ಯುವ ಸಮೂಹಕ್ಕಾಗಲಿ ಪರಿಪೂರ್ಣತೆ ಪಾಠ: ಜೋಷಿ
ಜನತಾ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ
Team Udayavani, Oct 7, 2023, 11:33 PM IST
ಧಾರವಾಡ: ವಿಶ್ವಕ್ಕೆ ಬೇಕಾ ದಂತಹ ಶಿಕ್ಷಣ ನೀಡುವುದು ಇಂದಿನ ಅಗತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.
ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಪ್ರಯುಕ್ತ ಶನಿವಾರ ಹಮ್ಮಿ ಕೊಂಡಿದ್ದ 50ರ ಅವಿಸ್ಮರಣೀಯ ಸಂಭ್ರಮದಲ್ಲಿ ಚೆನ್ನುಡಿ ಭಾಗ-6 ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿಶ್ವವು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಾ ಸಾಗಿದ್ದು, ಅದಕ್ಕೆ ತಕ್ಕಂತೆ ಕೌಶಲಾಧಾರಿತ ಶಿಕ್ಷಣವೂ ಕಲಿಕೆಯೂ ಮುಖ್ಯ. ಕೌಶಲ, ಪ್ರಮಾಣ ಹಾಗೂ ವೇಗ ಅತಿ ಮುಖ್ಯವಾಗಿದೆ. ಜಗತ್ತೂ ಇದನ್ನು ಬಯಸುತ್ತಿದೆ. ಇವುಗಳ ಜತೆಗೆ ಉತ್ತಮ ಸಂಸ್ಕಾರವೂ ಬೇಕಿದೆ. ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಈ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂದರು.
ಸದ್ಯ ಚೀನವು ಪ್ರಪಂಚದ ಕಾರ್ಖಾನೆಯಾಗಿ ಹೆಸರಾಗಿದೆ. ಆದರೆ ಮುಂದಿನ 10 ವರ್ಷಗಳಲ್ಲಿ ಭಾರತ ಪ್ರಪಂಚದ ಕಾರ್ಖಾನೆಯಾಗಿ ಹೊರಹೊಮ್ಮುವುದು ನಿಶ್ಚಿತ ಎಂದು ಹೇಳಿದರು.
ಚೆನ್ನುಡಿ ಭಾಗ-7 ಅನ್ನು ಬಿಡುಗಡೆಗೊಳಿಸಿದ ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಇಂದಿನ ದಿನಮಾನದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಸಂಪರ್ಕ, ಆಸಕ್ತಿ ಕಡಿಮೆಯಾಗುತ್ತಿದೆ. ನಮ್ಮ ಕಾಲದಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಅವಿನಾಭಾವ ಸಂಬಂಧ ಇರುತ್ತಿತ್ತು. ಇತ್ತೀಚೆಗೆ ಅದು ಕಾಣುತ್ತಿಲ್ಲ. ಶಿಕ್ಷಕರೊಂದಿಗೆ ಹೋಗಲಿ ಸಂಸ್ಥೆ ಜತೆಗೂ ಸಂಬಂಧ ಕಡಿತಗೊಳ್ಳುತ್ತಿದೆ. ಈ ಕೊರತೆ ನೀಗಿಸುವ ಕೆಲಸ ಜೆಎಸ್ಸೆಸ್ ಸಂಸ್ಥೆ ಕಳೆದ 50 ವರ್ಷಗಳಿಂದ ನೀಗಿಸುತ್ತಾ ಬಂದಿದೆ ಎಂದರು.
ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾ ಚಾರ್ಯವರ್ಯ ಸ್ವಾಮೀಜಿ ಮಾತ ನಾಡಿ, ಜೀವನದಲ್ಲಿ ಸಾಧನೆ ಹಾಗೂ ದೇಶ ಮುನ್ನಡೆಯಲು ಉತ್ತಮ ಶಿಕ್ಷಣ ಅತ್ಯಾವಶ್ಯಕ. ಅಂತಹ ಶಿಕ್ಷಣವನ್ನು ಜೆಎಸ್ಸೆಸ್ ನೀಡುತ್ತಿದೆ ಎಂದರು.
ಜೆಎಸ್ಸೆಸ್ ಕಾರ್ಯಾಧ್ಯಕ್ಷ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಸೆಸ್ ಕಾರ್ಯದರ್ಶಿ ಡಾ| ಅಜಿತ ಪ್ರಸಾದ ಹಾಗೂ ಸಂಸ್ಥೆ ನಿವೃತ್ತ ಶಿಕ್ಷಕ ಆರ್.ಕೆ. ಮುಳಗುಂದ ಅವರನ್ನು ಸಮ್ಮಾನಿಸಲಾಯಿತು. ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾತೋಶ್ರೀ ಹೇಮಾವತಿ ಹೆಗ್ಗಡೆ, ಶ್ರದ್ಧಾ ಹೆಗ್ಗಡೆ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಶಾಸಕ ಮಹೇಶ ಟೆಂಗಿನಕಾಯಿ, ಶಿವಲೀಲಾ ಕುಲಕರ್ಣಿ, ಕೇಶವ ದೇಸಾಯಿ, ಕಮಲನಯನ ಮೆಹತಾ, ಮಹಾವೀರ ಉಪಾಧ್ಯೆ ಮುಂತಾದವ ರಿದ್ದರು. ಡಾ| ಜಿನದತ್ತ ನಿರೂಪಿಸಿದರು. ಸೂರಜ್ ಜೈನ್ ವಂದಿಸಿದರು.
ಧಾರವಾಡವು ನನಗೆ ಈಗ ಎರಡನೇ ಧರ್ಮಸ್ಥಳವೇ ಆಗಿದೆ. ಮಂಜುನಾಥ ಸ್ವಾಮಿ ಅನುಗ್ರಹದಂತೆ ಧಾರವಾಡದಲ್ಲಿ ಸಮಾಜ ಮುಖೀ ಕಾರ್ಯಗಳ ಜತೆಗೆ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದರಿಂದ ಹೆಮ್ಮರದಂತಹ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ. ಇದು ಧಾರವಾಡಿಗರು ನೀಡಿರುವ ಪ್ರೀತಿ, ವಿಶ್ವಾಸದಿಂದಲೇ ಸಾಧ್ಯವಾಗಿದೆ. ಡಾ| ನ.ವಜ್ರಕುಮಾರ ಅವರ ಸ್ಥಾನವನ್ನು ಎಂದಿಗೂ ತುಂಬಲಾಗದು. ಅವರ ಮಾರ್ಗದರ್ಶನದಲ್ಲಿ ಡಾ| ಅಜಿತ ಪ್ರಸಾದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗುತ್ತಿರುವುದು ಖುಷಿ ತಂದಿದೆ.
-ಡಾ| ಡಿ.ವೀರೇಂದ್ರ ಹೆಗ್ಗಡೆ, ಜೆಎಸ್ಸೆಸ್ ಕಾರ್ಯಾಧ್ಯಕ್ಷರು
ಜೆಎಸ್ಸೆಸ್ ಸಂಸ್ಥೆಯು ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುತ್ತಿದೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಯಿಂದ ಕನಿಷ್ಠ 3 ವಿದ್ಯಾರ್ಥಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸಬೇಕು. ಇದಕ್ಕೆ ಸಕಲ ಸೌಕರ್ಯ ನೀಡಲು ಕೇಂದ್ರ ಸರಕಾರ ಸಿದ್ಧವಿದೆ.
-ಪ್ರಹ್ಲಾದ ಜೋಷಿ, ಕೇಂದ್ರ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.