ಅದರಲ್ಲೂ ಮಧ್ಯಮ ವರ್ಗದ ಜನರ ನೋವಿಗೆ ಸಾಂತ್ವನ ಹೇಳುವ ಕಾರ್ಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ತಮ್ಮ ಮುಂಗಡಪತ್ರದಲ್ಲಿ ಮಾಡಿದ್ದಾರೆ. ಮುಖ್ಯವಾಗಿ ಆದಾಯ ತೆರಿಗೆ ವಿನಾಯಿತಿ ಮತ್ತು ಆದಾಯ ತೆರಿಗೆ ಸ್ಲಾéಬ್‌ಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಈ ವರ್ಗದ ಮಂದಿ ನಿಟ್ಟುಸಿರು ಬಿಡುವಂತೆ ಮಾಡಲಾಗಿದೆ. ಇನ್ನು ಬಜೆಟ್‌ನಲ್ಲಿ ಘೋಷಿಸಲಾಗಿರುವ ಹಲವಾರು ಯೋಜನೆಗಳಲ್ಲಿಯೂ ಈ ವರ್ಗದ ಜನರನ್ನು ಗಮನದಲ್ಲಿರಿಸಿ ಅನೇಕ ರಿಯಾಯಿತಿ, ಕೊಡುಗೆಗಳನ್ನು ಪ್ರಕಟಿಸಿರುವುದು ಕೂಡ ಬಜೆಟ್‌ನ ಧನಾತ್ಮಕ ಅಂಶ.
ಈ ಸಲವೂ ಆದ್ಯತ ವಲಯಗಳಾದ ಕೃಷಿ, ಆರೋಗ್ಯ, ರಕ್ಷಣೆ, ಶಿಕ್ಷಣ, ಮೂಲಸೌಕರ್ಯಕ್ಕೆ ಹೆಚ್ಚಿನ ಮೊತ್ತವನ್ನು ಮೀಸಲಿರಿಸಲಾಗಿದೆ. ಕೃಷಿ ರಂಗಕ್ಕೆ ಸಹಜವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಉತ್ತೇಜನ ಲಭಿಸಿದ್ದು ಕೌಶಲ ಆಧಾರಿತ ಶಿಕ್ಷಣಕ್ಕೆ ಮತ್ತಷ್ಟು ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿಸಲಾಗಿದೆ. ದೇಶದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ರಕ್ಷಣೆ ಮತ್ತು ಗೃಹ ಇಲಾಖೆಗೆ ಭಾರೀ ಪ್ರಮಾಣದ ಅನುದಾನವನ್ನು ಮೀಸಲಿರಿಸುವ ಮೂಲಕ ಈ ವಿಚಾರಗಳಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಸರಕಾರ ಘಂಟಾಘೋಷವಾಗಿ ಸಾರಿದೆ.
ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 50 ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ಏರೋಡ್ರೋಮ್‌ಗಳನ್ನು ನಿರ್ಮಿಸಲುದ್ದೇಶಿಸಲಾಗಿದೆ. ಅಲ್ಲದೆ 100 ಹೊಸ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ 50 ಪ್ರವಾಸಿ ಸ್ಥಳಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಯುವಜನತೆಯನ್ನು ಕೇಂದ್ರೀ ಕರಿಸಿ ಕೌಶಲಾಭಿವೃದ್ಧಿ, ಸ್ಟೈಫಂಡ್ ನೀಡಿಕೆ, ಯುವಜನರಲ್ಲಿ ಕೌಶಲಾಭಿವೃದ್ಧಿಯ ಜತೆಜತೆಯಲ್ಲಿ ಉದ್ಯಮಶೀಲತೆ ಬೆಳವಣಿಗೆಗೆ ಉತ್ತೇಜನ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇಂದಿನ ಅಗತ್ಯತೆಯಾಗಿರುವ ಹಸುರು ಇಂಧನ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 350 ಬಿಲಿಯನ್ ಕೋ. ರೂ. ಹೂಡಿಕೆ ಮಾಡಲು ನಿರ್ಧರಿಸಲಾಗಿದ್ದರೆ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಕ್ರಮವಾಗಿ ಈ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಬಳಸಲಾಗುವ ಲೀಥಿಯಂ-ಐಯಾನ್ ಸೆಲ್‌ಗಳ ಉತ್ಪಾದನೆಗೆ ಅಗತ್ಯವಾಗಿರುವ ಕಚ್ಚಾ ವಸ್ತುಗಳ ಆಮದಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಬರೋಬ್ಬರಿ 5,300 ಕೋ. ರೂ. ಅನುದಾನ ಮತ್ತು ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಮೂಲಕ ಕರ್ನಾಟಕದ ದಶಕಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಲಭಿಸಿದೆ.
ಪ್ರಸಕ್ತ ವರ್ಷ 9 ರಾಜ್ಯಗಳ ವಿಧಾನಸಭೆಗಳಿಗೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಸರಕಾರ ಅನಿವಾರ್ಯವಾಗಿ ಜನಪ್ರಿಯ ಯೋಜನೆಗಳತ್ತ ಮುಖಮಾಡಿದಂತೆ ತೋರುತ್ತಿದೆ. ಇದನ್ನು ಹೊರತುಪಡಿಸಿದಂತೆ ಜಾಗತಿಕ ಸವಾಲುಗಳ ನಡುವೆಯೂ ಕೇಂದ್ರ ಸರಕಾರ ಸಮದರ್ಶಿ ಬಜೆಟ್‌ನ್ನು ದೇಶದ ಮುಂದಿರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.