![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 27, 2021, 6:30 AM IST
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ (103) ಅವರ ನಿಧನದಿಂದ ಗಾಂಧೀ ವಾದದ ಕೊಂಡಿ ಯೊಂದು ಕಳಚಿದಂತಾಗಿದೆ.
1918 ಎಪ್ರಿಲ್ 10ರಂದು ಜನಿಸಿದ ದೊರೆಸ್ವಾಮಿ ಅವರು ತಮ್ಮ ಐದನೇ ವಯಸ್ಸಿನಲ್ಲಿ ತಂದೆ ಶ್ರೀನಿವಾಸ ಅಯ್ಯರ್ ಅವರನ್ನು ಕಳೆದುಕೊಂಡರು. ಹೀಗಾಗಿ ಅಜ್ಜನ ಆಸರೆಯಲ್ಲಿ ಬೆಳೆದರು. ಹಾರೋಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅನಂತರ ಬೆಂಗಳೂರಿಗೆ ಬಂದರು. 1942ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪೂರ್ಣ ಗೊಳಿಸಿದರು.
ಶಾಲಾ ದಿನಗಳಲ್ಲಿ ಮಹಾತ್ಮಾ ಗಾಂಧಿ ಅವರ “ಮೈ ಅರ್ಲಿ ಲೈಫ್” ಪುಸ್ತಕದ ಓದು ಅವರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳಲು ಪ್ರಭಾವ ಬೀರಿತು. ಮಧ್ಯಾಂತರ ಕಾಲೇಜು ಶಿಕ್ಷಣದ ಸಮಯ ದಲ್ಲಿ ಬೆಂಗಳೂರಿನ ಕಬ್ಬನ್ ಪೇಟೆ ಬಳಿ ಬನಪ್ಪ ಪಾರ್ಕ್‌ನಲ್ಲಿ ನಡೆದ ಸ್ವಾತಂತ್ರ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಲೇಜು ದಿನಗಳಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭ ವಾಯಿತು. ಆ ವೇಳೆ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟದ ಅಖಾಡಕ್ಕೆ ಇಳಿದಿದ್ದರು.
ದೊರೆಸ್ವಾಮಿ ಅವರ ಗೆಳೆಯರಾಗಿದ್ದ ಭದ್ರಣ್ಣ ಅವರು “ಪೌರವಾಣಿ’ ಎಂಬ ಪತ್ರಿಕೆ ನಡೆಸುವ ಹೊಣೆಯನ್ನು ದೊರೆಸ್ವಾಮಿ ಅವರಿಗೆ ಬಿಟ್ಟು ತೀರಿಕೊಂಡರು. ಪತ್ರಿಕೆ ಜವಾಬ್ದಾರಿ ವಹಿಸಿಕೊಂಡ ಅವರು ಸ್ವಾತಂತ್ರ್ಯ ಘೋಷಣೆಗೆ ಅಡ್ಡಿಯಾದ ಬಗ್ಗೆ ಸರಣಿ ಲೇಖನಗಳನ್ನು ಬರೆದರು. ಸರಕಾರ ಈ ಪತ್ರಿಕೆಗೆ ನಿರ್ಬಂಧ ಹೇರಿತು. ಜನರನ್ನು ಎಚ್ಚರಿಸಲು ಲೇಖನ ಬರೆಯಬೇಕು ಎಂದು ತೀರ್ಮಾನಿಸಿದ ದೊರೆಸ್ವಾಮಿ ಅವರು “ಪೌರವೀರ’, “ಪೌರ ಮಾರ್ತಾಂಡ’, “ಪೌರದೂತ’, “ಪೌರ ಭಾಸ್ಕರ’ ಪತ್ರಿಕೆಯ ಸಂಪಾದಕರಾಗಿ ನೋಂದಾ ಯಿಸಿಕೊಂಡಿದ್ದರು.
ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದ್ದ ದೊರೆಸ್ವಾಮಿ ಅವರು ಯಾವುದೇ ಸರಕಾರವಿದ್ದರೂ ತಪ್ಪು ಮಾಡಿದಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
2017ರಲ್ಲಿ ಗಾಂಧಿ ಸೇವಾ ಪುರಸ್ಕಾರ, 2018ರಲ್ಲಿ ಬಸವ ಪುರಸ್ಕಾರ, 2019ರಲ್ಲಿ ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಕ್ಕೆ ಭಾಜನರಾಗಿದ್ದರು. ಬರವಣಿಗೆಯಲ್ಲೂ ತೊಡಗಿ ಕೊಂಡಿದ್ದ ಅವರು 98ನೇ ವಯಸ್ಸಿನಲ್ಲಿ “ಭೂಗಳ್ಳರು ಕಬಳಿಸಿದ ಸರಕಾರಿ ಜಮೀನನ್ನು ಉಳಿಸಿದ ಹೋರಾಟ’ ಎಂಬ ಪುಸ್ತಕವನ್ನು ಬರೆದಿದ್ದರು.
ನನ್ನ ಹಾಸಿಗೆಯನ್ನು ಯುವಕರಿಗೆ ನೀಡಿ: ನನಗೆ ವಯಸ್ಸಾಗಿದೆ ನನಗೆ ನೀಡಿರುವ ಹಾಸಿಗೆಯನ್ನು ಯುವಕರಿಗೆ ನೀಡಿ ಎಂದು ಎಚ್.ಎಸ್. ದೊರೆಸ್ವಾಮಿ ಅವರು ಆಸ್ಪತ್ರೆ ವೈದ್ಯರಿಗೆ ಆಗಾಗ ಮನವಿ ಮಾಡುವ ಮೂಲಕ ಜೀವನ ಕೊನೆಯ ಗಳಿಗೆ ಯಲ್ಲಿಯೂ ಸಾಮಾಜಿಕ ಬದ್ಧತೆ ಮರೆದಿದ್ದಾರೆ. “ದೊರೆಸ್ವಾಮಿ ಅವರು ಕೊರೊನಾ ಹಿನ್ನೆಲೆ ಆಸ್ಪತ್ರೆ ಹಾಸಿಗೆಗಳ ಪರದಾಟದ ಬಗ್ಗೆ ಅರಿತಿದ್ದರು. ಈ ಹಿನ್ನೆಲೆ ವೈದ್ಯರಿಗೆ “ನನಗೆ ವಯಸ್ಸಾಗಿದೆ, ನನ್ನನ್ನು ಮನೆಗೆ ಕಳುಹಿಸಿ, ನನ್ನ ಹಾಸಿಗೆಯನ್ನು ಮತ್ತೂಬ್ಬರಿಗೆ ಕೊಡಿ ಎಂದು ಹೇಳುತ್ತಿದ್ದರು” ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ್ ಹೇಳಿದರು.
ಕಾನೂನು ಹೋರಾಟದ ಹಾದಿ
ನಾಡಿನ ನೆಲ-ಜಲ, ನೈಸರ್ಗಿಕ ಸಂಪತ್ತಿನ ರಕ್ಷಣೆ, ಬಡವರ, ಧ್ವನಿ ಇಲ್ಲದವರ ಮಾನವಹಕ್ಕುಗಳ ವಿಚಾರವಾಗಿ ಬೀದಿ ಹೋರಾಟ ನಡೆಸುತ್ತಿದ್ದ ಎಚ್.ಎಸ್. ದೊರೆಸ್ವಾಮಿ ಅವರು ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟ ಸಹ ನಡೆಸಿರುವ ಕೆಲವು ನಿದರ್ಶನಗಳಿವೆ. ಅನೇಕ ವಿಚಾರಗಳ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ನೊಂದವರಿಗೆ ನ್ಯಾಯ ಕೊಡಿಸಲು ಮತ್ತು ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆ ಆಗಲು ಪ್ರಮುಖ ಪಾತ್ರ ವಹಿಸಿದ್ದರು. ಮುಖ್ಯವಾಗಿ ಬಳ್ಳಾರಿ, ಚಿತ್ರದುರ್ಗ, ತುಮಕೂರಿನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಬೇಲಿಕೇರಿ ಬಂದರಿನ ಮೂಲಕ ಅಕ್ರಮ ಅದಿರು ಸಾಗಾಟ ಹಗರಣಕ್ಕೆ ಸಂಬಂಧಿಸಿದಂತೆ ದೊರೆಸ್ವಾಮಿ 2009ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧದ ಕಾನೂನು ಕುಣಿಕೆ ಬಿಗಿಗೊಂಡಿತ್ತು. ಭೂಕಬಳಿಕೆ ಪ್ರಕರಣಗಳ ವಿಚಾರಣೆಗೆ 2014-15ರಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸರಕಾರದ ನಿರ್ಧಾರದ ಹಿಂದೆ ದೊರೆಸ್ವಾಮಿ ಅವರ ಪಾತ್ರ ಪ್ರಮುಖವಾಗಿತ್ತು. ಇದಕ್ಕಾಗಿ ವಿಧಾನಸೌಧದ ಕಾನೂನು ಸಚಿವರ ಕೊಠಡಿ ಎದುರು ದೊರೆಸ್ವಾಮಿ ಹಾಗೂ ಎ.ಟಿ. ರಾಮಸ್ವಾಮಿ ಧರಣಿ ನಡೆಸಿದ್ದರು. 2016ರ ಭೂದಾನ ಚಳವಳಿಗೆ ಕಾನೂನು ಹೋರಾಟದ ರೂಪ ನೀಡಲು ದೊರೆಸ್ವಾಮಿ ಪ್ರಯತ್ನಿಸಿದ್ದರು.
ಎಚ್.ಎಸ್. ದೊರೆಸ್ವಾಮಿ ಅವರ ನಿಧನದಿಂದಾಗಿ ಅಪ್ರತಿಮ ಹೋರಾಟಗಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಸಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಶತಾಯುಷಿಗಳಾದ ಎಚ್.ಎಸ್. ದೊರೆಸ್ವಾಮಿ ಅವರು ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ದುಡಿದ ಒಬ್ಬ ಮಹಾನ್ ಸಾಮಾಜಿಕ ಹೋರಾಟಗಾರರನ್ನು ಕಳೆದುಕೊಂಡು ರಾಜ್ಯ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ದೊರೆಯಲಿ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಇತ್ತೀಚೆಗಿನ ಭೂಕಬಳಿಕೆ ವಿರುದ್ಧದ ಅವರ ಚಟುವಟಿಕೆಗಳು ದೇಶವ್ಯಾಪಿ ಹಬ್ಬಿತ್ತು. ತಪ್ಪು ಕಂಡಾಗ ಎಚ್ಚರಿಸಿ ಸರಿ ಕಂಡಾಗ ಬೆಂಬಲಿಸುತ್ತಿದ್ದ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಇಳಿವಯಸ್ಸಿ ನಲ್ಲಿಯೂ ಕುಗ್ಗದೆ, ಜಗ್ಗದೆ ಅನ್ಯಾಯ, ಅಕ್ರಮಗಳ ವಿರುದ್ಧ ಬೀದಿಗಿಳಿಯುತ್ತಿದ್ದ ಅವರು ಎಲ್ಲರಿಗೂ ಮಾದರಿಯಾಗಿದ್ದರು.
-ಸಿದ್ದರಾಮಯ್ಯ, ವಿಧಾನಸಭೆ ವಿಪಕ್ಷ ನಾಯಕ
ಶತಾಯುಷಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಸಾಹಿತ್ಯ ಮಂದಿರ ಪ್ರಕಾಶನದ ಮೂಲಕ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ “ಪೌರವಾಣಿ’ ಪತ್ರಿಕೆಯ ಮೂಲಕ ಅವರು ಪತ್ರಿಕಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.