ಒಡಲು ತುಂಬಿದ ಜಲಾಶಯ
Team Udayavani, Jul 29, 2023, 12:23 AM IST
ಅಣೆಕಟ್ಟುಗಳಿಗೆ ಹೆಚ್ಚಾದ ಒಳಹರಿವು ಬಹುತೇಕ ಡ್ಯಾಂಗಳು ಭರ್ತಿಗೆ ಸನಿಹ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ಬಂದಿವೆ. ಜುಲೈ ತಿಂಗಳಿನ ಮೊದಲ ವಾರದಲ್ಲಿ ಮಳೆ ಇಲ್ಲದೆ ಆತಂಕದ ಪರಿಸ್ಥಿತಿ ಇತ್ತು. ಆದರೆ ಅನಂತರ ಸುರಿದಭರ್ಜರಿ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಭರ್ತಿಯಾಗುವ ಎಲ್ಲ ಸಾಧ್ಯತೆಗಳಿವೆ.
ಬೆಂಗಳೂರು/ಹುಬ್ಬಳ್ಳಿ: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಜಲಾಶಯಗಳಿಗೆ ಉತ್ತಮ ಒಳಹರಿವು ಕಂಡುಬರುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಇತ್ತ ಮಲೆನಾಡು, ಕರಾವಳಿ ಭಾಗದಲ್ಲಿಯೂ ಸುರಿದ ಉತ್ತಮ ಮಳೆಯಿಂದ ಜಲಾಶಯಗಳಿಗೆ ಜೀವಕಳೆ ಬಂದಿದೆ.
ದೇಶದ 2ನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಗೆ ಶುಕ್ರವಾರ 1,38,722 ಕ್ಯುಸೆಕ್ ನೀರು ಹರಿದು ಬಂದಿದೆ. ಸಂಜೆಯೇ 26 ಕ್ರಸ್ಟ್ ಗೇಟ್‌ಗಳ ಮೂಲಕ 1.25 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗಿದೆ.
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯ ಭರ್ತಿಗೆ ಇನ್ನು ಕೇವಲ 13 ಅಡಿ ಮಾತ್ರ ಬಾಕಿ ಉಳಿದಿದೆ. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಹಾರಂಗಿ ಜಲಾಶಯವೂ ಭರ್ತಿಯಾಗಿದ್ದು, ಇದರಿಂದ ಹೆಚ್ಚಾದ ನೀರನ್ನು ಹೊರ ಬಿಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿಗೆ ನಿರೀಕ್ಷಿತ ಒಳಹರಿವು ಬಂದಿಲ್ಲ. ಅತ್ತ ಭದ್ರಾ ಜಲಾಶಯ ತುಂಬಲು 30 ಟಿಎಂಸಿ ನೀರು ಬರಬೇಕಿದೆ. ಉಳಿದಂತೆ ತುಂಗಾ, ಅಂಜನಾಪುರ, ಅಂಬ್ಲಿಗೋಳ; ಬೆಳಗಾವಿ ಜಿಲ್ಲೆಯ ವಿವಿಧ ಜಲಾಶಯಗಳು, ಉತ್ತರ ಕನ್ನಡದ ಸೂಪಾ ಜಲಾಶಯ ಕೂಡ ಬಹುತೇಕ ಭರ್ತಿಯಾಗಿವೆ. ಕದ್ರಾ ಅಣೆಕಟ್ಟಿನಿಂದ 50 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಕೊಡಸಳ್ಳಿಯಲ್ಲಿ 69.25 ಮೀ. ನೀರು ಸಂಗ್ರಹವಿದೆ. ಗೇರುಸೊಪ್ಪದಲ್ಲಿ ಜು. 28ರಂದು 49.57 ಮೀ. ನೀರು ಸಂಗ್ರಹವಾಗಿದೆ.
ವಾರದಲ್ಲಿ ತುಂಗಭದ್ರೆ ಭರ್ತಿ ಸಾಧ್ಯತೆ
ಕೊಪ್ಪಳ ಜಿಲ್ಲೆಯ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವು ಕೆಲವು ದಿನಗಳಿಂದ ಏರಿಳಿತವಾಗುತ್ತಿದ್ದು, ಪ್ರತೀ ದಿನ 6-7 ಟಿಎಂಸಿ ನೀರು ಡ್ಯಾಂಗೆ ಹರಿದು ಬರುತ್ತಿದೆ. ಇನ್ನೊಂದು ವಾರದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ. ಮಲೆನಾಡು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರೆಗೆ ಕಳೆ ಬರಲಾರಂಭಿಸಿದೆ. ಕಳೆದ ಜೂನ್‌ನಲ್ಲಿ ಡ್ಯಾಂನಲ್ಲಿ ನೀರಿಲ್ಲದೆ ಭಣಗುಡುವ ಸ್ಥಿತಿಗೆ ತಲುಪಿತ್ತು. ಡ್ಯಾಂನಲ್ಲಿ ಪ್ರಸ್ತುತ 1,619 ಅಡಿ ನೀರು ಸಂಗ್ರಹವಾಗಿದೆ.
ತುಂಬಿದ ಹಾರಂಗಿ ಜಲಾಶಯ
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ತುಂಬಿದೆ. ಶುಕ್ರವಾರ ನೀರಿನ ಮಟ್ಟ 2,854.77 ಅಡಿ ಇತ್ತು. ಈ ಡ್ಯಾಂನ ಗರಿಷ್ಠ ಮಟ್ಟ 2859 ಅಡಿ. ಒಳಹರಿವು 9926 ಕ್ಯುಸೆಕ್ ಇದ್ದರೆ, ಹೊರಹರಿವು 5875 ಕ್ಯುಸೆಕ್ ಇದೆ.
6 ಸಾವಿರ ಕ್ಯುಸೆಕ್ ಬಿಡುಗಡೆ
ಕಪಿಲಾ ಜಲಾಶಯದಲ್ಲಿ ಗುರುವಾರ ರಾತ್ರಿ 9 ಗಂಟೆಗೆ ನೀರಿನ ಒಳ ಹರಿವು 21,300 ಕ್ಯುಸೆಕ್ ಇತ್ತು. ಜಲಾಶಯದಲ್ಲಿ 2282.46 ಅಡಿ ನೀರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.