Puttur: ಚಡ್ಡಿ ಗ್ಯಾಂಗ್ ಹೆಸರಿನಲ್ಲಿ ದರೋಡೆಯ ಕಥೆ ಕಟ್ಟಿದ ಮಹಿಳೆ
ಪೊಲೀಸರಿಂದ ಮನೆಮಂದಿಯ ವಿಚಾರಣೆ; ಕಾರಣ ಮಾತ್ರ ನಿಗೂಢ!
Team Udayavani, Nov 7, 2024, 7:28 AM IST
ಪುತ್ತೂರು: ಚಡ್ಡಿ ಗ್ಯಾಂಗ್ ದರೋಡೆಕೋರರು ಮಂಗಳವಾರ ರಾತ್ರಿ ನನ್ನ ಮನೆಗೆ ಬಂದು ತಲವಾರು ತೋರಿಸಿ ನಗ-ನಗದು ನೀಡುವಂತೆ ಬೆದರಿಕೆ ಒಡ್ಡಿದ್ದು, ಈ ವೇಳೆ ನಾನು ತಪ್ಪಿಸಿಕೊಂಡು ಕಿಟಕಿಯ ಮೂಲಕ ತೆಗೆದಿದ್ದೇನೆ ಎನ್ನಲಾದ ಫೋಟೋವೊಂದನ್ನು ಮಹಿಳೆ ವೈರಲ್ ಮಾಡಿದ್ದು, ಪರಿಣಾಮ ಕೆಯ್ಯೂರು ಗ್ರಾಮದೆಲ್ಲೆಡೆ ಆತಂಕ ಮನೆ ಮಾಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಸಂದರ್ಭ ಮಹಿಳೆಯ ಕಟ್ಟುಕಥೆ ಬೆಳಕಿಗೆ ಬಂದಿದೆ. ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ್ದು ಕೇರಳ ಮೂಲದಿಂದ ಬಂದು ನೆಲೆಸಿರುವ ಮಾರ್ಗರೇಟ್. ಈ ರೀತಿ ಸುಳ್ಳು ಕಥೆ ಹೆಣೆದದ್ದು ಏಕೆ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.
ಕಟ್ಟು ಕಥೆ
ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಮನೆಮಂದಿಯ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ ಇದು ಕಟ್ಟು ಕಥೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಮಹಿಳೆ ವೈರಲ್ ಮಾಡಿದ ಫೋಟೋಗಳು 2 ವರ್ಷಗಳ ಹಿಂದೆ ಕೇರಳದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಫೋಟೋ ಆಗಿದ್ದು, ಕೊಟ್ಟಾಯಂನಲ್ಲಿ ನಡೆದಿದ್ದ ವೀಡಿಯೋ ಶೂಟಿಂಗ್ ಸಂಬಂಧಿಸಿದ ಫೋಟೋ ಎನ್ನುವ ಅಂಶ ತನಿಖೆಯ ಸಂದರ್ಭ ಬಯಲಿಗೆ ಬಂದಿದೆ. ಪರಿಶೀಲನೆ ಸಂದರ್ಭ ದಲ್ಲಿ ಡಿವೈಎಸ್‌ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಸ್‌ಐ ಸುಷ್ಮಾ ಭಂಡಾರಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮೊದಲಾದವರಿದ್ದರು.
ಕ್ರೈಂ ಸಂಬಂಧಿತ ವೀಡಿಯೋ ವೀಕ್ಷಿಸುತ್ತಿದ್ದ ಮಹಿಳೆಮಾರ್ಗರೇಟ್ ಅವರ ಮೊಬೈಲ್ ಪರಿಶೀಲನೆ ಸಂದರ್ಭದಲ್ಲಿ ಆಕೆ ಕ್ರೈಂ ಸಂಬಂಧಿತ ವೀಡಿಯೋಗಳನ್ನು ಅತೀ ಹೆಚ್ಚಾಗಿ ನೋಡುತ್ತಿರುವುದು ಗೊತ್ತಾಗಿದೆ. ಚಡ್ಡಿ ಗ್ಯಾಂಗ್ ಕಥೆ ಎಂದು ನಂಬಿಸಿ ಹರಿಯಬಿಟ್ಟ ಫೋಟೋಗಳು ಕೇರಳದ ಕಾಡು ಜನಾಂಗದ ಕಥೆಯ ವೀಡಿಯೋದಿಂಂದ ತೆಗೆದ ಸ್ಕ್ರೀನ್ ಶಾಟ್ ಆಗಿದೆ. ಈ ಫೋಟೋವನ್ನು ಮೊದಲಿಗೆ ಬಾಡಿಗೆ ಮನೆಯ ಮಾಲಕನಿಗೆ ಕಳುಹಿಸಿ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದು ಆಕೆ ಹೇಳಿದ್ದರು ಎನ್ನುವ ಮಾಹಿತಿ ಲಭಿಸಿದೆ.
ಮನೆ ಮಾಲಕನಿಗೆ
ಮೂಡಿದ ಅನುಮಾನ
ಮಹಿಳೆ ಕಳುಹಿಸಿದ ಫೋಟೋ ನೋಡಿ ಮನೆ ಮಾಲಕ ಬಾತೀಷ ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾರ್ಗರೇಟ್ ತೋರಿಸಿದ ಫೋಟೋದ ಮೇಲೆ ಬಾತೀಷ್‌ಗೂ ಸಂಶಯ ಮೂಡಿತ್ತು. ಹಿಂದೊಮ್ಮೆ ಮಾರ್ಗರೇಟ್ ಅವರು ತನಗೆ ಹಾವು ಕಚ್ಚಿದೆ ಎಂದು ಮಾಲಕನ ಬಳಿ ಸುಳ್ಳು ಹೇಳಿದ್ದರು. ಈ ಕಾರಣಕ್ಕಾಗಿ ಮಹಿಳೆ ಹೆಣೆದ ಚಡ್ಡಿ ಗ್ಯಾಂಗ್ ಕಥೆಯನ್ನು ಮಾಲಕ ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನಲಾಗಿದೆ. ಆದರೆ ಸುಳ್ಳು ಕಥೆ ಎಲ್ಲೆಡೆ ಪ್ರಚಾರ ಪಡೆದು ಇಡೀ ಗ್ರಾಮದಲ್ಲಿ ಆತಂಕ ಮೂಡಿದ ಕಾರಣ ಬಾಡಿಗೆ ಮನೆಯನ್ನು ತೊರೆಯುವಂತೆ ಮನೆಮಂದಿಗೆ ಮಾಲಕ ಸೂಚಿಸಿದ್ದಾರೆ.
ಯಾರು ಈ ಮಹಿಳೆ?
ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ ಮಾರ್ಗರೇಟ್ ಮೂಲತಃ ಕೇರಳದವರು. ಕಳೆದ 40 ದಿನಗಳಿಂದ ತನ್ನ ಪತಿ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದ ಬಾತೀಷ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಜಾರ್ಜ್ ಅವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಕಾರಣ ನಿಗೂಢ
ಮಹಿಳೆ ಯಾವ ಕಾರಣಕ್ಕೆ ದರೋಡೆ ಕಥೆ ಕಟ್ಟಿರಬಹುದು ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಥಳೀಯ ಪರಿಸರದವರೂ ಅನುಮಾನ ವ್ಯಕ್ತಪಡಿಸುತ್ತಿದ್ದು, ಈ ರೀತಿ ಸುಳ್ಳು ಕಥೆ ಕಟ್ಟುವುದರಿಂದ ಮಹಿಳೆಗೆ ಏನು ಲಾಭ ಇದೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಕೆಯ್ಯೂರಿನ ಸಣಂಗಳದಲ್ಲಿ ನ. 5ರಂದು ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಮನೆಯಂಗಳದಲ್ಲಿ ಚಡ್ಡಿ, ಬನಿಯಾನ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ್ದ ಸುಮಾರು ನಾಲ್ಕು ಮಂದಿಯ ತಂಡವೊಂದು ದರೋಡೆಗೆ ಯತ್ನಿಸಿದೆ ಎನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿರುವ ಮಾರ್ಗರೇಟ್ ಅವರ ಬಾಡಿಗೆ ಮನೆಯ ಅಂಗಳಕ್ಕೆ ಬಂದ ಈ ಗ್ಯಾಂಗ್ ತಲವಾರು ತೋರಿಸಿ ಹೆದರಿಸಿ ಹಣ, ಒಡವೆ ನೀಡುವಂತೆ ಬೆದರಿಸಿದ್ದು, ಇದೇ ವೇಳೆಗೆ ಮನೆಯಲ್ಲಿ ಇತರರು ಇದ್ದ ಕಾರಣ ಚಡ್ಡಿ ಗ್ಯಾಂಗ್‌ನವರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೇ ವೇಳೆ ಮಾರ್ಗರೇಟ್ ಅವರು ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿದ್ದು ಮನೆಯ ಕಿಟಕಿಯ ಮೂಲಕ ಚಡ್ಡಿ ಗ್ಯಾಂಗ್‌ನವರ ಫೋಟೋ ತೆಗೆದಿರುವುದಾಗಿ ಹೇಳಿಕೊಂಡಿದ್ದರು. ಮಂಗಳೂರು ಭಾಗದಲ್ಲಿ ದರೋಡೆ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್‌ನವರ ಹಾಗೆಯೇ ವೈರಲ್ ಆದ ಫೋಟೋದಲ್ಲಿ ಚಿತ್ರಣ ಇದೆ. ಇದರಿಂದ ಗ್ರಾಮದಲ್ಲಿ ಆತಂಕ ಮೂಡಿತ್ತು.
ರಾದ್ಧಾಂತ ಎಬ್ಬಿಸಿದ್ದ ಮಹಿಳೆ
ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಮಹಿಳೆಯು ಕಟ್ಟುಕಥೆ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ನನ್ನ ಮನೆಗೆ ದರೋಡೆಕೋರರು ಬಂದದ್ದು ನಿಜ ಎಂದೇ ನಂಬಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಪೊಲೀಸರ ಜತೆಗೆ ರಾದ್ಧಾಂತ ಎಬ್ಬಿಸಿದರು. ಸ್ಥಳಕ್ಕೆ ವರದಿ ಮಾಡಲು ಬಂದು ಪತ್ರಕರ್ತರ ಮೇಲೂ ರೇಗಾಡಿದ ಮಹಿಳೆ ನನ್ನ ಅನುಮತಿ ಇಲ್ಲದ ವೀಡಿಯೋ ಮಾಡಬೇಡಿ ಎಂದು ಕೆಮರಾವನ್ನು ಎಳೆದ ಘಟನೆಯೂ ನಡೆಯಿತು. ಪರಿಶೀಲನೆಗೆಂದು ಪೊಲೀಸರು ಮಹಿಳೆಯ ಮೊಬೈಲ್ ವಶಕ್ಕೆ ಪಡೆದ ಸಂದರ್ಭದಲ್ಲಿ ಮೊಬೈಲ್ ವಾಪಸು ನೀಡುವಂತೆ ರಾದ್ಧಾಂತ ಎಬ್ಬಿಸಿದ ಮಹಿಳೆ ನಾನು ಇಲ್ಲಿಗೆ ಕೇರಳ ಪೊಲೀಸರನ್ನು ಕರೆ ತರುವೆ ಎಂದ ಸನ್ನಿವೇಶವೂ ನಡೆಯಿತು.
ದರೋಡೆಕೋರರು ಬಂದಿಲ್ಲ: ಪೊಲೀಸ್
ಇದು ಸಂಪೂರ್ಣ ಕಟ್ಟು ಕಥೆ ಆಗಿದ್ದು, ಮಹಿಳೆ ಹಂಚಿಕೊಂಡ ಫೋಟೋಗಳು ಕೊಟ್ಟಾಯಂನಲ್ಲಿ ನಡೆದ ಒಂದು ವೀಡಿಯೋ ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯೂರು ಸಣಂಗಳಕ್ಕೆ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.
ಭಯ ದೂರಗೊಳಿಸಿದೆ: ಗ್ರಾ.ಪಂ. ಅಧ್ಯಕ್ಷ
ಕೆಯ್ಯೂರು ಗ್ರಾಮಕ್ಕೆ ಯಾವುದೇ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ ಭೇದಿಸಿ ಜನರ ಭಯ ದೂರಗೊಳಿಸಿದೆ ಎಂದು ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
Sydney Thunder: ಡೇವಿಡ್ ವಾರ್ನರ್‌ಗೆ 6 ವರ್ಷಗಳ ಬಳಿಕ ನಾಯಕತ್ವ!
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.