Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಲು ನಿರಾಕರಿಸಿದ ವಧು
Team Udayavani, Apr 27, 2024, 7:05 AM IST
ಉಪ್ಪಿನಂಗಡಿ: ಮದುವೆ ಮಂಟಪದಲ್ಲಿ ವರನಿಂದ ತಾಳಿ ಕಟ್ಟಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯಲ್ಲಿದ್ದ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಎ. 26ರಂದು ನಡೆದಿದೆ.
ಕೊಣಾಲು ಗ್ರಾಮದ ಕೋಲ್ಪೆ ದಿ| ಬಾಬು ಗೌಡ ಅವರ ಪುತ್ರ ಉಮೇಶ ಅವರ ವಿವಾಹವು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ| ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ. 26ರ ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು.
ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ದಾರೆ ಸೀರೆ ಹಾಗೂ ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ ಹಾಗೂ ವರ ಉಮೇಶ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು.
ಇನ್ನು ವರ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ. ಇದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿರುವುದರಿಂದ ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ಔತಣ ಕೂಟಕ್ಕೆ ಸಿದ್ಧತೆ
ವರನ ಮನೆಯಲ್ಲಿ ಮದುವೆ ಔತಣ ಕೂಟಕ್ಕೆ ಮಾಂಸಾಹಾರಿ ಊಟದ ಸಿದ್ಧತೆ ಮಾಡಲಾಗಿತ್ತು. ಸುಮಾರು 500 ಮಂದಿಗೆ ಊಟದ ಸಿದ್ಧತೆ ನಡೆಸಲಾಗಿದ್ದು, 1 ಸಾವಿರದಷ್ಟು ಐಸ್ ಕ್ರೀಮ್ ಸಹ ತರಿಸಲಾಗಿತ್ತು. ಕೊನೇ ಕ್ಷಣದಲ್ಲಿ ಮದುವೆ ರದ್ದಾಗಿರುವುದರಿಂದ ಎರಡೂ ಕಡೆಯವರಿಗೂ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.
ಮತ್ತೆ ಮದುವೆಯಾಗಲು ವರನ ನಿರಾಕರಣೆ
ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಆಗಿರುವ ಅಚಾತುರ್ಯಕ್ಕೆ ಪಶ್ಚಾತ್ತಾಪ ಪಟ್ಟು ಉಮೇಶ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದರು.ಆದರೆ ಆಗ ವರ ಉಮೇಶ್ ಅವರು ಮದುವೆಯಾಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.