ಬೆಂಗಳೂರು ಸುತ್ತಮುತ್ತ ರಾಜಕೀಯ ಮೇಲಾಟ ಜೋರು
ಬೆಂಗಳೂರು ಗ್ರಾಮಾಂತರ ಜಿಲ್ಲೆ 4 ಕ್ಷೇತ್ರಗಳು
Team Udayavani, Feb 16, 2023, 6:15 AM IST
ಬೆಂಗಳೂರು: ರಾಜಧಾನಿಗೆ ಹೊಂದಿಕೊಂಡಂತೆ ಇರುವ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ರಾಜ್ಯಾದ್ಯಂತ ಸುದ್ದಿಯಲ್ಲಿರುವಂಥವು. ರಾಮನಗರ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷೇತ್ರಗಳಿವೆ. ಇವರಿಬ್ಬರೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವುದರಿಂದ ಈ ಕ್ಷೇತ್ರಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ರಾಜಕೀಯ ದೃಷ್ಟಿಯಿಂದ ಇಲ್ಲಿನ ಬಹುತೇಕ ಕ್ಷೇತ್ರಗಳು ಬಿಜೆಪಿಗೆ ಸಾರಾಸಗಟಾಗಿ ಒಲಿದಿಲ್ಲ. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸ್ಪರ್ಧೆಯೇ ಕಂಡು ಬರುತ್ತದೆ. ಬಿಜೆಪಿ ಗೆದ್ದಿದ್ದರೂ ಆಗೊಮ್ಮೆ, ಈಗೊಮ್ಮೆ ಎಂದಷ್ಟೇ ಹೇಳಬಹುದು. ಇವೆಲ್ಲದಕ್ಕಿಂತ ಪ್ರಮುಖವಾಗಿ ಈ ಕ್ಷೇತ್ರಗಳು, ಅತ್ತ ಬೆಂಗಳೂರು ಮಹಾನಗರಕ್ಕೂ ಸೇರಿರದ, ಇತ್ತ ಹಳ್ಳಿ ಬದುಕಿಗೂ ಹೊಂದಿಕೊಳ್ಳದ ಸ್ಥಳಗಳು.
ರಾಮನಗರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕ್ಷೇತ್ರಗಳಿವೆ. ಅತ್ತ ಬೆಂಗಳೂರು ಗ್ರಾಮಾಂತರದಲ್ಲೂ ನಾಲ್ಕು ಕ್ಷೇತ್ರಗಳುಂಟು. ರಾಮನಗರದ ಎಲ್ಲ ಕ್ಷೇತ್ರಗಳು ಸಾಮಾನ್ಯ. ಆದರೆ ಬೆಂ.ಗ್ರಾಂ.ದಲ್ಲಿ ಇರುವ ನಾಲ್ಕರಲ್ಲಿ ಎರಡು ಮೀಸಲು ಕ್ಷೇತ್ರಗಳಾಗಿವೆ. ರಾಮನಗರದಲ್ಲಿ ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಕ್ಷೇತ್ರಗಳು ಬರುತ್ತವೆ.
ದೊಡ್ಡಬಳ್ಳಾಪುರ
ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಟಿ.ಸಿದ್ದಲಿಂಗಯ್ಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರು. 1952 ಮತ್ತು 1957ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಕೆಂಗಲ್ ಹನುಮಂತಯ್ಯ ಅವರ ಸಚಿವ ಸಂಪುಟದಲ್ಲಿ ಆರೋಗ್ಯ, ಶಿಕ್ಷಣ, ವಿದ್ಯುತ್ ಮತ್ತು ಕೈಗಾರಿಕ ಸಚಿವರಾಗಿದ್ದರು. 2 ಬಾರಿ ಪಕ್ಷೇತರ ಮತ್ತು 2 ಬಾರಿ ಕಾಂಗ್ರೆಸ್‌ನಿಂದ ವಿಜೇತರಾಗಿ ಒಟ್ಟು 4 ಬಾರಿ ಕ್ಷೇತ್ರದ ಶಾಸಕರಾಗಿದ್ದರು. ರಾಮೇಗೌಡರ ಅನಂತರ ಆರ್.ಎಲ್.ಜಾಲಪ್ಪ 1983ರಲ್ಲಿ ವಿಧಾನಸಭೆ ಪ್ರವೇಶ ಮಾಡಿದ್ದು ಕ್ರಾಂತಿರಂಗ ಪಕ್ಷದಿಂದ. ಅನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಸತತ 4 ಬಾರಿ ಶಾಸಕರಾಗಿದ್ದರು. ಸಹಕಾರ, ಗೃಹ ಮತ್ತು ಕಂದಾಯ ಖಾತೆಗಳ ಸಚಿವರಾಗಿ, ಅನಂತರ 2 ಬಾರಿ ಸಂಸದರಾಗಿ ಕೇಂದ್ರದ ಜವುಳಿ ಸಚಿವರಾಗಿದ್ದರು. ಅನಂತರ ಆರ್.ಜಿ.ವೆಂಕಟಾಚಲಯ್ಯ(ಜನತಾದಳ) ವಿ.ಕೃಷ್ಣಪ್ಪ (ಬಿಜೆಪಿ) ತಲಾ 1 ಬಾರಿ ಹಾಗೂ ಜೆ.ನರಸಿಂಹಸ್ವಾಮಿ 2 ಬಾರಿ ಕಾಂಗ್ರೆಸ್, ಒಂದು ಬಾರಿ ಬಿಜೆಪಿ (ಉಪ ಚುನಾವಣೆಯಲ್ಲಿ) ಶಾಸಕರಾಗಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಬಂದ ಅನಿರೀಕ್ಷಿತ ಫಲಿತಾಂಶದಲ್ಲಿ ಹಾಲಿ ಶಾಸಕ ಟಿ. ವೆಂಕಟರಮಣಯ್ಯ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಮತ್ತೆ 2018ರ ಚುನಾವಣೆಯಲ್ಲಿ ಗೆದ್ದು 2 ಬಾರಿ ಶಾಸಕರಾಗಿದ್ದಾರೆ.
ದೇವನಹಳ್ಳಿ
ದೇವನಹಳ್ಳಿ ವಿಧಾನಸಭಾ ಕ್ಷೇತ್ರ 1957ರಲ್ಲಿ ಸಾಮಾನ್ಯ ಕ್ಷೇತ್ರವಾಗಿತ್ತು. 1952ರಲ್ಲಿ ಹೊಸಕೋಟೆ ಮತ್ತು ದೇವನಹಳ್ಳಿ ಎರಡೂ ಒಂದೇ ಕ್ಷೇತ್ರವಾಗಿದ್ದವು. ಆಗ ಮೊದಲ ಬಾರಿಗೆ ಸೂಲಿಬೆಲೆಯ ಸೂರಂ ರಾಮಯ್ಯ ಶಾಸಕರಾಗಿದ್ದರು. ಹನುಮಂತರಾಯಪ್ಪ ಅನಂತರ ಎಂ.ಎಸ್.ರಾಮಯ್ಯ ಪುತ್ರ ಎಂ.ಆರ್.ಜಯರಾಂ, ಡಿ.ಎಸ್.ಗೌಡ ಶಾಸಕರಾಗಿದ್ದರು. 1978ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಯಿತು. ಮೊದಲ ಬಾರಿಗೆ ಜನತಾ ಪಕ್ಷದಿಂದ ಕನ್ನಮಂಗಲದ ನಾರಾಯಣಪ್ಪ ಮೊದಲ ಶಾಸಕರಾದರು. ಅನಂತರ ಜನತಾ ಪಕ್ಷದಿಂದಲೇ ಅಣ್ಣೇಶ್ವರದ ಮರಿಯಪ್ಪ, ಪಾಪನಹಳ್ಳಿಯ ಪಿ.ಸಿ.ಮುನಿಶಾಮಯ್ಯ ಶಾಸಕರಾಗಿದ್ದರು.
ಕಾಂಗ್ರೆಸ್‌ನಿಂದ ಮುನಿನರಸಿಂಹಯ್ಯ ಮೊದಲ ಬಾರಿಗೆ ಶಾಸಕರಾದರು. ಅನಂತರ ಜನತಾದಳದಿಂದ ಜಿ.ಚಂದ್ರಣ್ಣ ಶಾಸಕರಾದರು. ಮುನಿನರಸಿಂಹಯ್ಯ ಹಾಗೂ ಜಿ.ಚಂದ್ರಣ್ಣ 2 ಬಾರಿ ಶಾಸಕರಾಗಿ, 2 ಬಾರಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನಿಂದ 2008ರಲ್ಲಿ ವೆಂಕಟಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಮಂಡಲ ಪಂ. ಹಾಗೂ ಜಿ.ಪಂ. ಮಾಜಿ ಸದಸ್ಯರಾಗಿದ್ದ ಪಿಳ್ಳಮುನಿಶಾಮಪ್ಪ ಶಾಸಕರಾಗಿ ಆಯ್ಕೆ ಗೊಂಡರು. 2018ರಲ್ಲಿ ಜೆಡಿಎಸ್‌ನಿಂದ ಸಮಾಜ ಸೇವಕ ನಿಸರ್ಗ ಎಲ್.ಎನ್. ನಾರಾಯಣಸ್ವಾಮಿ ಸಿ.ಫಾರಂ ಪಡೆದು ದೇವನಹಳ್ಳಿ ಕ್ಷೇತ್ರದ ಶಾಸಕರಾದರು.
ನೆಲಮಂಗಲ
ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಜೆಡಿಎಸ್ ಪ್ರಾಬಲ್ಯವಿದೆಯಾದರೂ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 1951ರಲ್ಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಇಂದಿನವರೆಗೂ ನಡೆದ 17 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ, ಜನತಾಪಕ್ಷ 2 ಬಾರಿ, ಜನತಾದಳ 1 ಬಾರಿ, ಬಿಜೆಪಿ ಒಮ್ಮೆ, ಜೆಡಿಎಸ್ ಎರಡು ಬಾರಿ ಗೆದ್ದಿವೆ. ಕೆ.ಪ್ರಭಾಕರ್ ಅವರು ಕಾಂಗ್ರೆಸ್‌ನಿಂದ ಮೂರು ಬಾರಿ ಗೆದ್ದಿದ್ದರು. ಹಾಗೆಯೇ ಆಲೂರು ಹನುಮಂತಪ್ಪ ಎರಡು ಬಾರಿ, ಅಂಜನಾ ಮೂರ್ತಿ ಮೂರು ಬಾರಿ, ಕೆ.ಶ್ರೀನಿವಾಸ ಮೂರ್ತಿ ಎರಡು ಬಾರಿ ಗೆದ್ದಿದ್ದಾರೆ.
ಹೊಸಕೋಟೆ
ಹೊಸಕೋಟೆ ವಿಧಾನಸಭೆ ಶಾಸಕರ ಸ್ಥಾನಕ್ಕೆ ಮೊದಲ ಬಾರಿಗೆ 1957ರಲ್ಲಿ ಸೂ.ರಂ.ರಾಮಯ್ಯ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಅದೇ ವರ್ಷ 1957 ರುಕ್ಮಿಣಿಯಮ್ಮ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. 1962ರಲ್ಲಿ ಬಿ.ಚನ್ನಬೈರೇಗೌಡ,1967ರಲ್ಲಿ ಕಾಂಗ್ರೆಸ್‌ನಿಂದ ಎನ್.ಚಿಕ್ಕೇಗೌಡ ಆಯ್ಕೆಯಾದರು.
1972ರಲ್ಲಿ ಮತ್ತೆ ಎನ್.ಚಿಕ್ಕೇಗೌಡ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಹಾಗೆಯೇ 1978ರಲ್ಲಿ ಮೊದಲ ಬಾರಿಗೆ ಬಿ.ಎನ್.ಬಚ್ಚೇಗೌಡ ಜನತಾ ಪಕ್ಷದಿಂದ ಗೆಲುವು ಸಾಧಿಸಿದರು. 1983ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಎನ್.ಚಿಕ್ಕೇಗೌಡ, 1985ರಲ್ಲಿ ಜನತಾ ಪಕ್ಷದಿಂದ ಮತ್ತೆ ಬಚ್ಚೇಗೌಡ ಆಯ್ಕೆಯಾದರು. 1989ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಎನ್.ಚಿಕ್ಕೇಗೌಡ ಆಯ್ಕೆ, 1994ರಲ್ಲಿ ಜನತಾದಳದಿಂದ ಮತ್ತೆ ಬಚ್ಚೇಗೌಡ ಆಯ್ಕೆ, 1999ರಲ್ಲಿ ಮತ್ತೆ ಬಚ್ಚೇಗೌಡ ಜೆಡಿಯು ಪಕ್ಷದಿಂದ ಗೆಲುವು ಸಾಧಿಸಿದರು. 2004ರಲ್ಲಿ ಕಾಂಗ್ರೆಸ್‌ನಿಂದ ಎಂಟಿಬಿ ಎನ್.ನಾಗರಾಜ್ ಆಯ್ಕೆ, 2008ರಲ್ಲಿ ಬಚ್ಚೇಗೌಡ ಬಿಜೆಪಿಯಿಂದ ಆಯ್ಕೆಯಾದರು. ಅನಂತರ 2013 ಮತ್ತು 2018ರಲ್ಲಿ ಎಂಟಿಬಿ ನಾಗರಾಜ್ ಕಾಂಗ್ರೆಸ್‌ನಿಂದ ಗೆದ್ದರು. 2019ರಲ್ಲಿ ಆಪರೇಶನ್ ಕಮಲಕ್ಕೆ ತುತ್ತಾದ ಎಂಟಿಬಿ ನಾಗರಾಜ್, ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ಈ ವೇಳೆ ಶರತ್ ಬಚ್ಚೇಗೌಡ ಸ್ವಾಭಿಮಾನಿ ಪಕ್ಷದಿಂದ ಗೆಲುವು ಸಾಧಿಸಿದ್ದರು.
ರಾಮನಗರ 4 ಕ್ಷೇತ್ರಗಳು
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಛಿದ್ರ
ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಸಹಿತ 8 ತಾಲೂಕುಗಳು ಇದ್ದವು. 2007ರ ಅವಧಿಯಲ್ಲಿ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರವೆಂದು ಪ್ರತ್ಯೇಕ ಜಿಲ್ಲೆಯಾಗಿ ಬೇರ್ಪಟ್ಟವು. ಈ ವೇಳೆ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಕ್ಷೇತ್ರವನ್ನು ಒಗ್ಗೂಡಿಸಿ ರಾಮನಗರ ಜಿಲ್ಲಾ ಕೇಂದ್ರವನ್ನಾಗಿ ಮಾರ್ಪಡಿಸಲಾಯಿತು. ಇನ್ನು ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಉಳಿದವು. ಬೆಂ.ಗ್ರಾಮಾಂತರ ಜಿಲ್ಲೆಯ ಸರಕಾರಿ ಕಚೇರಿಗಳು ಬೆಂಗಳೂರು ನಗರದಲ್ಲೇ ಉಳಿದರೆ ರಾಮನಗರ ಜಿಲ್ಲೆಯ ಸರಕಾರಿ ಕಚೇರಿಗಳು ರಾಮನಗರಕ್ಕೆ ವರ್ಗಾವಣೆಯಾದವು.
ಮಾಗಡಿ
ಕರ್ನಾಟಕದ ಅತ್ಯಂತ ಹಳೆಯ ಕ್ಷೇತ್ರಗಳಲ್ಲಿ ಒಂದಾಗಿರುವ ಮಾಗಡಿ, 1951ರಲ್ಲೇ ಅಸ್ತಿತ್ವಕ್ಕೆ ಬಂದಿತ್ತು. ಹಾಗಂತ ಆರಂಭದಲ್ಲಿ ಇದು ಕಾಂಗ್ರೆಸ್‌ನ ಭದ್ರಕೋಟೆಯೇನಾಗಿರಲಿಲ್ಲ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್. ಸಿದ್ಧಪ್ಪ ಗೆದ್ದಿದ್ದರು. ಆದರೆ, 1957, 1962, 1967ರಲ್ಲಿ ಪ್ರಜಾಸೋಶಿಯಲಿಸ್ಟ್ ಪಾರ್ಟಿಯ ಅಭ್ಯರ್ಥಿಗಳು ಗೆದ್ದಿದ್ದರು. ಅಂದರೆ ಕ್ರಮವಾಗಿ ಬಿ.ಸಿಂಗ್ರಿಗೌಡ ಒಮ್ಮೆ, ಸಿ.ಆರ್.ರಂಗೇಗೌಡ ಎರಡು ಬಾರಿ ಗೆದ್ದರು. 1972ರಲ್ಲಿ ಪಕ್ಷೇತರ ಎಚ್.ಜಿ.ಚನ್ನಪ್ಪ ಗೆದ್ದಿದ್ದರು. 1978ರಲ್ಲಿ ಜನತಾ ಪಕ್ಷದ ಬೆಟ್ಟೇಸ್ವಾಮಿ ಗೌಡ ಅವರಿಗೆ ಈ ಕ್ಷೇತ್ರ ಒಲಿದಿದ್ದರೆ, 1983ರಲ್ಲಿ ಕಾಂಗ್ರೆಸ್‌ನಿಂದ ಎಚ್.ಜಿ. ಚನ್ನಪ್ಪ ಅವರು ಗೆದ್ದಿದ್ದರು. ಇವರು 1972ರಲ್ಲಿ ಪಕ್ಷೇತರರಾಗಿ ಗೆದ್ದು, 1983ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಆರಿಸಿ ಬಂದಿದ್ದರು. ವಿಶೇಷವೆಂದರೆ 1985ರಲ್ಲಿ ಜನತಾಪಾರ್ಟಿಯಿಂದ ಗೆದ್ದು ಬಂದಿದ್ದರು. 1989 ಮತ್ತು 1999ರಲ್ಲಿ ಕಾಂಗ್ರೆಸ್‌ನಿಂದ ಎಚ್.ಎಂ.ರೇವಣ್ಣ ಜಯಗಳಿಸಿದ್ದರು. 1994ರಲ್ಲಿ ಎಚ್.ಸಿ.ಬಾಲಕೃಷ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. 2004ರಿಂದಲೂ ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. 2004ರಲ್ಲಿ ಜೆಡಿಎಸ್‌ಗೆ ಸೇರಿ ಸ್ಪರ್ಧಿಸಿದ ಎಚ್.ಸಿ.ಬಾಲಕೃಷ್ಣ ಅವರು ಸತತವಾಗಿ ಮೂರು ಬಾರಿ ಆಯ್ಕೆಯಾದರು. 2018ರಲ್ಲಿ ಜೆಡಿಎಸ್‌ನ ಎ.ಮಂಜುನಾಥ್ ಗೆದ್ದಿದ್ದಾರೆ. 2018ರಲ್ಲಿ ಬಾಲಕೃಷ್ಣ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.
ಚನ್ನಪಟ್ಟಣ
ಸದ್ಯ ಬಿಜೆಪಿಯಲ್ಲಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಒಂದು ಕಾಲದಲ್ಲಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರ, ಈಗ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ತೆಕ್ಕೆಯಲ್ಲಿದೆ. ಯೋಗೇಶ್ವರ್ ಯಾವುದೇ ಪಕ್ಷಕ್ಕೆ ಸೇರಲಿ, ಜನ ಮಾತ್ರ ಅವರ ಕೈಬಿಡುತ್ತಿರಲಿಲ್ಲ. ಆದರೆ 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಯೋಗೇಶ್ವರ್‌ಗೆ ಸೋಲುಣಿಸಿದರು. 1951ರಲ್ಲಿ ರಚನೆಯಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜನತಾ ಪಾರ್ಟಿ, ಬಿಜೆಪಿ, ಜನತಾ ದಳ, ಜೆಡಿಎಸ್ ಪಕ್ಷಗಳು ಗೆಲುವಿನ ರುಚಿ ಕಂಡಿವೆ. ಮೊದಲ ಚುನಾವಣೆಯಲ್ಲಿ ವಿ.ವೆಂಕಟಪ್ಪ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1957ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯ ಬಿ.ಕೆ.ಪುಟ್ಟರಾಮಯ್ಯ, 1962ರಲ್ಲಿ ಕಾಂಗ್ರೆಸ್‌ನ ಬಿ.ಜೆ.ಲಿಂಗೇಗೌಡ, 1967 ಮತ್ತು 1972ರಲ್ಲಿ ಟಿ.ವಿ. ಕೃಷ್ಣಪ್ಪ ಕ್ರಮವಾಗಿ ಸ್ವತಂತ್ರ, ಕಾಂಗ್ರೆಸ್‌ನಿಂದ ಗೆದ್ದಿದ್ದರು.
1983 ಮತ್ತು 1985ರಲ್ಲಿ ಜನತಾ ಪಾರ್ಟಿಯ ಎಂ.ವರದೇಗೌಡ, 1989ರಲ್ಲಿ ಕಾಂಗ್ರೆಸ್‌ನಿಂದ ಸಾದತ್ ಅಲಿ ಖಾನ್, 1994ರಲ್ಲಿ ಜನತಾ ದಳದಿಂದ ಎಂ.ವರದೇಗೌಡ ಗೆಲುವು ಸಾಧಿಸಿದ್ದರು. 1999ರಲ್ಲಿ ಸ್ವತಂತ್ರ, 2004 ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಸಿ.ಪಿ.ಯೋಗೇಶ್ವರ್ ಆರಿಸಿ ಬಂದಿದ್ದರು. 2009ರಲ್ಲಿ ಜನತಾದಳದ ಅಶ್ವತ್ ಎಂ.ಸಿ. ಗೆದ್ದಿದ್ದರು. 2011ರಲ್ಲಿ ಬಿಜೆಪಿಯಿಂದ 2013ರಲ್ಲಿ ಸಮಾಜವಾದಿ ಪಕ್ಷದಿಂದ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ್ದರು. 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿ, ಬಳಿಕ ಸಿಎಂ ಆದರು.
ಕನಕಪುರ
ಮೊದಲಿಗೆ ಪಿಜಿಆರ್ ಸಿಂಧ್ಯಾ ಅವರ ಭದ್ರಕೋಟೆಯಾಗಿದ್ದ ಈ ಕನಕಪುರ, ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಭೇದ್ಯಕೋಟೆಯಾಗಿ ಮಾರ್ಪಟ್ಟಿದೆ. 1957ರಲ್ಲಿ ರಚನೆಯಾದ ಈ ಕ್ಷೇತ್ರ ರಾಜಕೀಯವಾಗಿ ಬಹಳಷ್ಟು ವೈವಿಧ್ಯಮಯವಾಗಿದೆ. ಮೊದಲ ಚುನಾವಣೆಯಲ್ಲೇ ಇಲ್ಲಿ ಕಾಂಗ್ರೆಸ್ ಸೋತಿತ್ತು. ಆಗ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯ ಎಂ.ಲಿಂಗೇಗೌಡ ಅವರು ಆರಿಸಿ ಬಂದಿದ್ದರು. 1962ರಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್.ಕರಿಯಪ್ಪ ಗೆದ್ದು ಅಚ್ಚರಿ ಮೂಡಿಸಿದ್ದರು. 1967ರಿಂದ 1978ರ ವರೆಗೆ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದರು. 1983ರಲ್ಲಿ ಪಿಜಿಆರ್ ಸಿಂಧ್ಯಾ ಅವರೇ ಜನತಾ ಪಾರ್ಟಿಯಿಂದ ಗೆದ್ದಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದರು. ಒಕ್ಕಲಿಗರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ರಾಮಕೃಷ್ಣ ಹೆಗಡೆ ಅವರು ಗೆದ್ದು ಬಂದಿದ್ದರು. ಬಳಿಕ 1985, 1989, 1994ರಲ್ಲಿ ಸಿಂಧ್ಯಾ ಅವರು ಜನತಾ ಪಾರ್ಟಿಯಿಂದ, 1999 ಮತ್ತು 2004ರಲ್ಲಿ ಜನತಾ ದಳದಿಂದ ಗೆದ್ದರು. ಆದರೆ 2008ರಿಂದ ಇಲ್ಲಿವರೆಗೆ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರೇ ಆರಿಸಿ ಬರುತ್ತಿದ್ದಾರೆ.
ರಾಮನಗರ
ನಾಡಿಗೆ ಮೂರು ಮುಖ್ಯಮಂತ್ರಿಗಳು, ಒಬ್ಬ ಪ್ರಧಾನಮಂತ್ರಿಯನ್ನು ನೀಡಿದ ಕ್ಷೇತ್ರ ರಾಮನಗರ. ಅಲ್ಲದೆ ನಾಡಿನ ಶಕ್ತಿಸೌಧ ವಿಧಾನಸೌಧದ ನಿರ್ಮಾತೃ, ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಕ್ಷೇತ್ರವಿದು. ಅಷ್ಟೇ ಅಲ್ಲ 1994ರಲ್ಲಿ ಇದೇ ಕ್ಷೇತ್ರದಿಂದ ಗೆದ್ದಿದ್ದ ಎಚ್.ಡಿ.ದೇವೇಗೌಡರು ಸಿಎಂ ಆಗಿ ಆಯ್ಕೆಯಾಗಿದ್ದರು. ಬಳಿಕ 1996ರಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿ, ಪ್ರಧಾನಿಯಾಗಿ ದೇವೇಗೌಡರು ದಿಲ್ಲಿಗೆ ಹೋದರು. ಎಚ್.ಡಿ.ಕುಮಾರಸ್ವಾಮಿ ಅವರು 2004ರಲ್ಲಿ ಇದೇ ಕ್ಷೇತ್ರದಿಂದಲೇ ಗೆದ್ದು ಮುಖ್ಯಮಂತ್ರಿಯಾದರು.
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಈ ಕ್ಷೇತ್ರ, ಅನಂತರದ ದಿನಗಳಲ್ಲಿ ಜೆಡಿಎಸ್‌ನತ್ತ ವಾಲಿದೆ. ಮೊದಲ ಎರಡು ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಗೆದ್ದಿತ್ತು. 1957ರಲ್ಲಿ ಕೆಂಗಲ್ ಹನುಮಂತಯ್ಯ, 1962ರಲ್ಲಿ ಟಿ.ಮಾದಯ್ಯ ಗೌಡ ಅವರು ಗೆದ್ದಿದ್ದರು. 1967ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಿ.ಆರ್.ಧನಂಜಯ ಗೆದ್ದು ಅಚ್ಚರಿ ಮೂಡಿಸಿದ್ದರು. ಮತ್ತೆ 1972ರಲ್ಲಿ ಬಿ.ಪುಟ್ಟಸ್ವಾಮಯ್ಯ, 1978ರಲ್ಲಿ ಎ.ಕೆ.ಅಬ್ದುಲ್ ಸಮದ್ ಅವರು ಕೈ ಪಕ್ಷದಿಂದಲೇ ಆರಿಸಿ ಬಂದಿದ್ದರು. 1983 ಮತ್ತು 1985ರಲ್ಲಿ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆದ್ದಿದ್ದರು. 1989ರಲ್ಲಿ ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ, 1994ರಲ್ಲಿ ಜನತಾದಳದ ಎಚ್.ಡಿ.ದೇವೇಗೌಡ, 1997 ಮತ್ತು 1999ರಲ್ಲಿ ಮತ್ತೆ ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ ಗೆದ್ದಿದ್ದರು. 2004 ಮತ್ತು 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿಯವರೇ ಗೆದ್ದಿದ್ದರು. ಆದರೆ 2009ರಲ್ಲಿ ಜೆಡಿಎಸ್‌ನಿಂದ ಕೆ.ರಾಜು ಎಂಬವರಿಗೆ ಟಿಕೆಟ್ ನೀಡಲಾಗಿತ್ತು. ಇವರೇ ಗೆಲುವು ಸಾಧಿಸಿದ್ದರು. ಮತ್ತೆ 2013 ಮತ್ತು 2018ರಲ್ಲಿ ಕುಮಾರಸ್ವಾಮಿಯವರೇ ಗೆದ್ದಿದ್ದರು. 2018ರಲ್ಲಿ ಈ ಕ್ಷೇತ್ರಕ್ಕೆ ಎಚ್‌ಡಿಕೆ ರಾಜೀನಾಮೆ ನೀಡಿದ್ದರಿಂದ ಅನಿತಾ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.