ಅವ್ವನ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತಂದ ಮಗ
Team Udayavani, Jan 25, 2020, 3:08 AM IST
ಧಾರವಾಡ: ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಆದರೆ ಇಲ್ಲೊಬ್ಬ ರೈತ ತನ್ನ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ “ಅವ್ವ’ನನ್ನು ಅಭಿನಂದಿಸಲು ಸಜ್ಜಾಗಿದ್ದಾನೆ.
ಡಾಕ್ಟರ್, ಎಂಜಿನಿಯರ್ ಓದಿ ಅಮೆರಿಕ, ಇಂಗ್ಲೆಂಡ್‌ನಲ್ಲಿ ಸುಖ ಜೀವನ ನಡೆಸುವ ಲಕ್ಷ ಲಕ್ಷ ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸಿರುವ ಈ ಕಾಲದಲ್ಲಿ, ಇಲ್ಲೊಬ್ಬ ಕೃಷಿಕ ತಾಯಿಯನ್ನು ದೇವರೆಂದು ತಿಳಿಯಬೇಕು, ಎಲ್ಲ ಮಕ್ಕಳು ತಮ್ಮ ತಂದೆ-ತಾಯಿಯರನ್ನು ಕೊನೆವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸಂದೇಶ ಸಾರುವುದಕ್ಕೆ ಹತ್ತೂರು ಜನರ ಮಧ್ಯೆ ಹೆತ್ತವ್ವನಿಗೆ(ತಾಯಿಗೆ)ಬೆಳ್ಳಿ ಕಿರೀಟ ತೊಡಿಸಿ, ಶತಮಾನೋತ್ಸವ ಆಚರಿಸಲು ಸಿದ್ಧಗೊಂಡಿದ್ದಾನೆ.
ಧಾರವಾಡ ಸಮೀಪದ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಶಂಕ್ರಪ್ಪ ಕೋರಿ ಎಂಬುವರು ತಾಯಿಯ ಶತಮಾನೋತ್ಸವ ನಿಮಿತ್ತ ಅವರ ಪಾದಪೂಜೆ ಮಾಡುವುದರೊಂದಿಗೆ ಊರು ಸೇರಿ ಸುತ್ತಮುತ್ತಲಿನ ಹಳ್ಳಿಗಳ ಮೂರು ಸಾವಿರ ಜನರಿಗೆ ಸಿಹಿಯೂಟ ಮಾಡಿಸಲು ಸಜ್ಜಾಗಿದ್ದಾರೆ. ಜ.25ರಂದು ನಡೆಯುವ ಕಾರ್ಯಕ್ರಮಕ್ಕೆ ನಾಡಿನ ಐವರು ಹಿರಿಯ ಸ್ವಾಮೀಜಿಗಳನ್ನು ಕರೆಯಿಸಿ ತನ್ನ ತಾಯಿಯ ತುಲಾಭಾರ ಸೇವೆ ಮಾಡುವುದರೊಂದಿಗೆ ಅವಳ ಮಾದರಿ ಬದುಕು ಇತರರಿಗೂ ತಿಳಿಯುವಂತೆ ಮಾಡಲು ಪುಸ್ತಕ ಮುದ್ರಿಸಿ ಹಂಚಲಿದ್ದಾನೆ.
ಇದೇ ಕಾರ್ಯಕ್ರಮದಲ್ಲಿ ನೂರು ವರ್ಷ ತುಂಬಿದ ಸುತ್ತಮುತ್ತಲಿನ ಗ್ರಾಮದ ದಲಿತ, ಮುಸ್ಲಿಂ ಸೇರಿ ಎಲ್ಲಾ ವರ್ಗದ ಹಿರಿಯ ನಾಗರಿಕರನ್ನು ಸನ್ಮಾನಿಸಿ, ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದ್ದಾರೆ ಹಿರಿಯ ಜೀವಿ ಮಹಾದೇವಪ್ಪ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡ ಮಹಾದೇವಪ್ಪ ಅವರಿಗೆ ಬಡತನದ ಮಧ್ಯೆ ತಾಯಿ ತನ್ನನ್ನು ಬೆಳೆಸಲು ಪಟ್ಟ ಕಷ್ಟಗಳೇ ತಾಯಿಭಕ್ತಿ ಉಳಿಯುವಂತೆ ಮಾಡಿದೆ. ಕಾಡಿನ ಮಧ್ಯೆ ಹೊಲ್ತಿಕೋಟಿ ಗ್ರಾಮಕ್ಕೆ 1967ರಲ್ಲಿ ಮಹಾದೇವಪ್ಪ ತಾಯಿ ಸಮೇತ ಕೂಲಿಗೆ ಬಂದಾಗ ಅದು ವಿದ್ಯುತ್, ಕುಡಿಯುವ ನೀರು ಇಲ್ಲದ ಕುಗ್ರಾಮ.
ಉಳುಮೆ ನೊಗಕ್ಕೆ ಲಾಟೀನು ಕಟ್ಟಿ ದುಡಿಮೆ ಆರಂಭಿಸಿ ಇಂದು 47 ಎಕರೆಯಷ್ಟು ಜಮೀನು ದುಡಿದು ಸಂಪಾದಿಸಿದ್ದಾರೆ. ಈಗಲೂ ಪ್ರತಿದಿನ ಹೊಲಕ್ಕೆ ಹೋಗಿ ದುಡಿಮೆ ಮಾಡುವ ಅವರು, ಕಾಯಕ ಜೀವಿ. ಇಂಥ ಶ್ರಮಜೀವಿಗೆ ತನ್ನ ತಾಯಿ ತನ್ನ ಬೆಳೆಸಲು ಪಟ್ಟ ಶ್ರಮಕ್ಕೆ ಪ್ರತಿಯಾಗಿ ಅವಳನ್ನು ಹತ್ತೂರು ಜನರ ಮಧ್ಯೆ ಸ್ವಾಮಿಶ್ರೇಷ್ಠರಿಂದ ಪೂಜಿಸುವ ಹೆಬ್ಬಯಕೆ. ಹೀಗಾಗಿ ಅವಳಿಗಾಗಿ ಒಂದೂವರೆ ಕೆಜಿ ತೂಕದ ಬೆಳ್ಳಿ ಕಿರೀಟವನ್ನು ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ತಯಾರಿಸಿದ್ದಾರೆ.
ಮಲ್ಲಮ್ಮನ ಪವಾಡ: ಶತಾಯುಷಿ ಮಲ್ಲಮ್ಮ ಕೃಷಿ ಕಾಯಕದಲ್ಲಿ ನಿಷ್ಠೆ ಇಟ್ಟವರು. ಪತಿ ಅಕಾಲಿಕ ಮರಣಕ್ಕೆ ತುತ್ತಾದಾಗ ಧೈರ್ಯಗುಂದದೇ ಮಗನನ್ನು ಸಮರ್ಥ ವಾಗಿ ಬೆಳೆಸಿದಳು. ಮನೆಯಲ್ಲಿ ಬಡತನ ಎಷ್ಟಿತ್ತೆಂದರೆ ಒಬ್ಬನೇ ಮಗನನ್ನು ಶಾಲೆಗೆ ಕಳುಹಿಸಿ ಓದಿಸಲು ಆಗದ ಸ್ಥಿತಿ. ಇಂತಹ ಸಂದರ್ಭದಲ್ಲಿ ಕೃಷಿಯೇ ಸೂಕ್ತ ಎಂದೆನಿಸಿ ಮಗನನ್ನು ಕೃಷಿ ಕಾಯಕಕ್ಕೆ ತೊಡಗಿಸಿದಳು.
ಹೊಲದ ಉಳುಮೆಗೆ ಒಂದು ಕಡೆ ಅವ್ವ, ಇನ್ನೊಂದು ಕಡೆ ಮಗ ಇಬ್ಬರೂ ಕುಟುಂಬ ಬಂಡಿಯ ಎತ್ತಿನಂತೆ ಬದುಕು ಸವೆಸಿ ಸ್ವಾಭಿಮಾನದ ಕೃಷಿ ಬದುಕು ಕಟ್ಟಿಕೊಂಡು ಸೈ ಎನಿಸಿಕೊಳ್ಳುವುದಕ್ಕೆ ಬರೊಬ್ಬರಿ 25 ವರ್ಷಗಳು ಬೇಕಾದವು. ಆ ಮೇಲೆ ಮಗನಿಗೆ ಮಡದಿ, ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇದೀಗ ಬರೊಬ್ಬರಿ 22 ಜನರಿರುವ ತುಂಬು ಕುಟುಂಬವಾಗಿದೆ ಕೋರಿ ಅವರ ಮನೆತನ.
100 ವರ್ಷ ತುಂಬಿದರೂ ಗಟ್ಟಿಮುಟ್ಟು ಮಲ್ಲಮ್ಮ: 100 ವರ್ಷ ತುಂಬಿದರೂ ಮಲ್ಲಮ್ಮ ಕೋರಿ ಇಂದಿಗೂ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಕೃಷಿ ಸಂಬಂಧಿ ಉಪ ಕೆಲಸಗಳಲ್ಲಿ ಈಗಲೂ ಅವಳು ಮಗ್ನ. ಕಣ್ಣು ನಿಚ್ಚಳವಾಗಿ ಕಾಣುತ್ತವೆ. ಜೋಳದ ರೊಟ್ಟಿ ಅವಳ ಆರೋಗ್ಯದ ಗುಟ್ಟು. ಹಸುಗೂಸನ್ನು ಉಡಿಯಲ್ಲಿ ಕಟ್ಟಿಕೊಂಡು ಕಾಡುಮೃಗಗಳ ಮಧ್ಯೆ ಬದುಕು ಕಟ್ಟಿಕೊಂಡದ್ದು ನಿಜಕ್ಕೂ ಮಲ್ಲಮ್ಮನ ಪವಾಡವೇ ಸರಿ.
ತಾಯಿಯ ಋಣವೇ ಅಂತಹದ್ದು, ಅರಿತವರಿಗೆ ಅವಳ ಋಣದಲ್ಲಿನ ಸಾಸಿವೆ ಕಾಳಷ್ಟಾದರೂ ಋಣ ತೀರಿಸಬೇಕೆನ್ನುವ ಹಂಬಲ. ಅದಕ್ಕಾಗಿ ಕೆಲವರು ತಾಯಿ ಗುಡಿ ಕಟ್ಟಿಸಿದ್ದಾರೆ, ಇನ್ನು ಕೆಲವರು ತಾಯಿಯನ್ನು ಹಾಡಿ ಹೊಗಳಿದ್ದಾರೆ, ಅನೇಕರು ತಾಯಿಗಾಗಿ ಏನೇನೋ ತ್ಯಾಗ ಮಾಡಿದ್ದಾರೆ. ಆದರೆ ಮಹದೇವಪ್ಪ ಅವರು ಮಾತ್ರ ತಾಯಿ ದೇವರ ಬಗ್ಗೆ ಸುತ್ತಮುತ್ತಲಿನ ಹಳ್ಳಿಗರು ನೋಡಿ ಪಾಠ ಕಲಿಯುವಂತೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನಮ್ಮವ್ವ ನನ್ನ ಕೂಲಿ ಮಾಡಿ ಬೆಳೆಸಿದ್ಲು. ಅವಳು ನೂರು ವರ್ಷ ಬದುಕಿದ್ದು ನನ್ನ ಭಾಗ್ಯ. ಅವ್ವನ ಆಶೀರ್ವಾದದಲ್ಲಿ ನೂರು ವರ್ಷ ಬದುಕುವ ಪುಣ್ಯ ಎಲ್ಲ ಮಕ್ಕಳಿಗೂ ಸಿಗಬೇಕು. ಹಳ್ಳಿಯೊಳಗೂ ತಂದೆ-ತಾಯಿಯರನ್ನು ಮಕ್ಕಳು ಕನಿಷ್ಟವಾಗಿ ಕಾಣಾಕತ್ತಾರ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಬರಲಿ ಅನ್ನೋದೇ ನನ್ನ ಆಶಯ.
-ಮಹದೇವಪ್ಪ ಕೋರಿ, ಅವ್ವನ ಶತಮಾನೋತ್ಸವ ಆಚರಿಸುತ್ತಿರುವ ಮಗ
ಗೆದ್ದು ಬರುವ ಮಕ್ಕಳಿಗೆ ಅವ್ವ ಬೆಳ್ಳಿ ಕಿರೀಟ ಹಾಕಬೇಕು. ಆದ್ರ ನನ್ನ ಮಗಾ ನನಗ ಬೆಳ್ಳಿ ಕಿರೀಟ ತಂದಾನ. ಇದನ್ನ ನೋಡಿ ಖುಷಿ ಆಗೇತಿ. ಎಲ್ಲಾ ಅವ್ವಂದಿರಿಗೂ ನನ್ನ ಮಗನಂಥ ಮಕ್ಕಳ ಹುಟ್ಟಬೇಕು.
-ಮಲ್ಲಮ್ಮ ಕೋರಿ, ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿರಿಯಜ್ಜಿ
* ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.