ಸರಳ-ಸಜ್ಜನಿಕೆಯ ರಾಜಕಾರಣಿ – ವಿಶ್ವೇಶ್ವರ ಹೆಗಡೆ ಕಾಗೇರಿ
Team Udayavani, Jul 1, 2022, 3:30 PM IST
ಎಲ್ಲಾ ಕ್ಷೇತ್ರಗಳೂ ಎಲ್ಲಾ ಕಾಲದಲ್ಲಿಯೂ ಒಳಿತು ಕೆಡುಕುಗಳನ್ನು ಹೊಂದಿಯೇ ಇರುತ್ತವೆ. ಅದು ಸಾಹಿತ್ಯವಿರಲಿ, ಸಂಗೀತವಿರಲಿ, ಸಾಮಾಜಿಕವಿರಲಿ, ಆಡಳಿತವಿರಲಿ, ಸಾಂಸ್ಥಿಕವಾಗಿರಲಿ, ರಾಜಕೀಯವಾಗಿರಲಿ ಎಲ್ಲಾ ಕಡೆಯೂ ಈ ವಿಶೇಷವಿರುತ್ತದೆ, ವಿಚಿತ್ರಗಳಿರುತ್ತವೆ, ಸಕಾರಾತ್ಮಕತೆಗಳಿರುತ್ತವೆ, ನಕಾರಾತ್ಮತೆಗಳಿರುತ್ತವೆ. ಕೆಲವು ಕಡೆಯಲ್ಲಿ ವಿಭಾಗದ ಮೌಲ್ಯವನ್ನೇ ಅಪವಿತ್ರಗೊಳಿಸುವಷ್ಟು ವಿಕಾರಗಳನ್ನು ನಾವು ನೋಡಬಹುದು. ಎಲ್ಲಾ ಕ್ಷೇತ್ರಗಳೂ ಹೀಗೆ ಇದ್ದರೂ ರಾಜಕೀಯವನ್ನು ಜನ ಆಡಿಕೊಳ್ಳುವುದು ಹೆಚ್ಚು. ಕಾರಣ ಈ ರಾಜಕೀಯ ಕ್ಷೇತ್ರ ಜನರಿಂದ ಆಯ್ಕೆಗೊಳ್ಳುವ ಜನರ ಪ್ರತಿನಿ ಧಿಗಳನ್ನು ಹೊಂದಿರುವುದು. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದಿಂದಲೂ ಈ ಕ್ಷೇತ್ರದಲ್ಲಿ ಸಾಕಷ್ಟು ಪಲ್ಲಟಗಳು, ಪರಿವರ್ತನೆಗಳು ಆಗುತ್ತಲೇ ಇವೆ. ಅದಕ್ಕಾಗಿ ಮೊದಲು ರಾಜಧರ್ಮದಂತೆ ಇದ್ದ ವಿಭಾಗ ಈಗ ಅಪ್ಪಟ ರಾಜಕೀಯವೇ ಆಗಿ ನೆಲೆಯಾಗಿದೆ.
ಈ ಕ್ಷೇತ್ರದಲ್ಲಿ ಶಿಸ್ತು ಸಜ್ಜನಿಕೆ, ವಿನಮ್ರ ನಡವಳಿಕೆ, ವಸ್ತು ನಿಷ್ಠವಾದ ಅನುಭವ-ಅಧ್ಯಯನಗಳನ್ನು ರೂಢಿಸಿಕೊಂಡಿರುವ ಜನನಾಯಕರನ್ನು ಕಾಣುವುದು ಅತ್ಯಂತ ವಿರಳ. ಹಿಂದೆಯೂ ನಿಷ್ಠೆ-ಶಿಸ್ತು ತತ್ವಬದ್ಧರಾದ ನಿಜವಾದ ಪ್ರಜಾಪ್ರಭುತ್ವದ ಮಾದರಿ ನಾಯಕರಿರುತ್ತಿದ್ದರು. ಅವರನ್ನು ಕಂಡರೆ ಸಹಜವಾಗಿ ಗೌರವ ಭಾವ ಒಡಮೂಡುತ್ತಿತ್ತು. ಅವರು ಎದುರು ಬಂದರೆ ಜನ ಪ್ರೀತಿ-ಗೌರವದಿಂದ ತಲೆಬಾಗಿ ಬದಿಗೆ ನಿಲ್ಲುತ್ತಿದ್ದರು. ಅದು ವ್ಯಕ್ತಿತ್ವದ ಪ್ರಭಾವ. ಈಗಲೂ ದೇಶಾದ್ಯಂತ ಅಪರೂಪಕ್ಕೆ ಅಲ್ಲಲ್ಲಿ ಒಬ್ಬೊಬ್ಬರು ಸಿಗುತ್ತಾರೆ. ಆ ರೀತಿಯ ಒಬ್ಬೊಬ್ಬರಲ್ಲಿ ಮೊದಲು ಕೇಳಿ ಬರುವ ಹೆಸರು ನಮ್ಮ ವಿಧಾನಸಭಾಧ್ಯಕ್ಷ ಶಿರಸಿ ಸಮೀಪದ ಪುಟ್ಟ ಗ್ರಾಮ ಕಾಗೇರಿಯ ವಿಶ್ವೇಶ್ವರ ಅನಂತ ಹೆಗಡೆ ಅವರು. ಅವರ ಸರಳತೆ, ಬದ್ಧತೆಯೇ ಅವರಿಗೆ ಬೆಂಗಾವಲು. ಇದೇ ಸಜ್ಜನಿಕೆ ಕಾರಣದಿಂದ ಸತತ ಆರು ಬಾರಿ ಗೆದ್ದಿದ್ದಾರೆ. ಕ್ಷೇತ್ರ ಬದಲಾದರೂ ಸಾಧಿಸಿ ತೋರಿದ್ದಾರೆ. ಅದಕ್ಕೆ ಅವರು ಪಾಲಿಸಿಕೊಂಡ ʼರಾಜಧರ್ಮʼ ಕಾರಣ. ಅವರ ದೂರದೃಷ್ಟಿ, ಬದ್ಧತೆ ಕಾರಣ.
ಕಾಗೇರಿ ಅವರು ಪದೇ ಪದೇ ಹೇಳುವ ಸಂವಿಧಾನದ ಜಾಗೃತಿ ಅಂಶ, ರಾಷ್ಟ್ರ ನಿಷ್ಠೆ, ಆಚಾರ-ವಿಚಾರಗಳ ಶುದ್ಧತೆ-ಬದ್ಧತೆಗಳನ್ನು ಇಂದು ಮೈಗೂಡಿಸಿಕೊಂಡವರು ವಿರಳ. ಲೋಕಾನುಭವ ಹೊಂದಿರುವ ಸುಸಂಸ್ಕೃತ ಮನೆತನದ ಹಿನ್ನೆಲೆಯಲ್ಲಿ ಒಬ್ಬ ಜನಪ್ರತಿನಿಧಿ ಹೀಗೆ ಸಿಗುವುದೂ ವಿರಳ. ಎಂದೂ ಬಿರು ನುಡಿಗಳನ್ನು ಆಡದೇ, ಅವಾಚ್ಯ ಪದ ಬಳಸದೇ, ಹಿರಿಯರನ್ನು ಜ್ಞಾನಿಗಳನ್ನು ಬಹುವಚನದಿಂದಲೇ ಗೌರವಿಸುತ್ತ, ಕಿರಿಯರನ್ನು ಪ್ರೀತಿಯಿಂದ ಹೆಗಲ ಮೇಲೆ ಕೈಇಟ್ಟು ಮಾತಾಡಿಸುವ ಆಪ್ತ ಸ್ವಭಾವ ಅವರದ್ದು. ಭಾರತೀಯ ಸಿದ್ಧಾಂತ ಪ್ರತಿಪಾದಕರಾಗಿಯೂ ಭಾರತೀಯತೆಯ ನಿಲುಮೆಗಳನ್ನು ಅರಿತು ಆಚರಿಸುವ ದೃಢಚಿತ್ತರಾದ ಕಾಗೇರಿಯವರು ರಾಜಕೀಯ ಕ್ಷೇತ್ರದಲ್ಲಿ ರಾಜಮಾನ್ಯರಾಗಿರುವುದು ಸಮುಚಿತ. ಅವರನ್ನು ಎಲ್ಲಾ ಪಕ್ಷಗಳ ನಾಯಕರು, ಅನಾನ್ಯ ಸಿದ್ಧಾಂತವಾದಿಗಳು ಸಹ ವಿಶ್ವಾಸದಿಂದಲೂ ಗೌರವದಿಂದಲೂ ಕಾಣುವುದು “ಸಜ್ಜನ ರಾಜಕಾರಣಿ’ ಎಂದೇ. ಆದುದರಿಂದ ಅವರನ್ನು ಶುದ್ಧ ರಾಜಕೀಯದ ಮುತ್ಸದ್ದಿ ಎಂದು ರಾಜಕೀಯ ವಿಶ್ಲೇಷಕರು, ಚಿಂತಕರು ಆದರಿಸುವುದು.
ಈ ಎಲ್ಲಾ ಕಾರಣಗಳನ್ನು ಕೂಲಂಕಷವಾಗಿ ಅವಲೋಕಿಸಿದರೆ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಶುದ್ಧ ಹಾಗೂ ಶಿಸ್ತಿನ ಸಜ್ಜನಿಕೆಯ ವಿನೀತ ರಾಜಧರ್ಮ ಪಾಲಕರಾಗಿ ಕಾಣುವ ಕರ್ನಾಟಕದ ರಾಜಕೀಯ ಕಣ್ಮಣಿ ವಿಶ್ವೇಶ್ವರ ಹೆಗಡೆ ಕಾಗೇರಿ. ಇಂತಹ ರಾಜಕೀಯ ಧುರೀಣರು ಹೆಚ್ಚೆಚ್ಚು ಕಾಣುವಂತಾದರೆ ಈ ಕ್ಷೇತ್ರದ ಶುದ್ಧತೆಗೆ ಇನ್ನಾವ ಚಿಂತನೆಗಳೂ ಬೇಕಿಲ್ಲ.
ಅಭ್ಯಾಸ -ಅಭಿವೃದ್ಧಿ-ಅನುಷ್ಠಾನ
ಇವು ಮೂರೂ ವಿಷಯಗಳು ಎಲ್ಲರಿಗೂ ಬೇಕಾದ ಚಿಂತನೆಗಳೇ ಆದರೂ ರಾಜಕೀಯ ಧುರೀಣರಿಗೆ ಸದಾ ಗಮನ ಅತ್ಯಗತ್ಯ. ಅದರಲ್ಲೂ ಎಷ್ಟೇ ಒತ್ತಡಗಳಿದ್ದರೂ ಬಿಡುವೇ ಇಲ್ಲ ಎನ್ನುವಾಗಲೂ ಈ ಮೂರೂ ಮಹತ್ವದ ವಿಚಾರಗಳಿಂದ ರಾಜಕೀಯ ನೇತಾರರು ದೂರ ಸಾಗಬಾರದು. ಇದು ಎಷ್ಟು ಅನಿವಾರ್ಯವೋ ಅಷ್ಟೇ ಅವರ ನೈಜ ವ್ಯಕ್ತಿತ್ವ ದರ್ಶನ ಇದರಿಂದಲೇ ಆಗುವುದು. ಕಾಗೇರಿಯವರು ಈ ಮೂರೂ ವಿಚಾರಗಳನ್ನು ನಿತ್ಯ ಪಾಲಿಸುವುದು ಅಭಿಮಾನದ ಸಂಗತಿ. ಅವರ ಅಭ್ಯಾಸ ಹಾಗೂ ಅರಿವಿನ ಬಗೆಗೆ ಯೋಚಿಸಿದರೆ ಹಲವು ಮಾತೇಕೆ? ಅವರು ಸಭಾಧ್ಯಕ್ಷರಾಗಿ ನಿರ್ವಹಿಸುತ್ತಿರುವ ರೀತಿಯಲ್ಲಿ ಈ ದೇಶದ ನೆಲ, ಜಲ, ಇತಿಹಾಸ, ಸಾಧನೆ-ಸವಾಲುಗಳು, ಸಾಂವಿಧಾನಿಕ ಮೌಲ್ಯಗಳು, ಸೂತ್ರ ಬದ್ಧವಾದ ರೀತಿ-ನೀತಿಗಳನ್ನು ಹೇಳುವ, ಗದ್ದಲಗಳ ನಡುವೆಯೂ ಪಟ್ಟು ಬಿಡದೇ ತಿಳಿಸುವ ಹಿಡಿತಗಳೇ ಸಾಕ್ಷಿ. ಅವು ಶಿರಸಿ ಸಿದ್ದಾಪುರ ಕ್ಷೇತ್ರದ ಜಿಲ್ಲೆಯ ಹೆಮ್ಮೆ ಎನಿಸುವಷ್ಟು ಮತದಾರರ ಮನದಲ್ಲಿ ಬೇರೂರಿದೆ. ಅಷ್ಟೇ ಅಲ್ಲ ಅವರು ಈ ಹುದ್ದೆಗೆ ಅತ್ಯಂತ ಸೂಕ್ತ ಎಂದು ಈಗಾಗಲೇ ರಾಜ್ಯಾದ್ಯಂತ ಜನಜನಿತವೇ ಆಗಿದೆ. ದೇಶಮಟ್ಟದಲ್ಲೂ ಅವರು ಗಮನಾರ್ಹವಾಗಿ ಕಾಣುತ್ತಾರೆ. ಅಭಿವೃದ್ಧಿ ವಿಷಯ ಬಂದಾಗ ರಾಜ್ಯದ ಮಂತ್ರಿಯಾದಾಗ ಇಡೀ ರಾಜ್ಯದ ಯೋಗಕ್ಷೇಮದ ಚಿಂತನೆ ಮಾಡುತ್ತ ಸಮಗ್ರ ಜಿಲ್ಲೆಗಳಲ್ಲಿ ಸಂಚರಿಸಿದವರು. ಶಾಸಕರಾದಾಗ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟರು. ಕ್ಷೇತ್ರದ ಹಳ್ಳಿ ಹಳ್ಳಿಗೆ ಎಡಬಿಡದೇ ಸಂಚರಿಸಿ ಅಭಿವೃದ್ಧಿ ಪರ ಯೋಜನೆಗಳನ್ನು ಖುದ್ದು ನೋಡಿ ಯೋಜನೆ ಸಿದ್ಧಗೊಳಿಸಿ ಮೌನವಾಗಿ ಕ್ರಾಂತಿ ಮಾಡಿದರು. ಮಾಡಿದ ಅಭಿವೃದ್ಧಿಗೆ ಅಕ್ಷರಶಃ ಪ್ರಚಾರ ಮಾಡಿಕೊಳ್ಳಲು ಬಾರದವರು, ಬಯಸದವರು, ಅದರಿಂದ ದೂರವೇ ಉಳಿದವರು. ಆರೋಗ್ಯ, ಗ್ರಾಮೀಣ ಸೌಕರ್ಯಗಳಲ್ಲಿ ತುಂಬಾ ಮುತುವರ್ಜಿಯಿಂದ ಜನರ ಮನ್ನಣೆಯನ್ನು ಈಡೇರಿಸಿದ್ದಾರೆ.
ದೇವಸ್ಥಾನಗಳ, ಧಾರ್ಮಿಕ ಕೇಂದ್ರಗಳ, ಶೈಕ್ಷಣಿಕ ಕೇಂದ್ರಗಳ ಅಭಿವೃದ್ಧಿ ಮಾಡಿರುವುದು, ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಿರಸಿ ರಸ್ತೆಗಳ ಅಗಲೀಕರಣ, ಸಿದ್ದಾಪುರದ ಹೊಸ ಬಸ್ ನಿಲ್ದಾಣ, ಅನೇಕ ಸೇತುವೆ, ಕಟ್ಟಡಗಳು, ಬೀದಿದೀಪಗಳು ಊರಿಗೆ ಬೇಕಾದ ಕಾಮಗಾರಿ ಮಾಡಿಸುತ್ತಿದ್ದಾರೆ. ಇದು ಈತನಕ ಎಂದೂ ಈ ಪ್ರಮಾಣದಲ್ಲಿ ಆಗಿರಲೇ ಇಲ್ಲ ಎಂದು ಎಲ್ಲರೂ ಸಂತಸದಿಂದ ಹೇಳುತ್ತಾರೆ. ಗೊತ್ತಿರಲಿ, ಕಾಗೇರಿ ಅವರು ಶಿರಸಿ ಶೈಕ್ಷಣಿಕ ಜಿಲ್ಲೆ, ತೋಟಗಾರಿಕಾ ಕಾಲೇಜು ಆದಿಯಾಗಿ ಶಿಕ್ಷಣ ಸಚಿವರಿದ್ದಾಗ ಮಾಡಿಸಿ ಅನುಕೂಲ ಮಾಡಿರುವುದು ಚಾರಿತ್ರಿಕ ಯಶಸ್ಸು. ಸ್ಪೀಕರ್ ಆಗಿ ಕೋಟ್ಯಂತರ ರೂ. ಹಣ ತಂದು ಅಭಿವೃದ್ಧಿ ಮಾಡಿಸುತ್ತಲೇ ಇದ್ದಾರೆ. ಈ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಪಟ್ಟಿ ಸಣ್ಣದೇನಲ್ಲ. ಹೇಗೆ ಇದೆಲ್ಲ ಸಾಧ್ಯ ಆಯಿತು ಎಂದರೆ ಕಾಗೇರಿ ಅವರಿಗೆ ಸ್ವಭಾವತಃ ಎಲ್ಲವನ್ನೂ ನೆನಪಿಟ್ಟುಕೊಂಡು ತಮ್ಮ ಕಾರ್ಯ ಬಳಗದೊಡನೆ ಹಾಗೂ ಅಧಿಕಾರಿಗಳೊಡನೆ ಸೇರಿ ಪೂರ್ಣಗೊಳಿಸುವ ಚಾಕಚಕ್ಯತೆ ಇರುವುದು. ಇದನ್ನೆಲ್ಲ ಮಾಡಿಯೂ ತಾನು ಜನಸೇವಕ ಎಂಬ ಭಾವನೆಯಿಂದ ಆಚೆ ಬರಲ್ಲ. ಹಾಗಾಗಿಯೇ ಸರ್ಕಾರದ ಹಣ ತಂದು ಅಭಿವೃದ್ಧಿಪಡಿಸಿ ಅದನ್ನು ಹೇಳಿಕೊಳ್ಳದೇ ಸಂಕೋಚ, ತಾತ್ವಿಕತೆಯಿಂದ ಹಿಂದೆ ನಿಲ್ಲುತ್ತಾರೆ. ಈ ಗುಣ ರಾಜಕಾರಣಕ್ಕೆ ಹೇಳಿಸಿದ್ದಲ್ಲ. ಆದರೂ ರಾಜಧರ್ಮ ಸಂಸ್ಕಾರಕ್ಕೆ ಇದು ಭೂಷಣವೇ. ಈ ಗುಣಕ್ಕೆ ದೀರ್ಘಕಾಲಿಕ ಶಕ್ತಿಯಿದೆ, ಸಜ್ಜನ ಪ್ರಜೆಗಳನ್ನು ಮುಟ್ಟುವ ಸತ್ವವಿದೆ. ಇದು ಜನಾನುರಾಗಿಗೆ ಸಹಜ.
-ಎಂ. ಭಾಸ್ಕರ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.