5-6 ತಿಂಗಳು ಸಾಲ ವಿನಾಯಿತಿಗೆ ಸರಕಾರಕ್ಕೆ ಮನವಿ
ಸಾಲದ ಸುಳಿಯಲ್ಲಿ ಮೀನುಗಾರರು
Team Udayavani, Apr 21, 2020, 5:55 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ಈ ವರ್ಷವಿಡೀ ಮೀನುಗಾರಿಕೆಗೆ ಹಿಂದೆಂದೂ ಕಾಣದ ರೀತಿಯಲ್ಲಿ ಹೊಡೆತ ಬಿದ್ದಿದ್ದು, ಇದೇ ವೃತ್ತಿಯನ್ನು ನಂಬಿಕೊಂಡು ಲಕ್ಷಾಂತರ ರೂ. ಸಾಲ ಮಾಡಿರುವ ಮೀನುಗಾರರು, ಮೀನುಗಾರ ಕಾರ್ಮಿಕರು ಸಾಲ ತೀರಿಸಲಾಗದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಇದರಿಂದ ಮೀನುಗಾರರ ಸಾಲ ಮರು ಪಾವತಿಗೆ 5-6 ತಿಂಗಳ ಕಾಲ ವಿನಾಯಿತಿ ನೀಡಬೇಕು ಎನ್ನುವ ಮನವಿಯನ್ನು ಸರಕಾರದ ಮುಂದಿಟ್ಟಿದ್ದಾರೆ.
ಮೀನಿನ ಬರ, ಹವಾಮಾನ ವೈಪರೀತ್ಯ, ಆಗಾಗ ಉಂಟಾಗುತ್ತಿರುವ ಚಂಡಮಾರುತ, ಈಗ ಕೊರೊನಾ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಂತಾಗಿದೆ.
ಸ್ವ-ಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು, ಖಾಸಗಿ ಬ್ಯಾಂಕ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಹೆಚ್ಚಿನ ಮೀನುಗಾರರು ಸಾಲ ಪಡೆದಿದ್ದಾರೆ. ಆದರೆ ಈಗ ಮೀನುಗಾರರ ಸಾಲ ಮರು ಪಾವತಿಗೆ 3 ತಿಂಗಳ ಕಾಲ ವಿನಾಯಿತಿ ನೀಡಿದ್ದಾರೆ. ಈಗಿನ್ನು ಯಾಂತ್ರೀಕೃತ ಮೀನುಗಾರಿಕೆಗೆ ಮೇಯಲ್ಲಿ ಅವಕಾಶ ನೀಡಿದರೂ ಒಂದು ತಿಂಗಳು ಮಾಡಬಹುದು. ಅದು ಕೂಡ ಕಾರ್ಮಿಕರೆಲ್ಲ ಊರಿಗೆ ಹೋಗಿರುವುದರಿಂದ ಕಷ್ಟ. ಆ ಬಳಿಕ ಮತ್ತೆ 57 ದಿನಗಳ ಕಾಲ ರಜೆ ಇರುತ್ತದೆ. ಅಲ್ಲಿಯವರೆಗೆ ಮೀನುಗಾರರಿಗೆ ಯಾವುದೇ ಆದಾಯವಿಲ್ಲ. ಹಾಗಿರು ವಾಗ ಸಾಲ ಪಾವತಿ ಮಾಡುವುದಾದರೂ ಹೇಗೆ ಎನ್ನುವುದು ಮೀನುಗಾರರ ಪ್ರಶ್ನೆ.
ಸಬ್ಸಿಡಿ ಹಣವೂ ಸಿಗುತ್ತಿಲ್ಲ
ಡಿಸೆಂಬರ್‌ವರೆಗೆ ಮಾತ್ರ ಡೀಸೆಲ್ ಸಬ್ಸಿಡಿ ಹಣ ಮೀನುಗಾರರ ಖಾತೆಗಳಿಗೆ ಪಾವತಿಯಾಗಿದ್ದು, ಅಲ್ಲಿಂದ ಈವರೆ ಗಿನದ್ದು ಬಾಕಿಯಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 1,600 ಮೀನು ಗಾರರಿಗೆ 7 ಕೋ.ರೂ. ಹಾಗೂ ದ.ಕ. ಜಿಲ್ಲೆಯಲ್ಲಿ 953 ಮೀನುಗಾರರಿಗೆ 6.32 ಕೋ.ರೂ. ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ನಾಡದೋಣಿಗಳಿಗೂ ಕೂಡ ಸಬ್ಸಿಡಿ ಸೀಮೆಎಣ್ಣೆ ಅಗತ್ಯದಷ್ಟು ಪೂರೈಕೆಯಾಗುತ್ತಿಲ್ಲ.
ಕಾರ್ಮಿಕರ ಸಂಕಷ್ಟ
ಮೀನುಗಾರಿಕೆಯೆಂದರೆ ಮೀನು ಗಾರರು ಮಾತ್ರವಲ್ಲ ಬೋಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಮಹಿಳಾ ಮೀನು ಮಾರಾಟಗಾರರು, ಐಸ್ ಪ್ಲಾಂಟ್, ಫಿಶ್ ಮಿಲ್‌ಗಳಲ್ಲಿ ಕೆಲಸ ನಿರ್ವಹಿಸುವ ಸಾವಿರಾರು ಮಂದಿ ಕಾರ್ಮಿಕರಿದ್ದಾರೆ. ಇವರೆಲ್ಲ ಮೀನುಗಾರಿಕೆಯಿಲ್ಲದೆ ಸಂಕಷ್ಟ ದಲ್ಲಿದ್ದಾರೆ. ಒಂದೊಂದು ಬೋಟ್‌ಗಳಲ್ಲಿಯೇ 30-40 ಮಂದಿ ಇರುತ್ತಾರೆ.
ಶೀಘ್ರ ನಿರ್ಧಾರ: ಸಚಿವ ಕೋಟ
ಈಗಾಗಲೇ ಕೈರಂಪಣಿ, ಮೋಟುಬಲೆ ಸಹಿತ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಆದರೆ ಯಾಂತ್ರೀಕೃತ ಮೀನುಗಾರಿಕೆ ಆರಂಭಿಸಿದರೆ ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳುವುದು ಎನ್ನುವುದರ ಬಗ್ಗೆ ಚಿಂತನೆ ನಡೆಯುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಮೀನುಗಾರರಿಗೆ ಈಗಾಗಲೇ 3 ತಿಂಗಳ ಕಾಲ ಸಾಲ ಪಾವತಿಗೆ ವಿನಾಯಿತಿ ನೀಡಲಾಗಿದೆ. ಅವರಿಗೆ ರಜೆ ಆರಂಭವಾಗುವುದರಿಂದ ಮತ್ತೆ ವಿನಾಯಿತಿ ವಿಸ್ತರಣೆ ಕುರಿತಂತೆ ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅನ್ಯ ರಾಜ್ಯದವರ ಬೋಟ್ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಂಬಂಧಪಟ್ಟ ಎಲ್ಲ ಜಿಲ್ಲಾಧಿಕಾರಿಗಳು, ಕರಾವಳಿ ಕಾವಲು ಪಡೆ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ಬೋಟ್ ವಶಕ್ಕೆ ಪಡೆಯಲು ಕೂಡ ಸೂಚಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಾಲ ಪಾವತಿ ಕಷ್ಟ
ಆಳ ಸಮುದ್ರ ಮೀನುಗಾರಿಕೆಗೆ ಭಾರೀ ಸಂಕಷ್ಟ ಎದುರಾಗಿದ್ದು, ಉತ್ತಮ ಮೀನುಗಾರಿಕೆ ಆಗಬಹುದು ಎಂದು ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಲಕ್ಷಾಂತರ ರೂ. ಸಾಲ ಪಡೆದಿದ್ದಾರೆ. ಈವರೆಗೆ ಉತ್ತಮ ಮೀನುಗಾರಿಕೆಯೇ ನಡೆದಿಲ್ಲ. ಎಪ್ರಿಲ್- ಮೇಯಲ್ಲಾದರೂ ಉತ್ತಮ ಸೀಸನ್ ಆಗಬಹುದು ಎನ್ನುವ ನಿರೀಕ್ಷೆಯೂ ಕೋವಿಡ್-19 ದಿಂದ ಹುಸಿಯಾಗಿದೆ. ಇದರಿಂದ ಸಾಲ ಮರು ಪಾವತಿ ಮಾಡುವುದೇ ಕಷ್ಟವಾಗಿದ್ದು, ಇನ್ನು 5-6 ತಿಂಗಳ ಕಾಲ ಸಾಲ ಪಾವತಿಗೆ ಸರಕಾರ ವಿನಾಯಿತಿ ನೀಡಬೇಕು.
– ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ವಿಶೇಷ ಪ್ಯಾಕೇಜ್ ಘೋಷಿಸಲಿ
ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಉ. ಕನ್ನಡ, ದ.ಕ. ಹಾಗೂ ಉಡುಪಿ ಜಿಲ್ಲೆಯ ಸಾವಿರಾರು ಮಂದಿ ಮೀನುಗಾರರು, ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಯಾರೂ ಕೂಡ ಮೀನುಗಾರರ ಬಗ್ಗೆ ಗಮನವೇ ಹರಿಸುತ್ತಿಲ್ಲ. ರೈತರು, ಇತರ ವಲಯದಂತೆ ಮೀನುಗಾರಿಕೆಗೂ ವಿಶೇಷ ಪ್ಯಾಕೇಜ್ ಅನ್ನು ಸರಕಾರ ಘೋಷಿಸಬೇಕಿದೆ.
– ಬಾಬು ಕುಬಾಲ್, ಗೌರವಾಧ್ಯಕ್ಷರು, ಅಖೀಲ ಕರ್ನಾಟಕ ಪರ್ಸಿನ್
ಮೀನುಗಾರರ ಸಂಘ, ಕರಾವಳಿ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.