ಏಕತೆಯ ಪ್ರತಿಪಾದಕನಾಗಿ ಅದ್ವೈತದಾರಿ
Team Udayavani, May 6, 2022, 6:10 AM IST
ಸನಾತನ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿ, ಜನಮಾನಸದಲ್ಲಿ ಭಾರತೀಯ ಜೀವನ ಪದ್ಧತಿಯನ್ನು ಗಟ್ಟಿಗೊಳಿಸಿದ ಆಚಾರ್ಯತ್ರಯರಲ್ಲಿ ಮೊದಲಿಗರು ಆದಿಶಂಕರರು. ಭಾರತೀಯರ ಚಿಂತನೆಗಳನ್ನು ಆಚರಣೆಗಳನ್ನು ಸಂಸ್ಕರಿಸಿ ಏಕಭಾವವನ್ನು ತಂದವರು ಶ್ರೀ ಶಂಕರರು. ತನ್ನ 32 ವರ್ಷಗಳ ಅಲ್ಪಜೀವಿತಾವಧಿಯಲ್ಲಿ ದೇಶದ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀ ಕೃಷ್ಣನ ಸಿದ್ಧಾಂತವಾದ ಅದ್ವೈತವನ್ನು ಪುನಃ ಪ್ರಕಾಶಿಸಿದವರು ಭಗವಾನ್ ಆದಿಶಂಕರಾಚಾರ್ಯರು.
ಸಂಸ್ಕೃತದಲ್ಲಿ “ದ್ವಿ’ ಎಂದರೆ ಎರಡು ಎಂದರ್ಥ. ಅದ್ವೈತ ಎಂದರೆ ಎರಡಲ್ಲದ್ದು. ಅಂದರೆ ಒಂದೇ ಎಂದರ್ಥ. ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಮುಖ್ಯ ತತ್ವವೇ ಅದ್ವೈತ. ಈ ಸಿದ್ಧಾಂತವೂ ಕೆವಲ ಉಪದೇಶವಷ್ಟೇ ಅಲ್ಲ, ಅದೊಂದು ಭಾವ. ಅದನ್ನು ಅಲೌಕೀಕ ಬ್ರಮ್ಮಾದಿ ವಿಷಯಗಳಿಗಷ್ಟೇ ಅಲ್ಲ. ಲೌಕಿಕ ವಿಷಯಗಳಿಗೂ ಅನ್ವಯಿಸಬೇಕೆಂದು ನಡೆದು ತೋರಿದ ಶಂಕರಾದ್ವೈತ.
ಚಿಂತನೆ ಏಕತೆ: ಜ್ಞಾನ ಮಾರ್ಗವೇ ಸರ್ವ ಶ್ರೇಷ್ಠ ಮತ್ತು ಮೋಕ್ಷಗಾಮಿಯಾದ ಮಾರ್ಗವೆಂದು ಭೋದಿಸಿದ ಶಂಕರರಿಗೆ ಸಮಾಜದ ಜನರಲ್ಲಿರುವ ಅರಿವಿನ ಸ್ಥರ ಭೇದದ ಅರಿವಿತ್ತು.
ಆದ್ದರಿಂದಲೇ ಅವರು ಜ್ಞಾನದೆಡೆಗೆ ಸಾಗಲು ಅಂತಶುದ್ಧಿ ಅವಶ್ಯವೆಂದರು. ಕರ್ಮಾಚರಣೆಗಳು ಉಪಾಸನೆಗಳು ಭಕ್ತಿಯೂ ಅವಶ್ಯವೆಂದು ಸಾರಿದರು. ಸಾಮಾನ್ಯ ಜನರಿಗಾಗಿ ಸ್ತೋತ್ರ ಮಾರ್ಗವನ್ನು ಜನಸಾಮನ್ಯರಿಗಾಗಿ ಆಚರಣೆಗಳ ಮಾರ್ಗಗಳನ್ನು ಭೋದಿಸಿದರು. ಶ್ರೀ ಶಂಕರರು ನಿರಾಕಾರ ಬ್ರಹ್ಮವೇ ಸತ್ಯವೆಂದು ಸಾರಿದರು. ಮೂರ್ತಿ ಪೂಜೆಯನ್ನು ನಿರಾಕರಿಸದೆ ಮೂರ್ತತ್ವದಿಂದ ಅಮೂರ್ತದೆಡೆಗೆ ಸಾಗಬೇಕೆಂದು ಸಾರಿದರು. ಹೀಗೆ ಸಾಕಾರ ನಿರಾ ಕಾರಗಳನ್ನು ಅದ್ವೈತ ಭಾವದಿಂದ ಕಂಡವರವರು.
ಮತ- ಏಕತೆ: ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬುದು ಭಾರತೀಯರ ಚಿಂತನೆ. ಒಂದೇ ಸತ್ಯವನ್ನು ಜ್ಞಾನಿಗಳು ಬೇರೆ ಬೇರೆ ಹೆಸರುಗಳಿಂದುಸುರುವರು. ಇಂತ ಶ್ರೇಷ್ಠ ಚಿಂತನೆಯ ಭಾರತದಲ್ಲಿ ಶೈವ, ವೈಷ್ಣವ, ಶಾಕ್ತ, ಗಾಂಪತ್ಯ, ಸೌರ, ಸ್ಕಾಂದಾದಿಯಾಗಿ ಮತಭೇದಗಳು ಉಂಟಾಗಿತ್ತು. ಮತಗಳೆಡೆಯಲ್ಲಿ ಜನರು ಮಾನಸಿಕವಾಗಿ ಬೇರೆಯಾಗಿದ್ದರು. ತಮ್ಮ ದೇವರು ಆಚರಣೆಗಳೇ ಶ್ರೇಷ್ಠ ಮತ್ತು ಸರಿಯೆಂಬ ಮಾಯಾ ಮುಸುಕು ಜನರ ಮನಸ್ಸನ್ನಾವರಿಸಿತ್ತು. ಆದ್ದರಿಂದ ಜನರು ಭಾವನಾತ್ಮಕಾವಾಗಿ ಒಗ್ಗೂಡೂವುದು ದೇಶದುನ್ನತಿಗೆ ಅವಶ್ಯವಾಗಿತ್ತು. ಇದನ್ನು ಮನಗಂಡ ಶಂಕರರು ವಿಭಿನ್ನ ಮತಗಳ ಆಚರಣೆಗಳನ್ನು ಸಂಸ್ಕರಿಸಿ ಪಂಚಾಯತನ ಪೂಜಾ ಪದ್ಧತಿಯನ್ನು ಸಮಾಜಕ್ಕೆ ಪರಿಚಯಿಸಿದರು. ತನ್ಮೂಲಕ ದೇವರಲ್ಲಿ, ಭಕ್ತರಲ್ಲೂ ಆಚರಣೆಗಳಲ್ಲೂ ಅದ್ವೈತವನ್ನು ತಂದರು. ಈ ತಣ್ತೀವೂ ಅಖೀಲಭಾರತದಲ್ಲಿ ಇಂದಿಗೂ ಸರ್ವಸಮಮ್ಮತವಾಗಿ ಆಚರಣೆಯಲ್ಲಿದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಏಕೋ ದೇವಃ ಸರ್ವಭೂತೇಷು ಗೂಢಃ ಎಂದು ಉಪನಿಷತ್ತು ಹೇಳಿದರೆ, ತನ್ನಲ್ಲೇ ಎಲ್ಲವನ್ನೂ ಎಲ್ಲದರಲ್ಲೂ ತನ್ನನ್ನು ಕಾಣಬೇಕು ಎನ್ನುತ್ತದೆ ಗೀತೆ. ಆದರೆ ಲೌಕಿಕವಾಗಿ ಉಪನಿಷದ್ವಾಕ್ಯದ ಶಬ್ದಶ ಅರ್ಥದಂತೆ ಜೀವಿಸುವುದು ದುಸಾಧ್ಯವೇ ಸರಿ.
ಆದರೆ ತನ್ನ ಮುಂದೆ ಆಗಮಿಸಿ ಜಾತಿ ಭೇದದ ಬಗೆಗೆ ಪ್ರಶ್ನಿಸಿದ ಅಂತ್ಯಜನಿಗೆ ಸ್ವತಃ ನಮಸ್ಕರಿಸಿದ ಉದಾಹರಣೆಯು ಶಂಕರರು ಉಪದೇಶಿಸಿದ್ದನ್ನು ಆಚರಣೆಗಿಳಿಸಿದ್ದರೆಂಬುದಕ್ಕೆ ಒಂದು ದ್ಯೋತಕ ಉದಾಹರಣೆಯಷ್ಟೇ ಆಗಿದೆ. ಅಲ್ಲದೆ ಶಂಕರರ ಪವಾಡ ಸದೃಶ ಜೀವನದಲ್ಲಿನ ಕನಕಧಾರಾ ಸ್ತೋತ್ರದ ರಚನೆಗೆ ಹಿನ್ನಲೆಯಾಗಿರುವ ಬ್ರಾಹ್ಮಣೇತರರಲ್ಲಿ ಭಿಕ್ಷಾಟನೆ ಹಾಗೂ ಆ ದಿನ ಮಹಿಳೆಗೆ ಚಿನ್ನದ ನೆಲ್ಲಿಕಾಯಿಗಳ ಮಳೆಯ ಬಗೆಗಿನ ಘಟನೆಗಳು ಸರ್ವ ಸಮಭಾವದ ಸಮೈಕ ಮತ್ಯವನ್ನು ಶಂಕರರು ಆಗಲೇ ಕಂಡು ಕೊಂಡಿದ್ದರೆಂಬುದನ್ನು ಗಮನಾರ್ಹವಾಗಿ ವಿಷದಪಡಿಸುತ್ತದೆ.
ರಾಷ್ಟ್ರ ಏಕತೆ: ಶ್ರೀ ಶಂಕರರು ಭಾರತವನ್ನು ಬಂಗಾಲದಲ್ಲಿ ಸಂಚರಿಸಿದರು. ಅಲ್ಲದೆ ಭಾರತದಲ್ಲಿ ನಾಲ್ಕು ಮೂಲೆಗಳಾದ ಶೃಂಗೇರಿ ದ್ವಾರಕ, ಬದರಿ ಹಾಗೂ ಪುರಿಗಳಲ್ಲಿ ಚತುರಾಮ್ರಾಯ ಪೀಠಗಳನ್ನು ಸ್ಥಾಪಿಸಿದರು. ಆಯಾ ಪೀಠಗಳಿಗೆ ಅವುಗಳದ್ದೇ ಆದ ಸಾಂಸ್ಕೃತಿಕ ಚಿಂತನೆಗಳನ್ನು ಗಟ್ಟಿಗೊಳಿಸುವ, ಉಳಿಸುವ, ಪ್ರಚುರಗೊಳಿಸುವ ಜವಾಬ್ದಾರಿಯನ್ನು ನೀಡಿದರು. ಸರ್ವ ಮಾನ್ಯ ವಾಗಬಹುದಾದ ಧರ್ಮ ಕರ್ಮಾಚರಣೆಗಳನ್ನು ಭೋದಿಸುವ ಕ್ರಮವನ್ನು ಉರ್ಜೀತಗೊಳಿಸಿದರು. ಉತ್ತರದ ಶಿಷ್ಯರನ್ನು ದಕ್ಷಿಣದಲ್ಲೂ, ದಕ್ಷಿನದವರನ್ನು ಉತ್ತರದಲ್ಲೂ ಅಧಿಪತಿಗಳನ್ನಾಗಿಸಿದರು. ಅಲ್ಲದೇ ಶಂಕರರು ಉದ್ಧರಿಸಿದ ಅನೇಕ ದೇವಾಲಯಗಳಲ್ಲಿ ಭಿನ್ನ ದೇಶದ ಜನರು ಪೂಜಾ ಕೈಕಂರ್ಯಗಳನ್ನು ಮಾಡುವಂತೆ ನೀತಿಯನ್ನು ರೂಪಿಸಿದರು. ಇವೆಲ್ಲವೂ ಒಂದು ರಾಷ್ಟ್ರ, ಒಂದು ಚಿಂತನೆಯ ಮೂಲಕ ರಾಷ್ಟ್ರದ ಏಕೀಕರಣದ ಮಹಾ ಪ್ರಯತ್ನ ಎಂದರೆ ಕಂಡಿತವಾಗಿಯೂ ಅತೀಶಯೋಕ್ತಿಯಲ್ಲ.
ಏಕತೆ ಏತಕೆ: ಪ್ರಾಪ್ರಂಚಿಕ ತಾತ್ವಿಕ ಚಿಂತನೆಗಳು ಇಂದು ವೈಜ್ಞಾನಿಕ ಮನೋಭಾವನೆಗಳೆಂಬ ಎಲ್ಲದರ ನಿರಾಕರಣೆಯ ಸ್ವಭಾವದೆಡೆಯಲ್ಲಿ, ಎಲ್ಲರನ್ನು ಸಮಾನರನ್ನಾಗಿ ಕಾಣದ ಜನರೊಳಗಣ ಭಿನ್ನತೆಯಲ್ಲಿ ಮತಗಳೊಳಗೆ ಅಸಹಿಷ್ಣುತೆಗಳೆಡೆಗಳಲ್ಲಿ ಕಳೆದು ಹೋಗುತ್ತಿದೆ. ವರ್ತಮಾನದ ಪರಿಸ್ಥಿತಿ ಶಂಕರರು ಎದುರಿಸಿದ, ಅನುಭವಿಸಿದ ಪರಿಸ್ಥಿತಿಗಿಂತ ಭಿನ್ನವಿರಲಾರದು ಎಂದೆನಿಸುತ್ತದೆ. ಆದ್ದರಿಂದ ಪ್ರಪಂಚಕ್ಕಿಂದು ಬೇಕಿರುವುದು ವೈವಿಧ್ಯದಲ್ಲಿ ಏಕತೆಯನ್ನು ಕಾಣುವ ದೃಷ್ಟಿ. ಅದುವೇ ಅದ್ವೈತ.
– ಶ್ರೀಹರಿ ಶರ್ಮ ಪಾದೇಕಲ್ಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.