Bagalkot Lok Sabha constituency;17ರಲ್ಲಿ 16 ಬಾರಿ ಇಲ್ಲಿ ಗೆದ್ದಿದ್ದು ಲಿಂಗಾಯತ ನಾಯಕರು
ಲಿಂಗಾಯತರು, ಅಹಿಂದ ಮತದಾರರೇ ನಿರ್ಣಾಯಕ: ವೀರೇಂದ್ರ ಪಾಟೀಲರನ್ನು ಲೋಕಸಭೆಗೆ,
Team Udayavani, Mar 12, 2024, 7:00 AM IST
ಬಾಗಲಕೋಟೆ: ಎಂಟು ವಿಧಾನಸಭೆ ಮತಕ್ಷೇತ್ರ ಹೊಂದಿರುವ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಹಲವು ನಾಯಕರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಖ್ಯಾತಿ ಈ ಜಿಲ್ಲೆಗಿದೆ.
ಸ್ವತಂತ್ರ ಭಾರತದ ಬಳಿಕ ದೇಶದಲ್ಲಿ 1951ರಿಂದ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು. ಆ ವರ್ಷದ ಕೊನೆಗೆ ನಡೆದ ಚುನಾವಣೆಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದವರು ರಾಮಣ್ಣ ಬಿದರಿ. ಬಳಿಕ ನಡೆದ 1957ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ 2ನೇ ಬಾರಿ ಅವರು ಗೆದ್ದಿದ್ದರು. ಇಲ್ಲಿಯವರೆಗೆ ಒಟ್ಟು 17 ಲೋಕಸಭೆ ಚುನಾವಣೆ ನಡೆದಿವೆ. 1962ರ ವರೆಗೆ ಬಾಗಲಕೋಟೆ ಕ್ಷೇತ್ರ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರವಾಗಿತ್ತು. 1967ರ ಚುನಾವಣೆಯಲ್ಲಿ ಬಾಗಲಕೋಟೆ ಪ್ರತ್ಯೇಕ ಲೋಕಸಭೆ ಕ್ಷೇತ್ರವಾಗಿದ್ದು, ಆಗ ಕಾಂಗ್ರೆಸ್‌ನ ಎಸ್.ಬಿ. ಪಾಟೀಲ ಗೆದ್ದಿದ್ದರು. 1962, 1967, 1971 ಹಾಗೂ 1977 ಸೇರಿ ಒಟ್ಟು ನಾಲ್ಕು ಬಾರಿ ಸತತ ಗೆದ್ದ ದಾಖಲೆ ಎಸ್.ಬಿ. ಪಾಟೀಲರಿಗಿದೆ. 2004ದಿಂದ ಈವರೆಗೆ ಬಿಜೆಪಿಯ ಪಿ.ಸಿ.ಗದ್ದಿಗೌಡರ ಇಲ್ಲಿಂದ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಇವರನ್ನು ಬಿಟ್ಟರೆ ಈ ಕ್ಷೇತ್ರದಿಂದ ಎರಡಕ್ಕಿಂತ ಹೆಚ್ಚು ಬಾರಿ ಯಾರೂ ಗೆದ್ದಿಲ್ಲ.
ಹೆಗಡೆ ಕೈ ಬಿಟ್ರಾ- ವೀರೇಂದ್ರ ಗೆಲ್ಲಿಸಿದರು
ಜಿಲ್ಲೆಯ ಮತದಾರರು ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಯುವ ಹೋರಾಟಗಾರರಾಗಿದ್ದ ದಿ| ಸಿದ್ದು ನ್ಯಾಮಗೌಡರನ್ನು ಗೆಲ್ಲಿಸಿದ್ದರು. ವೀರೇಂದ್ರ ಪಾಟೀಲರನ್ನು ಲೋಕಸಭೆಗೆ, ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಗೆಲ್ಲಿಸಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದವರು ಈ ಜಿಲ್ಲೆಯ ಮತದಾರರು.
1991ರ ವರೆಗೆ ಸತತವಾಗಿ ಕಾಂಗ್ರೆಸ್ ಪಕ್ಷವೇ ಇಲ್ಲಿಂದ ಗೆದ್ದಿತ್ತು. ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿ ಅಹಿಂದ ಅಲೆಯಲ್ಲಿ ಗೆದ್ದವರು, ಬಾಗಲಕೋಟೆಯ ಹಾಲಿ ಶಾಸಕ ಎಚ್.ವೈ. ಮೇಟಿ. ಜನತಾ ದಳ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗಲೇ ಲೋಕಸಭೆಗೆ ಗೆದ್ದಿದ್ದರು. ಆ ಬಳಿಕ ಲೋಕಶಕ್ತಿ ಪಕ್ಷದ ಅಜಯಕುಮಾರ ಸರನಾಯಕ (ಬಿಜೆಪಿ-ಲೋಕಶಕ್ತಿ ಹೊಂದಾಣಿಕೆ), 1998ರಲ್ಲಿ ಗೆದ್ದಿದ್ದರು. ಒಟ್ಟು ಈವರೆಗೆ ನಡೆದ 17 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಜನತಾ ದಳ ಮತ್ತು ಲೋಕಶಕ್ತಿ ಗೆದ್ದಿದ್ದರೆ, ಸತತ ನಾಲ್ಕು ಬಾರಿ ಬಿಜೆಪಿ ಗೆಲ್ಲುತ್ತ ಬಂದಿದೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಗೆದ್ದಿರುವುದು ಕಾಂಗ್ರೆಸ್. ರಾಮಣ್ಣ ಬಿದರಿಯಿಂದ ಹಿಡಿದು ಪ್ರಸ್ತುತ ಪಿ.ಸಿ. ಗದ್ದಿಗೌಡರವರೆಗೂ ಲಿಂಗಾಯತ ನಾಯಕರು ಇಲ್ಲಿ ಆಧಿಪತ್ಯ ಸಾಧಿಸಿದ್ದಾರೆ.
ಬಲಾಬಲ ಎಷ್ಟು?
ಕ್ಷೇತ್ರ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯ ನರಗುಂದ ಸಹಿತ ಒಟ್ಟು 8 ವಿಧಾನಸಭೆ ಮತಕ್ಷೇತ್ರಗಳಿವೆ. ಐದು ಕ್ಷೇತ್ರಗಳಲ್ಲಿ ಸದ್ಯ ಕಾಂಗ್ರೆಸ್ ಶಾಸಕರಿದ್ದರೆ, ಎರಡರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಆಗ 8 ವಿಧಾನಸಭೆ ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ, ಎರಡರಲ್ಲಿ (ಜಮಖಂಡಿ ಮತ್ತು ಬಾದಾಮಿ) ಕಾಂಗ್ರೆಸ್ ಶಾಸಕರಿದ್ದರು.
ಲಿಂಗಾಯತ, ಮುಸ್ಲಿಂ ಹಾಗೂ ದಲಿತ ಮತದಾರರು ಹೆಚ್ಚಿದ್ದಾರೆ. ಹೀಗಾಗಿಯೇ ಕುರುಬ ಸಮಾಜದ ಎಚ್. ವೈ. ಮೇಟಿ ಒಮ್ಮೆ ಗೆದ್ದಿದ್ದು ಬಿಟ್ಟರೆ ಈವರೆಗೆ ಇಲ್ಲಿಂದ ಗೆದ್ದವರು ಲಿಂಗಾಯತ ನಾಯಕರೇ. ಅದೇ ಕಾರಣಕ್ಕೆ, ಎಲ್ಲ ರಾಜಕೀಯ ಪಕ್ಷಗಳು ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುತ್ತಲೇ ಬಂದಿವೆ. ವಿಧಾನಸಭೆ ಚುನಾವಣೆಗಳು, ಉಪಜಾತಿಗಳ ಲೆಕ್ಕಾಚಾರದಲ್ಲಿ ನಡೆದರೆ, ಲೋಕಸಭೆ ಚುನಾವಣೆ ಲಿಂಗಾಯತ ವರ್ಸಸ್ ಅಹಿಂದ ಲೆಕ್ಕಾಚಾರದಲ್ಲಿ ನಡೆದಿವೆ. ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಇಲ್ಲಿ ಪ್ರಬಲವಾಗಿರುವ ಗಾಣಿಗ ಸಮಾಜಕ್ಕೆ ಸೇರಿದವರು.
– ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.