Karnataka: ಕರ್ನಾಟಕಕ್ಕೆ ಹೆಗ್ಗುರುತುಗಳ ಮುಕುಟ
Team Udayavani, Nov 1, 2023, 12:36 AM IST
ಆರಂಭದಲ್ಲಿ ಮೈಸೂರು ರಾಜ್ಯವೆಂದೇ ಕರೆಸಿಕೊಳ್ಳುತ್ತಿದ್ದ ನಮ್ಮ ಹೆಮ್ಮೆಯ “ಕರ್ನಾಟಕ’ಕ್ಕೆ ಈಗ ಸುವರ್ಣ ಸಂಭ್ರಮ. ಇಂಥ ಕರುನಾಡು ಸಾಮಾಜಿಕ, ಸಾಂಸ್ಕೃತಿಕ, ಕಲಾ ವೈಭವದಲ್ಲಿ ವೈವಿಧ್ಯವನ್ನು ಒಳಗೊಂಡಿದೆ. ನಾಡಿನ ಕೀರ್ತಿಯನ್ನು ಜಗದೆತ್ತರಕ್ಕೆ ಪಸರಿಸಬಲ್ಲ ಹೆಗ್ಗುರುತುಗಳನ್ನೂ ಹೊಂದಿದೆ. ಕರ್ನಾಟಕವು ತನ್ನದೇ ಆದ ಧ್ವಜ, ನಾಡಗೀತೆ, ಪಕ್ಷಿ, ಪ್ರಾಣಿ, ಚಿಟ್ಟೆ ಮತ್ತು ಮರವನ್ನೂ ಹೊಂದಿದೆ ಎಂಬುದು ವಿಶೇಷ.
ರಾಜ್ಯ ಧ್ವಜ ಹಳದಿ “ಚಿನ್ನ” ಕೆಂಪು “ಕ್ರಾಂತಿ”
1960ರ ದಶಕದಲ್ಲಿ ನಮ್ಮದೇ ಕನ್ನಡದ ನೆಲದಲ್ಲಿ ನಾವು ಪರಕೀಯರಂತೆ ಬದುಕುವಂಥ ಸ್ಥಿತಿ ಏರ್ಪಟ್ಟಿತ್ತು. ನೆರೆ ರಾಜ್ಯ ತಮಿಳು ನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದ್ದು ಒಂದೆಡೆಯಾದರೆ ಬೆಂಗಳೂ ರಿನಲ್ಲಿ ವಿಪರೀತವಾಗಿದ್ದ ತಮಿಳು ಸಂಘಗಳ ಆರ್ಭಟ ಅದೇ ಪಕ್ಷದ ಕೆಂಪು ಮತ್ತು ಕಪ್ಪು ಬಣ್ಣದ ಬಾವುಟಗಳನ್ನು ಕರುನಾಡಿನಲ್ಲಿ ಹಾರಿಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತಿತ್ತು. ಕರ್ನಾಟಕದಲ್ಲೇ ಇದ್ದೂ ಕನ್ನಡಿಗರು ಎಂದು ಹೇಳಿಕೊಳ್ಳಲು ಹಾಗೂ ಕನ್ನಡದ ಪರ ಸಂಘಟನೆಗಳನ್ನು ಸ್ಥಾಪಿಸಲೂ ಹಿಂದೇಟು ಹಾಕುವಂತಿದ್ದ ಆ ಪರಿಸ್ಥಿತಿಯಲ್ಲಿ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ (ಅ.ನ.ಕೃ) ಹಾಗೂ ಮಾ. ರಾಮಮೂರ್ತಿ ಅವರು ಕನ್ನಡಪರ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು. ನಾಡಿನಲ್ಲಿ ಹಾರಾಡುತ್ತಿದ್ದ ತಮಿಳಿಗರ ಬಾವುಟವನ್ನು ಇಳಿಸುವುದೇನೋ ಸರಿ! ಆದರೆ ಅದರ ಬದಲಿಗೆ ನಾಡಿನ ಸೂಚಕವಾಗಿ ಹಾರಿಸಲು ಧ್ವಜವೇ ಇಲ್ಲದ ಕಾಲದಲ್ಲಿ ಕನ್ನಡಿಗರ ಸ್ವಾಭಿಮಾನದ ಸೂಚಕವಾಗಿ ತಲೆ ಎತ್ತಿದ್ದು ಕನ್ನಡದ ಧ್ವಜ! ಮೊದಲಿಗೆ 7 ಸಾಮ್ರಾಜ್ಯಗಳ ಹಾಗೂ ನಾಡಿನ ಸಮೃದ್ಧಿಯ ಸಾಂಕೇತಿಕವಾಗಿ ಧ್ವಜವನ್ನು ಅಭಿವೃದ್ಧಿ ಪಡಿಸಲಾಯಿತು.
ಅನಂತರದಲ್ಲಿ ವಿವಿಧ ಚರ್ಚೆಗಳು ನಡೆದು ಸರಳವಾಗಿರುವ ರೀತಿಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಅಂತಿಮಗೊಳಿಸಲಾಯಿತು. 1966ರ ಬಳಿಕ ಡಿಎಂಕೆ ಧ್ವಜಗಳಿದ್ದೆಡೆ ಕರ್ನಾಟಕದ ಬಾವುಟ ರಾರಾಜಿಸಲಾರಂ ಭಿಸಿತು. “ಹಳದಿ’ ಚಿನ್ನದ ನಾಡಿನ ಸಂಕೇತವೆಂದು ಬಿಂಬಿತವಾದರೆ, ಕೆಂಪು “ಕ್ರಾಂತಿ’ ಎಂದೂ! ಈ ಎರಡೂ ಬಣ್ಣಗಳು ಕನ್ನಡಾಂಬೆ ರಾಜರಾಜೇಶ್ವರಿ ಸದಾಕಾಲದ ಮುತ್ತೈದೆ ಎಂಬುದರ ಸೂಚಕವೆಂದು ಬಿಂಬಿತವಾದವು.
ಡಾ| ರಾಜ್ ಕೈಯಲ್ಲಿ ಹೆಮ್ಮೆಯ ಧ್ವಜ: ಕನ್ನಡ ಧ್ವಜ ರೂಪಿತವಾಗಿದ್ದ ಬಳಿಕ ಅದಕ್ಕೆ ಪ್ರಚಾರ ನೀಡಲು ಎಲ್ಲೆಡೆ ಧ್ವಜಸ್ಥಾಪನೆಗೆ ಪ್ರೋತ್ಸಾ ಹಿಸುವ ಕಾರ್ಯಗಳು ನಡೆಯುತ್ತಿದ್ದವು. ಈ ನಡುವೆ ಡಾ| ರಾಜ್ ಕುಮಾರ್ ಅವರ 100ನೇ ಸಿನೆಮಾ ಭಾಗ್ಯದ ಬಾಗಿಲು ತೆರೆಕಂಡು ರಾಜ್ ಕುಮಾರ್ ಅವರ ಅದ್ದೂರಿ ಮೆರವಣಿಗೆಯೂ ನಡೆಯುತ್ತಿತ್ತು. ಈ ವೇಳೆ ಟೋಪಿ ಬಸವರಾಜು ಎಂಬವರು ನಾಡಿನ ಧ್ವಜವನ್ನ ಡಾ| ರಾಜ್ ಅವರ ಕೈಗಿತ್ತರು. ರಾಜ್ ಕುಮಾರ್ ಕನ್ನಡದ ಬಾವುಟ ಪ್ರದರ್ಶಿಸುವುದರ ಜತೆಗೆ ಕನ್ನಡದ ಧ್ವಜ ಮನ-ಮನೆಗಳಲ್ಲಿ ಚಿರಸ್ಥಾಯಿಯಾಗಲು ಆರಂಭಗೊಂಡಿತು. ರಾಜ್ಯದ ಹೊರಭಾಗಗಳಿಗೆ ತೆರಳಿದರೂ ಕನ್ನಡಿಗರೆಂದು ಗುರುತಿಸಲು ಗುರುತು ನೀಡಿದ್ದೇ ಕನ್ನಡದ ಧ್ವಜ !
ನಾಡಗೀತೆ ನಾಡಿನ ಗರಿಮೆ ನಾಡಗೀತೆ
ಮೈಸೂರು ಸಂಸ್ಥಾನದ ಗೀತೆ ಯಾಗಿದ್ದ “ಕಾಯೌ ಗೌರಿ’ ಜತೆಗೆ “ಉದಯವಾಗಲಿ ಚೆಲುವ ಕನ್ನಡ ನಾಡು’ ರೀತಿಯಲ್ಲಿ ಹಲವು ಗೀತೆಗಳನ್ನು ಈ ಹಿಂದೆ ಬಳಸಲಾ ಗುತ್ತಿತ್ತು. ನಾಡನ್ನು ವರ್ಣಿಸು ವಂಥ ವಿವಿಧ ಗೀತೆಗಳೂ ಇದ್ದವು. ಈ ನಡುವೆ ರಾಜ್ಯಕ್ಕಾಗಿಯೇ ಸೀಮಿತವಾದ ಗೀತೆಯೊಂದನ್ನು ರಚಿಸ ಬೇಕು, ಅದನ್ನೇ ಬಳಸಬೇಕು ಎನ್ನುವಂಥ ವಾದ ಕೇಳಿಬಂದಾಗ ಸಾಹಿತ್ಯ ಪರಿಷತ್‌ನಲ್ಲಿ ಜಿ. ನಾರಾ ಯಣರು ಅಧ್ಯಕ್ಷರಾಗಿದ್ದ ವೇಳೆ ಪ್ರಸಕ್ತವಿರುವ “ಜೈ ಭಾರತ ಜನನಿಯ ತನುಜಾತೆ’ ನಾಡಗೀತೆ ಅಧಿಕೃತ ಗೊಂಡಿತು.
ಈ ನಾಡಗೀತೆ ಕೇವಲ ನಾಡಿನ ಸೊಬಗನ್ನಷ್ಟೇ ವರ್ಣಿಸುವುದಾಗಿರಲಿಲ್ಲ, ಬದಲಿಗೆ ಕನ್ನಡತನಕ್ಕೆ ಹಿಡಿ ದಂಥ ಕೈಗನ್ನಡಿಯಾಗಿತ್ತು! ಕನ್ನಡದ ಬಗ್ಗೆ ಅಪ್ರತಿಮ ಭಾಷಾಭಿಮಾನವನ್ನಿಟ್ಟುಕೊಂಡಿದ್ದ ಕುವೆಂಪು ಅವರು ನಾಡಗೀತೆಯ ಮೂಲಕ ಕನ್ನಡತನಕ್ಕೊಂದು ಸ್ಪಷ್ಟರೂಪ ನೀಡಿದ್ದರು. ಸಹ್ಯಾದ್ರಿಯಿದ ಹಿಡಿದು ರಾಜ್ಯದ ಮೂಲೆ-ಮೂಲೆಗಳ ವರೆಗಿನ ಕಂಪನ್ನು ನಾಡಗೀತೆ ಹೊತ್ತಿದೆ, ಡಂಕಣ- ಜಕಣರಿಂದ ಹಿಡಿದು, ಕಲೆ, ಸಂಸ್ಕೃತಿ, ಆಡಳಿತ, ಭ್ರಾತೃತ್ವ, ಶಾಂತಿ ಎಲ್ಲದರ ಸಮ್ಮಿಲನದ ರೂಪವೇ ಕರುನಾಡು ಎಂಬುದನ್ನು ನಾಡಗೀತೆ ಸಾರಿದೆ. ಹೀಗೆ ಕರ್ನಾಟಕದ ಒಟ್ಟಾರೆ ರೂಪವನ್ನು ಹೊತ್ತಂತ ಗೀತೆಯನ್ನು ಸರಕಾರಿ ಶಾಲೆಗಳಲ್ಲಿ ಹಾಡುವ ಮೂಲಕ ಮುನ್ನೆಲೆಗೆ ತರಲಾಯಿತು. ಮಕ್ಕಳ ತೊದಲ ನುಡಿಯಲ್ಲಿ ರೂಪುಗೊಂಡ ಗೀತೆ ಅನಂತರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ರಾಜ್ಯದ ಅಧಿಕೃತ ನಾಡಗೀತೆಯಾಗಿ ಅಂಗೀಕಾರಗೊಂಡಿತು. ಇಂದಿಗೆ ನಾಡಗೀತೆ ಎಂದರೆ ಸಂಪೂರ್ಣ ಕರ್ನಾಟಕದ ಚಿತ್ರಣವಾಗಿದೆ…
ನಾಡ ಚಿಟ್ಟೆ ಸದರ್ನ್ ಬರ್ಡ್ ವಿಂಗ್
ಕರ್ನಾಟಕದ ನಾಡ ಚಿಟ್ಟೆಯಾಗಿ ಸದರ್ನ್ ಬರ್ಡ್ ವಿಂಗ್ ಅನ್ನು ಗುರುತಿಸಲಾಗಿದೆ. 2017ರ ಆ.2ರಂದು ಕರ್ನಾಟಕ ಸರಕಾರ ಈ ಚಿಟ್ಟೆಗೆ ರಾಜ್ಯದ ಚಿಟ್ಟೆ ಸ್ಥಾನಮಾನ ನೀಡಿತು. ಈ ಚಿಟ್ಟೆಯು ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಕಂಡು ಬರುತ್ತದೆ. ಜತೆಗೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಈ ಚಿಟ್ಟೆ ಕಾಣಿಸಿಕೊಳ್ಳುತ್ತದೆ. ದಕ್ಷಿಣ ಭಾರತದಲ್ಲಿ ಈ ಚಿಟ್ಟೆಯ ತಳಿ ನಾಶವಾಗುತ್ತಿರುವುದು ಮತ್ತು ಕರ್ನಾಟಕದಲ್ಲಿ ಕಂಡು ಬರುತ್ತಿರುವುದನ್ನು ಗುರುತಿಸಿ, ಇದಕ್ಕೆ ರಾಜ್ಯ ಚಿಟ್ಟೆ ಎಂಬ ಸ್ಥಾನಮಾನ ನೀಡಲಾಯಿತು. ಈ ಮೂಲಕ ಈ ಚಿಟ್ಟೆಯನ್ನು ಉಳಿಸುವ ನಿಟ್ಟಿನಲ್ಲಿ ಕಂಕಣ ತೊಡಲಾಯಿತು. ಜತೆಗೆ ಜನರಲ್ಲಿಯೂ ಈ ಚಿಟ್ಟೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ನಿರ್ಧರಿಸಲಾಯಿತು. ಅಲ್ಲದೆ ಈ ಚಿಟ್ಟೆಯ ಬಣ್ಣ, ಕರ್ನಾಟಕದ ಧ್ವಜಕ್ಕೂ ಹೋಲಿಕೆಯಾಗುತ್ತದೆ.
ನಾಡ ಪಕ್ಷಿ ನೀಲಕಂಠ
ಕರ್ನಾಟಕ ರಾಜ್ಯ ಪಕ್ಷಿಯಾಗಿ ನೀಲಕಂಠ ಅಥವಾ ದಾಸ ಮಗರೆ ಎಂಬ ಪಕ್ಷಿಯನ್ನು ಕರೆಯಲಾಗುತ್ತದೆ. ಇದಕ್ಕೆ ಇಂಗ್ಲಿಷ್‌ನಲ್ಲಿ ಇಂಡಿಯನ್ ರೋಲರ್ ಎಂದೂ ಕರೆಯಲಾಗುತ್ತದೆ. ದಾಸಮಗರೆಯು ಮಧ್ಯಮ ಗಾತ್ರದಲ್ಲಿದ್ದು, ಪಾರಿವಾಳವನ್ನು ಹೋಲುವ, ನೇರಳೆ, ನೀಲಿ ಮತ್ತು ಕೆಂಪು ಬಣ್ಣಗಳಿಂದ ಕೂಡಿದ ಹಕ್ಕಿಯಾಗಿದೆ. ಇವುಗಳ ಆಹಾರ ಕ್ರಿಮಿ ಕೀಟಗಳು, ಚೇಳು, ಜೇಡ, ಸಣ್ಣ ಸರೀಸೃಪಗಳು, ಅಂದರೆ ಹಾವುಗಳು, ಉಭಯಚರಗಳು ಇತ್ಯಾದಿಗಳಾಗಿವೆ. ಕ್ರಿಮಿಕೀಟಗಳೇ ಇದಕ್ಕೆ ಪ್ರಮುಖ ಆಹಾರವಾಗಿರುವುದರಿಂದ ಇದಕ್ಕೆ ರೈತ ಮಿತ್ರ ಎಂದೂ ಕರೆಯುತ್ತಾರೆ. ದಾಸಮಗರೆಯು ವಿಷ್ಣುವಿಗೆ ಪ್ರಿಯವಾದ ಪಕ್ಷಿ ಎಂಬ ಪ್ರತೀತಿಯೂ ಇದೆ. ಕರ್ನಾಟಕದಲ್ಲಿ 2002ರಿಂದ ಇದನ್ನು ರಾಜ್ಯ ಪಕ್ಷಿ ಎಂದು ಕರೆಯಲು ಆರಂಭಿಸಲಾಯಿತು. ಕರ್ನಾಟಕದ ಜತೆಗೆ ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲೂ ಇದನ್ನು ರಾಜ್ಯ ಪಕ್ಷಿ ಎಂದು ಕರೆಯಲಾಗುತ್ತದೆ.
ನಾಡ ಮರ ಶ್ರೀಗಂಧ
ಶ್ರೀಗಂಧದ ನಾಡು ಎಂದೇ ಕರೆಯಲ್ಪಡುವ ಕರ್ನಾಟಕದ ಗಂಧಕ್ಕೆ ಜಗತ್ತಿನಲ್ಲೇ ಉತ್ತಮ ಹೆಸರಿದೆ. ಮೈಸೂರು ಸ್ಯಾಂಡಲ್ ಸೋಪ್ ಕೂಡ ಕರ್ನಾಟಕದ ಶ್ರೀಗಂಧದ ಕಥೆಯನ್ನು ಹೇಳುತ್ತದೆ. ಮೈಸೂರು ಭಾಗದಲ್ಲಿ ಶ್ರೀಗಂಧವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹೀಗಾಗಿಯೇ ಕರ್ನಾಟಕದಲ್ಲಿ ಶ್ರೀಗಂಧವನ್ನು ರಾಜ್ಯದ ಮರ ಎಂದು ಗುರುತಿಸಲಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಗಂಧವನ್ನು ಬೆಳೆಯುವ ಮತ್ತು ರಕ್ಷಿಸುವ ಹೊಣೆಯನ್ನು ತಾವೇ ಹೊತ್ತಿವೆ. ಕರ್ನಾಟಕದಲ್ಲಿ ಯಾವಾಗಿನಿಂದ ಕರೆಯಲಾಗಿತ್ತು ಎಂಬ ಮಾಹಿತಿ ಇಲ್ಲವಾದರೂ ಟಿಪ್ಪು ಸುಲ್ತಾನ್ ಅರಸನಾಗಿದ್ದ ಕಾಲದಲ್ಲೇ ಇದನ್ನು ರಾಯಲ್ ಟ್ರೀ ಎಂದು ಕರೆಯಲಾಗುತ್ತಿತ್ತು.
ನಾಡಪ್ರಾಣಿ ಆನೆ
ಕರ್ನಾಟಕದಲ್ಲಿ ಆನೆಗಳಿಗೆ ವಿಶಿಷ್ಟ ಆದರಗಳುಂಟು. ಆನೆಗಳ ಸಂಖ್ಯೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ನಂ.1 ಆಗಿದೆ. ಜಗದ್ವಿಖ್ಯಾತ ಮೈಸೂರು ದಸರೆಯಲ್ಲಿ ಆನೆಗಳೇ ಅತ್ಯಂತ ಆಕರ್ಷಣೆ. ಇಲ್ಲಿ 700 ಕೆ.ಜಿ. ಚಿನ್ನದ ಅಂಬಾರಿ ಹೊರುವ ಆನೆ, ರಾಜ್ಯದ ಸಂಕೇತವಾಗಿ ಮಾರ್ಪಟ್ಟಿದೆ. ಈ ವರ್ಷದ ಗಣತಿಯಂತೆ ರಾಜ್ಯದಲ್ಲಿ 6,395 ಆನೆಗಳಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, 346ರಷ್ಟು ಹೆಚ್ಚಳವಾಗಿದೆ. ವಿಶೇಷವೆಂದರೆ, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಆನೆಗಳ ಸಂತತಿ ಹೆಚ್ಚಾಗುತ್ತಲೇ ಇದೆ.
ಕರ್ನಾಟಕದ ಬಹುತೇಕ ಎಲ್ಲ ಅಭಯಾರಣ್ಯಗಳಲ್ಲೂ ಆನೆಗಳ ಸಂತತಿ ಹೆಚ್ಚಾಗಿಯೇ ಇದೆ. ಅಲ್ಲದೆ ಆನೆಗಳನ್ನು ಉಳಿಸಿ ಸಲುಹುವ ಸಲುವಾಗಿ 2002ರಲ್ಲಿ ರಾಜ್ಯ ಸರಕಾರ ಆನೆಯನ್ನು ರಾಜ್ಯ ಪ್ರಾಣಿ ಎಂದು ಘೋಷಿಸಿತು.
ನಾಡ ಲಾಂಛನ ವಿಜಯದ ಪ್ರತೀಕ ಗಂಡಭೇರುಂಡ
ಕರ್ನಾಟಕದ ರಾಜ್ಯಲಾಂಛನ 2 ತಲೆಯ ಗಂಡ ಭೇರುಂಡ ! ಈ ರಾಜ್ಯ ಲಾಂಛನಕ್ಕೆ ಬರೋಬ್ಬರಿ 4 ಸಾವಿರ ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ಗಂಡಭೇರುಂಡ ಎನ್ನುವುದು ವಿಷ್ಣುವಿನ ಅವತಾರವೆಂದು ವರ್ಣಿತವಾದರೆ, ಇತಿಹಾಸದಲ್ಲಿ ಗಂಡಭೇರುಂಡ ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನಗಳ ವಿಜಯದ ಸಂಕೇತವೆಂದೇ ಪ್ರಸಿದ್ಧಿ ಹೊಂದಿದೆ. ದಕ್ಷಿಣದಲ್ಲಿ ಚಾಲುಕ್ಯ, ಹೊಯ್ಸಳ, ಕಾಕತೀಯ ಮತ್ತು ಕೋಟ ಸಾಮ್ರಾಜ್ಯಗಳ ಅರಸರು ಶಕ್ತಿಯ ಪ್ರತೀಕವಾದ ಈ ಚಿಹ್ನೆಯನ್ನು ತಮ್ಮ ರಾಜ್ಯ ಲಾಂಛನವನ್ನಾಗಿ ಅಳವಡಿಸಿಕೊಂಡಿದ್ದರು. ಕರ್ನಾಟಕದಲ್ಲಿ ಹಕ್ಕ-ಬುಕ್ಕರು
ಸ್ಥಾಪಿಸಿದ್ದ ವಿಜಯನಗರ ಸಾಮ್ರಾಜ್ಯದ ಲಾಂಛನವಾಗಿ ಗಂಡಭೇರುಂಡ ರಾರಾಜಿಸಿತು! ಗಂಡಭೇರುಂಡ ಪಕ್ಷಿಯು ತನ್ನ 2 ಕಾಲು ಮತ್ತು ಕೊಕ್ಕುಗಳಲ್ಲಿ 4 ಆನೆಗಳನ್ನು ಹಿಡಿದಿರುವುದು ದಕ್ಷಿಣದ ಬೀದರ್, ಬಿಜಾಪುರ, ಅಹ್ಮದಾನಗರ್ ಹಾಗೂ ಗೋಲ್ಕೊಂಡದ ನಾಲ್ಕು ಮತಾಂಧ ಸುಲ್ತಾನರ ಮೇಲಿನ ವಿಜಯದ ಪ್ರತೀಕವೆಂದು ಬಿಂಬಿತವಾಗಿದೆ. ಒಟ್ಟಾರೆ ಮತಾಂಧ ಆಕ್ರಮಣಗಳಿಗೆ ಸಡ್ಡು ಹೊಡೆದು, ಅಖಂಡ ದಕ್ಷಿಣ ಭಾರತದಲ್ಲಿ ಸಾಮ್ರಾಜ್ಯಸ್ಥಾಪನೆಯ ವಿಜಯದ ಸಾಂಕೇತಿಕವಾಗಿರುವ ಗಂಡಭೇರುಂಡ ಶೌರ್ಯ, ಶಕ್ತಿ, ಸಾಹಸದ ಪ್ರತೀಕವಾಗಿದೆ. ಕರ್ನಾಟಕದ ರಾಜವಂಶಗಳ ವೀರ ಪರಾಕ್ರಮದ ಕುರುಹಾಗಿ ರಾಜ್ಯ ಲಾಂಛನವಾಗಿ ಇಂದಿಗೂ ನೆಲೆಗೊಂಡಿದೆ.
ನಾಡ ಸೌಧ ಸ್ವಾಭಿಮಾನದ ಸಂಕೇತ ವಿಧಾನಸೌಧ
ಇಪ್ಪತ್ತನೇ ಶತಮಾನದ ಅಪೂರ್ವ ವಾಸ್ತುಶಿಲ್ಪ, ದಕ್ಷಿಣದ ತಾಜ್ ಮಹಲ್ ಎಂದೇ ಗುರುತಿಸಿಕೊಂಡ, ದೇಶದ ಅತೀದೊಡ್ಡ ಶಾಸನ ಸಭಾ ಕಟ್ಟಡ, ಕರ್ನಾಟಕದ ಹೆಮ್ಮೆ, ದೇಶದ ಪ್ರತಿ ಷ್ಠೆಯ ಗರಿ ವಿಧಾನಸೌಧ! ಕೆಂಗಲ್ ಹನುಮಂತಯ್ಯನವರ ಕನಸಿನ ಕೂಸಾದ ಈ ವಿಧಾನಸೌಧ ಕರುನಾಡಿನ ಸ್ವಾಭಿಮಾನದ ಸಂಕೇತ! ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೆ.ಸಿ.ರೆಡ್ಡಿ ಅವರು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾಗಿದ್ದರು. ಆಗ ಅಠಾರ ಕಚೇರಿಯೇ ಶಾಸನ ಸಭೆಯಾಗಿತ್ತು. ಆಡಳಿತಕ್ಕೇ ಜಾಗ ಸಾಲದ ಆ ಸಂದರ್ಭದಲ್ಲಿ ಶಾಸಕರನ್ನು ಭೇಟಿ ಮಾಡಲು ಬರುತ್ತಿದ್ದ ಮತದಾರರೊಂದಿಗೆ ಸಂಪರ್ಕ ಸಾಧಿಸುವುದಕ್ಕೂ ಸ್ಥಳಾವಕಾ ಶವಿರಲಿಲ್ಲ.
ಇದನ್ನು ಮನಗಂಡು ಅಮೆರಿಕನ್ ಶೈಲಿಯಲ್ಲಿ ಪ್ರತ್ಯೇಕ ಶಾಸಕಾಂಗ ಕಟ್ಟಡ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಆದರೆ ಕಟ್ಟಡದ ವಿನ್ಯಾಸ ದೇಶಿಯವಲ್ಲವೆಂದು ಕೆಂಗಲ್ ಹನುಮಂತಯ್ಯನವರು ಅದನ್ನು ವಿರೋಧಿಸಿದ್ದರು. ಅನಂತರ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ಕೆಂಗಲ್ ಹನುಮಂತಯ್ಯ ನವರು ಮುಖ್ಯಮಂತ್ರಿಯಾದರು. ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ರಷ್ಯಾ ನಿಯೋಗವು “ನಗರದಲ್ಲಿ ನಿಮ್ಮ ಆಡಳಿತ ಕಚೇರಿಯೂ (ಅಠಾರ ಕಚೇರಿಯೂ) ಸೇರಿದಂತೆ ಎಲ್ಲ ಪ್ರಮುಖ ಕಟ್ಟಡಗಳೂ ಐರೋಪ್ಯ ಶೈಲಿಯಲ್ಲಿವೆ, ನಿಮ್ಮ ವಾಸ್ತುಶಿಲ್ಪ ಎಲ್ಲಿದೆ? ಎಂದು ಕೆಂಗಲ್ ಹನುಮಂತಯ್ಯನವರನ್ನು ಕೇಳಿತ್ತಂತೆ. ಇದಾದ ಬೆನ್ನಲ್ಲೇ ಪರಂಪರೆಯ ಅರಿವಿನ ಜತೆಗೆ ಜನರ ಅಧಿಪತ್ಯ ಪರಮೋಚ್ಚತೆಯನ್ನು ಎತ್ತಿಹಿಡಿಯಲು ಭಾರತೀಯ ವಾಸ್ತುಶೈಲಿಯಲ್ಲೇ ಶಾಸ ಕಾಂಗ ಕಟ್ಟಡ ನಿರ್ಮಾಣವಾಗಬೇಕೆಂದು ಕೆಂಗಲ್ ಹನುಮಂತಯ್ಯನವರು ಆದೇಶ ಹೊರಡಿಸಿದರು. ರಷ್ಯಾ ನಿಯೋಗದ ಅಭಿಪ್ರಾಯವನ್ನು ಸವಾಲಾಗಿ ಸ್ವೀಕರಿಸಿದ ಪರಿಣಾಮ ಕನ್ನಡನಾಡಿನ ವಾಸ್ತುಶಿಲ್ಪದ ವೈಭವ ಇದೀಗ ವಿಧಾನ ಸೌಧದ ಮೇಲೆ ಸ್ವಾಭಿಮಾನವಾಗಿ ಪ್ರತಿಫಲಿಸುತ್ತಿದೆ. ಬಹುವಿಶೇಷವೆಂದರೆ ವಿಧಾನಸೌಧದ ನಿರ್ಮಾಣಕ್ಕಾಗಿ ರಾಜಸ್ಥಾನದಿಂದ ತರಿಸಿದ ಅಮೃತಶಿಲೆ ಬಿಟ್ಟರೆ ಮಿಕ್ಕಂತೆ ಕಲ್ಲು, ಮರ ಎಲ್ಲವೂ ಸ್ಥಳೀಯವಾದುವೇ ಆಗಿವೆ.
ಕರ್ನಾಟಕದ ಬಗ್ಗೆ ಗೊತ್ತಿಲ್ಲದ ಸಂಗತಿಗಳು
ಕರ್ನಾಟಕ ರಾಜ್ಯ ಸ್ಥಾಪನೆಯಾಗಿದ್ದು 1956ರಲ್ಲಿ. ಆದರೆ ಆಗ ಇದಕ್ಕೆ ಮೈಸೂರು ರಾಜ್ಯ ಎಂಬ ಹೆಸರಿದ್ದದ್ದು, ಬಳಿಕ 1973ರಲ್ಲಿ ಕರ್ನಾಟಕ ಎಂಬ ಹೆಸರು ಬಂದಿತು. ಈಗ ಕರ್ನಾಟಕ ಹೆಸರು ಬಂದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ.
ಭಾರತದಲ್ಲೇ ಅತ್ಯಂತ ಹೆಚ್ಚು ಕಾಫಿ ಬೆಳೆಯುವ ರಾಜ್ಯ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ್‌ಫಾಲ್ಸ್ ಭಾರತದ ಎರಡನೇ ಅತ್ಯಂತ ಎತ್ತರದ ಜಲಪಾತವಾಗಿದೆ.
ಇಡೀ ಜಗತ್ತಿಗೇ ವೈಭವ ಸಾರಿದ್ದ ವಿಜಯನಗರ ಸಾಮ್ರಾಜ್ಯ ಇರುವುದು ಕರ್ನಾಟಕದಲ್ಲೇ. ಇದರ ವೈಭವದ ದ್ಯೋತಕವನ್ನು ಇಂದಿಗೂ ಹಂಪಿ ಜಗತ್ತಿನ ಮುಂದೆ ಇಡುತ್ತಿದೆ. ಇದು ಯುನೆಸ್ಕೋ ಗುರುತಿಸಿರುವ ತಾಣ.
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿರುವ ಗೋಮಟೇಶ್ವರ ಮೂರ್ತಿಯು ಜಗತ್ತಿನ ಅತ್ಯಂತ ಎತ್ತರದ ಏಕಶಿಲಾ ಮೂರ್ತಿಯಾಗಿದೆ.
ಲಾಲ್‌ಬಾಗ್ ಸಸ್ಯಕಾಶಿಯಲ್ಲಿರುವ ಬೆಟ್ಟಗಳು 3 ಸಾವಿರ ವರ್ಷಕ್ಕಿಂತ ಹಳೆಯದಾಗಿವೆ.
ವಿಜಯಪುರ ಜಿಲ್ಲೆಯಲ್ಲಿ 5 ನದಿಗಳು ಹರಿಯುತ್ತಿವೆ ಎಂಬುದು ವಿಶೇಷ.
ಇಡೀ ದೇಶಕ್ಕೇ ರಾಷ್ಟ್ರಧ್ವಜ ನೇಯ್ದು ಕೊಡುವುದು ಹುಬ್ಬಳ್ಳಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.