ಮಾಹಿತಿ ಒದಗಿಸದಿರುವುದು,ವಿಚಾರಣೆಗೆ ಗೈರು ಆರೋಪ:ಸಾರ್ವಜನಿಕ ಮಾಹಿತಿ ಅಧಿಕಾರಿಗೆ 15ಸಾ.ರೂ ದಂಡ
Team Udayavani, Aug 4, 2023, 12:51 AM IST
ಪುತ್ತೂರು: ರಸ್ತೆ ಸಮಸ್ಯೆಗೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮದ ಕುರಿತು ನಿಗದಿತ ಅವಧಿಯೊಳಗೆ ಸೂಕ್ತ ಮಾಹಿತಿ ನೀಡದೇ ಇರುವುದು, ಆಯೋಗ ನಿರ್ದೇಶನ ನೀಡಿದ್ದರೂ ಸ್ಪಷ್ಟ ಸಮಜಾಯಿಷಿ ನೀಡದಿರುವುದು ಹಾಗೂ ವಿಚಾರಣೆಗೆ ಹಾಜರಾಗದೇ ಇರುವ ಆರೋಪದಲ್ಲಿ ಪುತ್ತೂರು ತಹಶೀಲ್ದಾರ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸುಲೋಚನಾ ಅವರಿಗೆ ಕರ್ನಾಟಕ ಮಾಹಿತಿ ಆಯೋಗ 15 ಸಾವಿರ ರೂ. ದಂಡ ವಿಧಿಸಿದೆ.
ದಂಡದ ಮೊತ್ತವನ್ನು ಸರಕಾರದ ಖಾತೆಗೆ ಜಮೆ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗದ ಕಾರ್ಯದರ್ಶಿಗೆ ಸೂಚಿಸಿದೆ. ಅಲ್ಲದೆ ಮೇಲ್ಮನವಿದಾರರ ಪ್ರಕರಣದ ಕುರಿತು ನಿಯಮಾನುಸಾರ ಕ್ರಮ ಕೈಗೊಂಡು ಇತ್ಯರ್ಥಪಡಿಸಲು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಆಯೋಗ ಸೂಚಿಸಿದೆ.
ನೆಟ್ಟಣಿಗೆಮುಟ್ನೂರು ಗ್ರಾಮದ ಕೆಳಂದೂರು ಶ್ರೀಧರ ಪೂಜಾರಿ ಅವರು 25 ವರ್ಷಗಳಿಂದ ಅವರು ಬಳಸುತ್ತಿದ್ದ ಸರಕಾರಿ ಜಾಗವನ್ನು ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿದ್ದರು ಎಂದು ಪುತ್ತೂರು ತಹಶೀಲ್ದಾರರಿಗೆ ದೂರು ನೀಡಿದ್ದರು. ಒಂದೂವರೆ ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಗಿನ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ನಡೆಸಿದ್ದ ಗ್ರಾಮ ವಾಸ್ತವ್ಯ ಸಂದರ್ಭ ಮನವಿ ನೀಡಿದ್ದರು. ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರು ತಹಶೀಲ್ದಾರರಿಗೆ ಸೂಚಿಸಿದ್ದರು. ಕೈಗೊಂಡ ಕ್ರಮದ ಮಾಹಿತಿಯನ್ನು ನೀಡುವಂತೆ ಶ್ರೀಧರ್ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ನೀಡಿದ್ದ ಮನವಿಗೆ ಸ್ಪಂದನೆ ದೊರೆಯದ ಕಾರಣ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.