ಬಾಲಬ್ರೂಯಿ ಅತಿಥಿ ಗೃಹ ಇನ್ನು ಸಾಂವಿಧಾನಿಕ ಕ್ಲಬ್
ಲೋಕೋಪಯೋಗಿ ಇಲಾಖೆಗೆ ಡಿಪಿಎಆರ್ ಅಧಿಕೃತ ಹಸ್ತಾಂತರ
Team Udayavani, Aug 5, 2023, 11:37 PM IST
ಬೆಂಗಳೂರು: ಶಾಸಕರು, ಸಂಸದರ ಹಲವು ವರ್ಷಗಳ ಬೇಡಿಕೆಯಾದ ಸಾಂವಿಧಾನಿಕ ಕ್ಲಬ್ ಸ್ಥಾಪನೆಗೆ ಕಾಲ ಕೂಡಿ ಬಂದಂತಿದೆ. ಬೆಂಗಳೂರಿನ ಬಾಲಬ್ರೂಯಿ ಅತಿಥಿಗೃಹ ಕಟ್ಟಡವು ಲೋಕೋಪಯೋಗಿ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರಗೊಂಡಿದೆ.
ಕಟ್ಟಡವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತಿಸಲು ನ್ಯಾಯಾಲಯ ಹಸುರು ನಿಶಾನೆ ನೀಡಿದ ಬೆನ್ನಲ್ಲೇ ಸರಕಾರ ಕ್ರಮಕ್ಕೆ ಮುಂದಾಗಿದೆ. ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ರಾಜ್ಯ ಶಿಷ್ಟಾಚಾರ)ಯ ಸುಪರ್ದಿಯಲ್ಲಿದ್ದ ಅತಿಥಿಗೃಹವನ್ನು ಲೋಕೋಪಯೋಗಿ ಇಲಾಖೆ ಅಧೀನಕ್ಕೆ ನೀಡುವಂತೆ ಮುಖ್ಯ ಮಂತ್ರಿಗಳು ಸೂಚಿಸಿದ್ದರು. ಅದರಂತೆ ‘ಮುಂದಿನ ಸೂಕ್ತ ಕ್ರಮಕ್ಕಾಗಿ’ ಲೋಕೋಪಯೋಗಿ ಇಲಾಖೆಗೆ ಕಟ್ಟಡ ಹಸ್ತಾಂತರಗೊಂಡಿದೆ.
ಸದ್ಯಕ್ಕಿನ್ನೂ ಸಾಂವಿಧಾನಿಕ ಕ್ಲಬ್‌ನ ರೂಪುರೇಷೆ ಗಳು ಶೈಶವಾವಸ್ಥೆಯಲ್ಲಿದೆ. ಲೋಕೋಪಯೋಗಿ ಇಲಾಖೆ ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಮುಖ್ಯಸ್ಥರ ಸಭೆ ನಡೆಯಬೇಕಿದೆ. ಸದ್ಯಕ್ಕೆ ಇರುವ ಶಾಸಕರ ಕ್ಲಬ್‌ಗ ವಿಧಾನಸಭೆಯ ಕಾರ್ಯದರ್ಶಿಯೇ ಮುಖ್ಯಸ್ಥರಾಗಿದ್ದು, ಹೊಸ ಸರಕಾರ ಬಂದಿರುವುದರಿಂದ ಶಾಸಕರ ನೇತೃತ್ವದಲ್ಲಿ ಆಡಳಿತ ಮಂಡಳಿ ರಚನೆಯಾಗಬೇಕಿದೆ.
ಮೇಲ್ಮನೆ ಸದಸ್ಯರಿಗೂ ಸ್ಥಾನ
ಪ್ರಸ್ತುತ ಶಾಸಕರ ಕ್ಲಬ್‌ನ ವಾರ್ಷಿಕ ಸದಸ್ಯತ್ವಕ್ಕೆ 10 ಸಾವಿರ ರೂ. ಶುಲ್ಕವಿದ್ದು, ಈಗಾಗಲೇ 400ಕ್ಕೂ ಹೆಚ್ಚು ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು ಸದಸ್ಯರಾಗಿದ್ದಾರೆ. ಶಾಸಕರ ಕ್ಲಬ್‌ಗ ತಾತ್ಕಾಲಿಕವಾಗಿ ಸಿಎಂ ಅಧ್ಯಕ್ಷರಾಗಿದ್ದು, ಸ್ಪೀಕರ್ ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಇನ್ನಿತರರು ಉಸ್ತುವಾರಿಗಳಾಗಿದ್ದಾರೆ. ಅಧಿಕೃತವಾಗಿ ಸಾಂವಿಧಾನಿಕ ಕ್ಲಬ್‌ನ ಅಧ್ಯಕ್ಷರು, ಉಪಾಧ್ಯಕ್ಷ ಸಹಿತ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ಕ್ಲಬ್‌ನ ಸದಸ್ಯತ್ವ ಶುಲ್ಕ ಹಾಗೂ ನಿಯಮದಲ್ಲೂ ಬದಲಾವಣೆ ಆಗುವ ಸಾಧ್ಯತೆಗಳಿವೆ. ಆಡಳಿತ ಮಂಡಳಿಯಲ್ಲಿ ವಿಧಾನಪರಿಷತ್ತಿನ ಸದಸ್ಯರಿಗೂ ಅವಕಾಶ ಕಲ್ಪಿಸಲು ವಿಧಾನಮಂಡಲಗಳ ನಿಯಮಾವಳಿ ತಿದ್ದುಪಡಿ ಮಾಡುವ ಪ್ರಸ್ತಾವನೆಯೂ ಇದೆ.
ಏನೇನು ಇರಲಿದೆ?
ಸದ್ಯಕ್ಕೆ ಶಾಸಕರ ಭವನದಲ್ಲಿ ಹೋಮಿಯೋಪತಿ, ಅಲೋಪತಿ, ಆಯುರ್ವೇದ ಸಹಿತ ವಿವಿಧ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇದೆ. ಗ್ರಂಥಾಲಯ, ವಾಚನಾಲಯ, ಜಿಮ್ ಸಹಿತ ಇನ್ನಿತರ ವ್ಯವಸ್ಥೆಗಳಿವೆ. ಇವೆಲ್ಲವೂ ಸಾಂವಿಧಾನಿಕ ಕ್ಲಬ್‌ನಲ್ಲೂ ಇರಲಿದೆ. ಇವುಗಳೊಂದಿಗೆ ಸಭಾಂಗಣ (ಕಾನ್ಫರೆನ್ಸ್ ಹಾಲ್), ಬಿಲಿಯರ್ಡ್ಸ್ ಸಹಿತ ಒಳಾಂಗಣ ಕ್ರೀಡಾಂಗಣ, ಹೊಟೇಲ್, ರೆಸ್ಟೋರೆಂಟ್ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆದರೆ, ಬಾರ್ ಹಾಗೂ ಇಸ್ಪೀಟ್‌ಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಜಿಜ್ಞಾಸೆ ಇದ್ದು, ಆಡಳಿತ ಮಂಡಳಿ ರಚನೆಯಾದ ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಚಿಂತನೆ ನಡೆದಿದೆ. ಉತ್ತಮ ಆಮ್ಲಜನಕ ನೀಡುವ ಔಷಧೀಯ ಗಿಡಗಳನ್ನು ನೆಟ್ಟು “ಆಯುರ್ವೇದ ಉದ್ಯಾನ’ವನ್ನು ಬೆಳೆಸುವ ಯೋಚನೆಯೂ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಕಟ್ಟಡದ ಮೂಲ ಸ್ವರೂಪ, ಗಿಡಮರಗಳಿಗೆ ಧಕ್ಕೆಯಿಲ್ಲ
1850ರಲ್ಲಿ ಮಾರ್ಕ್ ಕಬ್ಬನ್ ಕಟ್ಟಿಸಿದ ಬಾಲಬ್ರೂಯಿ ಅತಿಥಿಗೃಹ ಹಾಗೂ ಸುತ್ತಲಿನ ಆವರಣವು ಒಟ್ಟು 14 ಎಕ್ರೆ ವಿಸ್ತೀಣದಲ್ಲಿದ್ದು, 150ಕ್ಕೂ ಹೆಚ್ಚು ಅಪರೂಪದ ಗಿಡ-ಮರಗಳು ಇಲ್ಲಿವೆ. ಸರ್.ಎಂ. ವಿಶ್ವೇಶ್ವರಯ್ಯ, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೂರ್, ಜವಾಹರಲಾಲ್ ನೆಹರೂ ಮೊದಲಾದವರು ವಾಸ್ತವ್ಯ ಹೂಡಿದ್ದ ಈ ಕಟ್ಟಡವು ಮಾಜಿ ಸಿಎಂಗಳಾದ ಕೆ.ಸಿ. ರೆಡ್ಡಿ, ಬಿ.ಡಿ. ಜತ್ತಿ, ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸು ಅವರ ಅಧಿಕೃತ ನಿವಾಸವೂ ಆಗಿತ್ತು. ಎಸ್.ಆರ್. ಬೊಮ್ಮಾಯಿ ಕೂಡ ಸಿಎಂ ಆಗಿದ್ದಾಗ ಇಲ್ಲೇ ತಂಗಿದ್ದರು. ಅನಂತರ ದಿನಗಳಲ್ಲಿ ಹಲವು ಆಯೋಗಗಳಿಗೆ ಇದೇ ಕೇಂದ್ರ ಸ್ಥಾನವೂ ಆಗಿತ್ತು. ಸಾಂವಿಧಾನಿಕ ಕ್ಲಬ್ ಮಾಡುವುದಿಂದ ಪಾರಂಪರಿಕ ಕಟ್ಟಡ ಮತ್ತು ಮರ-ಗಿಡಗಳಿಗೆ ತೊಂದರೆ ಆಗುತ್ತದೆ ಎಂದು ಪರಿಸರವಾದಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಕಟ್ಟಡ ಮತ್ತು ಮರ-ಗಿಡಗಳ ಧಕ್ಕೆ ಆಗದಂತೆ ಕ್ಲಬ್ ಮಾಡಲು ಕೋರ್ಟ್ ಅನುಮತಿಸಿದೆ. ರಾಷ್ಟ್ರೀಯ ಹಸುರು ನ್ಯಾಯಾಧಿಕರಣ ಕೂಡ ಗಿಡ-ಮರಗಳ ತೊಂದರೆ ಆಗಬಾರದೆಂದು ತಾಕೀತು ಮಾಡಿದೆ.
ಆ.21ಕ್ಕೆ ಸಿಇ ಸಭೆ?
ನ್ಯಾಯಾಲಯದ ಆದೇಶದ ಪ್ರಕಾರ ಮೂಲ ಕಟ್ಟಡದ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗದಂತೆ ಸಾಂವಿಧಾನಿಕ ಕ್ಲಬ್ ವಿನ್ಯಾಸಗೊಳಿಸುವ ಸವಾಲು ಲೋಕೋಪಯೋಗಿ ಇಲಾಖೆ ಮುಂದಿದೆ. ಮರಗಳನ್ನು ತೆರವು ಮಾಡದೆ ಕ್ಲಬ್ ಸದಸ್ಯರ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮಾಡುವುದು ಹೇಗೆ ಎಂಬಿತ್ಯಾದಿ ಅಂಶಗಳು ಇಲಾಖೆಯ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆ.21 ರಂದು ಸಭೆಯನ್ನೂ ಕರೆದಿದ್ದು, ಸಾಂವಿಧಾನಿಕ ಕ್ಲಬ್‌ಗ ಸಂಬಂಧಿಸಿದಂತೆ ಎರಡ್ಮೂರು ವಿನ್ಯಾಸಗಳನ್ನು ಸಿದ್ಧಪಡಿಸಿ ಮುಖ್ಯಮಂತ್ರಿ, ಸ್ಪೀಕರ್ ಯು.ಟಿ. ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರ ಮುಂದಿಟ್ಟು ಒಪ್ಪಿಗೆ ಪಡೆಯಬೇಕಿದೆ.
ಶೇಷಾದ್ರಿ ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.