ದೇಶದ್ರೋಹಿಗಳ ಪರ ವಕಾಲತ್ತು; ಆಕ್ರೋಶ
Team Udayavani, Feb 25, 2020, 3:10 AM IST
ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿರುವ ಇಲ್ಲಿನ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಬೆಂಗಳೂರಿನಿಂದ ನಾಲ್ವರು ವಕೀಲರ ತಂಡ ಸೋಮವಾರ ನ್ಯಾಯಾಲಯಕ್ಕೆ ಆಗಮಿಸಿದಾಗ ಸ್ಥಳೀಯ ವಕೀಲರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮೈತ್ರಿ ಕೃಷ್ಣನ್ ನೇತೃತ್ವದಲ್ಲಿ ನಿಯಾಜ್‌ಅಹ್ಮದ, ನರೇಂದ್ರ, ರಾಜೇಶ ಎಂಬ ವಕೀಲರು ದೇಶದ್ರೋಹ ಆರೋಪದಡಿ ಬಂಧಿತರಾದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಭಾನುವಾರ ತಡರಾತ್ರಿಯೇ ನಗರಕ್ಕೆ ಆಗಮಿಸಿ, ನಗರದ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಮಾಡಿದ್ದರು.
ಸೋಮವಾರ ಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿಯೇ ಅವರನ್ನು ಹೋಟೆಲ್‌ನಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ವಕೀಲರು, ದೇಶದ್ರೋಹಿಗಳ ಪರ ಅವರಿಗೆ ವಕಾಲತ್ತು ವಹಿಸಲು ಕೊಡಬಾರದೆಂದು ಘೋಷಣೆಗಳನ್ನು ಕೂಗಿ, ಕೋರ್ಟ್ ಎದುರು ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಆವರಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸರು ವಕೀಲರು, ಮಾಧ್ಯಮದವರು ಸೇರಿ ಸಾರ್ವಜನಿಕರನ್ನು ಕೋರ್ಟ್ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಕೆಲ ಸಮಯದ ನಂತರ ಒಬ್ಬೊಬ್ಬರನ್ನೇ ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದರು.
ತಳ್ಳಾಟ, ನೂಕಾಟ: ಬಂಧಿತ ಜಮ್ಮು-ಕಾಶ್ಮೀರ ಮೂಲದ ಬಸೀತಆಶೀಕ ಆಸೀಕಹುಸೇನ ಸೋಫಿ, ತಾಲೀಬಮಜೀದ ಅಬ್ದುಲ ಮಜೀದ ವಾನಿ, ಅಮೀರ ಮೊಹೀದ್ದಿನ ಗುಲಾಮ ಮೊಹೀದ್ದಿನ ವಾನಿ ನ್ಯಾಯಾಂಗ ವಶದಲ್ಲಿದ್ದು, ಇವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಪರ ವಕಾಲತ್ತು ವಹಿಸಲು ಮೈತ್ರಿ ಕೃಷ್ಣನ್ ನೇತೃತ್ವದ ವಕೀಲರ ತಂಡ ಸ್ಥಳೀಯ ಜೆಎಂಎಫ್ 2ನೇ ನ್ಯಾಯಾಲಯದಿಂದ ಸರ್ಟಿಫಿಕೇಟ್ ಕಾಪಿ ಪಡೆದು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆಗೆ ಮುಂದಾದರು.
ಈ ಸಂದರ್ಭದಲ್ಲಿ ವಕೀಲರು ನಮ್ಮ ಪ್ರಕರಣಗಳ ಸರ್ಟಿಫಿಕೇಟ್ ಕಾಪಿ ಪಡೆದುಕೊಳ್ಳುವುದಿದೆ, ನಮಗೂ ಅರ್ಜಿ ಸಲ್ಲಿಸಲು ಅವಕಾಶ ಕೊಡಿ. ಅವರಿಗೆ ಪೊಲೀಸ್ ಬಂದೋಬಸ್ತ್ ಕೊಡುವುದಾದರೆ ಕೊಡಿ, ನಮಗೇಕೆ ಅರ್ಜಿ ಕೊಡಲು ಅವಕಾಶ ಮಾಡಿಕೊಡು ತ್ತಿಲ್ಲವೆಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಕೋರ್ಟ್ ಆವರಣದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು- ವಕೀಲರ ನಡುವೆ ಮಾತಿನ ಚಕಮಕಿ, ನೂಕಾಟ ನಡೆಯಿತು. ಕೊನೆಗೆ ಪೊಲೀಸರು ಬೆಂಗಳೂರಿನಿಂದ ಆಗಮಿಸಿದ್ದ ವಕೀಲರನ್ನು ಭಾರಿ ಬಂದೋಬಸ್ತ್ನಲ್ಲಿ ನ್ಯಾಯಾಲಯದ ಕಚೇರಿಯಿಂದ, ಧಾರವಾಡದ ಕಡೆಗೆ ಕರೆದುಕೊಂಡು ಹೋದರು.
“ದೇಶದ್ರೋಹಿ ಘೋಷಣೆಗೆ ಕಾಂಗ್ರೆಸ್ ಕುಮ್ಮಕ್ಕು’
ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗುವವರಿಗೆ ಕಾಂಗ್ರೆಸ್ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಯಿಂದ ದೇಶದಲ್ಲಿರುವವರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಒಂದು ವರ್ಗವನ್ನು ಪ್ರಚೋದಿಸುತ್ತಿ ರುವುದರಿಂದ ದೇಶ ವಿರೋಧಿ ಘೋಷಣೆ ಕೂಗುವ ವ್ಯಕ್ತಿಗಳು ಬೆಳೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಹುಬ್ಬಳ್ಳಿ ಶಾಲೆಯೊಂದರಲ್ಲಿ ಬರೆದಿರುವ ದೇಶವಿರೋಧಿ ಘೋಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಬರಹಕ್ಕೂ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದವರು ಕುಮ್ಮಕ್ಕು ನೀಡುತ್ತಿದ್ದಾರೆ. ದೇಶದ್ರೋಹದ ಘೋಷಣೆ ಕೂಗಿದ ವರಿಗೆ ಪರೋಕ್ಷವಾಗಿ ಬೆಂಬಲ ನೀಡಿದವರಿಗೆ ಮುಂದೊಂದು ದಿನ ಅದರ ಅರಿವಾಗಲಿದೆ ಎಂದು ಹೇಳಿದರು.
ಆಯುಕ್ತರ ಅಮಾನತಿಗೆ ಆಗ್ರಹ: ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರ ಮೃಧುಧೋರಣೆ, ಕರ್ತವ್ಯಲೋಪದಿಂದಾಗಿ ಪಾಕ್ ಪರ ಘೋಷಣೆ ರಾಜ್ಯಾದ್ಯಂತ ಮರು ಕಳಿಸುತ್ತಿದ್ದು, ಇದಕ್ಕೆ ಆಯುಕ್ತರೇ ಹೊಣೆ. ಅವರನ್ನು ಅಮಾನತಿನಲ್ಲಿಟ್ಟು ಇಲಾಖಾ ತನಿಖೆ ಮಾಡಬೇಕು ಹಾಗೂ ಬೆಂಗಳೂರಿನಿಂದ ಆಗಮಿಸಿದ ವಕೀಲರು ದೇಶದ್ರೋಹಿಗಳ ಪರವಾಗಿ ನಿಲ್ಲಬಾರದು ಎಂದು ಯುವ ವಕೀಲರ ಸಂಘವು ಒತ್ತಾಯಿಸಿತು. ಕೋರ್ಟ್ ಎದುರು ತೋಳಿಗೆ ಕೆಂಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು, ಬೆಂಗಳೂರಿನಿಂದ ಬಂದ ವಕೀಲರು ದೇಶದ್ರೋಹಿಗಳ ಪರ ವಕಾಲತ್ತು ವಹಿಸಬಾರದು ಎಂದು ಘೋಷಣೆ ಕೂಗಿದರು.
3ದಿನ ಪೊಲೀಸ್ ವಶಕ್ಕೆ: ದೇಶದ್ರೋಹ ಪ್ರಕರಣದಲ್ಲಿ ಬಂಧಿತ ರಾದ ಕಾಶ್ಮೀರ ಮೂಲದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹೆಚ್ಚಿನ ತನಿಖೆಗಾಗಿ ಗ್ರಾಮೀಣ ಠಾಣೆ ಪೊಲೀಸರು ಫೆ.25ರಿಂದ 3 ದಿನ ತಮ್ಮ ವಶಕ್ಕೆ ಪಡೆಯಲಿದ್ದಾರೆ. ಸೋಮವಾರ ಜೆಎಂಎಫ್ 2ನೇ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದ್ದು, ಕೋರ್ಟ್ ಅದಕ್ಕೆ ಸಮ್ಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.