ವಿರೂಪಾಕ್ಷಪ್ಪ ಬಂಧಿಸಿ, ಸಿಎಂ ರಾಜೀನಾಮೆ ನೀಡಲಿ
ಉಡುಪಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗ್ರಹ
Team Udayavani, Mar 4, 2023, 5:45 AM IST
ಉಡುಪಿ: ಬಿಜೆಪಿ ಭಾರತೀಯ ಜನತಾ ಪಾರ್ಟಿಯಲ್ಲ, ಭ್ರಷ್ಟ ಜನತಾ ಪಾರ್ಟಿ. ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ವಾರದೊಳಗೆ ಯಾವುದೇ ಕ್ರಮ ಆಗದಿದ್ದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸ್ವತಂತ್ರ ತನಿಖೆ ನಡೆಸಿ, ವರದಿ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಆಗ್ರಹಿಸಿದರು.
ಬಿಜೆಪಿಯ ಭ್ರಷ್ಟ ಆಡಳಿತದಿಂದ ಕರ್ನಾಟಕದ ಮರ್ಯಾದೆ ಬೀದಿಪಾಲಾಗುತ್ತಿದೆ. ಬಿಜೆಪಿ ಈಗ ಮೈಸೂರು ಸ್ಯಾಂಡರ್ ಸೋಪ್‌ನಲ್ಲೂ ಭ್ರಷ್ಟಾಚಾರ ಮಾಡಿದೆ. ಹಾಗಾದರೆ ಈ ಎಲ್ಲ ಭ್ರಷ್ಟಾಚಾರದ ಹಣ ಎಲ್ಲಿಗೆ ಹೋಯಿತು? ಇದಕ್ಕೆಲ್ಲ ಹೊಣೆ ಯಾರು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಬೇರೆ ಸಚಿವರು ಪಾಲು ಪಡೆದಿದ್ದಾರೆಯೇ? ಈ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬೊಮ್ಮಾಯಿ ಯಾಕೆ ಮಾತನಾಡುತ್ತಿಲ್ಲ? ಇಡಿ, ಸಿಬಿಐ ಮೊದಲಾದ ತನಿಖೆ ಸಂಸ್ಥೆಗಳು ಸಿಎಂ ಅಥವಾ ಸಚಿವರ ಮನೆ ಮೇಲೆ ದಾಳಿ ಮಾಡುವುದು ಯಾವಾಗ ಎಂದು ಉಡುಪಿ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು ಪ್ರಶ್ನಿಸಿದರು. ರಾಜ್ಯ ಬಿಜೆಪಿ ಇದಕ್ಕೆಲ್ಲ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ವರ್ಗಾವಣೆ ದಂಧೆ, ನೇಮಕಾತಿ ಅಕ್ರಮ ನಡೆ ಯುತ್ತಲೇ ಇದೆ. ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ, ಲಂಚ ಕೊಟ್ಟರೆ ಉದ್ಯೋಗ ಸಿಗುತ್ತದೆ ಎಂಬ ಪರಿಸ್ಥಿತಿಗೆ ರಾಜ್ಯವನ್ನು ಬಿಜೆಪಿ ತಂದು ನಿಲ್ಲಿಸಿದೆ. ಬಿಜೆಪಿ ಭ್ರಷ್ಟಾಚಾರದ ಅರಿವು ಜನರಿಗೆ ಆಗಿದ್ದು, ಈ ಬಾರಿ ಕಾಂಗ್ರೆಸ್ ಪರ ಒಲುವು ಇದೆ ಎಂದರು.
ಮನೆ ಮನೆಗೆ ತಲುಪಿಸಿ
ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ಪ್ರತೀ ಮನೆಗೆ ಮುಟ್ಟಿಸಿ ಮತದಾರರ ಮನವೊಲಿಸಿ ಕಾಂಗ್ರೆಸ್‌ನ ಆಳ್ವಿಕೆಯ ಬಗ್ಗೆ ಅರಿವು ಮೂಡಿಸಬೇಕು. ಪ್ರತೀ ಕ್ಷೇತ್ರಕ್ಕೆ 40 ಸಾವಿರ ಕಾರ್ಡ್‌ಗಳನ್ನು ನೀಡಲಾಗಿದೆ. ಮಾ. 10ರೊಳಗೆ ಮನೆಗಳಿಗೆ ತಲುಪಿಸಿ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಪೂರಕ ಮಾಹಿತಿಯನ್ನು ಪಡೆಯಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಯೋಜನೆಗಳನ್ನು ಜಾರಿ ಮಾಡಿ, ಬ್ಯಾಂಕ್ ಖಾತೆಗೆ ಹಣ, ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕ ಗೋಪಾಲ ಪೂಜಾರಿ, ಪ್ರಮುಖರಾದ ಎಂ.ಎ. ಗಫೂರ್, ಹರೀಶ್ ಕಿಣಿ ಅಲೆವೂರು, ರಮೇಶ್ ಕಾಂಚನ್, ಪ್ರಖ್ಯಾತ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಶಂಕರ್ ಕುಂದರ್, ಸಂತೋಷ್ ಕುಲಾಲ್, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ದಿನಕರ ಹೇರೂರು, ಬಿ. ನರಸಿಂಹಮೂರ್ತಿ, ವೆರೋನಿಕಾ ಕರ್ನೇಲಿಯೊ, ಮಮತಾ ಗಟ್ಟಿ, ಶ್ಯಾಮಲಾ ಭಂಡಾರಿ, ಗೀತಾ ವಾಗ್ಲೆ, ಡಾ| ಸುನಿತಾ ಶೆಟ್ಟಿ, ದಿನೇಶ್ ಪುತ್ರನ್, ಬಿ. ಕುಶಲ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನೀರೆ ಕೃಷ್ಣ ಶೆಟ್ಟಿ, ಮದನ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್, ವಕ್ತಾರ ಭಾಸ್ಕರ ರಾವ್ ಕಿದಿಯೂರು ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ರಾಜು ಪೂಜಾರಿ ವಂದಿಸಿದರು.
ಗ್ಯಾರಂಟಿ ಕಾರ್ಡ್ ಬಿಡುಗಡೆ
ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಸುಜೇìವಾಲಾ, “ತಿನ್ನಿ, ತಿನ್ನಿಸಿ, ಲೂಟಿ ಹೊಡೆಯಿರಿ’ ಎನ್ನುವುದು ಬಿಜೆಪಿ ಘೋಷವಾಕ್ಯ. ಶೇ. 40 ಕಮಿಷನ್ ಮೂಲಕ ಬಿಜೆಪಿ ರಾಜ್ಯದ ಮರ್ಯಾದೆ ಕಳೆಯುತ್ತಿದೆ. ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ಪತ್ರ ಬರೆದ ಅನಂತರ ನಾಲ್ಕೈದು ಬಾರಿ ಅವರು ರಾಜ್ಯಕ್ಕೆ ಬಂದರೂ ತುಟಿ ಬಿಚ್ಚಿಲ್ಲ. ಪೇ ಸಿಎಂ ಬ್ಯಾನರ್ ಎಲ್ಲಡೆ ಕಾಣುತ್ತಿದೆ. ಗುತ್ತಿಗೆದಾರರ ಸಾವು, ನೋವಿನ ಬಗ್ಗೆ ಪ್ರಧಾನಿ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಘೋಷಿಸಿರುವ ಗೃಹಲಕ್ಷ್ಮೀ, ಗೃಹಜ್ಯೋತಿಯ ಬಗ್ಗೆ ಮನೆ ಮನೆಗೂ ಮಾಹಿತಿ ನೀಡುವ ಕಾರ್ಯ ಆಗಬೇಕು. ಈ ಯೋಜನೆಯನ್ನು ತಾರತಮ್ಯ ಇಲ್ಲದೆ ಪ್ರತೀ ಕುಟುಂಬಕ್ಕೂ ನೀಡುತ್ತೇವೆ. ಉಚಿತ 10 ಕೆ.ಜಿ. ಅಕ್ಕಿ ಕೂಡ ಕೊಡಲಿದ್ದೇವೆ. ಕಾಂಗ್ರೆಸ್ ಘೋಷಣೆ, ಭರವಸೆಯ ಬಗ್ಗೆ ಅನುಮಾನವೇ ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.