Forest: ಕೊನೆಗೂ ರಕ್ತಚಂದನ ಹರಾಜು ಯಶಸ್ವಿ
Team Udayavani, Sep 8, 2023, 1:24 AM IST
ಮಂಗಳೂರು: ಅಕ್ರಮವಾಗಿ ರಫ್ತು ಮಾಡಲು ತರುವ ವೇಳೆ ವಶಪಡಿಸಿಕೊಂಡು, 15 ವರ್ಷಗಳಿಂದ ನವಮಂಗಳೂರು ಬಂದರಿನ ಯಾರ್ಡ್‌ನಲ್ಲಿ ಬಾಕಿಯಾಗಿದ್ದ 56.2 ಟನ್ ರಕ್ತ ಚಂದನದ ಕೊರಡುಗಳನ್ನು ಕೊನೆಗೂ ಅರಣ್ಯ ಇಲಾಖೆ ಯಶಸ್ವಿಯಾಗಿ ಹರಾಜು ಮಾಡಿದೆ.
ಒಟ್ಟು 28 ಕೋಟಿ ರೂ. ಮೊತ್ತಕ್ಕೆ ಮೂವರು ಬಿಡ್‌ದಾರರು ಈ ರಕ್ತಚಂದನವನ್ನು ಖರೀದಿಸಿದ್ದಾರೆ.
ವಿವಿಧ ಕಳ್ಳಸಾಗಾಟ, ಅಕ್ರಮ ರಫ್ತು ಯತ್ನದ ಪ್ರಕರಣಗಳಿಗೆ ಸಂಬಂಧಿಸಿ 2008ರಿಂದ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಾಗತಿಕ ಟೆಂಡರ್ ಮೂಲಕ ಇವುಗಳನ್ನು ವಿಲೇವಾರಿ ಮಾಡಲು ಅರಣ್ಯ ಇಲಾಖೆ ಮುಂದಾಗಿತ್ತು, ಈ ಬಗ್ಗೆ ಉದಯವಾಣಿ ಜು. 26ರಂದು ವರದಿ ಪ್ರಕಟಿಸಿತ್ತು.
14.4 ಕೋಟಿ ರೂ. ನೀಡುವ ಮೂಲಕ ವಿಕಾಸ್ ಧವನ್ ಸಂಸ್ಥೆಯು 18 ಲಾಟ್ ರಕ್ತಚಂದನ ಕೊರಡುಗಳನ್ನು ಹರಾಜಿನಲ್ಲಿ ಖರೀದಿಸಿದರೆ, ಯಮಾ ರಿಬ್ಬನ್ಸ್ 5 ಲಾಟ್‌ಗಳನ್ನು 4.2 ಕೋಟಿ ರೂ.ಗೆ ಹಾಗೂ ಅಕ್ಸಾ ಕಂಪೆನಿಯು 1.6 ಕೋಟಿ ರೂ.ಗೆ 3 ಲಾಟ್ ಖರೀದಿಸಿದೆ.
ಎಲ್ಲ ರಕ್ತಚಂದನ ಒಟ್ಟು 21 ಕೋಟಿ ರೂ.ಗೆ ಮಾರಾಟವಾಗಿದೆ. ಇದರ ಮೇಲೆ ಶೇ 18 ಜಿಎಸ್‌ಟಿ, ಅರಣ್ಯ ಅಭಿವೃದ್ಧಿ ಶುಲ್ಕ, 2.5 ಶೇ ಆದಾಯ ತೆರಿಗೆ, 5 ಶೇ ಆಕ್ಸೆಸ್ ಬೆನೆಫಿಟ್ ಶುಲ್ಕ ಸೇರಿದಂತೆ ಒಟ್ಟು 28 ಕೋಟಿ ರೂ. ಆದಾಯ ಬರಲಿದೆ.
ಖರೀದಿದಾರರು ಬಿಡ್ ಮೊತ್ತದ ನಾಲ್ಕನೇ ಒಂದಂಶವನ್ನು ಮೊದಲು ಪಾವತಿಸಿ, ಅಗತ್ಯವಿರುವ ಎಲ್ಲಾ ಕ್ಲಿಯರೆನ್ಸ್ ಪಡೆದು ರಕ್ತಚಂದನವನ್ನು ರಫ್ತು ಮಾಡಲಿದ್ದಾರೆ.
ಇದೇ ಮೊದಲ ಬಾರಿಗೆ ರಾಜ್ಯದಿಂದ ಇಷ್ಟು ದೊಡ್ಡ ಮಟ್ಟದಲ್ಲಿ ರಕ್ತಚಂದನ ವಿಲೇವಾರಿ ಮಾಡಲಾಗಿದೆ. ಅಕ್ರಮವಾಗಿ ರಫ್ತಾಗುತ್ತಿದ್ದ ರಕ್ತಚಂದನವನ್ನು ತಡೆಯಲಾಗಿದ್ದು, ಈಗ ಅದರ ವಿಲೇವಾರಿ ಮೂಲಕ ಸರಕಾರಕ್ಕೆ ದೊಡ್ಡ ಮೊತ್ತದ ಆದಾಯವನ್ನು ಬಂದಂತಾಗಿದೆ.
– ಆ್ಯಂಟನಿ ಮರಿಯಪ್ಪ, ಉಪಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.