ಸಂಕಷ್ಟ ಕಾಲದಲ್ಲಿ ಅಮೆರಿಕ-ಚೀನ ಜಟಾಪಟಿ
Team Udayavani, May 11, 2020, 3:27 PM IST
ಭೂಮಂಡಲವಿಡೀ ಕೋವಿಡ್ ಎಂಬ ಸೂಕ್ಷ್ಮಾಣು ವೈರಸ್‌ನ ದಾಳಿಗೆ ತುತ್ತಾಗಿ ನಲುಗುತ್ತಿದೆ. ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಎಲ್ಲ ದೇಶಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳು ಒಗ್ಗಟ್ಟಾಗಿ ಈ ಮಹಾಮಾರಿಯ ವಿರುದ್ಧ ಹೋರಾಡಬೇಕಿತ್ತು. ಆದರೆ ಜಗತ್ತಿನ ಎರಡು ಶಕ್ತ ರಾಷ್ಟ್ರಗಳು ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಪರಸ್ಪರ ಕಚ್ಚಾಡುತ್ತಿರುವುದು ದುರದೃಷ್ಟಕರ.
ವಾಷಿಂಗ್ಟನ್: ಕೋವಿಡ್ ವೈರಸ್ ಜನರ ಆರೋಗ್ಯ ಮತ್ತು ದೇಶಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಮಾತ್ರ ಪರಿಣಾಮ ಬೀರಿರುವುದಲ್ಲ, ಜಾಗತಿಕ ಸಮೀಕರಣವನ್ನೇ ಬದಲಾಯಿಸುವ ಸಾಧ್ಯತೆಯೂ ಗೋಚರಿಸುತ್ತಿದೆ. ಮುಖ್ಯವಾಗಿ ವಿವಿಧ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಅಗಾಧವಾದ ಮಾರ್ಪಾಡಿಗೆ ಈ ವೈರಸ್ ಕಾರಣವಾಗಲಿದೆ. ಚೀನ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ವೈರಸ್ ಈಗಾಗಲೇ ಸರಿ ಮಾಡಲಾಗದಷ್ಟು ಹದಗೆಡಿಸಿದೆ.
ಚೀನ ಕೋವಿಡ್ ಉಗಮ ಸ್ಥಾನವಾಗಿದ್ದರೆ ಅಮೆರಿಕ ವೈರಸ್‌ನಿಂದ ಅತಿ ಹೆಚ್ಚು ಸಾವು ಮತ್ತು ನಷ್ಟವನ್ನು ಅನುಭವಿಸಿರುವ ದೇಶ. ಎರಡೂ ದೇಶಗಳೂ ವೈರಸ್‌ನಿಂದ ಬಹಳಷ್ಟು ನಲುಗಿವೆ. ಈ ಸಂದರ್ಭದಲ್ಲಿ ದೇಶಗಳು ಪರಸ್ಪರ ನೆರವು ನೀಡುತ್ತಾ ಮಾನವೀಯ ನೆಲೆಯಲ್ಲಿ ಇನ್ನಷ್ಟು ನಿಕಟವಾಗಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈಗಾಗಲೇ ಹದಗೆಟ್ಟಿರುವ ಚೀನ ಮತ್ತು ಅಮೆರಿಕದ ಸಂಬಂಧ ವೈರಸ್‌ನಿಂದ ಇನ್ನಷ್ಟು ವಿಷಮಿಸಿದೆ. ಇಷ್ಟು ಮಾತ್ರವಲ್ಲದೆ ಎರಡೂ ದೇಶಗಳಲ್ಲಿ ತೀವ್ರವಾದ ರಾಷ್ಟ್ರೀಯತೆಯ ಕಿಡಿಯನ್ನು ಹೊತ್ತಿಸಿದೆ.
ವೈರಸ್ ಹರಡುವುದನ್ನು ತಡೆಯಲು ವಿಫಲವಾಗಿರುವುದಕ್ಕೆ ಮತ್ತು ವೈರಸ್‌ನ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಸಕಾಲಕ್ಕೆ ಮಾಹಿತಿ ನೀಡದಿರುವುದಕ್ಕೆ ಚೀನ ಜಾಗತಿಕವಾಗಿ ಟೀಕೆಗಳನ್ನು ಎದುರಿಸುತ್ತಿದೆ. ವೈರಸ್ ಚೀನದ ಸೃಷ್ಟಿ ಎಂಬ ಆರೋಪವೂ ಇದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಈ ಆರೋಪವನ್ನು ಮಾಡುತ್ತಿದ್ದಾರೆ. ಕೋವಿಡನ್ನು ಅವರು ಆಗಾಗ ಚೀನ ವೈರಸ್ ಎಂದೇ ಉಲ್ಲೇಖೀಸುತ್ತಿದ್ದಾರೆ. ಹಲವು ದೇಶಗಳು ಈಗಾಗಲೇ ಚೀನದಿಂದ ಪರಿಹಾರ ಪಡೆದುಕೊಳ್ಳುವ ಸಲುವಾಗಿ ಮೊಕದ್ದಮೆಗಳನ್ನೂ ಹೂಡಿವೆ. ಹೀಗೆ ಸದ್ಯಕ್ಕೆ ಚೀನ ಆರೋಪಿ ಸ್ಥಾನದಲ್ಲಿ ನಿಂತಿದೆ.
ಆದರೆ ಚೀನ ಈ ಎಲ್ಲ ಆರೋಪಗಳನ್ನು ಅಲ್ಲಗಳೆಯುತ್ತಿದೆ. ನಿರ್ದಿಷ್ಟವಾಗಿ ಅಮೆರಿಕ ಮಾಡುತ್ತಿರುವ ಆರೋಪಗಳಿಗೆ ಅಲ್ಲಲ್ಲೇ ತಿರುಗೇಟು ನೀಡುತ್ತಿದೆ. ಇದು ಎರಡು ದೇಶಗಳ ನಡುವೆ ಆಗಾಗ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ.
ಕಳೆದ ವಾರ ಅಮೆರಿಕದ ರಕ್ಷಣಾ ಸಚಿವ ಮೈಕ್ ಪೊಂಪೈ ನೇರವಾಗಿ ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಚೀನದ ಪ್ರಯೋಗಾಲಯದಲ್ಲಿ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನದ ಸರಕಾರಿ ಮಾಧ್ಯಮಗಳು ಪೊಂಪೈ ಅವರನ್ನು ಪಿಶಾಚಿ, ತಲೆಕೆಟ್ಟವ, ಮನುಕುಲದ ವೈರಿ ಎಂದು ಹೀನವಾಗಿ ಲೇವಡಿ ಮಾಡಿವೆ. ಕಳೆದು ಹೋಗಿರುವ ತನ್ನ ಜನಪ್ರಿಯತೆಯನ್ನು ಮರಳಿ ಗಳಿಸುವ ಸಲುವಾಗಿ ಟ್ರಂಪ್ ಕೊರೊನಾ ವೈರಸ್ ಮೊರೆ ಹೋಗಿದ್ದಾರೆ. ಇದು ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆಯಾಗಲು ನಡೆಸುತ್ತಿರುವ ಹತಾಶ ಪ್ರಯತ್ನಗಳು ಎನ್ನುವುದು ಅಮೆರಿಕದ ಆರೋಪಕ್ಕೆ ಚೀನ ನೀಡುತ್ತಿರುವ ತಿರುಗೇಟು.
ಎರಡು ದೇಶಗಳ ನಡುವಿನ ಹಗೆ ಬರೀ ಮಾತಿನ ಚಕಮಕಿಗೆ ಮಾತ್ರ ಸೀಮಿತವಾಗಿಲ್ಲ, ನಿರ್ಬಂಧಗಳನ್ನು ಹೇರುವುದು, ಹೊಸ ವಾಣಿಜ್ಯ ನೀತಿಗಳ ರಚನೆ, ಸಾಲ ಅಮಾನತು ಈ ಮುಂತಾದ ಕಠಿನ ಕ್ರಮಗಳ ಮೂಲಕ ಚೀನವನ್ನು ದಂಡಿಸಲು ಅಮೆರಿಕ ಯೋಜನೆಗಳನ್ನು ರೂಪಿಸುತ್ತಿದೆ.ಚೀನ ವಿರುದ್ಧ ಸಮರ ಸಾರಲು ಹೊಸ ಸ್ನೇಹಿತರನ್ನೂ ಅಮೆರಿಕ ಹುಡುಕುತ್ತಿದೆ. ಹೀಗೆ ಎರಡು ದೈತ್ಯ ರಾಷ್ಟ್ರಗಳ ನಡುವೆ ಕೊರೊನಾ ವೈರಸ್ ನೆಪವಾಗಿ ನಡೆಯುತ್ತಿರುವ ಶೀತಲ ಸಮರ ಒಟ್ಟಾರೆಯಾಗಿ ಇಡೀ ಜಗತ್ತನ್ನು ಸಂಕಷ್ಟಕ್ಕೆ ದೂಡಿದೆ.
ಇತಿಹಾಸವನ್ನು ಗಮನಿಸಿದರೆ ಅಮೆರಿಕ ಮತ್ತು ಚೀನ ನಡುವಣ ಸಂಬಂಧ ಇಷ್ಟು ಹದಗೆಟ್ಟಿರುವುದು ಇದೇ ಮೊದಲು. ಸುಮಾರು ಎರಡು ವರ್ಷಗಳಿಂದ ಉಭಯ ದೇಶಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ ಈಗ ತುರಿಯಾವಸ್ಥೆಗೆ ತಲುಪಿದೆ. ಚೀನ ಸಂಬಂಧಿಸಿದಂತೆ ಟ್ರಂಪ್ ಧೋರಣೆ ಹೊಸತಲ್ಲವಾದರೂ ಅವರೀಗ ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. “2016ರಲ್ಲಿ ಉದ್ಯೋಗ ಮತ್ತು 2020ರಲ್ಲಿ ಜನರ ಪ್ರಾಣ ಟ್ರಂಪ್ ಎದುರಿಸುತ್ತಿರುವ ಸವಾಲು’ ಎಂದು ವಿಶ್ಲೇಷಿಸುತ್ತಾರೆ ಹಾಂಗ್‌ಕಾಂಗ್ ವಿವಿಯ ಉಪನ್ಯಾಸಕ ಡೇವಿಡ್ ವೀಗ್.
ಚೀನ ವಿರೋಧಿ ಭಾವನೆ ರಾಷ್ಟ್ರೀಯತೆಯ ಅಬ್ಬರ
ಒಂದೆಡೆ ರಾಜತಾಂತ್ರಿಕ ಸಂಬಂಧಗಳು ಚೀನವನ್ನು ಹೈರಾಣಗೊಳಿಸುತ್ತಿದ್ದರೆ ಇನ್ನೊದೆಡೆ ಜಾಗತಿಕವಾಗಿ ಚೀನ ವಿರುದ್ಧ ರಾಷ್ಟ್ರೀಯತೆ ಜಾಗೃತವಾಗುತ್ತಿದೆ. ಭಾರತ, ಅಮೆರಿಕ ಮುಂತಾದ ದೇಶಗಳಲ್ಲಿ ಚೀನ ವಿರೋಧ ಭಾವನೆ ತುಸು ಜೋರಾಗಿಯೇ ಇದೆ. ಅಮೆರಿಕದಲ್ಲಿ ಚೀನ ವಿರೋಧಿ ಭಾವನೆ ಗರಿಷ್ಠ ಮಟ್ಟದಲ್ಲಿದೆ ಎನ್ನುತ್ತಿದೆ ಒಂದು ಸಮೀಕ್ಷೆ. ಶೇ.66 ಅಮೆರಿಕನ್ನರು ಚೀನದ ಬಗ್ಗೆ ಸದ್ಭಾವನೆ ಹೊಂದಿಲ್ಲ ಎಂಬ ಅಂಶ ಈ ಸಮೀಕ್ಷೆಯಿಂದ ವ್ಯಕ್ತವಾಗಿದೆ.
ಇತ್ತ ಚೀನದಲ್ಲೂ ಅಮೆರಿಕ ವಿರೋಧ ಭಾವನೆ ದಟ್ಟವಾಗುತ್ತಿದೆ. ಎರಡೂ ದೇಶಗಳಲ್ಲಿ ರಾಷ್ಟ್ರೀಯತೆಯ ಭಾವನೆ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಕೋವಿಡ್ ವೈರಸ್ ತಡೆಯಲು ನಾವು ಇಷ್ಟೆಲ್ಲ ಮಾಡಿಯೂ ಜಗತ್ತು ನಮ್ಮನ್ನು ಅಪರಾಧಿಗಳಂತೆ ನೋಡುತ್ತಿದೆಯಲ್ಲ ಎನ್ನುವ ನೋವು ಚೀನಿಯರಲ್ಲಿದೆ. ಈ ನೋವು ಅಮೆರಿಕ ವಿರುದ್ಧ ಆಕ್ರೋಶವಾಗಿ ಬದಲಾಗುತ್ತಿದೆ. ಹೀಗೆ ಎರಡು ದೇಶಗಳು ಸಂಕಷ್ಟ ಕಾಲದಲ್ಲೂ ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಿರುವುದನ್ನು ಜಗತ್ತು ಅಸಹಾಯಕವಾಗಿ ನೋಡುತ್ತಿದೆ. ಕೋವಿಡ್ ವೈರಸ್ ನಿಮಿತ್ತವಾಗಿ ಚೀನ ಮತ್ತು ಅಮೆರಿಕ ನಡುವೆ ಸೃಷ್ಟಿಯಾಗಿರುವ ಕಂದಕ ಸರಿಯಾಗಲು ತಲೆಮಾರುಗಳೇ ಬೇಕಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.