ಕರಾವಳಿಗೆ ಹೊಸ ಆಯಾಮವಿತ್ತ ದೂರದರ್ಶನಕ್ಕೆ ಇನ್ನು 40ರ ಹರೆಯ
Team Udayavani, Jul 29, 2023, 7:50 AM IST
ಮಂಗಳೂರಿಗೆ ದೂರದರ್ಶನ ಸಂಪರ್ಕ ದೊರೆತು ಈ ಜುಲೈ 21ಕ್ಕೆ 39 ವರ್ಷಗಳು ಪೂರ್ಣಗೊಂಡು 40ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಮಂಗಳೂರಿನಲ್ಲಿ ದೂರದರ್ಶನ ಪ್ರಸಾರ ಆರಂಭವಾದದ್ದು 21-7-1984ರಂದು. ಈ ನಾಲ್ಕು ದಶಕಗಳ ಅವಧಿಯಲ್ಲಿ ದೂರದರ್ಶನ ಮತ್ತು ಬಳಿಕ ಸೇರ್ಪಡೆಗೊಂಡ ಕೇಬಲ್ ಟಿವಿ (ಸ್ಯಾಟಲೈಟ್ ವಾಹಿನಿಗಳು)
ಈ ಪ್ರದೇಶದ ಜನಜೀವನಕ್ಕೆ ಸಂಪೂರ್ಣ ಬದಲಾವಣೆಯನ್ನು ತಂದು ಬಿಟ್ಟಿದೆ!
ಮಂಗಳೂರು ದೂರದರ್ಶನ ಕೇಂದ್ರ ಆಗ ಸ್ಥಾಪನೆಯಾದದ್ದು ಮಂಗಳೂರಿನ ಹ್ಯಾಟ್‌ಹಿಲ್ ಎಂಬ ಎತ್ತರದ ಪ್ರದೇಶದಲ್ಲಿ. ಅದು ಲಘು ಸಾಮರ್ಥ್ಯದ ಪ್ರಸಾರ (ಎಲ್‌ಪಿಟಿ) ಕೇಂದ್ರ. ಪ್ರಸಾರದ ಬಹುಪಾಲು ಸಮುದ್ರಪಾಲು! ಆದರೆ ದೂರದರ್ಶನ ತನ್ನ ಬಹುಮುಖೀ ಪ್ರಭಾವವನ್ನು ಅದಾಗಲೇ ಉಂಟು ಮಾಡಿತ್ತು.
ಮುಂದಿನ ಹಂತದಲ್ಲಿ ಮಣಿಪಾಲದಲ್ಲಿ ದೂ.ದ. ಮರುಪ್ರಸಾರ ಕೇಂದ್ರ ಆರಂಭ ವಾಯಿತು. ಮಂಗಳೂರು ವ್ಯಾಪ್ತಿಗಿಂತ ಹೆಚ್ಚು ಮನೆಗಳನ್ನು ತಲುಪಿತು.
ವಾಮಂಜೂರಿಗೆ ಮಂಗಳೂರು ದೂರದರ್ಶನ ಕೇಂದ್ರ ವನ್ನು ಉನ್ನತ ಸಾಮರ್ಥ್ಯದ ಮರುಪ್ರಸಾರ (ಎಚ್‌ಪಿಟಿ) ಕೇಂದ್ರವನ್ನಾಗಿ ಹೊರ ವಲಯದ ವಾಮಂಜೂರಿಗೆ 2001ರಲ್ಲಿ ಸ್ಥಳಾಂತರಿಸಲಾಯಿತು. ಕೇವಲ ದಿಲ್ಲಿ ಕಾರ್ಯಕ್ರಮವನ್ನಷ್ಟೇ ನೋಡುತ್ತಿದ್ದ ಈ ಭಾಗದ ಜನತೆಗೆ ಈ ನಡುವೆ ಬೆಂಗಳೂರು ದೂರದರ್ಶನದ (ಚಂದನ) ಪ್ರಸಾರ ಲಭ್ಯವಾಯಿತು. ಬಳಿಕ ಹಂತ ಹಂತಗಳಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯಗಳಲ್ಲಿ ದೂ.ದ. ಲಘು ಸಾಮರ್ಥ್ಯದ ಪ್ರಸಾರ ಕೇಂದ್ರಗಳು ಆರಂಭವಾದವು. ಸಮಗ್ರ ದ.ಕ.- ಉಡುಪಿ ಜಿಲ್ಲೆಗಳಲ್ಲಿ ದೂರದರ್ಶನ ಲಭ್ಯವಾಯಿತು.
ವಾಮಂಜೂರು ಕೇಂದ್ರ ಆರಂಭವಾಗುವ ಮೊದಲು ಜಿಲ್ಲೆಯ ಹಲವೆಡೆ ಡಿಶ್ ಟಿವಿಗಳನ್ನು ಅಳವಡಿಸಿ ಪ್ರಸಾರ ಪಡೆಯುವ ಯಶಸ್ವೀ ಪ್ರಯತ್ನಗಳಾದವು.
ರಾಮಾಯಣ- ಮಹಾಭಾರತ
ದೂರದರ್ಶನಕ್ಕೆ ಆ ದಿನಗಳಲ್ಲಿ ಜನತೆ ಸಂಪೂರ್ಣವಾಗಿ ಆಕರ್ಷಿತರಾದದ್ದು ರಾಮಾಯಣ, ಮಹಾಭಾರತ ಸಹಿತ ಅನೇಕ ಧಾರಾವಾಹಿಗಳಿಗೆ. ರಾತ್ರಿ 9ರ ಹಿಂದಿ ಸುದ್ದಿ ಪ್ರಸಾರ ಆಗಿನ ಇನ್ನೊಂದು ಹೈಲೈಟ್. ಗೀತಾಂಜಲಿ ಅಯ್ಯರ್, ತೇಜೇಶ್ವರ ಸಿಂಗ್ ಮುಂತಾದವರು ಪ್ರಸಿದ್ಧ ಸುದ್ದಿ ವಾಚಕರು. ಕ್ರಿಕೆಟ್ ನೇರ ಪ್ರಸಾರ ಜನತೆಯ ಅಚ್ಚುಮೆಚ್ಚು. 1984ರಲ್ಲಿ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನ ಹಿನ್ನೆಲೆಯಲ್ಲಿ ಮಂಗಳೂರು ಸಹಿತ ದೇಶಾದ್ಯಂತ ಎಲ್‌ಪಿಟಿಗಳ ಸ್ಥಾಪನೆಯಾಗಿತ್ತು.
ಕೇಬಲ್ ಟಿವಿ ಕ್ರಾಂತಿ
1989ರಲ್ಲಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಕೇಬಲ್ ಟಿವಿ ಅನುಷ್ಠಾನವಾಯಿತು. ಬಲ್ಮಠ ಕೇಂದ್ರವಾಗಿ ಮಣ್ಣಗುಡ್ಡೆ ಮತ್ತು ಮಂಗಳಾದೇವಿ. ಆಗ 4 ಚಾನೆಲ್‌ಗಳು! ಮುಂದೆ 1991ರಲ್ಲಿ ವಿಸ್ತರಣೆಯಾಯಿತು. 2001ರಲ್ಲಿ ಆಪ್ಟಿಕಲ್ ಫೈಬರ್ ತಂತ್ರಜ್ಞಾನ ದೊರೆತ ಬಳಿಕ ಕರಾವಳಿ- ಮಲೆನಾಡಿನುದ್ದಕ್ಕೂ ಕೇಬಲ್ ಟಿವಿಯ ಮೂಲಕ ಸ್ಯಾಟ್‌ಲೈಟ್ ಚಾನೆಲ್‌ಗಳು ದೊರೆಯಲಾರಂಭಿಸಿದವು.
ಈಗ ದ.ಕ., ಉಡುಪಿ, ಉತ್ತರ ಕನ್ನಡ, ಕಾಸರಗೋಡು ಮುಂತಾದ ಜಿಲ್ಲೆಗಳ ಸ್ಥಳೀಯ ಕಾರ್ಯಕ್ರಮಗಳ ನೇರ ಪ್ರಸಾರವೂ ನಡೆಯುತ್ತಿದೆ!
1984ರಲ್ಲಿ ಮಂಗಳೂರಿಗರ ಪಾಲಿಗೆ ದೂರದರ್ಶನ ಒಂದೇ ಚಾನೆಲ್. 1989ರಲ್ಲಿ 4 ಚಾನೆಲ್. 2003ರಲ್ಲಿ 32 ಚಾನೆಲ್. ಅನಂತರ ಅನ್‌ಲಾಗ್ ವ್ಯವಸ್ಥೆ ಯಲ್ಲಿ 80 ಚಾನೆಲ್. ಈಗ ಡಿಜಿಟಲ್ ವ್ಯವಸ್ಥೆಯಲ್ಲಿ ಮಂಗಳೂರು ಸಹಿತ ಎಲ್ಲೆ ಡೆಯ ವೀಕ್ಷಕರಿಗೆ ನೂರಾರು ಚಾನೆಲ್‌ಗಳು ಲಭ್ಯ.
ಅಂತರ್ಮುಖತ್ವದ ಅಪಾಯ
ದೂರದರ್ಶನವಷ್ಟೇ ಲಭ್ಯವಿದ್ದ ವೀಕ್ಷಕರಿಗೆ ಈಗ ರಿಮೋಟ್ ಕಂಟ್ರೋಲ್ ಮೂಲಕ ಬೆರಳ ತುದಿಯಲ್ಲೇ ನೂರಾರು ಚಾನೆಲ್‌ಗಳ ಆಯ್ಕೆ! ಈ ನಾಲ್ಕು ದಶಕದಲ್ಲಿ ಟಿವಿ ಧಾರಾವಾಹಿಗಳು ಈ ಪ್ರದೇಶದ ದೈನಂದಿನ ಅಥವಾ ಕೌಟುಂಬಿಕ ಜೀವನದ ಮೇಲೆ ಮಹತ್ತರ ಪರಿಣಾಮ ಬೀರಿವೆ. ಸಾರ್ವಜನಿಕ ಸಭೆ- ಸಮಾರಂಭಗಳು, ಸಾಂಪ್ರ ದಾಯಿಕ – ಸಾಂಸ್ಕೃತಿಕ – ಪಾರಂಪರಿಕ ಕಾರ್ಯಕ್ರಮ ಗಳಿಗೂ ಪ್ರೇಕ್ಷಕರ ಕೊರತೆಯ ಮೂಲಕ ಈ ಪ್ರಭಾವ ತಟ್ಟಿದೆ. ಒಂದಿಷ್ಟು ಅಂತರ್ಮುಖತ್ವ ಉಂಟಾಗಿದೆ ಅನ್ನುವುದು ವಾಸ್ತವ. ಕ್ರೈಮ್ ವೈಭವೀಕರಣ ಕೂಡ ಅದ ರದ್ದೇ ಆದ ಪರಿಣಾಮ ಬೀರುತ್ತಿದೆ. ಕೌಟುಂಬಿಕ ಕಾರ್ಯಕ್ರಮಗಳನ್ನು ಟಿವಿ ಕಾರ್ಯಕ್ರಮಗಳಿಗಾಗಿ ತ್ಯಜಿಸುವವರಿದ್ದಾರೆ! ರಾಮಾ ಯಣ ಧಾರಾವಾಹಿ ಪ್ರಸಾರದ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಗಳಲ್ಲಿರುತ್ತಿದ್ದ ಒಕ್ಕಣೆ: ಮದುವೆಯ ಸಭಾಂಗಣದಲ್ಲಿ ರಾಮಾಯಣ ಧಾರಾವಾಹಿಯ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ!
ಮಂಗಳೂರಿಗೆ ತಪ್ಪಿದ ದೂರದರ್ಶನ ಸ್ಟುಡಿಯೋ
ಮಂಗಳೂರು ಕಳೆದುಕೊಂಡ ಅನೇಕಾನೇಕ ಯೋಜನೆಗಳಲ್ಲಿ ದೂರದರ್ಶನ ಕೇಂದ್ರ ಕೂಡ ಒಂದಾಗಿದೆ. ದೂರದರ್ಶನ ಉನ್ನತ ಸಾಮರ್ಥ್ಯದ ಮರು ಪ್ರಸಾರದ (ಎಚ್‌ಪಿಟಿ) ಮಂಗಳೂರು ಕೇಂದ್ರ 12-7-2001ರಂದು ವಾಮಂಜೂರಿನ 3.09 ಎಕ್ರೆ ಸ್ಥಳಾವಕಾಶದಲ್ಲಿ ಕಾರ್ಯನಿರ್ವಹಿಸಲು (ಸ್ಥಳಾಂತರ) ಆರಂಭವಾಯಿತು. ಅತ್ಯಾಧುನಿಕ ತಂತ್ರ ಜ್ಞಾನದಿಂದ ಪ್ರಸಾರದ ಗುಣಮಟ್ಟ ವ್ಯಾಪ್ತಿ ಉನ್ನತೀಕರಣಗೊಂಡಿತು. ಈ ಸಂದರ್ಭ (1984 ರಲ್ಲೂ) ಮಂಗಳೂರಿಗೆ ಸುಸಜ್ಜಿತ ಸ್ಟುಡಿಯೋ ಸಹಿತ ದೂರದರ್ಶನ ಕೇಂದ್ರವನ್ನು ನೀಡಲಾಗುವುದೆಂದು ಘೋಷಿಸಲಾಗಿತ್ತು. ಆದರೆ 4 ದಶಕ ಕಳೆದರೂ ಪ್ರಸ್ತಾವ ನನಸಾ ಗಿಲ್ಲ. ಬಹುತೇಕ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿಯೂ ಇಲ್ಲ.
ವಿಕೇಂದ್ರೀಕರಣ!
ಹಿರಿಯರೊಬ್ಬರು ಕಾರ್ಯಕ್ರಮದಲ್ಲಿ ಹೀಗೆ ತಮ್ಮ ಟಿವಿ ಸಂಕಟ ತೋಡಿಕೊಂಡರು. ನಮ್ಮ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಟಿವಿ. ನನಗೆ ನ್ಯೂಸ್ ಚಾನೆಲ್, ಪತ್ನಿಗೆ
ಸೀರಿಯಲ್ ಚಾನೆಲ್, ಮಗನಿಗೆ ಸ್ಪೋರ್ಟ್ಸ್ ಚಾನೆಲ್.
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.