ಬಾಲ್ಯದ ನೆನಪು: ಅಂದು ಮಂಗಳೂರು ಟು ಮುಂಬೈ ಹಡಗಿನಲ್ಲಿ ಪ್ರಯಾಣ…
ವಿ.ಟಿ. ಯಿಂದ ವಿಕ್ಟೋರಿಯಾದಲ್ಲಿ ಕ್ಲಕ್ ಕ್ಲಕ್ ಎನ್ನುತ್ತಾ ಒಂದು ರೂ. ಹನ್ನೆರಡಾಣೆಗೆ ಭವ್ಯ ಹಳೆ ಮುಂಬಯಿ ದರ್ಶನ
Team Udayavani, Jan 14, 2021, 12:39 PM IST
ಬಾಲ್ಯದಲ್ಲಿ ಹಿರಿಯ ಬಂಧುಗಳು ಮಂಗಳೂರಿನಿಂದ ಹಡಗೇರಿ ಮುಂಬಯಿಗೆ ಹೊರಡುತ್ತಿದ್ದರೆ, ಆ ಹಡಗು ಪಯಣ ಒಂದಿನ ನನ್ನದೂ ಆಗಬಹುದೆಂದು ಕಾಯುತ್ತಿದ್ದವಳು ನಾನು. ಆದರೆ ಮದುವೆಯಾಗಿ ಮತ್ತೆರಡು ವರ್ಷ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಮುಂಬಯಿಗೆ ಹೊರಡುವ ಹೊತ್ತಿಗೆ ಆ ಹಡಗುಗಳ
ಸೇವೆ ನಿಂತೇ ಹೋಗಿತ್ತು.
ಚಿಕ್ಕಮ್ಮ, ಚಿಕ್ಕಪ್ಪ ಮದುವೆಯಾಗಿ ಮುಂಬಯಿಗೆ ಹಡಗಿನಲ್ಲಿ ಹೊರಡುವಾಗ ನನಗೆ ನಿದ್ದೆಯಿಂದ ಕಣ್ಣೆಳೆದು ಬರುತ್ತಿತ್ತು. ಊಟಕ್ಕಾಗಿ ಕಾಯುತ್ತಾ, ಹಡಗಿನ ಕನಸು ಕಾಣುತ್ತಾ ಕುಳಿತಿದ್ದ ನನ್ನ ಕಣ್ಣುಗಳಲ್ಲಿ ಸಿಂದಬಾದ್‌ನ ಹಡಗೂ, ಅವನು ದ್ವೀಪವೆಂದು ಕೊಂಡು ವಿರಮಿಸಿ, ಮತ್ತದು ಚಲಿಸತೊಡಗಿದಾಗ ದ್ವೀಪವಲ್ಲ, ತಿಮಿಂಗಿಲವೆಂದರಿತ ರೋಚಕ ವಿವರವೂ ಸುಳಿಯುತ್ತಿತ್ತು.
ಬಾಲ್ಯದಲ್ಲಿ ಅಮ್ಮನಿಂದ ಬೈಸಿಕೊಂಡಾಗ, ಊರಿನ ಸಮುದ್ರ ಕಿನಾರೆಯುದ್ದಕ್ಕೂ ನಡೆದು ಮುಂಬಯಿ ಸೇರುವೆ, ಅಲ್ಲಿರುವ ಚಿಕ್ಕಪ್ಪ, ಅತ್ತೆಯಂದಿರು ನನ್ನನ್ನು ಕರೆಸಿಕೊಳ್ಳಬಹುದು ಎಂದುಕೊಂಡ ವಯಸ್ಸಿನಲ್ಲಿ ಆ ಹಾದಿಯ ನಡುವೆ ದಾಟಬೇಕಾದ ನದಿಗಳೂ, ಅಳಿವೆಗಳೂ ಬರುತ್ತವೆ ಎಂಬುದೂ ತಿಳಿದಿರಲಿಲ್ಲ!. ಪ್ರಥಮ ಮುಂಬಯಿ ಪಯಣದಲ್ಲಿ ಮಹಾನಗರ ಕಣ್ಣಿಗೆ ಬಿದ್ದಂತೇ ಗೋಚರಿಸಿದ ಕಟ್ಟಡಗಳ ಕಾಡು ಎಲ್ಲ ಉತ್ಸಾಹವನ್ನೂ ಬತ್ತಿಸಿ ಬಿಟ್ಟಿತ್ತು. ಆಗ ನೆಲೆಯಾಗಿದ್ದ ಭಾಂಡುಪ್‌ನ ನಮ್ಮ ಐದು ವಿಂಗ್‌ಗಳ, ನಾಲ್ಕು ಮಹಡಿಯ ಕಾಸ್ಮೋಪೊಲಿಟನ್ ವಸತಿ ಸಮುಚ್ಚಯ, ಇದೇ ಮುಂಬಯಿ ಎಂದು ವಿಶ್ವದರ್ಶನವನ್ನೇ ಮಾಡಿಸಿತ್ತು.
ಅವಕಾಶ ಸಿಕ್ಕಾಗ ನಗರದ ಪೂರ್ವ, ಪಶ್ಚಿಮ, ದಕ್ಷಿಣೋತ್ತರ ಬಂಧುಗಳಲ್ಲಿಗೆ ಹೋಗಿಬರುವುದು ಮಹಾನಗರದ ಎಲ್ಲತರದ ಜೀವನಾನುಭವ ಸಾರವಾಗಿತ್ತು. ವಿ.ಟಿ. ಯಿಂದ ವಿಕ್ಟೋರಿಯಾದಲ್ಲಿ ಕ್ಲಕ್ ಕ್ಲಕ್ ಎನ್ನುತ್ತಾ ಒಂದು ರೂ. ಹನ್ನೆರಡಾಣೆಗೆ ಭವ್ಯ ಹಳೆ ಮುಂಬಯಿ ದರ್ಶನದೊಂದಿಗೆ ಒಪೆರಾ ಹೌಸ್, ನಾನಾ ಚೌಕ್, ರೈಲಿನಲ್ಲಿ ಡೊಂಬಿವಲಿಯ ಬಂಧುಗಳಲ್ಲಿಗೆ ಪಯಣಿಸುವಾಗ ಮುದ ನೀಡುವ ಮುಂಬ್ರಾ, ದಿವಾಗಳ ಹಸುರರಾಶಿಯ, ನೀರಮಡುಗಳ ಪ್ರಕೃತಿಸಿರಿಯ
ದರ್ಶನ, ಬಾಂದ್ರಾ ಕಲಾನಗರದ ಅಜ್ಜನ ಮನೆಯಿಂದ ಶಶಿ ಕಪೂರ್, ರಾಜೇಶ್ ಖನ್ನಾ ಎಂದು ಉತ್ಸಾಹದಿಂದ ಪುಟಿಯುತ್ತಾ ಥಿಯೇಟರ್‌ಗಳಿಗೆ ಲಗ್ಗೆ, ವರ್ಲಿ, ಸಾಂತಾಕ್ರಾಸ್, ಗೋರೆಗಾಂವ್ ಗಳ ನಿಯಮಿತ ಭೇಟಿ, ವಸಾಯ್‌ಯ ಬಂಧುಗಳಲ್ಲಿಗೂ ಬಹುದೂರವೆನಿಸುವ ಪಯಣ!
ಟಿ.ವಿ. ಎಂಬ ಬ್ರಹ್ಮರಾಕ್ಷಸ ನಗರದ ಮನೆ, ಮನೆಗಳನ್ನೂ ಹೊಕ್ಕು, ಬಂಧುವರ್ಗದ ಹೊಕ್ಕುಬಳಕೆಯ ಸುಮಧುರ ಸಂಬಂಧವನ್ನು ಸ್ವಾಹಾ ಮಾಡಿತು. ದೂರವಾಣಿ ಸೌಲಭ್ಯಕ್ಕೂ ಇತಿಶ್ರೀ ಬಿದ್ದು ಮೊಬೈಲ್ ಎಂಬ ಚರವಾಣಿ ಎಲ್ಲ ಸಂಬಂಧವನ್ನೂ ಅಂಗೈಗೇ ಸೀಮಿತಗೊಳಿಸಿತು. ಮತೀಯ ದಂಗೆಗಳ ಹಾಲಾಹಲದಲ್ಲಿ ನಗರ ಸುಟ್ಟುಹೋಗಿ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬಂದಾಗ, ಬಾಂಬ್ ಸ್ಫೋಟಕ್ಕೂ ಸಮಚಿತ್ತ ಕಳೆದುಕೊಳ್ಳದೆ ಎದ್ದು ನಿಂತಾಗ, ಮಹಾಪ್ರಳಯದಲ್ಲೂ ಮಾನವೀಯತೆಯ ಸಹೃದಯ ಸಿರಿಯನ್ನು ತೋರಿದಾಗ, ಜೀವನಶ್ರದ್ಧೆಯ, ಜೀವನೋತ್ಸಾಹದ, ಮಾನವೀಯ ಬಂಧಗಳ
ಕರ್ಮಭೂಮಿ ಎಂಬ ಧನ್ಯತಾಭಾವ ಹೃದಯವನ್ನು ತುಂಬಿತು.
ಮನೆಕೆಲಸದ ಸಹಾಯಕರ ಉಸ್ತುವಾರಿಗೆ ಮನೆಯನ್ನೇ ಬಿಟ್ಟು ಹೋಗಬಹುದಾದ ನಂಬುಗೆ, ವಿಶ್ವಾಸದ ಪ್ರತೀಕ, ನಮ್ಮ ಮುಂಬಯಿ. ಊರಿನಿಂದ ದೂರಾಗಿ ಈ ಪರನಾಡಿನಲ್ಲಿ ನನ್ನ ಕನ್ನಡನುಡಿ ಕಿವಿಗೆ ಬೀಳಲೆಂದು ಹಾತೊರೆದ ಕಾಲವೆಷ್ಟು! ಯಾರೂ ಕನ್ನಡದವರಿಲ್ಲವೇ ಎಂದು ಹೃದಯ ತಳಮಳಿಸಿದ ಬಗೆಯೆಂತು! ಮತ್ತೆ ನನ್ನ ಪ್ರಥಮ ಅನುವಾದ ಕೃತಿಯ ಲೋಕಾರ್ಪಣೆಯೊಂದಿಗೆ ಮುಂಬಯಿ ಕನ್ನಡ ಸಾಹಿತ್ಯಲೋಕದಲ್ಲಿ ಒಂದಾದ ಸಂತಸ, ಸಂಭ್ರಮದ ಪರಿ ಎಂತಹುದು!
ನಮ್ಮ ಸಂಘ, ಸಂಸ್ಥೆಗಳು, ಕನ್ನಡ ಪತ್ರಿಕೆಗಳ ಮೂಲಕ ಹೃದಯವನ್ನು ತಟ್ಟಿದ ಕನ್ನಡ ನುಡಿ, ನಗರದ ಸಾಹಿತಿ ಶ್ರೇಷ್ಠರ ಸಹೃದಯ ಸಂಸರ್ಗ, ಸಾಹಿತ್ಯಲೋಕದಲ್ಲಿ ಮನವರಳಿಸಿದ ಪುಸ್ತಕ ಸಂಪದ, ನನ್ನ ನೆಲೆವೀಡು ಘಾಟ್‌ಕೋಪರ್‌ನ ಸಸ್ಯಕಾಶಿ, ಅಲ್ಲಿ ಮನಕ್ಕೆ ತಂಪೆರೆವ ಆಕರ್ಷಕ ಪಕ್ಷಿಲೋಕದ ಸಿರಿಸಂಪದ.
ಆದರೆ ಕಳೆದೊಂದು ವರ್ಷದಿಂದ ಎಲ್ಲವೂ ಸ್ತಬ್ಧವಾದಂತೆ ಬಂದೆರಗಿದ ಕೊರೊನಾದ ಆಘಾತ ಜೀವಸಂಕುಲವನ್ನೇ ತಾಡಿಸಿದಂತಿದೆ. ಪಕ್ಷಿಗಳೂ ಸಹಜಸ್ವಭಾವವನ್ನು ಮರೆತಿವೆ. ಸದಾ ನನ್ನ ಹೂಕುಂಡಗಳಲ್ಲಿ ಮೊಟ್ಟೆಯಿಡುತ್ತಿದ್ದ ಪಾರಿವಾಳಗಳು ಈ ವರ್ಷ ಒಂದು ಮೊಟ್ಟೆಯಿಟ್ಟದ್ದು ಕಾಣಲಿಲ್ಲ. ನಗರವೀಗ ಸಹಜ ಸ್ಥಿತಿಗೆ ಮರಳುತ್ತಿರುವಾಗ, ಬಂಧುತ್ವ, ಸ್ನೇಹದ ಬೆಸುಗೆ ಇನ್ನಷ್ಟು ಬಿಗಿಯಾಗುವಂತಿದ್ದರೆ, ವಿಶ್ವವನ್ನೇ ಕಬಳಿಸುತ್ತಿರುವ ವೈರಾಣುವಿನ ಕಬಂಧ ಬಾಹುವಿನಿಂದ ನಗರ ಹೊರಬರಲೆತ್ನಿಸಿದ ಪರಿ ಅನನ್ಯ! ಈ ದಿಸೆಯಲ್ಲಿ ನಗರ ನೈರ್ಮಲ್ಯ ಕಾಪಾಡುವ ಮುಂಬಯಿ ಮಹಾನಗರಪಾಲಿಕೆಯ ಸ್ಮರಣೀಯ ನಗರ ಸೇವಕರುಗಳಿಗೆ, ಅಗತ್ಯ ವಸ್ತುಗಳು ಜನರ ಕೈ ಸೇರುವಂತೆ ಶ್ರಮಿಸಿದವರೆಲ್ಲರಿಗೆ, ಅಹರ್ನಿಶಿ ಇತರರಿಗಾಗಿ ಜೀವತೇದ ವೈದ್ಯಕೀಯ ಕ್ಷೇತ್ರದ ಧನ್ವಂತರಿಗಳಿಗೆ, ಸೇವಾದೀಪ್ತಿಯ ದಾದಿಯರಿಗೆ ಈ ನಗರ ಎಂದೆಂದೂ ಋಣಿಯಾಗಬೇಕಿದೆ.
ಶ್ಯಾಮಲಾ ಮಾಧವ
ಮುಂಬಯಿ
ಅನುವಾದಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.