ಜ್ವರಕ್ಕೆ ಕೊಟ್ಟ ಇಂಜೆಕ್ಷನ್‌ಗೆ ಮಾಂಸವೇ ಕೊಳೆಯಿತು!
ಚುಚ್ಚುಮದ್ದು ಕೊಟ್ಟ ನಕಲಿ ವೈದ್ಯ, ಕ್ಲಿನಿಕ್ ಮಾಲೀಕ ಸೆರೆ
Team Udayavani, Dec 16, 2022, 12:27 PM IST
ಬೆಂಗಳೂರು: ಮಹಿಳೆಗೆ ಚುಚ್ಚುಮದ್ದು ಕೊಟ್ಟು ಅವಾಂತರಕ್ಕೆ ಕಾರಣನಾದ ನಕಲಿ ವೈದ್ಯ ಹಾಗೂ ಕ್ಲಿನಿಕ್ ಮಾಲೀಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾದೇಶ್ವರ ನಗರದ ನಿವಾಸಿ ನಕಲಿ ವೈದ್ಯನಾಗರಾಜ ಸವಣೂರ (55), ಕ್ಲಿನಿಕ್ ಮಾಲೀಕ ಕುಮಾರಸ್ವಾಮಿ (35) ಬಂಧಿತರು. ಹೆಗ್ಗನಹಳ್ಳಿ ಕ್ರಾಸ್‌ನ ನಿವಾಸಿ ಜ್ಯೋತಿ (29) ಚಿಕಿತ್ಸೆ ಪಡೆದವರು.
ನಗರದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಅವರಿಗೆ ಸೆ.25ರಂದು ಜ್ವರ ಕಾಣಿಸಿಕೊಂಡಿತ್ತು. ಹೆಗ್ಗನಹಳ್ಳಿಯ ಸಂಜೀವಿನಿ ನಗರದಲ್ಲಿರುವ ಸಹನಾ ಕ್ಲಿನಿಕ್‌ಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ಆ ವೇಳೆ ವೈದ್ಯ ನಾಗರಾಜ್ ಮಹಿಳೆಯನ್ನು ಪರೀಕ್ಷಿಸಿ ಸೊಂಟದ ಭಾಗಕ್ಕೆ 2 ಇಂಜೆಕ್ಷನ್ ಅನ್ನು ಒಂದೇ ಬಾರಿ ಕೊಟ್ಟಿದ್ದರು. ಇದಾದ 2 ದಿನಗಳ ಬಳಿಕ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ, ಅತಿಯಾದ ನೋವು ಕಾಣಿಸಿಕೊಂಡಿತ್ತು.
ಆತಂಕಗೊಂಡ ಜ್ಯೋತಿ ಮತ್ತೆ ಇದೇ ಕ್ಲಿನಿಕ್‌ಗೆ ಹೋಗಿ ನಾಗರಾಜ್‌ಗೆ ತೋರಿಸಿದ್ದರು. ಆ ವೇಳೆ ನಾಗರಾಜ್ ಸಮೀಪದ ಮೆಡಿಕಲ್‌ನಿಂದ ಮುಲಾಮು ತಂದುಕೊಟ್ಟು ರಕ್ತ ಹೆಪ್ಪುಗಟ್ಟಿದ ಜಾಗಕ್ಕೆ ಲೇಪಿಸುವಂತೆ ಸೂಚಿಸಿದ್ದರು. ಇದಾದ 4-5 ದಿನಗಳಲ್ಲಿ ರಕ್ತಹೆಪ್ಪುಗಟ್ಟಿದ ಜಾಗದಲ್ಲಿ ಜ್ಯೋತಿ ಅವರಿಗೆ ರಕ್ತಸ್ರಾವವಾಗಿತ್ತು.
ಅ.18ರಂದು ಮತ್ತೂಮ್ಮೆ ನಾಗರಾಜ್ ಅವರನ್ನು ಭೇಟಿ ಮಾಡಿದಾಗ ಅವರು ಬೇರೆ ಕ್ಲಿನಿಕ್‌ನಲ್ಲಿ ತೋರಿಸಿಕೊಳ್ಳುವಂತೆ ಸೂಚಿಸಿದ್ದರು. ನಂತರ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಗೆ ತೋರಿಸಿದಾಗ ಅವರು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು.
ಅದರಂತೆ ಜ್ಯೋತಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಇಂಜೆಕ್ಷನ್ ಕೊಟ್ಟ ಜಾಗದಲ್ಲಿದ್ದ ಕೊಳೆತ ಮಾಂಸವನ್ನು ತೆಗೆದು 8 ಹೊಲಿಗೆ ಹಾಕಿದ್ದರು. ಶಸ್ತ್ರ ಚಿಕಿತ್ಸೆ ಮಾಡಿದ ಜಾಗದಲ್ಲಿ ಮತ್ತೆ ಕೀವು ತುಂಬಿತ್ತು. ಕೀವಿನ ಸ್ಯಾಂಪಲ್ ತೆಗೆದು ಲ್ಯಾಬ್‌ಗೆ ಕಳುಹಿಸಿದ್ದರು. ಲ್ಯಾಬ್‌ನಿಂದ ವರದಿ ಬಂದ ಬಳಿಕ ಅದಕ್ಕೆ ಸಂಬಂಧಿಸಿದ ಔಷಧಿ ನೀಡಿದ್ದರು. ಇದೀಗ ಜ್ಯೋತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ನಕಲಿ ವೈದ್ಯನ ಆಟ ಬಯಲು
ಪಜೀತಿಗೆ ಒಳಗಾಗಿದ್ದ ಜ್ಯೋತಿ ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಗರಾಜ್ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದಾಗ ಅವರು ಗೊಂದಲದ ಹೇಳಿಕೆ ಕೊಟ್ಟಿದ್ದ. ಅನುಮಾನಗೊಂಡ ಪೊಲೀಸರು ಕೆಲ ದಾಖಲೆ ಕೇಳಿದಾಗ ನಾಗರಾಜ್ ಬಳಿ ಇರಲಿಲ್ಲ. ಅಲ್ಲದೇ, ಯಾವುದೇ ಪರವಾನಗಿ ಇಲ್ಲದೇ ಕ್ಲಿನಿಕ್ ನಡೆಸುತ್ತಿರುವ ಸಂಗತಿ ಬಯಲಾಗಿದೆ. ಈ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ನಾನು ನಕಲಿ ವೈದ್ಯ ಎಂದು ನಾಗರಾಜ್ ಒಪ್ಪಿಕೊಂಡಿದ್ದಾನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.