Feticide: ಮತ್ತೂಂದು ಹೆಣ್ಣು ಭ್ರೂಣ ಹತ್ಯೆ ತಂಡ ಸಕ್ರಿಯ
Team Udayavani, Dec 4, 2023, 12:26 AM IST
ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಪ್ರಕರಣ ಮತ್ತೂಂದು ರೋಚಕ ತಿರುವು ಪಡೆದುಕೊಂಡಿದೆ. ಬೈಯಪ್ಪನಹಳ್ಳಿ ಪೊಲೀಸರ ತನಿಖೆ ವೇಳೆ ಮೈಸೂರಿನ ಡಾ| ಚಂದನ್ ಬಲ್ಲಾಳ್, ಮಧ್ಯವರ್ತಿ ಶಿವಲಿಂಗೇಗೌಡ ತಂಡ ಮಾತ್ರವಲ್ಲ, ರಾಜ್ಯದಲ್ಲಿ ಮತ್ತೂಂದು ಹೆಣ್ಣು ಭ್ರೂಣ ಹತ್ಯೆ ತಂಡ ಸಕ್ರಿಯವಾಗಿದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಇದೇ ಕಾರಣಕ್ಕೆ ಮೈಸೂರಿನ ಹಳೇ ಆಸ್ಪತ್ರೆಯೊಂದರ ಶುಶ್ರೂಷಕಿ ಉಷಾರಾಣಿ (35)ಯನ್ನು ಬಂಧಿಸಲಾಗಿದೆ. ಈಕೆಯ ವಿಚಾರಣೆಯಲ್ಲಿ ಚಂದನ್ ಬಲ್ಲಾಳ್, ಚೆನ್ನೈನ ಮಕ್ಕಳ ತಜ್ಞನ ತಂಡ ಮಾತ್ರವಲ್ಲ. ಮೈಸೂರಿನ ಪುಟ್ಟರಾಜು ಹಾಗೂ ಮಂಡ್ಯದ ಧನಂಜಯ್ ಎಂಬವರ ತಂಡವೂ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಸದ್ಯ ಪುಟ್ಟರಾಜು ಮತ್ತು ಧನಂಜಯ್ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾರೆ.
ಮೈಸೂರಿನ ಮೊದಲ ಆಸ್ಪತ್ರೆ ಎಂದು ಹೇಳಲಾದ ಆಸ್ಪತ್ರೆಯೊಂದರಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉಷಾರಾಣಿಗೆ ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಕ್ಯಾಟರಿಂಗ್ ಮಾಡುತ್ತಿದ್ದ ಪುಟ್ಟರಾಜು ಮತ್ತು ಮಂಡ್ಯದಲ್ಲಿ ಪ್ರಯೋಗಾಲಯ(ಲ್ಯಾಬ್)ದ ಟೆಕ್ನೀಷಿಯನ್ ಧನಂಜಯ್ ಪರಿಚಯವಾಗಿದೆ. ಈ ವೇಳೆ ಹೆಣ್ಣು ಭ್ರೂಣ ಗರ್ಭಪಾತ ಮಾಡಿಸಿಕೊಟ್ಟರೆ ಪ್ರತೀ ಕೇಸ್‌ಗೆ 2-3 ಸಾವಿರ ರೂ. ಕೊಡುವುದಾಗಿ ಇಬ್ಬರ ನಡುವೆ ಒಪ್ಪಂದವಾಗಿತ್ತು. ಅದರಂತೆ ಧನಂಜಯ್, ಮಂಡ್ಯದ ಲ್ಯಾಬ್‌ನಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿ ಗರ್ಭಪಾತ ಬಯಸುವ ಪೋಷಕರನ್ನು ಪುಟ್ಟರಾಜುಗೆ ಸಂಪರ್ಕಿಸುತ್ತಿದ್ದ. ಈತ ಉಷಾರಾಣಿ ಬಳಿ ಕಳುಹಿಸಿ ಗರ್ಭಪಾತ ಮಾಡಿಸುತ್ತಿದ್ದ. ಈಕೆ ಪ್ರತೀ ತಿಂಗಳು 4-5 ಗರ್ಭಪಾತ ಮಾಡಿಸುತ್ತಿದ್ದಳು ಎಂಬುದು ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ.
ಆಸ್ಪತ್ರೆ ವೈದ್ಯರಿಗೆ ಗೊತ್ತಿಲ್ಲ!
ಮತ್ತೂಂದೆಡೆ ಉಷಾರಾಣಿ ಕೃತ್ಯಆಕೆ ಕೆಲಸ ಮಾಡುವ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಗೊತ್ತಿಲ್ಲ. ಪುಟ್ಟರಾಜು ಸೂಚನೆ ಮೇರೆಗೆ ಆಸ್ಪತ್ರೆಗೆ ಕರೆಸಿಕೊಳ್ಳುತ್ತಿದ್ದ ಉಷಾರಾಣಿ, ಗರ್ಭಿಣಿಯರಿಗೆ ಇದೇ ರೀತಿ ಹೇಳಬೇಕೆಂದು ಮೊದಲೇ ಸೂಚಿಸುತ್ತಿದ್ದಳು. ಅದೇ ರೀತಿ ವೈದ್ಯರ ಮುಂದೆ ಕರೆದೊಯ್ದು ಸುಳ್ಳುಗಳನ್ನು ಹೇಳಿ, ಗರ್ಭಪಾತ ಮಾಡಿಸುತ್ತಿದ್ದಳು.
ಈ ಮಧ್ಯೆ ಕೆಲವರು ಮದುವೆಯಾಗಿ ಒಂದೆರಡು ವರ್ಷಗಳಾಗಿದ್ದು, ಈಗಲೇ ಮಕ್ಕಳು ಬೇಡ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಹಾಗೂ ಈಗಾಗಲೇ ಎರಡು ಹೆಣ್ಣು ಮಕ್ಕಳಾಗಿವೆ. ಮತ್ತೂಂದು ಹೆಣ್ಣು ಎಂದು ಗೊತ್ತಾಗಿದೆ. ಹೀಗಾಗಿ ಗರ್ಭಪಾತ ಮಾಡಿ ಎಂದು ಸುಳ್ಳು ಹೇಳಿಸುತ್ತಿದ್ದಳು. ಆದರೆ, ವೈದ್ಯರು ಆ ಪೋಷಕರಿಗೆ ಸೂಕ್ತ ಆಪ್ತಸಮಾಲೋಚನೆ ಮಾಡಿದರೂ, ಗರ್ಭಿಣಿ ಗರ್ಭಪಾತಕ್ಕೆ ಒತ್ತಾಯಿಸಿದರೆ, ಕಾನೂನಿನ ಪ್ರಕಾರ 24 ವಾರದ ಒಳಗಿರುವ ಮಗುವನ್ನು ಗರ್ಭಪಾತ ಮಾಡಲು ಅವಕಾಶ ಇರುವುದರಿಂದ ಗರ್ಭಪಾತ ಮಾಡುತ್ತಿದ್ದರು. ಆದರೆ, ಈ ಕೃತ್ಯದ ಹಿಂದೆ ಉಷಾರಾಣಿಯ ಮಾಸ್ಟರ್ ಮೈಂಡ್ ಇದೆ ಎಂಬುದು ವೈದ್ಯರಿಗೆ ಗೊತ್ತಿಲ್ಲ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಗರ್ಭಿಣಿಯಿಂದ ಧನಂಜಯ್ ಮತ್ತು ಪುಟ್ಟರಾಜು, ಸಿರಿವಂತರ ಬಳಿ 50-60 ಸಾವಿರ ರೂ., ಮಧ್ಯಮ ವರ್ಗದವರ ಬಳಿ 20-30 ಸಾವಿರ ರೂ. ಪಡೆಯುತ್ತಿದ್ದರು. ಮತ್ತೂಂದು ಸ್ಫೋಟಕ ವಿಚಾರವೆಂದರೆ, ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿವಲಿಂಗೇಗೌಡನ ಮೂಲಕವೂ ಪುಟ್ಟರಾಜು ವ್ಯವಹಾರ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆ ವೈದ್ಯರಿಗೆ ನೋಟಿಸ್
ಆರೋಪಿ ಉಷಾರಾಣಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ ವೈದ್ಯರಿಗೆ ನೋಟಿಸ್ ನೀಡಿದ್ದು, ಇದುವರೆಗಿನ ಗರ್ಭಪಾತ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪ್ರಾಥಮಿಕವಾಗಿ ಆಸ್ಪತ್ರೆಯ ತಪ್ಪು ಕಂಡುಬಂದಿಲ್ಲ. ಆದರೆ, ಉಷಾರಾಣಿ ಜತೆ ಬೇರೆ ಯಾರಾದರೂ ಆಸ್ಪತ್ರೆಯ ವೈದ್ಯರು ಶಾಮೀಲಾಗಿದ್ದಾರೆಯೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಷಾರಾಣಿ ಬಂಧನ
ಚಂದನ್ ಬಲ್ಲಾಳ್ ಬಂಧನವಾಗುತ್ತಿದ್ದಂತೆ ಪುಟ್ಟರಾಜು ಮತ್ತು ಧನಂಜಯ್ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ಪ್ರಕರಣ ಸಂಬಂಧ ವಿಚಾರಣೆಗೆ ಕರೆದಾಗ ಈ ಇಬ್ಬರೇ ಪ್ರತ್ಯೇಕವಾಗಿ ಗರ್ಭಪಾತದ ತಂಡ ಕಟ್ಟಿಕೊಂಡಿರುವುದು ಗೊತ್ತಾಗಿದೆ. ಪುಟ್ಟರಾಜು ಹೇಳಿಕೆ ಆಧರಿಸಿ ಉಷಾರಾಣಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.