ವ್ಯಾಪಾರಕ್ಕೆ ಹಿಂದೇಟು: ಎಪಿಎಂಸಿ ಮತ್ತೆ ಸ್ತಬ್ಧ? ಠೇವಣಿ ಹಿಂಪಡೆಯುತ್ತಿರುವ ವರ್ತಕರು
Team Udayavani, Feb 28, 2022, 2:32 PM IST
ಸುರತ್ಕಲ್: ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಯಾರ್ಡ್ ಇರುವ ಬೈಕಂಪಾಡಿಯಲ್ಲಿ ಕೊರೊನಾದ 2 ವರ್ಷಗಳಲ್ಲಿ ವ್ಯಾಪಾರಿಗಳು, ಲಾರಿಗಳು, ಕಾರ್ಮಿಕರಿಂದ ಗಿಜಿಗುಡುತ್ತಿದ್ದ ಎಪಿಎಂಸಿ ಮತ್ತೆ ಸ್ತಬ್ಧವಾಗುತ್ತಾ ಸಾಗಿದೆ.
ಕಲ್ಲಾಪುವಿನಲ್ಲಿ ಖಾಸಗಿ ರಖಂ ವ್ಯಾಪಾರ ಕೇಂದ್ರ ಆರಂಭವಾದ ಬೆನ್ನಿಗೆ ಎಪಿಎಂಸಿಯಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಮೂರಂಕೆಯಿಂದ ಎರಡಂಕೆಗೆ ಕುಸಿದಿದ್ದು, ಮತ್ತೆ 30 ಮಂದಿ ಠೇವಣಿ ವಾಪಾಸ್ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಕೊರೊನಾ ಅವಧಿಯಲ್ಲಿ 55 ತಿಂಗಳುಗಳ ಒಪ್ಪಂದದಡಿ 216 ವ್ಯಾಪಾರಿಗಳಿಗೆ ಗೋದಾಮು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ 118 ಮಂದಿ ನಿಗದಿತ ಸಮಯದಲ್ಲಿ ಎಪಿಎಂಸಿ ಸೂಚಿಸಿದ ಠೇವಣಿ ನೀಡದೇ ಇದ್ದುದರಿಂದ ಅವರ ಗೋದಾಮು ಮುಟ್ಟುಗೋಲು ಜತೆಗೆ ಬುಕಿಂಗ್ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಉಳಿದಂತೆ 90 ವ್ಯಾಪಾರಿಗಳು 1.56 ಲ.ರೂ. ಠೇವಣಿ ನೀಡಿ ವ್ಯಾಪಾರ ವಹಿವಾಟು ಆರಂಭಿಸಿದ್ದರು. ಇದೀಗ ಬೆರಳೆಣಿಕೆಯಷ್ಟು ವ್ಯಾಪಾರಿಗಳು ರಖಂ ವಹಿವಾಟು ನಡೆಸುತ್ತಿದ್ದು, ಮತ್ತೆ 25 ಮಂದಿ ಠೇವಣಿ ಹಿಂದುರುಗಿಸುವಂತೆ ಕೋರಿದ್ದಾರೆ. ಹಲವರು ನಾಮಕಾವಸ್ತೆಗೆ ಗೋದಾಮು ಉಳಿಸಿಕೊಂಡು ವ್ಯಾಪಾರ ಸ್ಥಗಿತಗೊಳಿಸಿದ್ದಾರೆ.
ಮೂಲಸೌಕರ್ಯದ ಕೊರತೆ
ಎಪಿಎಂಸಿಯಲ್ಲಿ ಮೂಲಸೌಕರ್ಯದ ಕೊರತೆ, ಮಂಗಳೂರಿನಿಂದ ದೂರ ಇರುವ ಬಗ್ಗೆ ವ್ಯಾಪಾರಿಗಳಲ್ಲಿ ಅಸಮಾಧಾನವಿತ್ತು. ಕೊರೊನಾ ಸಂದರ್ಭ ಜನಸಂದಣಿ ಕಡಿಮೆ ಮಾಡಲು ಬೈಕಂಪಾಡಿಯ ಎಪಿಎಂಸಿಯ ಯಾರ್ಡ್ ಅನ್ನು ಆಯ್ಕೆ ಮಾಡಿ ಜಿಲ್ಲಾಡಳಿತ ವ್ಯಾಪಾರಿಗಳ ಮನವೊಲಿಸಿ ಕಳಿಸಿತ್ತು. ಆದರೆ ಮಳೆಗಾಲದಲ್ಲಿ ಗೋದಾಮು ಸೋರಿಕೆ, ಭದ್ರತೆ ಕೊರತೆ, ರಸ್ತೆ ಸಮಸ್ಯೆ, ಹಾವು ಕಾಟ ಹೀಗೆ ನಾನಾ ಕಾರಣದಿಂದ ಗೊಂದಲ ವ್ಯಾಪಾರಿಗಳ ಮನದಲ್ಲಿದ್ದುದರಿಂದ, ಎಪಿಎಂಸಿಯ ಕಠಿನ ಕಾಯ್ದೆಗಳು ಸಮಸ್ಯೆ ತಂದೊಡ್ಡಿದ್ದರಿಂದ ವ್ಯಾಪಾರ ಮಾಡಲು ಹಿಂದೇಟು ಹಾಕಿದ್ದರು. ಈ ಸಂದರ್ಭ ಹೊಸ ವ್ಯಾಪಾರಿಗಳಿಗೆ ಅವಕಾಶ ನೀಡಿ ಹಣ್ಣು, ತರಕಾರಿ ರಖಂ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇದೀಗ ಇಲ್ಲಿ ಹೊಸದಾಗಿ ವ್ಯಾಪಾರ ಆರಂಭಿಸಿದವರು ಮಾತ್ರ ಬೆರಳೆಣಿಕೆ ಮಂದಿ ಉಳಿದಿದ್ದಾರೆ.
ವ್ಯವಸ್ಥೆ ಮಾಡಿದ್ದರೂ ಹಲವರ ಸ್ಥಳಾಂತರ
ಕೋವಿಡ್ ಸಂದರ್ಭ ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ಹಣ್ಣು, ತರಕಾರಿ ಸಗಟು ವ್ಯಾಪಾರಿ ಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಮೂಲಸೌಕರ್ಯ ಕೊರತೆ ಇದ್ದಾಗ ಎಪಿಎಂಸಿ ಸೌಕರ್ಯ ಒದಗಿಸಿದ್ದೆವು. ಆದರೆ ಗೋದಾಮನ್ನು ಕ್ರಮಬದ್ಧವಾಗಿ 2004ರ ಹಂಚಿಕೆ ನಿಯಮಾ ವಳಿ ಅನ್ವಯ ನೀಡಿದ್ದೆವು. ಈ ಬಗ್ಗೆ 216 ಮಂದಿ ಭಾಗವಹಿಸಿದ್ದರು. ಕೆಲವೊಂದು ಭಿನ್ನಾಭಿಪ್ರಾಯದಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಬೈಕಂಪಾಡಿ ಎಪಿಎಂಸಿಯಲ್ಲಿ ಸೆಂಟ್ರಲ್ ಮಾರ್ಕೆಟ್‌ಗಿಂತಲೂ ಒಳ್ಳೆ ವ್ಯಾಪಾರ ಆಗುವ ಎಲ್ಲ ಅವಕಾಶವಿತ್ತು. ಆದರೆ ಕಲ್ಲಾಪು ಪ್ರದೇಶದಲ್ಲಿ ಖಾಸಗಿ ಮಾರ್ಕೆಟ್ ಆರಂಭಗೊಂಡ ದ್ದರಿಂದ ಹಲವರು ಅಲ್ಲಿಗೆ ಹೋಗಿದ್ದಾರೆ. ವ್ಯಾಪಾರಸ್ಥರ ವಿನಂತಿ ಮೇರೆಗೆ ಎಪಿಎಂಸಿ ಯಿಂದ 8 ಕೋ. ರೂ. ವೆಚ್ಚದಲ್ಲಿ ಮಾದರಿ ಮಾರ್ಕೆಟ್ ನಿರ್ಮಿಸಿಕೊಡುವುದಾಗಿ ಹೇಳಿದ್ದೆವು. ಆದರೆ ಕಾಣದ ಕೈಗಳು ಇಲ್ಲವೇ ಗುಂಪುಗಾರಿಕೆಯಿಂದ ಹೊರ ಹೋಗಿದ್ದಾರೆ. ಎಪಿಎಂಸಿಯ ಕಠಿನ ನೀತಿಯ ನಡುವೆ ವ್ಯಾಪಾರಿ ಗಳ ಹಿತರಕ್ಷಣೆಗಾಗಿ ಎಲ್ಲ ವ್ಯವಸ್ಥೆ ಮಾಡಿದ್ದರೂ ಹಲವರು ಸ್ಥಳಾಂತರವಾಗಿದ್ದಾರೆ. ಹಲವರು ಎಪಿಎಂಸಿಯ ಮನವಿ ಹೊರತಾಗಿಯೂ ಕರಾರುಪತ್ರಮಾಡಿಕೊಳ್ಳದೆ ನಿಯಮ ಮೀರಿ ವರ್ತಿಸಿದ್ದು, ಅವರ ಡಿಪಾಸಿಟ್ ಅಂದಾಜು 35 ಲಕ್ಷ ರೂ,ಗಳನ್ನು ಸಮಿತಿ ಮುಟ್ಟುಗೋಲು ಹಾಕಿ ಕೊಂಡಿದೆ. ಕರಾರುಪತ್ರ ಮಾಡಿದ್ದ 28 ಜನ ವ್ಯಾಪಾರ ಆಸಕ್ತಿ ತೋರದೆ ಠೇವಣಿ ವಾಪಾಸಿಗೆ ಅರ್ಜಿ ಸಲ್ಲಿಸಿದ್ದು, ಶೇ. 50ರಷ್ಟು ಹಿಂದಿರುಗಿಸಿದ್ದೇವೆ. ಉಳಿದವರು ವ್ಯಾಪಾರ ಮಾಡುತ್ತಿದ್ದಾರೆ.
-ಕೃಷ್ಣರಾಜ ಹೆಗ್ಡೆ, ಅಧ್ಯಕ್ಷರು ಎಪಿಎಂಸಿ
ಹೊಸ ಮಾರುಕಟ್ಟೆ ಬಹಿರಂಗ ಏಲಂ?
8 ಕೋಟಿ ರೂ. ವೆಚ್ಚದಲ್ಲಿ ಇದೀಗ ಹೊಸ ವ್ಯಾಪಾರ ಮಾಡಲು ಕಟ್ಟಡ ಹೆದ್ದಾರಿ ರಸ್ತೆಯಂಚಿನಲ್ಲಿ ಅಯಕಟ್ಟಿನ ಸ್ಥಳದಲ್ಲಿ ನಿರ್ಮಾಣವಾಗುತ್ತಿದೆ. ರಖಂ ವ್ಯಾಪಾರಿಗಳು ಆಸಕ್ತಿ ತೋರದೆ ಹೊರ ನಡೆದ ಕಾರಣ, ಇದೀಗ ನೂತನ ಕಟ್ಟಡವನ್ನು ಸರಕಾರಕ್ಕೆ ಕೋರಿಕೆ ಸಲ್ಲಿಸಿ ಬಹಿರಂಗ ಏಲಂ ಮಾಡುವ ಮೂಲಕ ಹೊಸಬರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಉಳಿದ ಗೋದಾಮುಗಳಂತೆ ಸರಕಾರದ ಹಣ ಪೋಲಾಗದಂತೆ ಕ್ರಮ ಕೈಗೊಳ್ಳಲು ಎಪಿಎಂಸಿ ನಿರ್ಧರಿಸಿದೆ.
– ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.