Asthma; ಅಸ್ತಮಾ ದೀರ್ಘಕಾಲ ಕಾಡುವ ರೋಗ;…ಸೂಕ್ತ ಚಿಕಿತ್ಸೆಯಿಂದ ಪರಿಹಾರ ಸಾಧ್ಯ
ಹೃದಯದ ತೊಂದರೆ ಇರುವುದರಿಂದಲೂ ಅಸ್ತಮಾ ಕಾಣಿಸಿಕೊಳ್ಳುತ್ತದೆ.
Team Udayavani, Jul 12, 2023, 5:48 PM IST
ಮಲಿನ ಗಾಳಿಯ ಉಸಿರಾಟ, ಶ್ವಾಸಕೋಶಕ್ಕೆ ವಿಷಾನಿಲ ಸೇರ್ಪಡೆ ಮುಂತಾದವುಗಳಿಂದಾಗಿ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿ ಕೊಳ್ಳುವುದು ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚುತ್ತಿದೆ. ಇವುಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದು ಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಜೀವನಪರ್ಯಂತ ನೋವು ಅನುಭವಿಸ ಬೇಕಾಗುತ್ತದೆ. ಅಂತವು ಗಳಲ್ಲಿ ಅಸ್ತಮಾವೂ ಒಂದು.
ಅಸ್ತಮಾ ದೀರ್ಘಕಾಲ ಕಾಡುವ ರೋಗವಾಗಿದೆ. ಶ್ವಾಸನಾಳದ ಮೇಲೆ ಬೀರುವ ಪರಿಣಾಮವನ್ನು ಅಸ್ತಮಾ ಎನ್ನಲಾಗುತ್ತದೆ. ಶ್ವಾಸಕೋಶದಲ್ಲಿ ಗಾಳಿಯನ್ನು ಒಳ- ಹೊರಗೆ ಸಾಗಿಸುವ ದ್ವಾರಗಳು ಊದಿಕೊಳ್ಳುವುದನ್ನು ಅಸ್ತಮಾ ಎಂದು ಕರೆಯಲಾಗುತ್ತದೆ. ಇದರಿಂದ ಸರಾಗ ಉಸಿರಾಟ ಸಾಧ್ಯವಾಗದೆ, ಉಸಿರಾಡುವಾಗ ಶಬ್ಧ, ಕೆಮ್ಮು, ಎದೆಬಿಗಿತ, ಮೂಗು ಕಟ್ಟಿಕೊಂಡಂತಾಗುವುದು ಸೇರಿದಂತೆ ವಿವಿಧ ರೀತಿಯ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಮತ್ತು ರಾತ್ರಿ ಹೊತ್ತಿನಲ್ಲಿ ಈ ತೊಂದರೆಗಳ ಕಾಡುವಿಕೆ ಹೆಚ್ಚು.
ನಗರಗಳಲ್ಲೇ ಹೆಚ್ಚು
ಅಸ್ತಮಾ ಅಲರ್ಜಿಯಿಂದ ಬರುವ ಕಾಯಿಲೆಯಾಗಿದೆ. ನಗರ ಪ್ರದೇಶಗಳಲ್ಲಿ ಧೂಳು, ಹೊಗೆ, ಮಾಲಿನ್ಯ ಹೆಚ್ಚಿರುವುದರಿಂದ ನಗರ ಪ್ರದೇಶಗಳಲ್ಲೇ ಅಸ್ತಮಾ ಬಾಧೆ ಹೆಚ್ಚಿರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಂಡರೆ ಒಂದಷ್ಟು ವರ್ಷಗಳ ಕಾಲ ಇದ್ದು, ಮತ್ತೆ ವಾಸಿಯಾಗಬಹುದು. ಒಮ್ಮೆ ನಿಂತ ಬಳಿಕ ಮತ್ತೆ ರೋಗ ಬಾಧಿಸಿದರೆ ಕೆಲವೊಮ್ಮೆ ಶಾಶ್ವತವಾಗಿ ಕಾಣಿಸಿಕೊಳ್ಳುವ ಸಂದರ್ಭಗಳಿರುತ್ತದೆ. ಎರಡು ವಿಧದ ಅಸ್ತಮಾಗಳಿದ್ದು, ಅಲರ್ಜೆಟಿಕ್ ಅಸ್ತಮಾ ಮತ್ತು ಕಾರ್ಡಿಯಾಕ್ ಅಸ್ತಮಾ ಎಂದು ವಿಂಗಡಿಸಲಾಗಿದೆ. ಹೃದಯದ ತೊಂದರೆ ಇರುವುದರಿಂದಲೂ ಅಸ್ತಮಾ ಕಾಣಿಸಿಕೊಳ್ಳುತ್ತದೆ. ಇದನ್ನು ಕಾರ್ಡಿಯಾಕ್ ಅಸ್ತಮಾ ಎನ್ನುತ್ತಾರೆ.
ಅಸ್ತಮಾ ನಿವಾರಣೆಗೆ ವೈದ್ಯರಂಗದಲ್ಲಿ ಚಿಕಿತ್ಸೆಗಳಿವೆ. ಆದರೆ, ಮನೆ ಮದ್ದು ಕೂಡ ಇದಕ್ಕೆ ಪ್ರಯೋಜನಕಾರಿಯಾಗಿದೆ. ತುರಿದ ಮೂಲಂಗಿ, ಜೇನು, ನಿಂಬೆರಸವನ್ನು ಸೇರಿಸಿ ಕಾಯಿಸಿ ಪ್ರತಿ ದಿನ ಒಂದು ಚಮಚ ಸೇವಿಸುತ್ತಾ ಬರುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ. ನೀರಿನೊಂದಿಗೆ ಮೆಂತೆ ಕಾಳನ್ನು ಬೇಯಿಸಿ ಜೇನು, ಶುಂಠಿ ರಸ ಹಾಕಿ ಬೆರೆಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗಬಹುದು. ಹುಳಿ, ಎಣ್ಣೆ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಧೂಮಪಾನ ಮಾಡದಿರುವುದೇ ಒಳಿತು. ಆದಷ್ಟು ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡದೇ, ಸ್ವತ್ಛ ಗಾಳಿಯ ಉಸಿರಾಟಕ್ಕೆ ಆದ್ಯತೆ ನೀಡಬೇಕು. ಅನಿವಾರ್ಯವಾಗಿ ಅಂತಹ ಪ್ರದೇಶಗಳಲ್ಲಿ ಇರಬೇಕಾಗಿ ಬಂದರೆ, ಕೆಲಸ ಮಾಡುವಾಗ ಮೂಗಿಗೆ ಮಾಸ್ಕ್ ಧರಿಸಿಕೊಳ್ಳಬೇಕು. ಶುದ್ಧ ಆಹಾರ ಸೇವನೆಗೆ ಮಹತ್ವ ನೀಡಬೇಕು.
ಕಾರಣಗಳೇನು?
ಧೂಳಿನ ಕಣಗಳು ಮೂಗಿನೊಳಗೆ ನಿರಂತರವಾಗಿ ಹೋಗುತ್ತಿರುವುದರಿಂದ ಅಸ್ತಮಾ ಕಾಣಿಸಿಕೊಳ್ಳಬಹುದು. ಸಿಗರೇಟ್‌ನ ಹೊಗೆ ಸೇವನೆ, ವಾಯು ಮಾಲಿನ್ಯ, ಹವಾಗುಣ ಬದಲಾವಣೆಯಿಂದ, ಧೂಮಪಾನ, ಕೆಲಸದ ಸ್ಥಳದಲ್ಲಿ ರಾಸಾಯನಿಕ ಮಿಶ್ರಿತ ದೂಳಿನ ಉಸಿರಾಟದಿಂದ ಅಸ್ತಮಾ ಬಾಧಿಸುವ ಸಾಧ್ಯತೆ ಹೆಚ್ಚು. ಇದಲ್ಲದೆ, ಕುಟುಂಬ ಸದಸ್ಯರಿಗೆ ಅಸ್ತಮಾ ಕಾಯಿಲೆ ಇದ್ದರೆ, ಅದು ಮುಂದಿನ ತಲೆಮಾರಿಗೂ ಬರುವ ಸಾಧ್ಯತೆ ಹೆಚ್ಚಿದೆ. ಗರ್ಭಿಣಿಯರು ತಂಬಾಕು ಹೊಗೆಯನ್ನು ಸೇವಿಸಿದರೆ ಹುಟ್ಟುವ ಮಗುವಿಗೆ ಅಸ್ತಮಾ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಅಸ್ತಮಾಕ್ಕೆ ಯಾವುದೇ ವಯಸ್ಸಿನ ಭೇದವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರನ್ನೂ ಕಾಡುತ್ತದೆ.
ಲಕ್ಷಣಗಳೇನು?
ಅಸ್ತಮಾ ಹಠಾತ್ತನೇ ಶುರುವಾಗಬಹುದು ಅಥವಾ ನಿಧಾನಕ್ಕೆ ಮನುಷ್ಯನನ್ನು ಬಾಧಿಸಬಹುದು. ಆಗಾಗ ಕೆಮ್ಮು ಉಂಟಾಗುವುದು, ನಿರಂತರ ಕಾಡುವ ಉಬ್ಬಸ, ಎದೆಬಿಗಿತ, ಉಸಿರಾಟದಲ್ಲಿ ಶಬ್ಧ ಮುಂತಾದವುಗಳನ್ನು ಅಸ್ತಮಾ ಎಂದು ಪರಿಗಣಿಸಬಹುದು. ಆದರೆ, ಒಂದೆರಡು ದಿನ ಬಂದು ಹೋಗುವ ಕೆಮ್ಮಿನಿಂದ ಅಸ್ತಮಾ ಕಾಯಿಲೆ ಇದೆ ಎಂದರೆ ತಪ್ಪಾಗುತ್ತದೆ. ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯೊಂದಿಗೆ ಅಸ್ತಮಾ ಕಾಯಿಲೆ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕು.
ತತ್‌ಕ್ಷಣ ಚಿಕಿತ್ಸೆಯಿಂದ ಪರಿಹಾರ ಸಾಧ್ಯ
ಅಸ್ತಮಾ ಯಾವುದೇ ವಯಸ್ಸಿನ ವ್ಯಕ್ತಿಯಲ್ಲಿಯೂ ಕಾಣಿಸಿಕೊಳ್ಳಬಹುದು. ಗ್ರಾಮ್ಯ ಭಾಗಕ್ಕಿಂತ ನಗರಗಳಲ್ಲೇ ಇದರ ಪರಿಣಾಮ ಹೆಚ್ಚು. ಲಕ್ಷಣಗಳು ಕಾಣಿಸಿಕೊಂಡ ತತ್‌ಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದರಿಂದ ಪರಿಹಾರ ಸಾಧ್ಯ.
– ಡಾ|ನವೀನ್‌ಚಂದ್ರ,
ವೈದ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.