2022ರ ಹೊರಳು ನೋಟ; ಶಾಲಾ ಪಠ್ಯಪುಸ್ತಕ ವಿವಾದ
Team Udayavani, Dec 22, 2022, 6:15 AM IST
ಹತ್ತನೇ ತರಗತಿ ಪಠ್ಯಪುಸ್ತಕದಲ್ಲಿ ಭಗತ್‌ಸಿಂಗ್ ಕುರಿತ ಅಧ್ಯಾಯವನ್ನು ಕೈಬಿಟ್ಟು ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಲಾ ಗಿದೆ ಎಂಬ ವಿಷಯ ರಾಜ್ಯದಲ್ಲಿ ಮೇ 17ರಂದು ರಾಜಕೀಯ ವಿವಾದ ಸೃಷ್ಟಿಸಿತ್ತು. ಈ ವಿಚಾರದ ಕುರಿತು ಬಿಜೆಪಿಯ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದವು. ಈ ಹಿಂದೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಕೈಬಿಟ್ಟ ವಿಷಯದ ಕುರಿತಂತೆಯೂ ವಿವಾದ ತಲೆದೋರಿತ್ತು. ಇದರ ನಡುವೆ ಭಗತ್‌ಸಿಂಗ್ ಪಠ್ಯವನ್ನು ಕೈಬಿಟ್ಟಿಲ್ಲ, ಹೆಡ್ಗೆವಾರ್ ಭಾಷಣವನ್ನು ಸೇರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸರಕಾರ ಸಮರ್ಥಿಸಿಕೊಂಡಿತ್ತು. ಭಗತ್‌ಸಿಂಗ್ ಪಠ್ಯವನ್ನು ಕೈಬಿಟ್ಟಿಲ್ಲ ಎಂಬುದಾಗಿ ರಾಜ್ಯ ಪಠ್ಯ ಪುಸ್ತಕ ಸಂಘವೂ ಸ್ಪಷ್ಟನೆ ನೀಡಿತ್ತು.
ದಿನದಿಂದ ದಿನಕ್ಕೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಿ, ವರದಿ ತಿರಸ್ಕರಿಸುವಂತೆ ಆಗ್ರಹಗಳೂ ಕೇಳಿಬಂದಿದ್ದವು.
ಏತನ್ಮಧ್ಯೆ ತಮ್ಮ ಸರ್ವಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದ ವೇಳೆ ಕುವೆಂಪು, ಗಾಂಧಿ, ಅಂಬೇಡ್ಕರ್, ಕಿತ್ತೂರು ಚೆನ್ನಮ್ಮ ಅವರಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಪ್ಪು ಮಾಹಿತಿ ನೀಡಿದ್ದಾರೆಂದು ಪ್ರೊ| ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಿಸರ್ಜನೆ
ಈ ವಿವಾದಕ್ಕೆ ಸಂಬಂಧಿಸಿದಂತೆ ಜೂ.1ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ರೋಹಿತ್ ಚಕ್ರ ತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ವಿಸರ್ಜಿಸುವ ನಿರ್ಧಾರ ಕೈಗೊಂಡರು. ಅದರಂತೆ ಜೂ.3ರಂದು ಸರಕಾರ ಸಮಿತಿಯನ್ನು ವಿಸ ರ್ಜಿಸಿತ್ತು. ಜತೆಗೆ ಪಠ್ಯಪುಸ್ತಕದಲ್ಲಿನ ವಿವಾದಿತ ಅಂಶಗಳನ್ನು ಮರುಪರಿಶೀಲಿಸಿ ಸೂಕ್ತ ಪರಿಷ್ಕರಣೆಗೂ ನಿರ್ಧರಿಸಲಾಗಿತ್ತು. ಇದರೊಂದಿಗೆ ದ್ವಿತೀಯ ಪಿಯುಸಿ ಅಧ್ಯಾಯದಲ್ಲಿ ಹೊಸ ಧರ್ಮಗಳ ಉದಯದ ಬಗ್ಗೆ ಇರುವ ಗೊಂದಲವನ್ನು ಪರಿಷ್ಕರಣೆ ಮಾಡಲು ರೋಹಿತ್ ಚಕ್ರತೀರ್ಥ ಅವರಿಗೆ ಸೂಚಿಸಲಾಗಿತ್ತು. ಆದರೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡುದದರಿಂದ ಜೂ. 7ರಂದು ರೋಹಿತ್ ಚಕ್ರತೀರ್ಥ ಸಮಿತಿಯನ್ನು ಸರಕಾರ ಬರ್ಖಾಸ್ತು ಮಾಡಿತ್ತು. ಜೂ. 27ರಂದು ಪಠ್ಯದ ಮರುಪರಿಷ್ಕರಣೆಗೆ ರಾಜ್ಯ ಸರಕಾರ ಸಮ್ಮತಿಸುವುದರೊಂದಿಗೆ ವಿವಾದ ತಣ್ಣಗಾಯಿತು.
ಕನ್ನಡದ ಕಬೀರ, ಪದ್ಮಶ್ರೀ ಇಬ್ರಾಹಿಂ ಸುತಾರ ನಿಧನ
ನಾಡಿನ ಭಾವೈಕ್ಯ ಪ್ರವಚನಕಾರ, ಕನ್ನಡದ ಕಬೀರ ಎಂದು ಖ್ಯಾತರಾಗಿದ್ದ ಶರಣಶ್ರೀ ಇಬ್ರಾಹಿಂ ಸುತಾರ ಅವರು ಫೆ.5ರಂದು ನಿಧನ ಹೊಂದಿದ್ದರು.
1940ರ ಮೇ 10ರಂದು ಜನಿಸಿದ್ದ ಇಬ್ರಾಹಿಂ ಸುತಾರ ಕಲಿತದ್ದು ಕೇವಲ ಮೂರನೇ ತರಗತಿಯಾದರೂ ಅವರು ಬೆಳೆಸಿಕೊಂಡ ಜ್ಞಾನ ಮಾತ್ರ ಅಗಾಧವಾದುದು. 1970ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳ ಕಟ್ಟಿ ಊರೂರು ಅಲೆದು, ಭಜನೆ, ಪ್ರವಚನ, ವಚನ ವಾಚನದ ಮೂಲಕ ನಾಡಿನೆಲ್ಲೆಡೆ ಭಾವೈಕ್ಯದ ಮಹತ್ವವನ್ನು ಸಾರಿ ಹೇಳಿದರು. ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ತಿರುಗಾಟ ಮಾಡಿ 4,000ಕ್ಕೂ ಅಧಿಕ ಪ್ರವಚನ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ತಣ್ತೀಚಿಂತನೆಯ ಸಂವಾದದ ಜತೆಯಲ್ಲಿ ಸಾಹಿತ್ಯ ಕೃಷಿಯನ್ನೂ ಮಾಡಿದ್ದ ಅವರು ಹಲವು ಧ್ವನಿಸುರುಳಿಗಳನ್ನು ಹೊರತಂದಿದ್ದರು.
2018ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ, 1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009-10ನೇ ಸಾಲಿನಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಜತೆಗೆ ಹಲವು ಪ್ರಶಸ್ತಿ, ಪುರಸ್ಕಾರ, ಸಮ್ಮಾನಗಳು ಇಬ್ರಾಹಿಂ ಸುತಾರ ಅವರಿಗೆ ಲಭಿಸಿದ್ದವು.
ಗುತ್ತಿಗೆದಾರ ಸಂತೋಷ್ ನಿಗೂಢ ಸಾವು:
ಸಚಿವ ಈಶ್ವರಪ್ಪ ರಾಜೀನಾಮೆ
ಬಿಜೆಪಿ ಕಾರ್ಯಕರ್ತನೆನ್ನಲಾದ, ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಎ.12ರಂದು ನಿಗೂಢವಾಗಿ ಸಾವನ್ನಪ್ಪಿದ್ದರು.
ಈ ಘಟನೆಗೂ ಮುನ್ನ ಸಂತೋಷ್, ಈಶ್ವರಪ್ಪ ವಿರುದ್ಧ ಶೇ. 40 ಕಮೀಷನ್ ಆರೋಪ ಮಾಡಿದ್ದರು. ತಾನು ನಡೆಸಿದ ಕಾಮಗಾರಿಗೆ ಹಣ ನೀಡದೇ ತನ್ನನ್ನು ಸತಾಯಿಸಲಾಗುತ್ತಿದೆ ಎಂದು ಸ್ವತಃ ಸಂತೋಷ್ ಪಾಟೀಲ್ ಮುಖ್ಯಮಂತ್ರಿ ಮತ್ತು ಪ್ರಧಾನಿಯವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದರು. ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಮ್ಮ ಸ್ನೇಹಿತ ರೋರ್ವರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದರು. ಅಲ್ಲದೆ ತನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದೂ ಉಲ್ಲೇಖೀಸಿದ್ದರು.
ತಮ್ಮ ಸ್ನೇಹಿತರೊಂದಿಗೆ ಉಡುಪಿಗೆ ಬಂದಿದ್ದ ಸಂತೋಷ್ ಪಾಟೀಲ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾಟೀಲ್ ಅವರ ನಿಗೂಢ ಸಾವು ಹಲವು ಅನುಮಾನಗಳಿಗೆ ಕಾರಣವಾಗಿತ್ತಾದರೂ ಕೊನೆಯಲ್ಲಿ ಇದು ಆತ್ಮಹತ್ಯೆ ಎಂಬುದು ಸಾಬೀತಾಗಿತ್ತು. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಈಶ್ವರಪ್ಪ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು. ಈಶ್ವರಪ್ಪ ಸಹಿತ ಅವರ ಆಪ್ತರಾದ ಬಸವರಾಜ ಹಾಗೂ ರಮೇಶ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎ. 15ರಂದು ಸಂಜೆ ಶಿವಮೊಗ್ಗದಲ್ಲಿ ದಿಢೀರ್ ಆಗಿ ಪತ್ರಿಕಾಗೋಷ್ಠಿ ಕರೆದು ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಕರಣದ ತನಿಖೆಗಾಗಿ ಉಡುಪಿಯಲ್ಲಿ ಎರಡು ವಿಶೇಷ ತಂಡ ಹಾಗೂ ಒಟ್ಟಾರೆ 7 ತಂಡಗಳನ್ನು ರಚಿಸಲಾಗಿತ್ತು. ಸುಮಾರು ಮೂರೂವರೆ ತಿಂಗಳ ಕಾಲ ತನಿಖೆ ನಡೆಸಿದ ಬಳಿಕ ಉಡುಪಿ ಪೊಲೀಸರು ಜು. 20 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 85ಕ್ಕೂ ಅಧಿಕ ಪುಟಗಳ ಬಿ ರಿಪೋರ್ಟ್ ಸಲ್ಲಿಸಿತ್ತು. ವರದಿಯಲ್ಲಿ ಸಂತೋಷ್ ಆತ್ಮಹತ್ಯೆಗೂ ಈಶ್ವರಪ್ಪ ಅವರಿಗೂ ಸಂಬಂಧವಿದೆ ಎನ್ನಲೂ ಯಾವುದೇ ಸಾಕ್ಷ್ಯಾಧಾರ ಇಲ್ಲ. ಎನ್ನುವ ಮೂಲಕ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು.
ತನ್ನನ್ನು ಸಂಪುಟಕ್ಕೆ ಮರುಸೇರ್ಪಡೆಗೊಳಿಸದಿರುವ ಸಂಬಂಧ ಈಶ್ವರಪ್ಪ ವರ್ಷಾಂತ್ಯದಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಅಧಿವೇಶನಕ್ಕೆ ಗೈರಾಗಿದ್ದರು. ಸಿಎಂ ಆದಿಯಾಗಿ ಪಕ್ಷದ ಹಿರಿಯ ನಾಯಕರ ಮನವೊಲಿಕೆಯ ಬಳಿಕ ಅವರು ತಣ್ಣಗಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿನ್ನೋಟ@2022: ಈ ವರ್ಷ ಅನಾವರಣಗೊಂಡ ಟಾಪ್ 5 ಪ್ರತಿಮೆಗಳು
Rewind 2022: ಚಂದನವನದ ಚಿನ್ನದ ಬೆಳೆ, ಸ್ಯಾಂಡಲ್ ವುಡ್ ನಲ್ಲಿ ಒಂದು ಸುತ್ತು
2022ರ ನೆನಪುಗಳ ಮೆರವಣಿಗೆ; ದೇಶದ ದಿಕ್ಕು ಬದಲಿಸಿದ ಸುಪ್ರೀಂ ಕೋರ್ಟ್‌ನ ಐದು ತೀರ್ಪುಗಳು
2022ರ ಹೊರಳು ನೋಟ; ಡಾ| ಹೇಮಾವತಿ ವೀರೇಂದ್ರ ಹೆಗ್ಗಡೆಯವರಿಗೆ ಪೌರ ಸಮ್ಮಾನ
2022ರ ನೆನಪುಗಳ ಮೆರವಣಿಗೆ; ನವ ಭಾರತಕ್ಕೆ ದಶ ಯೋಜನೆಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.