Temperature: ಬರಕ್ಕೆ ಬಿಸಿಲಿನ ಆಹ್ವಾನ?: ಬೆಂಗಳೂರು ಸಹಿತ ರಾಜ್ಯದ ಹಲವೆಡೆ ತಾಪ ಹೆಚ್ಚಳ
ದಶಕದಲ್ಲಿ ಮೊದಲ ಬಾರಿಗೆ ಇಂಥ ವೈಪರೀತ್ಯ
Team Udayavani, Aug 17, 2023, 10:22 PM IST
ಬೆಂಗಳೂರು: ಮಳೆ ಪ್ರಮಾಣ ಕಡಿಮೆ, ದುರ್ಬಲ ಮುಂಗಾರು ಸಹಿತ ಹವಾಮಾನ ವೈಪರೀತ್ಯದಿಂದ ನಲುಗಿರುವ ಕರ್ನಾಟಕದಲ್ಲಿ 10 ವರ್ಷಗಳಲ್ಲೇ ಮೊದಲ ಬಾರಿಗೆ ಆಗಸ್ಟ್‌ನಲ್ಲೇ ಬಿಸಿಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹವಾಮಾನ ವೈಪರೀತ್ಯದಿಂದ ಕರ್ನಾಟಕವು ಬರಗಾಲದತ್ತ ಸಾಗುವ ಲಕ್ಷಣ ಗೋಚರಿಸಿರುವುದು ಆತಂಕಕ್ಕೀಡು ಮಾಡಿದೆ.
ಆಗಸ್ಟ್ ಸಮೀಪಿಸುತ್ತಿದ್ದಂತೆ ಪ್ರತೀ ವರ್ಷವೂ ಕರ್ನಾಟಕದಲ್ಲಿ ವಿಪರೀತ ಮಳೆಯ ಜತೆಗೆ ಚಳಿ ಅನುಭವಿಸುವುದೇ ಜನರಿಗೆ ಮಜವಾಗಿತ್ತು. ಆದರೆ ಈ ಬಾರಿ ಇದಕ್ಕೆ ಅಪವಾದ ಎಂಬಂತೆ ಹಾಲಿ ತಿಂಗಳಲ್ಲಿ ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆಯ ಬಿಸಿ ತಟ್ಟಿದೆ. ಆ. 16ರ ವರೆಗೆ ಬೆಂಗಳೂರು ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸರಾಸರಿ 31.8 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ 10 ವರ್ಷಗಳಲ್ಲಿ ಆಗಸ್ಟ್‌ನಲ್ಲಿ ದಾಖಲಾಗಿದ್ದ ಅತ್ಯಧಿಕ ಉಷ್ಣಾಂಶದ ದಾಖಲೆಗಳನ್ನೇ ಮುರಿದಿದೆ ಎಂಬುದನ್ನು ಹವಾಮಾನ ಇಲಾಖೆ ದೃಢಪಡಿಸಿದೆ. ಹೀಗಾಗಿ ಈ ವರ್ಷ ಪೂರ್ತಿ ಮಳೆಯ ಕೊರತೆ ಎದುರಾಗುವ ಮುನ್ಸೂಚನೆ ಸಿಕ್ಕಿರುವುದು ರಾಜ್ಯದ ಜನತೆಯಲ್ಲಿ ಭೀತಿ ಹುಟ್ಟಿಸಿದೆ.
ಬಿಸಿಲು ಹೆಚ್ಚಾಗಿದ್ದೇಕೆ?
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿರುವುದು, ಪೆಸಿಫಿಕ್ ಸಾಗರದಲ್ಲಿ ಸಮುದ್ರದ ಉಷ್ಣಾಂಶ ಜಾಸ್ತಿಯಾಗಿರುವುದು, ಪಶ್ಚಿಮ ದಿಕ್ಕಿನಿಂದ ಬೀಸಬೇಕಿದ್ದ ಗಾಳಿಯು ವಾಯವ್ಯ ದಿಕ್ಕಿನಿಂದ ಬೀಸುತ್ತಿರುವುದೇ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲಿನ ಪ್ರಖರತೆ ಹೆಚ್ಚಲು ಪ್ರಮುಖ ಕಾರಣ. ಮೇಲ್ಮಟ್ಟಗಳಲ್ಲಿ ಸುಳಿಗಾಳಿ ಅಥವಾ ಟ್ರಫ್ ಸದ್ಯಕ್ಕೆ ಉಂಟಾಗುತ್ತಿಲ್ಲ. ಹೀಗಾಗಿ ಒಣ ಹವೆಯ ವಾತಾವರಣ ಉಂಟಾಗಿದೆ. ಬಂಗಾಳ ಕೊಲ್ಲಿ, ಅರಬಿ ಸಮುದ್ರದಲ್ಲಿ ಉಂಟಾಗುತ್ತಿರುವ ವೈಪರೀತ್ಯದಿಂದ ಮಳೆ ಬರುವಂತಹ ವ್ಯವಸ್ಥೆ ಕಂಡು ಬರುತ್ತಿಲ್ಲ. ಮೋಡಗಳ ಚಲನೆ ಜಾಸ್ತಿ ಇದ್ದಾಗ ವಾತಾವರಣ ತಂಪಾಗಿರುತ್ತದೆ. ಸಮುದ್ರದ ಕಡೆಯಿಂದ ಗಾಳಿ ಬೀಸುತ್ತಿದ್ದರೆ ಮಾರುತಗಳನ್ನು ಹೊತ್ತು ತರುತ್ತದೆ. ಇದರಿಂದ ತೇವಾಂಶವಿರುವ ಮೋಡಗಳಿರುತ್ತವೆ. ಸದ್ಯ ರಾಜ್ಯದಲ್ಲಿ ಈ ಮಾದರಿಯ ವಾತಾವರಣ ಕಂಡು ಬರುವ ಸಾಧ್ಯತೆಗಳಿಲ್ಲ. ಆ. 19ರಿಂದ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇರಬಹುದು. ಆದರೆ ದೊಡ್ಡ ಮಟ್ಟದಲ್ಲಿ ವಾತಾವರಣದಲ್ಲಿ ಬದಲಾವಣೆ ನಿರೀಕ್ಷೆ ಮಾಡುವಂತಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.
ಬರಗಾಲದ ಅಪಾಯ ಹೆಚ್ಚು
2012ರ ಹಿಂದೆ ಬರ ಬಂದಾಗ ಇದೇ ಮಾದರಿಯ ವಾತಾವರಣ ಸೃಷ್ಟಿಯಾಗಿತ್ತು. ಐದು ವರ್ಷಗಳಲ್ಲಿ ಜುಲೈಯಿಂದ ಡಿಸೆಂಬರ್‌ವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. 2018-19ರಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ರಾಜ್ಯದ ಕೆಲವೆಡೆ ಭಾರೀ ಮಳೆ ಸುರಿದಿತ್ತು. ಹೀಗಾಗಿ ಮಳೆ ಕೊರತೆ ರಾಜ್ಯಕ್ಕೆ ತಟ್ಟಿರಲಿಲ್ಲ. 2022ರಲ್ಲಿ ವಾಡಿಕೆಗಿಂತ ಭಾರೀ ಹೆಚ್ಚಿನ ಮಳೆಯಾಗಿತ್ತು. ಈ ವರ್ಷಪೂರ್ತಿ ಮಳೆಯ ಪ್ರಮಾಣ ಕಡಿಮೆ ಇರಲಿದೆ. 2023 ಎಲ್ ನಿನೋ ವರ್ಷವಾಗಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಹೆಚ್ಚಾಗಲಿದೆ. ಸದ್ಯದ ಹವಾಮಾನ ಪರಿಸ್ಥಿತಿ ಅವಲೋಕಿಸಿದಾಗ ಕರ್ನಾಟಕವು ಬರದತ್ತ ಸಾಗುತ್ತಿರುವ ಲಕ್ಷಣ ಗೋಚರಿಸುತ್ತಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದಾಖಲೆಯ ಉಷ್ಣಾಂಶ ದಾಖಲು:
ಬೆಂಗಳೂರು ಹಾಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 2015ರ ಆಗಸ್ಟ್‌ನಲ್ಲಿ 31.6 ಡಿಗ್ರಿ ಸೆ., 2021ರ ಆಗಸ್ಟ್‌ನಲ್ಲಿ 30.7 ಡಿಗ್ರಿ ಸೆ., 2022ರ ಆಗಸ್ಟ್‌ನಲ್ಲಿ 31.7 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ವರದಿಯಾಗಿತ್ತು. 2023ರ ಆಗಸ್ಟ್‌ನಲ್ಲಿ 31.8 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದ್ದು, ಇದು 10 ವರ್ಷಗಳ ಆಗಸ್ಟ್‌ನಲ್ಲಿ ವರದಿಯಾದ ಅತ್ಯಧಿಕ ಉಷ್ಣಾಂಶವಾಗಿದೆ. ಇನ್ನು ಕರಾವಳಿಯಲ್ಲಿ ವಾಡಿಕೆಗಿಂತ 2-4 ಡಿಗ್ರಿ ಸೆ., ಉತ್ತರ ಒಳನಾಡಿನಲ್ಲಿ 2-3 ಡಿಗ್ರಿ ಸೆ., ದಕ್ಷಿಣ ಒಳನಾಡಿನಲ್ಲಿ 3-4 ಡಿಗ್ರಿ ಸೆ. ಅಧಿಕ ಉಷ್ಣಾಂಶ ಕಂಡು ಬಂದಿದೆ. ಇತ್ತೀಚೆಗಿನ ವರ್ಷಗಳಲ್ಲಿ ಆಗಸ್ಟ್‌ನಲ್ಲೂ 31 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿತ್ತು. ಆದರೆ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಬಿಸಿಲಿನ ಬಿಸಿ ತಟ್ಟಿರಲಿಲ್ಲ. ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಗರಿಷ್ಠ 28.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಶೇ. 14ರಷ್ಟು ಮಳೆಯ ಕೊರತೆ
ರಾಜ್ಯದಲ್ಲಿ ಈ ವರ್ಷ ಆ. 16ರ ವರೆಗೆ ಶೇ. 14ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ. 24, ಉತ್ತರ ಒಳನಾಡಿನಲ್ಲಿ ಶೇ. 1ರಷ್ಟು ಮಳೆ ಕೊರತೆಯಿದೆ. ಆಗಸ್ಟ್ 17ರಂದು ರಾಜ್ಯದಲ್ಲಿ ಶೇ. 15, ಕರಾವಳಿಯಲ್ಲಿ ಶೇ. 13, ಉತ್ತರ ಒಳನಾಡಿನಲ್ಲಿ ಶೇ. 2, ದಕ್ಷಿಣ ಒಳನಾಡಿನಲ್ಲಿ ಶೇ. 20ರಷ್ಟು ಮಳೆ ಕೊರತೆ ಇದೆ. ಆಗಸ್ಟ್ ತಿಂಗಳಾಂತ್ಯದವರೆಗೆ ಇದೇ ವಾತಾವರಣ ಮುಂದುವರೆಯಲಿದೆ.
ಗುರುವಾರ ಮಂಗಳೂರು ವಿಮಾನ ನಿಲ್ದಾಣ, ಬಿ. ಬಾಗೇವಾಡಿ, ತಾಳಿಕೋಟೆ (ಎರಡೂ ವಿಜಯಪುರ ಜಿಲ್ಲೆ), ನಿಪ್ಪಾಣಿ (ಬೆಳಗಾವಿ ಜಿಲ್ಲೆ) ತಲಾ 2, ಕಾರವಾರ, ಗೋಕರ್ಣ (ಉತ್ತರ ಕನ್ನಡ ಜಿಲ್ಲೆ), ವಿಜಯಪುರ, ಚಿಕ್ಕೋಡಿ, ಸಂಕೇಶ್ವರ (ಎರಡೂ ಬೆಳಗಾವಿ ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿದೆ.
ಕಡಿಮೆ ಮಳೆ ನಿರೀಕ್ಷೆ
ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆಗಸ್ಟ್‌ನಲ್ಲಿ ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾಗಿದೆ. ಈ ಬಾರಿ ಕರಾವಳಿ ಸಹಿತ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆಗಳಿಲ್ಲ.
– ಎ. ಪ್ರಸಾದ್, ವಿಜ್ಞಾನಿ, ಭಾರತೀಯ ಹವಾಮಾನ ಇಲಾಖೆ.
ವಾರದಲ್ಲಿ ಬರ ಘೋಷಣೆ ಗ್ಯಾರಂಟಿ?
ಬೆಂಗಳೂರು: ದಿನದಿಂದ ದಿನಕ್ಕೆ ಮಳೆಯ ನಿರೀಕ್ಷೆ ಹುಸಿಯಾಗುತ್ತಿದ್ದು, ಒಂದು ವಾರದಿಂದ ರಾಜ್ಯದಲ್ಲಿ ಶೇ. 60ರಷ್ಟು ಮಳೆ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಬರ ಘೋಷಣೆ ಅಥವಾ ಮೋಡಬಿತ್ತನೆ ಮೊರೆಹೋಗುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಒಂದು ವಾರದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಗಣನೀಯ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಬರ ಘೋಷಣೆ ಅಥವಾ ಮೋಡಬಿತ್ತನೆ ಮಾಡಬೇಕೋ ಎಂಬುದರ ಬಗ್ಗೆ ಒಂದು ವಾರ ಕಾದುನೋಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಇನ್ನೊಂದು ವಾರದಲ್ಲಿ ವರುಣನ ಕೃಪೆ ಆಗಬಹುದು ಎಂಬ ನಿರೀಕ್ಷೆ ಇದೆ. ನಿರೀಕ್ಷೆ ಹುಸಿಯಾದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದ ಉಪಸಮಿತಿಯು ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಈ ಮಧ್ಯೆ ಬರ ಘೋಷಣೆಗೆ ಸಂಬಂಧಿಸಿದ ಮಾನದಂಡಗಳ ಸಡಿಲಿಕೆಗೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉತ್ತರ ಬಾರದಿದ್ದರೆ ಕೇಂದ್ರದ ನಿಯಮಗಳಡಿಯಲ್ಲಿಯೇ ಬರ ಘೋಷಿಸಬೇಕಾಗುತ್ತದೆ. ಆಗ ರೈತರಿಗೆ ತುಸು ನಷ್ಟ ಉಂಟಾಗಲಿದೆ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.