ಅಕ್ರಮ ಸಕ್ರಮ: ಬೆರಳೆಣಿಕೆ ಮಂದಿಗೆ ಮಂಜೂರು
Team Udayavani, Feb 15, 2022, 8:05 AM IST
ಪುತ್ತೂರು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ ಅರ್ಜಿ ಸ್ವೀಕಾರ ಗೊಂಡು 3 ವರ್ಷ ಕಳೆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜೂರಾತಿ ಪತ್ರ ದೊರೆತವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಈ ಸಂಬಂಧ “ಉದಯವಾಣಿ’ ರಿಯಾಲಿಟಿ ಚೆಕ್ ಮಾಡಿದಾಗ ಕಂಡುಬಂದ ಅಂಶವೆಂದರೆ ಈ ವಿಳಂಬ ಧೋರಣೆಯ ಹಿಂದೆ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ. ಹಣ ನೀಡಿದರೆ ಅರ್ಜಿ ವಿಲೇವಾರಿ, ಇಲ್ಲವಾದರೆ ಅರ್ಜಿ ಧೂಳು ಹಿಡಿಯುವಂಥ ಪರಿಸ್ಥಿತಿ ಇದೆ.
ಭೂಕಂದಾಯ ಸಂಬಂಧಿ 1964ರ ಕಲಂ 94ಎ (4)ಗೆ 2018 ಮಾ. 17ರಂದು ತಿದ್ದುಪಡಿ ತಂದು 2018 ಅ. 25ರಂದು ಮಾರ್ಗ ಸೂಚಿ ಪ್ರಕಟಿಸಲಾಗಿತ್ತು. 2019ರ ಮಾ. 16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನ ನಿಗದಿಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ 91,906 ಅರ್ಜಿ ಸಲ್ಲಿಕೆ ಯಾಗಿದೆ. ಇದರಲ್ಲಿ 2,477 ಫಲಾನುಭವಿಗಳಿಗಷ್ಟೇ ಮಂಜೂರಾತಿ ಪತ್ರ ದೊರೆತಿದೆ. 89,429 ಅರ್ಜಿ ವಿಲೇ ಬಾಕಿ ಇದೆ.
ಶೂನ್ಯ ಸಾಧನೆ!
ದ. ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 131 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಒಬ್ಬರಿಗೂ ಮಂಜೂರಾತಿ ದೊರೆತಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ 31,123 ಅರ್ಜಿ ಸಲ್ಲಿಕೆಯಾಗಿದ್ದು ಇದರಲ್ಲಿ 54, ಬಂಟ್ವಾಳದಲ್ಲಿ 20392 ರ ಪೈಕಿ 92 ಮಂದಿಗೆ ಮಾತ್ರ ಮಂಜೂರಾತಿ ಪತ್ರ ದೊರೆತು ಕನಿಷ್ಠ ಸಾಧನೆ ದಾಖಲಾಗಿದೆ. ಮಂಗಳೂರು 842, ಪುತ್ತೂರು 533, ಕಡಬದಲ್ಲಿ 372 ಫಲಾನುಭವಿಗೆ ಮಂಜೂರಾತಿ ಪತ್ರ ದೊರೆತಿದ್ದು, ಇದು ದ.ಕ. ಜಿಲ್ಲೆಯ ತಾಲೂಕು ಮಟ್ಟದ ಗರಿಷ್ಠ ಸಾಧನೆ.
ಸಲ್ಲಿಕೆಯಾದ ಅರ್ಜಿ ಆಯಾ ಗ್ರಾಮಕರಣಿಕರ ಕಚೇರಿ ತಲುಪುತ್ತದೆ. ಗ್ರಾಮ ಕರಣಿಕರು, ಸರ್ವೇ ಯರ್ ಆಯಾ ಅರ್ಜಿದಾರನ ಸ್ಥಳ ತನಿಖೆ ಮಾಡಿ ನಕ್ಷೆ ತಯಾರಿಸುತ್ತಾರೆ. ಗ್ರಾಮಕರಣಿಕರು ಪರಿಶೀಲಿಸಿ ಕ್ರಮಬದ್ಧ ವಾಗಿರುವುದನ್ನು ಕಂದಾಯ ನಿರೀಕ್ಷಕರ ಕಚೇರಿಗೆ ಕಳುಹಿಸುತ್ತಾರೆ. ಬಳಿಕ ಕಂದಾಯ ನಿರೀಕ್ಷಕರು ಸ್ಥಳ ತನಿಖೆ ಮಾಡಿ ಫೋಟೋ ತೆಗೆದು ದೃಢೀಕರಿಸಿ ತಾಲೂಕು ಕಚೇರಿಗೆ ಕಳುಹಿಸುತ್ತಾರೆ. ಅಲ್ಲಿ ತಹಶೀಲ್ದಾರ್ ಪರಿಶೀಲಿಸಿ ಸಮರ್ಪಕವಾಗಿದ್ದರೆ ಶಿಫಾರಸು ಮಾಡಿ ಅಕ್ರಮ-ಸಕ್ರಮ ಸಮಿತಿ ಮುಂದಿಡುತ್ತಾರೆ. ಶಾಸಕರ ನೇತೃತ್ವದ ಅಕ್ರಮ-ಸಕ್ರಮ ಸಮಿತಿ ಸಭೆ ಮಂಜೂರಾತಿ ನೀಡುತ್ತದೆ.
ಕನಿಷ್ಠ ಸಿಬಂದಿ ಗರಿಷ್ಠ ಅರ್ಜಿ!
ತಾಲೂಕಿನಲ್ಲಿ ಹೋಬಳಿಗೆ ಓರ್ವ ಕಂದಾಯ ನಿರೀಕ್ಷಕರು ಇರುತ್ತಾರೆ. ಪ್ರತೀ ತಾಲೂಕಿನಲ್ಲಿ ಹೆಚ್ಚೆಂದರೆ ಎರಡರಿಂದ ಮೂರು ಹೋಬಳಿ ಇದೆ. ಈ ಕಂದಾಯ ನಿರೀಕ್ಷಕರು ಅಕ್ರಮ ಸಕ್ರಮದ ಅರ್ಜಿದಾರರ ಪ್ರತೀ ಮನೆಗೆ ತೆರಳಿ ಪೋಟೋ ತೆಗೆದು ಕಡತಕ್ಕೆ ದಾಖಲಿಸಬೇಕು.
ಕೆಲವು ತಾಲೂಕುಗಳಲ್ಲಿ 10ರಿಂದ 30 ಸಾವಿರ ತನಕ ಅರ್ಜಿ ಇದೆ. ಅಷ್ಟು ಫಲಾನುಭವಿಗಳ ಜಾಗಕ್ಕೆ ತೆರಳಲು ಓರ್ವ ಅಥವಾ ಇಬ್ಬರು ಅಧಿಕಾರಿಗಳು ಮಾತ್ರ ಇರುವುದು ಕೂಡ ಸವಾಲಾಗಿದೆ.
ದುಡ್ಡಿನ ಹೊಳೆ!
ಕಚೇರಿಯಿಂದ ಕಚೇರಿಗೆ ಅರ್ಜಿ ದಾಟುವಾಗಲೇ ಭ್ರಷ್ಟಾಚಾರ ಇಣುಕುತ್ತಿದೆ. 20ರಿಂದ 30 ಸೆಂಟ್ಸ್‌ನ ಜಾಗದ ಸರ್ವೇ ಅಳತೆಗೆ 5 ಸಾವಿರ ರೂ. ವರೆಗೂ ಬೇಡಿಕೆ ಉಂಟು. ಗ್ರಾಮ ಕರಣಿಕರಿಂದ ಹಿಡಿದು ಕಂದಾಯ ಕಚೇರಿಗೆ ಬರುವಷ್ಟರಲ್ಲಿ ಕನಿಷ್ಠ 5 ರಿಂದ 20 ಸಾವಿರ ರೂ. ವರೆಗೂ ಖರ್ಚಾಗುತ್ತದೆ. ಜಾಗದ ವಿಸ್ತೀರ್ಣ ಹೆಚ್ಚಾದರೆ ಅದಕ್ಕೆ ತಕ್ಕಂತೆ ಹಣ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ನಿರ್ವಹಿಸಲೆಂದೇ ಏಜೆಂಟುಗಳೂ ಇದ್ದಾರೆ. ಅವರೇ ಹಣವನ್ನು ಸಲ್ಲಬೇಕಾದವರಿಗೆ ಸಲ್ಲಿಸಿ ಕೆಲಸ ಮಾಡಿಕೊಡುತ್ತಾರೆ. ಇಲ್ಲವಾದರೆ ಕಡತದಲ್ಲಿ ಲೋಪಗಳು ಕಾಣುತ್ತವೆ ಎಂಬುದು ಕೆಲವು ತಿಂಗಳಿಂದ ಅರ್ಜಿ ಮಂಜೂರಾತಿಗೆ ಓಡಾಡುತ್ತಿರುವ ಅರ್ಜಿದಾರರೊಬ್ಬರು.
ನಕ್ಷೆ ಸರಿ ಇಲ್ಲ, ಅರಣ್ಯ, ಪರಂಬೋಕು, ಹಳೆಯ ನಕ್ಷೆಗೆ ಹೋಲಿಕೆ ಆಗುತ್ತಿಲ್ಲ, ದಿಕ್ಕು ಸರಿ ಇಲ್ಲ -ಹೀಗೆ ಹತ್ತಾರು ಕಾರಣಗಳು ಅರ್ಜಿ ವಿಲೇವಾರಿ ಆಗದ್ದಕ್ಕೆ ನೀಡಲಾಗುತ್ತಿದೆ. ನಿಯಮ ಅನುಸಾರ ಅರಣ್ಯ, ಪರಂಬೋಕು ಪ್ರದೇಶ ಸೇರಿದ್ದರೆ ಆ ಜಮೀನನ್ನು ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲು ಆಗದು. ಆದರೆ ಯಾವ ಸಮಸ್ಯೆಗಳು ಇಲ್ಲದಿದ್ದರೂ ಅರ್ಜಿಗಳನ್ನು ಮಂಜೂರಾತಿ ಮಾಡುತ್ತಿಲ್ಲ. ವಿರೋಧಿಸಿದರೆ ಇನ್ನೇನಾದರೂ ತೊಂದರೆ ಮಾಡಿಯಾರು ಎಂದು ಯಾರೂ ಮುಂದೆ ಬರುವುದಿಲ್ಲ ಎನ್ನುತ್ತಾರೆ ಅವರು.
ಸಮಿತಿ ಅಧ್ಯಕ್ಷರಾದ ಶಾಸಕರು ಒಮ್ಮೆ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ ಹಲವು ಸಮಸ್ಯೆಗಳು ಸರಿ ಹೋಗುತ್ತವೆ ಎಂಬುದು ಅರ್ಜಿದಾರರ ಮನವಿ.
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.