AI ಫೋಟೋ ಜನರೇಟರ್ ಎಂಬ ಕಲಾಕಾರ!
Team Udayavani, Oct 14, 2023, 12:51 AM IST
ಕಲೆಗೆ ಬೆಲೆ ಕಟ್ಟಲಾಗದು ಎನ್ನುವ ಮಾತಿದೆ. ಆದರೆ ಈಗ ಕಾಲ ಬದಲಾಗಿದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ನವನವೀನ ಆವಿಷ್ಕಾರ ಗಳೊಂದಿಗೆ ಎಲ್ಲವೂ, ಎಲ್ಲರೂ ಪ್ರಗತಿಯತ್ತ ಸಾಗುತ್ತಿದ್ದಾರೆ. ಆದರೆ ಇದೇ ವೇಳೆ ತಂತ್ರಜ್ಞಾನ ಆವಿಷ್ಕಾರದ ಭರಾಟೆಯಲ್ಲಿ ಮನುಷ್ಯ ದುಡುಕು ತ್ತಿದ್ದಾನೆಯೇ? ಎಂಬ ಪ್ರಶ್ನೆ ಎಲ್ಲರನ್ನೂ ಸದಾ ಕಾಡುತ್ತಲೇ ಇದೆ. ಹೀಗೆ ನಮ್ಮ ಯೋಚನಾ ಲಹರಿಯನ್ನು ಹರಿಯಬಿಟ್ಟಾಗ ನಮಗೆ ತಟ್ಟನೆ ನೆನಪಾಗುವುದು ಈಗ ಚರ್ಚೆಯಲ್ಲಿರುವ ಚಾಟ್ ಜಿಪಿಟಿ ಹಾಗೂ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್). ಕೃತಕ ಬುದ್ಧಿಮತ್ತೆಯ ಬಗ್ಗೆ ಹೇಳಲು ಹೊರಟರೆ ಅದು ಮುಗಿಯುವಂಥದ್ದಲ್ಲ. ನಾನಿಲ್ಲಿ ಹೇಳಲು ಹೊರಟಿರುವುದು ಜಗತ್ತನ್ನೇ ಮೋಡಿ ಮಾಡಿದ “ಎಐ ಫೋಟೋ ಜನರೇಟರ್’ ಎಂಬ ಕಲಾಕಾರನ ಬಗ್ಗೆ.
ಏನಿದು ಎಐ ಫೋಟೋ ಜನರೇಟರ್?
ಎಂತಹ ದಡ್ಡ ಕೂಡ ತನ್ನ ಸೃಜನಶೀಲತೆಯಿಂದ ಹಾಗೂ ತನ್ನ ಭಾಷಾಜ್ಞಾನದ ಸಹಾಯದಿಂದ ಜಗತ್ಪ್ರಸಿದ್ಧ ಚಿತ್ರ ಕಲಾವಿದನನ್ನೂ ಮೀರಿಸುವಂತಹ ಚಿತ್ರಗಳನ್ನು ಕೆಲವೇ ಸೆಕೆಂಡುಗಳಲ್ಲಿ ರಚಿಸಬಲ್ಲ ಸಾಮರ್ಥ್ಯವಿರುವ ತಂತ್ರ ಜ್ಞಾನವೇ ಈ ಎ.ಐ. ಫೋಟೋ ಜನರೇಟರ್.
1950ರ ದಶಕದಲ್ಲಿ ಕಂಪ್ಯೂಟರೀಕೃತ ಚಿತ್ರ ರಚನೆ ಪ್ರಾರಂಭವಾಗಿತ್ತಾ ದರೂ ಯಾರಿಗೂ ಹೆಚ್ಚೇನು ತಿಳಿದಿರಲಿಲ್ಲ. ಜತೆಗೆ ಕಂಪ್ಯೂಟರ್ ಬಳಕೆ ದಾರರೂ ಕಡಿಮೆ ಸಂಖ್ಯೆಯಲ್ಲಿದ್ದರು. 1960-70ರ ದಶಕದಲ್ಲಿ ಈ ಕಂಪ್ಯೂಟರೀಕೃತ ಚಿತ್ರ ರಚನೆ ಮುನ್ನೆಲೆಗೆ ಬಂದಿತು. 1980- 90ರ ವೇಳೆಗಂತೂ ಇದು ವಿಶ್ವದೆಲ್ಲೆಡೆ ವ್ಯಾಪಿಸಲು ಪ್ರಾರಂಭವಾಯಿತು. ಕ್ರಮೇಣ 90ರ ದಶಕದ ಅನಂತರ ಗ್ರಾಫಿಕ್ ತಂತ್ರಜ್ಞಾನವೂ ಈ ಕ್ಷೇತ್ರಕ್ಕೆ ಕಾಲಿಟ್ಟು ತನ್ನದೇ ಪ್ರಾಬಲ್ಯವನ್ನು ಮೆರೆಯುತ್ತ ಬಂತು. ಆದರೆ ಇವುಗಳಿಗೆಲ್ಲ ಸ್ಪರ್ಧಾತ್ಮಕವಾದ ತಂತ್ರಜ್ಞಾನವೊಂದು ಬರುತ್ತದೆ ಎಂದು ಅಂದು ಯಾರೂ ಕೂಡ ಊಹಿಸಿರ ಲಾರರು!. ಅದುವೇ ಎಐ ಫೋಟೋ ಜನರೇಟರ್ ಅಥವಾ ಎಐ ಇಮೇಜ್ ಜನರೇಟರ್.
ಎಐ ಫೋಟೋ ಜನರೇಟರ್‌ಗಳು ಹೇಗೆ ಕೆಲಸವನ್ನು ನಿರ್ವಹಿಸುತ್ತವೆ?
ಈ ತಂತ್ರಜ್ಞಾನವು ಜನರೇಟಿವ್ ಅಡ್ವರ್ಸಿಯಲ್ ನೆಟ್‌ವರ್ಕ್ (GAN) ಎಂಬ ಒಂದು ಸುಧಾರಿತ ಯಂತ್ರ ಕಲಿಕಾ ಆಲ್ಗೊರಿಥಂ ನ ಸಹಾಯದಿಂದ ಫೋಟೋಗಳನ್ನು ರಚಿಸಿಕೊಡುತ್ತದೆ. ಈ ಜನರೇಟಿವ್ ಅಡ್ವರ್ಸಿಯಲ್ ನೆಟ್‌ವರ್ಕ್ ( GAN) ಗಳು ಒಂದು ಪ್ರೋಗ್ರಾಮ್ಡ್ ನೆಟ್‌ವರ್ಕ್ ಆಗಿದ್ದು, ಇದರಲ್ಲಿ ಅಸಂಖ್ಯಾತ “ಟೆಕ್ಸ್ಟ್ ಟು ಇಮೇಜ್’ ನ ಮಾದರಿಗಳನ್ನು ಅಥವಾ ಡೇಟಾಗಳನ್ನು ತುಂಬಿಡಲಾಗಿದೆ. ಹಾಗಾಗಿ ನಾವು ನಮಗೆ ಬೇಕಾದ ರೀತಿಯ ಫೋಟೋದ ಪ್ರಾಂಪ್ಟ್ (Prompt) ನ್ನು ಬರೆದ ಮರುಕ್ಷಣವೇ ಅದಕ್ಕೆ ತಕ್ಕುದಾದ ಫೋಟೋವನ್ನು ರಚಿಸಿಕೊಡುತ್ತದೆ.
ಕೇವಲ ಸೆಕೆಂಡುಗಳು ಸಾಕು!
ಈ ಎಐ ಫೋಟೋ ಜನರೇಟರ್‌ಗಳ ಸಹಾಯದಿಂದ ಫೋಟೋಗಳನ್ನು/ ಇಮೇಜ್‌ಗಳನ್ನು ರಚಿಸಲು ಕೇವಲ ಸೆಕೆಂಡುಗಳು ಸಾಕು ಎಂದರೆ ನೀವು ನಂಬುವಿರಾ? ಕಷ್ಟವಾದರೂ ನಂಬಲೇಬೇಕು! ಇದಕ್ಕೆ ಸಂಬಂಧಿಸಿದ ಯಾವುದೇ ಜಾಲತಾಣದಲ್ಲಿ, ಮೊದಲಿಗೆ ತಮ್ಮ ಇ-ಮೇಲ್‌ನಿಂದ ರಿಜಿಸ್ಟರ್ ಮಾಡಿಕೊಂಡು, ಬಳಿಕ ತಮಗಿಷ್ಟ ಬಂದ ಕಾಲ್ಪನಿಕ ಫೋಟೋಗಳನ್ನು ತಮಗೆ ಬೇಕಾದ ರೀತಿಯಲ್ಲಿ ರಚಿಸಬಹುದಾಗಿದೆ. ತಮಗೆ ಬೇಕಾದ ಚಿತ್ರಗಳ ಪ್ರಾಂಪ್ಟ್ (Prompt)- ಸಂಕ್ಷಿಪ್ತ ರೀತಿಯಲ್ಲಿ ಯಾವ ರೀತಿಯ ಚಿತ್ರ ಬೇಕೆಂದು ವಿವರಿಸಿ ಬರೆಯುವುದು) ಬರೆದು ಮುಂದುವರಿದರೆ ಸಾಕು, ನಿಮ್ಮ ಊಹೆಯನ್ನೂ ಮೀರಿಸುವಂತಹ ಚಿತ್ರಗಳು ನಿಮ್ಮ ಕಣ್ಣಮುಂದೆ ಬಂದು ನಿಲ್ಲುತ್ತವೆ.
ಹೆಚ್ಚಿದ ಬೇಡಿಕೆ
ಈಗ ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಇಂತಹ ನೂರಾರು ಜಾಲತಾಣಗಳು ಸಿಗುತ್ತದೆಯಾದರೂ ಮೊದಲು ಪ್ರಸಿದ್ಧಿಗೆ ಬಂದುದು ಇಂತಹ ಎಐ ಫೋಟೋ ಜನರೇಟರ್ ಎಂದರೆ ಅದು “ಮಿಡ್ ಜರ್ನಿ ಎಐ ಫೋಟೋ ಜನರೇಟರ್’. ಯಾಕೆಂದರೆ ಇದರಲ್ಲಿ ಇತರ ವೇದಿಕೆಗಳಿಗಿಂತ ಹೆಚ್ಚು ನಿಖರತೆ ಯಿಂದ ಕೂಡಿದ ಚಿತ್ರಗಳನ್ನು ರಚಿಸಬಹುದಾಗಿದೆ. ಪ್ರಾರಂಭದಲ್ಲಿ ಉಚಿತ ಸೇವೆ ನೀಡುತ್ತಿದ್ದ ವೇದಿಕೆಯು, ಜನರು ಅಶ್ಲೀಲ ಮತ್ತು ಕಾನೂನುಬಾಹಿರವಾದಂತಹ ಫೋಟೋಗಳನ್ನು ರಚಿಸಿ ವೇದಿಕೆಯನ್ನು ದುರುಪಯೋಗ ಪಡಿಸುತ್ತಿದ್ದುದು ಗಮನಕ್ಕೆ ಬಂದಾಗ ಹಾಗೂ ಎಐ ಫೋಟೋ ಜನರೇಟರ್‌ಗಳ ಬೇಡಿಕೆಯೂ ವೇಗವಾಗಿ ಹೆಚ್ಚಾಗುತ್ತಿರುವ ಕಾರಣ ಇದೀಗ ಮಾಸಿಕ, ವಾರ್ಷಿಕ ಚಂದಾದಾರಿಕೆಯನ್ನು ಪರಿಚಯಿಸಿದೆ. ಮಿಡ್ ಜರ್ನಿ ಎಐ ಗೆ ಸ್ಪರ್ಧೆ ನೀಡಲು ಉಚಿತವಾಗಿಯೂ ಸೇವೆ ನೀಡುವಂತಹ ಕೆಲವೇ ಕೆಲವು ವೇದಿಕೆಗಳೂ ಇವೆ. ಅವೆಂದರೆ, ಲಿಯೋನಾರ್ಡೋ ಎಐ., ಪಿಕ್ಸ್‌ಆರ್ಟ್ ಆ್ಯಪ್ ಹಾಗೂ ಇನ್ನಿತರ ಜಾಲತಾಣಗಳು. ಅಂದ ಹಾಗೆ ಈ ಎಐ ಫೋಟೋ ಜನರೇಟರ್‌ಗಳಿಂದ ಕೇವಲ ಹೊಸ ಫೋಟೋ ರಚಿಸಲು ಮಾತ್ರವೇ ಅಲ್ಲದೆ ನಮ್ಮ ಫೋಟೋಗಳನ್ನು ಸಹ ಎಡಿಟ್ ಮಾಡುವ ಆಯ್ಕೆಯೂ ಇದ್ದು ಅದು ಕೂಡ ಬಹಳ ಜನಪ್ರಿಯವಾಗಿದೆ.
ಆತಂಕ ಬೇಡ
ಇಂತಹ ತಂತ್ರಜ್ಞಾನದಿಂದ ರಚಿಸಲ್ಪಟ್ಟ ಅಥವಾ ಎಡಿಟ್ ಮಾಡಲ್ಪಟ್ಟ ಫೋಟೋ ಗಳು ಹೆಚ್ಚು ನಿಖರತೆ ಮತ್ತು ನೈಜ ರೀತಿಯಲ್ಲಿ ಕಾಣುವುದರಿಂದ ನೈಜ ಮತ್ತು ನಕಲಿ ಫೋಟೋಗೂ ವ್ಯತ್ಯಾಸ ತಿಳಿಯದಂತಾದ ಪ್ರಸಂಗಗಳೂ ಸಾಕಷ್ಟಿವೆ. ತಂತ್ರಜ್ಞಾನವನ್ನು ನಾವು ನಿಯಂತ್ರಿಸಬೇಕೇ ವಿನಾ ಅದು ನಮ್ಮನ್ನು ನಿಯಂತ್ರಿಸುವಂತಾಗಬಾರದು. ತಂತ್ರಜ್ಞಾನದ ನವನವೀನ ಆವಿಷ್ಕಾರದಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ವಿಶ್ವದೆಲ್ಲೆಡೆಯ ಜನರನ್ನು ಕಾಡತೊಡಗಿದೆ.
ಕಂಪ್ಯೂಟರ್, ಮೊಬೈಲ್ ಫೋನ್‌ನ ಪರಿಚಯದ ಆರಂಭದಲ್ಲಿ ಇಂತಹ ಮಾತುಗಳು ಕೇಳಿಬಂದಿದ್ದವು. ಬಳಿಕ ಜನರು ಅವುಗಳೊಂದಿಗೆ ತಾವೂ ಹೊಂದಿಕೊಂಡು ಹೋದ ಹಾಗೆಯೇ, ಈ ಎಐ ತಂತ್ರ ಜ್ಞಾನಕ್ಕೂ ಹೊಂದಿಕೊಳ್ಳುವ ಬಗ್ಗೆ ಯಾವುದೇ ಸಂದೇಹ ಬೇಡ. ಯಾಕೆಂದರೆ ಇಂತಹ ವಿಶೇಷ, ವಿನೂತನ ತಂತ್ರಜ್ಞಾನಗಳನ್ನು ಕಂಡುಹಿಡಿದ ಮಾನವನ ಬುದ್ಧಿವಂತಿಕೆಯನ್ನು ಮೀರಿಸುವಂಥದ್ದು ಯಾವುದಿದೆ?, ಮಾನವನ ಮೆದುಳು ವಿಶೇಷ ಸಾಮರ್ಥ್ಯವನ್ನು ಹೊಂದಿದ್ದು, ತಾನೇ ಕಂಡುಹಿಡಿದ ತಂತ್ರಜ್ಞಾನಗಳ ಬುದ್ಧಿಮತ್ತೆಯನ್ನು ಮೀರಿಸಲು ಸಾಧ್ಯವಿಲ್ಲವೇ?. ಒಂದು ವೇಳೆ ಎಐ ತಂತ್ರಜ್ಞಾನವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದಕ್ಕೆ ಮಿಗಿಲಾದ ಮತ್ತೂಂದು ತಂತ್ರಜ್ಞಾನವನ್ನು ಮಾನವ ಆವಿಷ್ಕರಿಸಿದರೂ ಅದರಲ್ಲಿ ಅಚ್ಚರಿ ಏನೂ ಇಲ್ಲ! ನೀವೇನಂತೀರಿ?
~ ಅವನೀಶ್ ಭಟ್, ಸವಣೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.