ಒಂದು ಶುಭ ರಾತ್ರಿಯ ನಿದ್ದೆ; ತಪ್ಪು ಕಲ್ಪನೆಗಳನ್ನು ಸ್ಪಷ್ಟಪಡಿಸುವುದು
Team Udayavani, Oct 3, 2021, 6:00 AM IST
ನಿದ್ರೆಯನ್ನು ಜೈವಿಕ ಕ್ರಿಯೆ ಎಂದು ವಿವರಿಸಲಾಗಿದೆ. ನಿದ್ದೆ ದೇಹ ಮತ್ತು ಮನಸ್ಸನ್ನು ಪೂರ್ವಸ್ಥಿತಿಗೆ ತರಲು ಮತ್ತು ಶುದ್ಧೀಕರಿಸಲು ಸಹಕರಿಸುತ್ತದೆ. ಯಾವುದೇ ವಯಸ್ಸಿನಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೆ ಸಾಕಷ್ಟು ಪ್ರಮಾಣದಲ್ಲಿ ನಿದ್ರೆಯ ಆವಶ್ಯಕತೆ ಇರುತ್ತದೆ. ಆದರೆ “ಸಾಕು ನಿದ್ದೆ’ ಎಂದರೇನು? ನಿದ್ರೆಯನ್ನು ಸಾಮಾನ್ಯವಾಗಿ ಎರಡು ವಿಧಗಳಲ್ಲಿ ವಿಂಗಡಿಸಲಾಗಿದೆ. ಇವುಗಳು: 1. ಪ್ರಮಾಣ, 2. ಗುಣಮಟ್ಟ. ಪ್ರಮಾಣ ಎಂದರೆ ಒಬ್ಬ ವ್ಯಕ್ತಿ ಎಷ್ಟು ಸಮಯ ನಿದ್ರಿಸುತ್ತಾನೆ ಎನ್ನುವುದು ಮತ್ತು ಇದು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ ಮಕ್ಕಳು ಬಹಳ ಸಮಯ ನಿದ್ರಿಸುತ್ತಾರೆ. ಆದರೆ ವಯಸ್ಕರು ಸ್ವಲ್ಪ ಕಡಿಮೆ ನಿದ್ರಿಸುತ್ತಾರೆ. ಗುಣಮಟ್ಟ ಎಂದರೆ ಒಬ್ಬ ವ್ಯಕ್ತಿಯು ಎಷ್ಟು ಒಳ್ಳೆಯ ನಿದ್ದೆ ಮಾಡುತ್ತಾನೆ ಎನ್ನುವುದು. ಗುಣಮಟ್ಟ ಎಂದರೆ ನಿರಾಂತಂಕವಾಗಿ ನಿದ್ದೆ, ವಿರಾಮದಾಯಕ ನಿದ್ದೆ, ಗಾಢವಾದ ನಿದ್ದೆ ಇತ್ಯಾದಿ. ಇದರ ಫಲಿತಾಂಶ ಏನೆಂದರೆ ಒಬ್ಬ ವ್ಯಕ್ತಿಯು ಮಲಗಿ ಎದ್ದಾಗ ಅವನಲ್ಲಿ ಹೊಸ ಚೈತನ್ಯ ಮೂಡಬೇಕು. ಹೇಗೆ ದೈಹಿಕ ಮತ್ತು ಮೆದುಳಿನ ಬೆಳವಣಿಗೆ ಆಗುತ್ತದೆಯೋ ಹಾಗೆ ನಿದ್ದೆ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿ ಈ ಬದಲಾವಣೆ ಆರಂಭವಾಗುತ್ತದೆ. ರಾತ್ರಿ ಹೊತ್ತು ಕಡಿಮೆ ನಿದ್ರಿಸುವುದು, ಹಗಲಿನಲ್ಲಿ ಜಾಸ್ತಿ ನಿದ್ರಿಸುವುದು, ರಾತ್ರಿ ಮತ್ತೆ ಮತ್ತೆ ಎಚ್ಚರಾಗುವುದು ಇತ್ಯಾದಿ. ಇವೆಲ್ಲವೂ ಈ ಬದಲಾವಣೆಯ ಲಕ್ಷಣವಾಗಿದೆ. ಹಾರ್ಮೋನ್‌ಗಳ ಬದಲಾವಣೆ ಮತ್ತು ನಿದ್ರೆಯನ್ನು ನಿಯಂತ್ರಿಸುವ ದೈಹಿಕ ಕಾರ್ಯಗಳು ಮತ್ತು ಆಂತರಿಕ ಲಯಗಳಿಂದ (ಇಂಟರ್ನಲ್ ಕ್ಲಾಕ್/ಸಿಕದಿಯನ್ ರಿದಮ್) ಸಾಧ್ಯವಾಗುತ್ತದೆ. ಆರೋಗ್ಯವಾಗಿ ಇರುವ ವಯಸ್ಕರು ನಿದ್ರೆಯ ಸಮಸ್ಯೆಗಳನ್ನು ವರದಿ ಮಾಡುವ ಸಾಧ್ಯತೆ ಕಡಿಮೆ.
ಭಾರತದಲ್ಲಿ ಇತ್ತೀಚಿನ ವರ್ಷದಲ್ಲಿ ನಿದ್ರೆಯ ಸಮಸ್ಯೆಯಿಂದ ಬಳಲುವ ವಯಸ್ಕರ ಪ್ರಮಾಣ ಶೇ.50ರಿಂದ ಶೇ.60ಕ್ಕೆ ಏರಿಕೆ ಆಗಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರಲ್ಲಿ ಈ ಪ್ರಮಾಣ ಹೆಚ್ಚು. ನಿದ್ರೆಯ ಮಾದರಿಗಳಲ್ಲಿನ ಗಮನಾರ್ಹ ಬದಲಾವಣೆಗಳು ಮತ್ತು ನಿದ್ರೆಯ ಅಡಚಣೆಗಳ ಅಂದರೆ ನಿದ್ರಿಸಲು ಹೆಚ್ಚಾದ ಸಮಯ, ರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಳ್ಳುವುದು, ನಿದ್ದೆ ಮಾಡಲು ಕಷ್ಟವಾಗುವುದು, ವಿಶ್ರಾಂತಿಗೆ ಕಷ್ಟವಾಗುವುದು. ಅಥವಾ ನಿದ್ರಿಸುವ ಸಮಯದಲ್ಲಿ ಎಚ್ಚರವಾಗಿ ಇರುವುದು ಇತ್ಯಾದಿ ವಯಸ್ಸಾದವರು ಎದುರಿಸುತ್ತಿರುವ ಕೆಲವು ತೊಂದರೆಗಳು ಆಗಿವೆ. ಈ ರೀತಿಯ ನಿದ್ರೆಯಲ್ಲಿ ಇರುವ ಅಡಚಣೆಗಳ, ಪ್ರತಿ ರಾತ್ರಿಯಲ್ಲಿ ಎಚ್ಚರವಾಗಿ ಇರುವುದು ಮತ್ತು ನಿದ್ರೆಯ ಕೊರತೆಯಿಂದಾಗಿ ಉಂಟಾಗುವ ಅನೇಕ ಸಮಸ್ಯೆಗಳು ಸಾಮಾನ್ಯ ವಯಸ್ಕರ ಭಾಗವಲ್ಲ. ನಾವು ದಿನದ ಸಮಯದಲ್ಲಿ ಕಲಿತಿರುವ ವಿಷಯಗಳನ್ನು ಮತ್ತು ನೆನಪುಗಳನ್ನು ಕ್ರೋಡೀಕರಿಸಲು ಆವಶ್ಯಕವಾಗಿದೆ. ಆದ್ದರಿಂದ ನಿದ್ರೆಯ ಅಭಾವ ವಯಸ್ಕರಲ್ಲಿ ಮರೆವನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ನಿದ್ದೆ ಮಾಡುವವರು ಹಗಲಿನಲ್ಲಿ ಜಾಗೃತರಾಗಿರದೆ ತಮ್ಮ ರಕ್ಷಣೆ ವಿಷಯದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ.
ಇದನ್ನೂ ಓದಿ:“RRR” ಬಿಡುಗಡೆ ದಿನಾಂಕ ಘೋಷಣೆ | ಮುಂದಿನ ವರ್ಷ ಚಿತ್ರಮಂದಿರಗಳಿಗೆ ಲಗ್ಗೆ
ವಯಸ್ಕರಲ್ಲಿ ಬೀಳುವಿಕೆ ಮತ್ತು ರಸ್ತೆ ಅಪಘಾತಗಳು ಮಧ್ಯಾಹ್ನ 12ರಿಂದ 4 ಗಂಟೆ ಮತ್ತು ರಾತ್ರಿಯಲ್ಲಿ ಹೆಚ್ಚು ಆಗುವುದು ಎಂದು ಗುರುತಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಕಡಿಮೆ ಜಾಗರೂಕತೆ ಇರುತ್ತದೆ. ಇದು ನಿದ್ರಾಹೀನತೆಯೊಂದಿಗೆ ಮತ್ತಷ್ಟು ತೀವ್ರಗೊಳ್ಳಬಹುದು. ದೀರ್ಘಾವಧಿಯ ನಿದ್ರೆಯ ಅಭಾವ ಅವರ ಆರೋಗ್ಯದ ಕೊರತೆಯನ್ನು ಮತ್ತು ಅವರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡಲು ಕಾರಣವಾಗಬಹುದು. ದೀರ್ಘಕಾಲದ ನಿದ್ರಾಹೀನತೆಯು ಅನಾರೋಗ್ಯಕ್ಕೆ ಮೂಲ ಕಾರಣವೆಂದು ಪರಿಗಣಿಸಲಾಗಿದೆ.
ಉದಾಹರಣೆಗೆ ಹಾರ್ಟ್ ಅಟಾಕ್, ವಯಸ್ಕರಲ್ಲಿ ಬುದ್ಧಿಮಾಂದ್ಯತೆ (ಡಿಮೆನ್ಶಿಯಾ) ಇತ್ಯಾದಿ. ಇತರ ಅನಾರೋಗ್ಯಗಳು ಅಂದರೆ ಮಧುಮೇಹ, ಅಧಿಕ ರಕ್ತದ ಒತ್ತಡ, ಜೀವನದಲ್ಲಿ ಇರುವ ಒತ್ತಡಗಳು ಕೂಡ ನಿದ್ರಾಹೀನತೆಗೆ ಕಾರಣವಾಗುತ್ತದೆ.
ಯಾವುದೇ ವಯಸ್ಸಿನಲ್ಲಿ ನಿದ್ದೆ ಅಗತ್ಯವಾಗಿರುತ್ತದೆ. ನಾವು ಹೇಗೆ ನಿದ್ರಿಸುತ್ತೇವೆ ಎಂಬುದು ನಮ್ಮ ದೈನಂದಿನ ಚಟುವಟಿಕೆಗಳು ಮತ್ತು ನಮ್ಮ ಉತ್ಪಾದಕತೆಯ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ ಲೇಖನ ಆರೋಗ್ಯಕರ ವಯಸ್ಸಾದ ಅಧ್ಯಯನಕ್ಕೆ ಮಾಡಿರುವ ಕೇಂದ್ರವಾದ ಸೆಂಟರ್ ಫಾರ್ ಸ್ಟಡೀಸ್ ಆಂಡ್ ಹೆಲ್ದಿ ಏಜಿಂಗ್ ಡಿಪಾರ್ಟ್ ಮೆಂಟ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವರ ವತಿಯಿಂದ ವಯಸ್ಸಾದ ಕಾರಣದಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗಿದೆ. ಇದು ಮಧ್ಯಮ ವಯಸ್ಕರು ಮತ್ತು ವಯಸ್ಕರಲ್ಲಿ ಉಪಯುಕ್ತವಾಗಿದೆ. ಇದು ಕಿರಿಯ ವಯೋಮಾನದವರಿಗೂ ಕೂಡ ಉಪಯುಕ್ತವಾಗಿದೆ. ಏಕೆಂದರೆ ಇವುಗಳು ಜೀವನ ಶೈಲಿಯ ನಡವಳಿಕೆಗಳು ಅಥವಾ ನಾವು ವಯಸ್ಸಾದಂತೆ ಉತ್ತಮ ಆರೋಗ್ಯಕ್ಕಾಗಿ ಆಯ್ಕೆಗಳು ಮತ್ತು ಮೊದಲು ಇವುಗಳನ್ನು ಅಳವಡಿಸಿಕೊಂಡಂತೆ. ಅವು ಹೆಚ್ಚು ಉಪಯುಕ್ತವಾಗಿವೆ.
ಮೊದಲು ನಿದ್ರೆಯ ಬಗ್ಗೆ ಇರುವ ಹಲವಾರು ನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳ ಬಗ್ಗೆ ಸ್ಪಷ್ಟ ಕಾರಣವನ್ನು ಕೊಡುವುದು ಒಳ್ಳೆಯ ನಿದ್ರೆಗೆ ಅಗತ್ಯವಾಗಿದೆ.
1. ವಯಸ್ಸಾದವರಿಗೆ ಕಡಿಮೆ ನಿದ್ದೆ ಸಾಕು
ವಯಸ್ಸಾದಂತೆ ದೈಹಿಕ ಸಾಮರ್ಥ್ಯ ಕಡಿಮೆ ಆಗುತ್ತದೆ. ಕಡಿಮೆ ನಿದ್ದೆ ಸಾಕು ಎಂದು ಅನಿಸಬಹುದು ಆದರೆ ಇದು ಒಂದು ತಪ್ಪು ಕಲ್ಪನೆ. ಆದರೂ, ಎಲ್ಲರ ಅಗತ್ಯಗಳು ಬೇರೆ ಬೇರೆ ಆಗಿರುವುದರಿಂದ, ಅಧ್ಯಯನದ ಪ್ರಕಾರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಯಸ್ಕರು ಪ್ರತಿದಿನ 6ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು. ಆದಾಗ್ಯೂ ಕೂಡ ಕೆಲವು ಜನರು ಅವರ ಜೀವನದ ಉದ್ದಕ್ಕೂ ಕಡಿಮೆ ನಿದ್ರೆಯನ್ನು ಮಾಡುತ್ತಾರೆ. ಆದರೆ ಕಡಿಮೆ ನಿದ್ದೆ ಅವರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ.
2. ವಯಸ್ಸಾದಂತೆ ಹೆಚ್ಚು ನಿದ್ರಿಸುತ್ತೀರಿ
ಇದು ಹಿಂದಿನದಕ್ಕೆ ವ್ಯತಿರಿಕ್ತವಾಗಿದೆ. ಆದರೆ ಇದು ಕೂಡ ಸಾಮಾನ್ಯವಾಗಿ ಜನರಲ್ಲಿ ಇರುವ ತಪ್ಪು ಮಾಹಿತಿ ಆಗಿದೆ. ವಿಶೇಷವಾಗಿ ಕೆಲವು ಹಿರಿಯ ಪುರುಷರು ನಿವೃತ್ತಿಯ ಅನಂತರ ದಿನವಿಡೀ ಮಲಗುತ್ತಾರೆ. ಇದು ಅಜ್ಞಾನದಿಂದ ವಯಸ್ಸಾಗುವುದು ಎಂದು ಹೇಳಲಾಗುತ್ತದೆ. ಮತ್ತು ಇದನ್ನು ಸಾಮಾನ್ಯವೆಂದು ಒಪ್ಪಿಕೊಳ್ಳಲಾಗಿದೆ. ಇದು ನಿಜವಾಗಿ ದಿನದ ಸಮಯದಲ್ಲಿ ಮಾಡಲು ಏನೂ ಕೆಲಸವಿಲ್ಲದೆ ಬೇಸರದಿಂದ ಮತ್ತು ಹೊಸತನ್ನು ಕಲಿಯುವ ಉತ್ಸಾಹ ಇಲ್ಲದೆ, ಬೇರೆ ಜವಾಬ್ದಾರಿ ತೆಗೆದುಕೊಳ್ಳದೆ ಇರುವುದರಿಂದ ಉಂಟಾಗುತ್ತದೆ. ಅಭ್ಯಾಸವಾಗಿ ಹೆಚ್ಚು ಹೊತ್ತು ಮಲಗುವ ಜನರು ನಿಜವಾಗಿಯೂ ಪತ್ತೆಯಾಗದೆ ಇರುವ ದೀರ್ಘಕಾಲದ ಕಾಯಿಲೆಯಿಂದ ಬಳಲಬಹುದು.
3. ಯಾವಾಗ ಮಲಗುತ್ತೀರಿ ಎಂಬುದು ಮುಖ್ಯವಲ್ಲ , ಸಾಕಷ್ಟು ಗಂಟೆಗಳ ಕಾಲ ನಿದ್ದೆ ಮಾಡುವುದು ಮುಖ್ಯ
ಅನೇಕ ಜನರು ತಡವಾಗಿ ನಿದ್ದೆ ಮಾಡಿ ಏಳುತ್ತಾರೆ. ನಿದ್ರೆಯ ಸಮಯವು ಮುಖ್ಯವಾಗಿದೆ ಮತ್ತು ಈ ಸಮಯವನ್ನು ಅಂತರಿಕ ಲಯ (ಸರ್ಕಾಡಿಯನ್ ರಿದಮ್) ಅಥವಾ ನಿದ್ದೆ – ಎಚ್ಚರದ ಚಕ್ರಕ್ಕೆ (ಸ್ಲಿàಪ್-ವಾಕ್ ಸೈಕಲ್) ಜೋಡಿಸಬೇಕು. ಈ ಚಕ್ರವನ್ನು ಗುಣಾತ್ಮಕ ನಿದ್ರೆಗೆ ಮಹತ್ವವಾಗಿದೆ. ಮತ್ತು ಮಾನಸಿಕ ಆರೋಗ್ಯ, ಹೃದಯದ ಕ್ರಿಯೆ, ಜೀರ್ಣಕ್ರಿಯೆ ಮತ್ತು ದೇಹದ ಇತರ ಪ್ರಮುಖ ಕ್ರಿಯೆಗಳು ಮೇಲೆ ಕೂಡ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕತ್ತಲಿನ ಸಮಯದಲ್ಲಿ ಮಲಗಬೇಕು.
4. ರಾತ್ರಿಯ ನಿದ್ದೆ ಕೊರತೆಯನ್ನು, ಹಗಲಿನಲ್ಲಿ ನಿದ್ದೆ ಮಾಡುವುದರಿಂದ ನೀಗಿಸಬಹುದು
ನಿದ್ರೆಯನ್ನು ಸರಿದೂಗಿಸುವ ನಡವಳಿಕೆಗಳಿಂದ ಹಗಲಿನಲ್ಲಿ ಮಲಗುವುದು, ತಡವಾಗಿ ಏಳುವುದು, ಇವೆಲ್ಲವೂ ಸಹಾಯಕವಾಗಿ ಅನಿಸಿದರೂ ಕೂಡ ನಕಾರಾತ್ಮಕವಾಗಿ ನಿದ್ದೆ – ಎಚ್ಚರದ ಚಕ್ರದ ಮೇಲೆ ಪ್ರಭಾವ ಬೀರುತ್ತದೆ. ನಿದ್ರೆಯ ಮಾದರಿಯಲ್ಲಿ ಬದಲಾವಣೆ ಮಾಡಿದರೆ, ಹಗಲಿನ ಮತ್ತು ರಾತ್ರಿಯ ಅಡಚಣೆಗೆ ಒಳಗಾಗಬೇಕಾಗುತ್ತದೆ. ಶೇ. 20-30 ಯೋಜಿತ ಚಿಕ್ಕ ನಿದ್ರೆಗಳು “ಪವರ್ ನೈಸ್’, ಸಕಾರಾತ್ಮಕ ಪರಿಣಾಮ ದೇಹದಲ್ಲಿ ಶಕ್ತಿಯನ್ನು ಪುನಃ ಸ್ಥಾಪಿಸಲು ಮತ್ತು ಕಾರ್ಯದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಆದರೂ ಚಿಕ್ಕ ನಿದ್ರೆ ನಿದ್ರಾಹೀನತೆಗೆ ಶಾಶ್ವತ ಪರಿಹಾರವಲ್ಲ .
5. ದೂರದರ್ಶನವನ್ನು ವೀಕ್ಷಿಸುವುದು ಉತ್ತಮ ನಿದ್ರೆಗೆ ಸಹಾಯಕ
ಅನೇಕ ಜನರು ಇಂದಿನ ದಿನಗಳಲ್ಲಿ ಟಿ.ವಿ., ಮೊಬೈಲ್, ಕಂಪ್ಯೂಟರನ್ನು ವೀಕ್ಷಿಸುವುದು ಸಾಮಾನ್ಯವಾಗಿದೆ. ಏಕೆಂದರೆ ಇದು ನಿದ್ರೆಗೆ ಸಹಾಯಕ ಎನ್ನುವುದು ಅವರ ತಪ್ಪು ಕಲ್ಪನೆ. ಈ ಸಾಧನಗಳು ಪ್ರಕಾಶಮಾನವಾದ ಬೆಳಕನ್ನು ಹೊರಸೂಸುವುದರಿಂದ ಮೆದುಳನ್ನು ಉತ್ತೇಜಿಸುತ್ತದೆ ಮತ್ತು ದೇಹದ ವಿಶ್ರಾಂತಿ ಸಂಭವಿಸಿದರೂ ನಿದ್ರೆ ಭಂಗವಾಗುತ್ತದೆ. ದೂರದರ್ಶನ ಅಥವಾ ಚಲನಚಿತ್ರಗಳನ್ನು ತಡರಾತ್ರಿವರೆಗೂ ವೀಕ್ಷಿಸುವುದನ್ನು ಸಾಮಾನ್ಯವಾಗಿ ಕಾಲೇಜು ದಿನಗಳಲ್ಲಿ ಅಥವಾ ಯುವ ವಯಸ್ಕರಲ್ಲಿ ಅಭ್ಯಾಸವಾಗಿರುತ್ತದೆ. ಆದರೆ ಈ ಅಭ್ಯಾಸಗಳು ಸಹಾಯಕವಾಗುವುದಿಲ್ಲ ಮತ್ತು ನಿದ್ದೆ, ಆರೋಗ್ಯದ ಮೇಲೆ ದೀರ್ಘಾವಧಿಯ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
6. ಯಾವುದೇ ಸಮಯದಲ್ಲಿ ಅಥವಾ ಎಲ್ಲಿಯಾದರೂ ನಿದ್ರಿಸುವುದು ಉತ್ತಮ
ನಿದ್ರೆಯ ಸಂಕೇತವಾಗಿದೆ ಇದು ನಿಜವಾಗಿಯೂ ಅಸಮರ್ಪಕ ನಿದ್ರೆಯ ಉಸಿರು ಕಟ್ಟುವಿಕೆ ಅಥವಾ ಅನೇಕ ವೈದ್ಯಕೀಯ ಸಮಸ್ಯೆಗಳಿಂದ ಕೂಡಾ ಸಂಭವಿಸಬಹುದು.
7. ಗೊರಕೆ ಹೊಡೆಯುವವರು ಚೆನ್ನಾಗಿ ನಿದ್ರಿಸುತ್ತಾರೆ
ಗೊರಕೆ ಉಸಿರಾಟಕ್ಕೆ ಅಡ್ಡಿ ಪಡಿಸಿದ ತೊಂದರೆ ಆಗಿರಬಹುದು ಮತ್ತು ಇದಕ್ಕೆ ವೈದ್ಯಕೀಯ ಆರೈಕೆ ಅಗತ್ಯವಿರುತ್ತದೆ. ಗೊರಕೆ ಕಾರಣವನ್ನು ಗುರುತಿಸಲು ಹೆಚ್ಚಿನ ಮೌಲ್ಯಮಾಪನ ಅಗತ್ಯವಾಗಿದೆ ಮತ್ತು ಅವರ ಸಂಗಾತಿಗೆ ಈ ಗೊರಕೆಯಿಂದ ಯಾವುದೇ ನಿದ್ರಾಭಂಗ ಆಗಿಲ್ಲವೆಂಬುದನ್ನು ತಿಳಿದುಕೊಳ್ಳಬೇಕು.
8. ಗೊರಕೆಯಿಂದ ಯಾವುದೇ ಅಪಾಯವಿಲ್ಲ
ಚಿಕ್ಕ ಮತ್ತು ಸಾಂದರ್ಭಿಕ ಗೊರಕೆ ದೊಡ್ಡ ಕಾಳಜಿ ನೀಡುವ ವಿಷಯವಲ್ಲ . ಆದಾಗ್ಯೂ ಹಲವಾರು ವರ್ಷಗಳಿಂದ ಜೋರಾಗಿ ಹೊಡೆಯುವ ಗೊರಕೆಗೆ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಇದು ವ್ಯಕ್ತಿಯ ಅಥವಾ ಸಂಗಾತಿಯ ನಿದ್ರೆಗೆ ತೊಂದರೆಯನ್ನು ತರುತ್ತದೆ. ಸಾಮಾನ್ಯವಾಗಿ ಹೆಚ್ಚು ವಯಸ್ಸಾದಂತೆ ಈ ಸಮಸ್ಯೆಯನ್ನು ನಿರ್ಲಕ್ಷಿ ಸಲಾಗುತ್ತದೆ. ಒಬ್ಬ ವ್ಯಕ್ತಿಯು ಮಲಗುವಾಗ ಸಾಕಷ್ಟು ಆಮ್ಲಜನಕವನ್ನು ತೆಗೆದುಕೊಳ್ಳದಂತೆ ಗೊರಕೆಯು ತಡೆಯುತ್ತದೆ. ಗೊರಕೆಯನ್ನು ನಿಲ್ಲಿಸಲು ಇದಕ್ಕೆ ವೈದ್ಯಕೀಯ ಗಮನ ಮತ್ತು ಹಲವಾರು ಚಿಕಿತ್ಸೆ ಆಯ್ಕೆಗಳು ಬೇಕಾಗುತ್ತದೆ.
9. ನಿದ್ದೆ ಬರದಿದ್ದರೆ ಹಾಸಿಗೆಯಲ್ಲಿಯೇ ಇರುವುದು ಉತ್ತಮ
ನಿದ್ರಾಹೀನತೆ (ಇನ್ಸೋಮ್ನಿಯಾ) ಅಥವಾ ನಿದ್ರೆಯಲ್ಲಿ ತೊಂದರೆ ಇರುವವರು 20 ನಿಮಿಷಗಳ ಒಳಗೆ ನಿದ್ದೆ ಬರದಿದ್ದರೆ ಹಾಸಿಗೆಯಿಂದ ಏಳಬೇಕು ಎಂದು ನಿದ್ದೆ ತಜ್ಞರು ಸೂಚಿಸುತ್ತಾರೆ. ಹಾಸಿಗೆಯಲ್ಲಿ ತಿರುಗಿ ತಿರುಗಿ ಮಲಗಲು ಪ್ರಯತ್ನಿಸುವ ಬದಲು,ಎದ್ದು ಮಂದ ಬೆಳಕಿನಲ್ಲಿ (ಅಂದರೆ ಫೋನ್ ಅಥವಾ ಇತರ ಸಾಧನಗಳನ್ನು ಬಳಸದೇ ಇರುವುದು) ಕುಳಿತುಕೊಳ್ಳುವುದು ಅಥವಾ ವಿಶ್ರಾಂತಿಯನ್ನು ಪಡೆದು ಮತ್ತೆ ಮಲಗಲು ಪ್ರಯತ್ನಿಸಬೇಕು. ಇದರ ಹಿಂದಿನ ತರ್ಕ ಏನೆಂದರೆ ನಿಮ್ಮಹಾಸಿಗೆಯನ್ನು ನಿದ್ರೆಯೊಂದಿಗೆ ಸಂಯೋಜಿ ಸುವುದು.
10. ಬೆಚ್ಚಗಿನ ಮಲಗುವ ಕೋಣೆಯು ನಿದ್ರೆಗೆ ಒಳ್ಳೆಯದು
ಇದು ಮತ್ತೊಂದು ಸಾಮಾನ್ಯ ತಪ್ಪು ಕಲ್ಪನೆ. ಅನೇಕ ಜನರು ಕಿಟಕಿಗಳನ್ನು ಮುಚ್ಚಿ ಫ್ಯಾನ್ ಕೂಡಾ ಬಳಸುವುದಿಲ್ಲ . ಬಿಸಿ ಮತ್ತು ಉಸಿರು ಗಟ್ಟಿಸುವ ಮಲಗುವ ಕೋಣೆ ನಿದ್ದೆ ಬರದಿರಲು ಕಾರಣವಾಗುತ್ತದೆ. ಉತ್ತಮ ನಿದ್ರೆಗೆ 18ರಿಂದ 21 ಡಿಗ್ರಿ ಸೆ. ಉಷ್ಣತೆ ಇರುವ ಮಲಗುವ ಕೋಣೆ ಉತ್ತಮ.
11. ಮಲಗುವ ಮುನ್ನ ಮದ್ಯಪಾನ ಸೇವನೆ ನಿದ್ರೆಯನ್ನು ಸುಧಾರಿಸುತ್ತದೆ
ಸ್ವಲ್ಪ ಮದ್ಯಪಾನ ವಿಶ್ರಾಂತಿ ಪಡೆಯಲು ಮತ್ತು ಆರಂಭದಲ್ಲಿ ನಿದ್ರಿಸಲು ಸುಲಭವಾಗುತ್ತದೆ ಎನ್ನುವುದು ಒಂದು ತಪ್ಪು ಕಲ್ಪನೆ. ಇದು ಕೂಡ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮೊದಲು ಮದ್ಯ ಸೇವನೆ ಮಾಡುವುದರಿಂದ ನಿದ್ರೆಯ ಚಕ್ರಕ್ಕೆ ಅಡಚಣೆ ಉಂಟಾಗುತ್ತದೆ. ಹೆಚ್ಚಿನ ಗೊರಕೆಯಿಂದ ನಿದ್ರೆಯಲ್ಲಿ ಉಸಿರಾಟದ ತೊಂದರೆಯನ್ನು ಹೆಚ್ಚುಗೊಳಿಸುತ್ತದೆ. (ಸ್ಲಿàಪ್ ಅಪ್ನಿಯ). ನಿದ್ರೆಯ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳಿಂದ ಮಧ್ಯಪಾನವನ್ನು ಕಡಿಮೆ ಅಥವಾ ನಿಷೇಧಿಸುವುದು ಮುಖ್ಯವಾಗಿದೆ.
12. ರಾತ್ರಿಯ ಸಮಯದಲ್ಲಿ ವ್ಯಾಯಾಮ ಮಾಡುವುದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ
ಅಧ್ಯಯನದ ಪ್ರಕಾರ ರಾತ್ರಿಯಲ್ಲಿ ಜಾಸ್ತಿ ವ್ಯಾಯಾಮ ಮಾಡುವುದು ನಿದ್ರೆ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಮತ್ತು ಕೆಲವು ಜನರಿಗೆ ಉತ್ತಮ ನಿದ್ರೆಗೆ ಪೂರಕವಾಗಿದೆ ಎಂದು ಸೂಚಿಸಿದ್ದಾರೆ. ಕೆಲವು ಜನರಿಗೆ ಮಲಗುವ ಮುನ್ನ ತೀವ್ರವಾದ ವ್ಯಾಯಾಮಗಳನ್ನು ಮಾಡುವುದು ಪ್ರಯೋಜನಕಾರಿಯಲ್ಲ . ಏಕೆಂದರೆ ಇದು ನಿಮ್ಮ ದೇಹದ ವಿಶ್ರಾಂತಿ ಮತ್ತು ನಿದ್ರೆಗೆ ತೊಂದರೆ ಕೊಡಬಹುದು.
13. ಬೆಳಕಿನೊಂದಿಗೆ ಮಲಗುವುದು ಹಾನಿಕಾರಕವಲ್ಲ
ಕೆಲವರಿಗೆ ರಾತ್ರಿ ಪೂರ್ತಿ ಮಂದ ಬೆಳಕು ಆವಶ್ಯಕ. ಇತರ ಸಂದರ್ಭಗಳಲ್ಲಿ ಮಲಗುವ ಕೋಣೆ ಹೊರಗಿನ ಬೆಳಕು ಇತರ ಕೋಣೆಯಿಂದ ಅಥವಾ ಬೀದಿ ದೀಪದಿಂದ ನೀವು ಮಲಗುವ ಕೋಣೆಗೆ ತೂರಿಕೊಳ್ಳಬಹುದು. ಆಗ ನೀವು ನಿದ್ರಿಸುತ್ತಿದ್ದರೂ ಮತ್ತು ನಿಮ್ಮ ಕಣ್ಣುಗಳು ಮುಚ್ಚಿದರೂ ಕಡಿಮೆ ಬೆಳಕು ಪದೇ ಪದೇ ಜಾಗೃತಿಯನ್ನು ಉಂಟು ಮಾಡಬಹುದು. ಮತ್ತು ನಿಮ್ಮ ಆಂತರಿಕ ಲಯ ಅಥವಾ ನಿದ್ರೆ – ಎಚ್ಚರಿಕೆ ಚಕ್ರದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
14. ನಿದ್ರೆಯ ಮಾಡುವ ದಿಕ್ಕು ಮುಖ್ಯ
ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ ಉತ್ತರಕ್ಕೆ ತಲೆ ಮಾಡಿ ಮಲಗಬಾರದು ಹಾಗೂ ಪೂರ್ವಕ್ಕೆ ತಲೆ ಮಾಡಿ ಮಲಗಬೇಕು ಎಂದು ಸಾಮಾನ್ಯ ನಂಬಿಕೆ ಇದೆ. ಕೆಲವೊಮ್ಮೆ ಆರಾಮ ಮತ್ತು ನಿದ್ರೆಯ ಗುಣಮಟ್ಟದಲ್ಲಿ ವ್ಯತ್ಯಾಸವಾದರೂ ಕೂಡ ಹಾಸಿಗೆ ದಿಕ್ಕಿನಲ್ಲಿ ಅಥವಾ ಮಲಗುವ ಸ್ಥಾನಗಳು ಸಾಮಾನ್ಯವಾಗಿ ನಂಬಿಕೆಗಳು ಹೊಂದಿಕೊಳ್ಳುತ್ತವೆ. ವಾಸ್ತು ಶಾಸ್ತ್ರದಂತಹ ಹಳೆಯ ಸಂಪ್ರದಾಯಗಳಲ್ಲಿ, ಫೆಂಗ್‌ಶುಯಿಯಲ್ಲಿಯೂ ಇದು ಸಾಮಾನ್ಯವಾಗಿದ್ದು ಭೌಗೋಳಿಕ ಸ್ಥಾನವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ಆದಾಗ್ಯೂ, ಅಧ್ಯಯನದ ಪ್ರಕಾರ ನಾವು ನಿದ್ರಿಸುವ ದಿಕ್ಕು ನಿದ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಕ್ಷೇತ್ರದ ಶಕ್ತಿ ತುಂಬಾ ಕಡಿಮೆ ಮತ್ತು ಅದರ ಶಕ್ತಿಯನ್ನು ಅರಿತುಕೊಳ್ಳಲು ನಮಗೆ ಸಾಧ್ಯವಿಲ್ಲ.
15. ಅಲಾರಂ ಸ್ನೂಜ್ ಬಟನ್ ಒತ್ತುವುದರಿಂದ ಅಮೂಲ್ಯವಾದ ನಿದ್ದೆ ಒದಗಬಹುದು
ನಾವು ನಮ್ಮ ಅಲಾರಂನ ಸ್ನೂಜ್ ಬಟನ್ನನ್ನು ಒತ್ತಿ ಮತ್ತೆ ಮಲಗುವುದು ತುಂಬಾ ಸಾಮಾನ್ಯವಾಗಿದೆ. ಇದು ನಿದ್ರೆಯ ಸಮಯವನ್ನು ಹೆಚ್ಚಿಸಿದರೂ ಕೂಡ ಯಾವುದೇ ವಿಶ್ರಾಂತಿಯನ್ನು ಒದಗಿಸುವುದಿಲ್ಲ. ನಿದ್ರಾಭಂಗ ಸಾಮಾನ್ಯವಾಗಿ ನವಚೈತನ್ಯವನ್ನು ನೀಡುವುದಿಲ್ಲ.
16. ನಿದ್ರೆಯ ಸಮಸ್ಯೆಗಳಿಗೆ ಯಾವುದೇ ಕಾಳಜಿ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿಲ್ಲ
ಹೆಚ್ಚಾಗಿ ಜನರಿಗೆ ಸಾಕುಷ್ಟ ನಿದ್ದೆ ಎಂದರೆ ಏನು ಎಂದು ತಿಳಿದಿರುವುದಿಲ್ಲ ಮತ್ತು ಅವರಿಗೆ ನಿದ್ರೆಯ ಸಮಸ್ಯೆ ಇರುವುದು ಕೂಡ ತಿಳಿದಿರುವುದಿಲ್ಲ. ಕೆಲವು ಜನರು ತಮಗೆ ನಿದ್ರೆಯ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳಲು ಸಿದ್ಧರಾಗಿ ಇರುವುದಿಲ್ಲ. ವೈದ್ಯಕೀಯ ಕಾಳಜಿ ಬೇಕೆಂದು ಕೂಡಾ ಅನಿಸಿರುವುದಿಲ್ಲ ಹಾಗೂ ಅವರು ಅದು ಒಂದು ಚಿಕ್ಕ ಸಮಸ್ಯೆ, ಬೇರೆಯವರು ಇದನ್ನು ಬೇಕೆಂದು ದೊಡ್ಡದು ಮಾಡುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾರೆ. ನಿದ್ದೆ ಔಷಧ ಆರೋಗ್ಯಕ್ಕೆ ಹಾನಿಕರಾಕ ಎಂಬುದು ಅನೇಕ ಜನರ ನಂಬಿಕೆ. ಆದ್ದರಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇವರು ತಮ್ಮ ವೈದ್ಯರೊಂದಿಗೆ ಚರ್ಚಿಸುವುದಿಲ್ಲ. ಇದರ ಫಲಿತಾಂಶವಾಗಿ ವೈದ್ಯಕೀಯ ಸಲಹೆಯನ್ನು ಪಡೆಯುವಲ್ಲಿ ವಿಳಂಬವಾಗುತ್ತದೆ. ಏಕೆಂದರೆ ಯಾವುದೇ ವೈದ್ಯಕೀಯ ಸಮಸ್ಯೆಗೆ ಬೇಗನೆ ಪರಿಹಾರ ಕಂಡುಕೊಂಡರೆ ಅದನ್ನು ಬೇಗ ನಿವಾರಿಸಬಹುದು.
17. ನಿದ್ರಾಹೀನತೆಯ ತೊಂದರೆಗಳು ವೈದ್ಯಕೀಯ ಸಮಸ್ಯೆಗಳಿಂದ ಮಾತ್ರ
ಸಾಮಾನ್ಯವಾಗಿ ವೈದ್ಯಕೀಯ ಸಮಸ್ಯೆಗಳು ನಿದ್ರಾಹೀನತೆಗೆ ಕಾರಣವಾಗುತ್ತದೆ. ಆದರೂ ಪರಿಸರದ ಅಂಶಗಳು ಕೂಡ ನಿದ್ರೆಯ ಮೇಲೆ ಪ್ರಭಾವ ಬೀರಿದೆ. ಕೆಲವರು ನಿದ್ರಾಹೀನತೆಯನ್ನು ಉತ್ಪ್ರೇಕ್ಷಿಸಬಹುದು. ಆದರೆ ಪ್ರಸ್ತುತ ಉದ್ವಿಗ್ನ ಸ್ಥಿತಿ ಮತ್ತು ಆಧುನಿಕ ಜೀವನಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾರಣಗಳು ಏನೆಂದರೆ ಕೆಲಸ-ಜೀವನದಲ್ಲಿನ ಅಸಮತೋಲನ. ಒತ್ತಡದ ಜೀವನ. ಜೀವನವನ್ನು ನಿಭಾಯಿಸುವ ಕೌಶಲ್ಯ ಇಲ್ಲದಿರುವುದು. “ಇಲ್ಲ’ ಎಂದು ಹೇಳಲು ಕಷ್ಟವಾಗುವುದು, ಅನಾರೋಗ್ಯಕರ ಜೀವನ ಶೈಲಿ ಮತ್ತು ಆಯ್ಕೆಗಳು. ವಿಶೇಷವಾಗಿ ಭಾರತದಲ್ಲಿ ಮಹಿಳೆಯರಲ್ಲಿ ನಿದ್ರಾಹೀನತೆ ಸಾಮಾನ್ಯವಾಗಿ ಕಂಡುಬಂದಿದೆ. ಜೈವಿಕ ಅಥವಾ ವೈದ್ಯಕೀಯ ಕಾರಣಗಳು ಜತೆಗೆ. ಇವುಗಳು ಅತಿಯಾದ ಜವಾಬ್ದಾರಿಯಿಂದ ಕೂಡಿದೆ. ಬೇಗನೆ ಎದ್ದೇಳಲು ಮನೆ ಕೆಲಸವನ್ನು ಮುಗಿಸಲು, ಮಕ್ಕಳನ್ನು ನೋಡಿಕೊಳ್ಳಲು ಅಥವಾ ವಯಸ್ಸಾದ ಪೋಷಕರನ್ನು ನೋಡಿಕೊಳ್ಳಲು ಮತ್ತು ಕೆಲಸ ಮಾಡುವ ಮಹಿಳೆಯರೂ ಇದ್ದರೆ ಕೆಲಸವನ್ನು ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಬೆಂಬಲ ನೀಡದ ಅಥವಾ ಸಂವೇದನೆ ಇಲ್ಲದ ಸಂಗಾತಿಗಳು, ಕುಟುಂಬದ ಸದಸ್ಯರಿಂದ ಇವುಗಳು ಮತ್ತಷ್ಟು ಜಟಿಲಗೊಳ್ಳಬಹುದು. ನಿದ್ರೆಯ ಅಡಚಣೆಗಳು ಬಹುಕ್ರಿಯಾತ್ಮಕವಾಗಿವೆ ಮತ್ತು ಇವುಗಳನ್ನು ವೈದ್ಯಕೀಯ ನಡವಳಿಕೆ ಮತ್ತು ಪರಿಸರದ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕು.
ಹಾಗಾದರೆ ನಿಮ್ಮ ನಿದ್ರೆಯ ಮೇಲೆ ಪ್ರಭಾವ ಬೀರಲು ನೀವು ಏನು ಮಾಡಬಹುದು. ವಾಸ್ತವವಾಗಿ ಬಹಳಷ್ಟು! ಉತ್ತಮ ನಿದ್ರೆಯನ್ನು ಸಾಧಿಸುವುದು ಪ್ರಜ್ಞಾಪೂರ್ವಕ ಪ್ರಯತ್ನಗಳಿಂದ ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ಮಲಗುವ ಮುನ್ನ ಏನು ಮಾಡುತ್ತಾನೆ ಎಂಬುದು ನಿದ್ರೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
-ಕು. ಪಲ್ಲವಿ ಭಟ್
ವಿದ್ಯಾರ್ಥಿನಿ,
ಆಕ್ಯುಪೇಶನಲ್ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
-ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ
ಪ್ರೊಫೆಸರ್, ಆಕ್ಯುಪೇಶನಲ್ ಥೆರಪಿ ವಿಭಾಗ, ಸಂಯೋಜಕರು, ಸೆಂಟರ್ ಫಾರ್ ಸ್ಟಡೀಸ್ ಆನ್ ಹೆಲ್ದಿ ಏಜಿಂಗ್‌ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.