ಬಸ್ ಪಾಸ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ
Team Udayavani, Jun 3, 2019, 3:09 AM IST
ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಗೆ ಇದುವರೆಗೆ ಮುಹೂರ್ತ ಕೂಡಿಬಾರದ ಹಿನ್ನೆಲೆಯಲ್ಲಿ ಕೊನೆಪಕ್ಷ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನಾದರೂ ಹೆಚ್ಚಳ ಮಾಡುವಂತೆ ದುಂಬಾಲು ಬಿದ್ದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರತಿ ವಿದ್ಯಾರ್ಥಿ ರಿಯಾಯ್ತಿ ಪಾಸಿನ ದರವನ್ನು ನೂರು ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡುವಂತೆ ನಿಗಮವು ಪ್ರಸ್ತಾವನೆ ಸಲ್ಲಿಸಿದ್ದು, “ಸೇವಾ ಶುಲ್ಕ’ದ ರೂಪದಲ್ಲಿ ಈ ದರವನ್ನು ವಸೂಲಿ ಮಾಡಲು ಉದ್ದೇಶಿಸಿದೆ. ಸಾಧ್ಯವಾದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಈ ಪರಿಷ್ಕೃತ ದರ ಜಾರಿಗೊಳಿಸಲು ಚಿಂತನೆ ನಡೆಸಿದೆ. ಹಾಗೊಂದು ವೇಳೆ ಸರ್ಕಾರ ಅನುಮತಿ ನೀಡಿದರೆ, ವಿದ್ಯಾರ್ಥಿಗಳಿಗೆ ದರ ಏರಿಕೆ ಬರೆ ನಿಶ್ಚಿತ.
ಹೆಚ್ಚಳಕ್ಕೆ ಸಕಾಲ?: ಉಪ ಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭಾ ಚುನಾವಣೆಗಳು ಮುಗಿದಿವೆ. ಏರಿಕೆ ನಿರ್ಧಾರದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದು. ಅಷ್ಟಕ್ಕೂ ನೀರಿನ ಶುಲ್ಕ, ವಿದ್ಯುತ್ ಶುಲ್ಕ ಪರಿಷ್ಕರಣೆ ಆಗುತ್ತಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಇದು ಸಕಾಲ ಎಂಬುದು ನಿಗಮದ ಅಧಿಕಾರಿಗಳ ಲೆಕ್ಕಾಚಾರ. ಪ್ರಸ್ತಾವನೆ ಈಗಾಗಲೇ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಮಂಡನೆ ಆಗಿದ್ದು, ಸರ್ಕಾರಕ್ಕೂ ಕಳುಹಿಸಲಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಆದರೆ, ದಿಢೀರ್ ನಿರ್ಧಾರ ತೆಗೆದುಕೊಂಡಲ್ಲಿ ವಿದ್ಯಾರ್ಥಿ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಕಳೆದ ಏಳೆಂಟು ವರ್ಷಗಳಿಂದ ವಿದ್ಯಾರ್ಥಿ ರಿಯಾಯ್ತಿ ಬಸ್ ಪಾಸಿನ ದರ ಹೆಚ್ಚಿಸಿಲ್ಲ. ಇತ್ತ ಪ್ರಯಾಣ ದರ ಏರಿಕೆ ಪ್ರಸ್ತಾವನೆಯೂ ನನೆಗುದಿಗೆ ಬಿದ್ದಿದೆ. ಈ ಮಧ್ಯೆ ನಿಗಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಿರುವಾಗ, ಪಾಸಿನ ದರ ಪರಿಷ್ಕರಣೆಗೆ ಅನುಮತಿ ನೀಡಿದಲ್ಲಿ ಕೊಂಚ ಆರ್ಥಿಕ ಚೇತರಿಕೆಗೆ ಅನುಕೂಲ ಆಗುತ್ತದೆ ಎಂದು ನಿಗಮ ಸಮಜಾಯಿಷಿ ನೀಡಿದೆ. ಈ ಪರಿಷ್ಕರಣೆಯಿಂದ ನಿಗಮವು ವಾರ್ಷಿಕ ಸುಮಾರು 15ರಿಂದ 20 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಿದೆ.
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ 6.25 ಲಕ್ಷ ವಿದ್ಯಾರ್ಥಿಗಳು ರಿಯಾಯ್ತಿ ಬಸ್ ಪಾಸುಗಳನ್ನು ಹೊಂದುತ್ತಾರೆ. ಪಾಸಿನ ದರ ಹತ್ತು ತಿಂಗಳಿಗೆ ಪ್ರಸ್ತುತ ಕನಿಷ್ಠ 600ರಿಂದ ಗರಿಷ್ಠ 1,400 ರೂ. ಇದಲ್ಲದೆ, 100 ರೂ. ಸೇವಾ ಶುಲ್ಕ ಹಾಗೂ ತಿಂಗಳಿಗೆ ಅಪಘಾತ ಪರಿಹಾರ ನಿಧಿಗೆ 5 ರೂ. ಪಡೆಯಲಾಗುತ್ತಿದೆ. ಇದರಿಂದ ಒಟ್ಟಾರೆ 35-40 ಕೋಟಿ ರೂ. ಬರುತ್ತಿದೆ. ಆದರೆ, ವಾಸ್ತವವಾಗಿ ವೆಚ್ಚ ಆಗುತ್ತಿರುವುದು 650 ಕೋಟಿ ರೂ. ಸರ್ಕಾರದಿಂದ 300 ಕೋಟಿ ರೂ. ಬರುತ್ತದೆ. ಬಹುತೇಕ ಉಳಿದ ಹಣವನ್ನು ನಿಗಮವೇ ಭರಿಸಬೇಕಾಗಿದೆ. ಆದ್ದರಿಂದ ಹೆಚ್ಚಳ ಅಗತ್ಯವಾಗಿದೆ ಎಂದು ನಿಗಮ ಸಮರ್ಥನೆ ನೀಡಿದೆ.
ಲೆಕ್ಕಾಚಾರ ಹೀಗೆ: ರಿಯಾಯ್ತಿ ಪಾಸಿನಲ್ಲಿ ಪ್ರತಿ ವಿದ್ಯಾರ್ಥಿಗೆ 60 ಕಿ.ಮೀ.ವರೆಗೂ ಪ್ರಯಾಣಿಸಲು ಅವಕಾಶ ಇರುತ್ತದೆ. ಸರಾಸರಿ 40ಕಿ.ಮೀ. ಹಿಡಿದರೂ ಹೋಗಿ-ಬರುವುದು ಸೇರಿಸಿ 80 ಕಿ.ಮೀ. ಆಗುತ್ತದೆ. ಒಬ್ಬ ವಿದ್ಯಾರ್ಥಿ ತಿಂಗಳಲ್ಲಿ 25 ದಿನ ಸಂಚಾರ ಮಾಡುತ್ತಾನೆ. ಅಂದರೆ ಎರಡು ಸಾವಿರ ರೂ. ಆಗುತ್ತದೆ. ಹತ್ತು ತಿಂಗಳಿಗೆ 20 ಸಾವಿರ ರೂ. ಆಗುತ್ತದೆ. ರಿಯಾಯ್ತಿ ಪಾಸಿನ ಲೆಕ್ಕಾಚಾರದ ಪ್ರಕಾರ ಪಾಸಿಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟು ಮೊತ್ತವನ್ನು ಸರ್ಕಾರ ಭರಿಸಬೇಕು.
ಉಳಿದದ್ದನ್ನು ನಿಗಮ ಮತ್ತು ವಿದ್ಯಾರ್ಥಿಗಳು ತಲಾ ಶೇ.25ರಷ್ಟನ್ನು ಭರಿಸಬೇಕು. ಆದರೆ, 20 ಸಾವಿರ ರೂ. ವೆಚ್ಚದಲ್ಲಿ ಶೇ.25ರಷ್ಟು ಅಂದರೆ 5 ಸಾವಿರ ರೂ. ವಿದ್ಯಾರ್ಥಿ ನೀಡಬೇಕಾಗುತ್ತದೆ. ಆದರೆ, ಶೇ.7ರಿಂದ 8ರಷ್ಟೂ ನಿಗಮ ಪಡೆಯುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ವಿದ್ಯಾರ್ಥಿ ಬಸ್ ಪಾಸ್‌ನ ಸೇವಾ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಬಂದಿದೆ. ಶುಲ್ಕ ಹೆಚ್ಚಿಸುವ ಚಿಂತನೆಯಿದೆ. ಇದಲ್ಲದೆ, ಪ್ರಯಾಣ ದರವನ್ನೂ ಶೇ.15ರಷ್ಟು ಏರಿಕೆ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಮುಖ್ಯಮಂತ್ರಿಗಳ ಮುಂದಿದೆ. ಈ ಬಗ್ಗೆ ಸ್ವತಃ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ.
-ಡಿ.ಸಿ. ತಮ್ಮಣ್ಣ, ಸಾರಿಗೆ ಸಚಿವ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.