ಆರೋಗ್ಯ ಇಲಾಖೆ ಸಿಬ್ಬಂದಿಗೆ ಆಧಾರ್ ಬಯೋಮೆಟ್ರಿಕ್!
Team Udayavani, Oct 1, 2019, 3:07 AM IST
ಬೆಂಗಳೂರು: ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಕಚೇರಿ ನೌಕರರ ಹಾಜರಾತಿ ರುಜುಪಡಿಸುವ ಬಯೋಮೆಟ್ರಿಕ್‌ಗೂ ಆಧಾರ್ ಸಂಪರ್ಕಗೊಳಿಸುವುದನ್ನು ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆ ಹಾಗೂ ಕಚೇರಿಗಳಲ್ಲಿ ಸಾಮಾನ್ಯ ಮಾದರಿಯ ಬಯೋಮೆಟ್ರಿಕ್ ವ್ಯವಸ್ಥೆ ಇದ್ದು, ಕೆಲವರು ಅದರಿಂದ ತಪ್ಪಿಸಿಕೊಂಡು ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ,
ಜತೆಗೆ ಕೆಲ ವೈದ್ಯರು ಕರ್ತವ್ಯ ಸಮಯದಲ್ಲಿ ಖಾಸಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಮನಬಂದ ಸಮಯಕ್ಕೆ ಆಸ್ಪತ್ರೆಗೆ ಬರುವ ಕುರಿತು ಇಲಾಖೆಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಧಾರ ಒಳಗೊಂಡ ಬಯೋಮೆಟ್ರಿಕ್ (ಎಇಬಿಎಎಸ್)ಅಳವಡಿಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಈ ವ್ಯವಸ್ಥೆ ನಿಯಂತ್ರಣ ಕುರಿತು ರಾಷ್ಟ್ರೀಯ ಮಾಹಿತಿ ಕೇಂದ್ರವು(ಎನ್‌ಐಸಿ) ತಂತ್ರಾಂಶ ಸಿದ್ಧಪಡಿಸುತ್ತಿದ್ದು, ನವೆಂಬರ್‌ನಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯ ಬಯೋಮೆಟ್ರಿಕ್‌ಗಳಲ್ಲಿ ಕೆಳ ಹಂತದ ನೌಕರರ ಅಥವಾ ಗುತ್ತಿಗೆ ನೌಕರರ ಬೆರಳಿನ ಗುರುತು ನೀಡಿ (ನಕಲಿ ಗುರುತು) ತಾವು ಕರ್ತವ್ಯಕ್ಕೆ ಹಾಜರಾಗದಿದ್ದರೂ ಆ ವ್ಯಕ್ತಿಯಿಂದ ನಿಗದಿತ ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ಮಾಡಿಸುವ ಸಾಧ್ಯತೆಗಳಿದ್ದವು. ಆದರೆ, ಎಇಬಿಎಎಸ್‌ನಲ್ಲಿ(ಆಧಾರ್ ಎನೇಬಲ್ಡ್ ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟ್‌ಂ) ಆಧಾರ್‌ಗೆ ನೀಡಿರುವ ಬೆರಳಚ್ಚನ್ನೇ ನೀಡಬೇಕಿದೆ. ಜತೆಗೆ ತಂತ್ರಾಂಶವನ್ನು ಎನ್‌ಐಸಿ ನಿರ್ವಹಿಸುತ್ತಿದ್ದು, ಉತ್ಕೃಷ್ಟ ಮಟ್ಟದ್ದಾಗಿರುತ್ತದೆ. ಹೀಗಾಗಿ, ನಕಲು ಮಾಡಲು, ಕರ್ತವ್ಯ ಲೋಪವೆಸಗಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
70 ಸಾವಿರ ಸಿಬ್ಬಂದಿಗೆ ಆಧಾರ್ ಬಯೋಮೆಟ್ರಿಕ್: ರಾಜ್ಯದ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 206 ಸಮುದಾಯ ಆರೋಗ್ಯ ಕೇಂದ್ರಗಳು, 146 ತಾಲೂಕು ಆಸ್ಪತ್ರೆಗಳು, 15 ಜಿಲ್ಲಾಸ್ಪತ್ರೆ ಹಾಗೂ 11 ವಿವಿಧ ಮಾದರಿ ಆಸ್ಪತ್ರೆಗಳು ಸೇರಿ ಆರೋಗ್ಯ ಇಲಾಖೆ ಎಲ್ಲಾ ಕಚೇರಿಗಳಲ್ಲೂ ಈ ಹೊಸ ಎಇಬಿಎಎಸ್ ವ್ಯವಸ್ಥೆ ಜಾರಿಯಾಗಲಿದೆ. ಇದಕ್ಕಾಗಿ ಸ್ಥಳೀಯ ಮಟ್ಟದಲ್ಲಿಯೇ ಆಧಾರ್ ಸಂಸ್ಥೆಯಿಂದ ಅನುಮೋದನೆ ಪಡೆದ ಕಂಪನಿಯ ಹೊಸ ಬಯೋಮೆಟ್ರಿಕ್ ಖರೀದಿಸಿ ಅಳವಡಿಸಲಾಗುತ್ತಿದೆ. ವೈದ್ಯರು, ನರ್ಸ್, ಲ್ಯಾಬ್ ಸಿಬ್ಬಂದಿ, ಫಾರ್ಮಿಸ್ಟ್, ಕಚೇರಿಯ ಅಧಿಕಾರಿಗಳು, ಎಲ್ಲಾ ನೌಕರರು, ಗುತ್ತಿಗೆ ನೌಕರರು ಸೇರಿ 70 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ಹಾಜರಾತಿಗೆ ಹೊಸ ವ್ಯವಸ್ಥೆ ಅನ್ವಯವಾಗಲಿದೆ.
ಮೊಬೈಲ್‌ಗೆ ವಿಳಂಬ ಕುರಿತ ಸಂದೇಶ: ವೈದ್ಯರು ಅಥವಾ ಸಿಬ್ಬಂದಿ ಕರ್ತವ್ಯಕ್ಕೆ ತಡವಾಗಿ ಹಾಜರಾದರೆ ಕೂಡಲೇ ಎಷ್ಟು ನಿಮಿಷ ತಡವಾಯಿತು ಎಂಬ ಸಂದೇಶ ಬರಲಿದೆ. ಜತೆಗೆ ಆಸ್ಪತ್ರೆಯ ಮುಖ್ಯಸ್ಥರಿಗೆ ಅಥವಾ ಕಚೇರಿ ಮೇಲ್ವರ್ಗದ ಅಧಿಕಾರಿಯು ಮೊಬೈಲ್ ಅಥವಾ ಕಂಪ್ಯೂಟರ್ ತಂತ್ರಾಂಶ ಬಳಸಿ ವೈದ್ಯರ ಹಾಗೂ ಸಿಬ್ಬಂದಿಯ ಹಾಜರಾತಿ ಪಟ್ಟಿಯನ್ನು ಕ್ಷಣ ಮಾತ್ರದಲ್ಲಿ ನೋಡಬಹುದಾಗಿದೆ. ಸದ್ಯ ವ್ಯವಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಅಥವಾ ಸಿಬ್ಬಂದಿ ಸಮಯಪಾಲನೆ ಮಾಡುತ್ತಿಲ್ಲ ಎಂಬ ಕುರಿತು ದೂರು ಬಂದರೆ ಮೊದಲು ಜಿಲ್ಲಾ ವೈದ್ಯಾಧಿಕಾರಿ, ಆನಂತರ ತಾಲೂಕು ವೈದ್ಯಾಧಿಕಾರಿ ಆನಂತರ ಆಸ್ಪತ್ರೆಯ ಮುಖ್ಯಸ್ಥರನ್ನು ಕೇಳಿ ಮಾಹಿತಿ ಪಡೆಯಬೇಕಿತ್ತು. ಆದರೆ, ಹೊಸ ವ್ಯವಸ್ಥೆಯಿಂದ ಬೆಂಗಳೂರು ಕಚೇರಿಯಲ್ಲೆ ಕುಳಿತು ಹಾಜರಾತಿ ಪರಿಶೀಲನೆ ನಡೆಸಬಹುದಾಗಿದೆ.
ಯಾವ ಆಸ್ಪತ್ರೆಯಲ್ಲಿ ಯಾರು ತಡವಾಗಿ ಬಂದರು ಎಂಬೆಲ್ಲ ಮಾಹಿತಿಯನ್ನು ಆಯಾ ವ್ಯಾಪ್ತಿಯ ಅಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಮೊಬೈಲ್ ತಂತ್ರಾಂಶ ಸಹಾಯದಿಂದ ಕೂಡಲೇ ನೋಡಬಹುದು. ಸಮಯ ಪಾಲನೆ ಮಾಡುತ್ತಿಲ್ಲ ಎಂಬ ಕುರಿತು ದೂರುಗಳು ತಕ್ಷಣವೇ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲೂ ಸಹಾಯಕವಾಗಲಿದೆ.
-ಡಾ.ಟಿ.ಎಸ್.ಪ್ರಭಾಕರ್, ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.