ಬೆಳಗಾವಿ ಪಾಲಿಕೆ ಕಂಗಾಲು- ಅನುದಾನಕ್ಕಾಗಿ ಬೆಂಗಳೂರಿಗೆ ಸದಸ್ಯನ ಸೈಕಲ್ ಸವಾರಿ
Team Udayavani, Aug 23, 2024, 6:06 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಅನುದಾನ ಇಲ್ಲದೇ ಬೆಳಗಾವಿ ನಗರದ ಅಭಿವೃದ್ಧಿ ಸಂಪೂರ್ಣ ಮರೀಚಿಕೆ ಆಗಿದ್ದು, ರಾಜ್ಯ ಸರ್ಕಾರ ಅನುದಾನ ನೀಡಿ ಗಡಿ ಭಾಗ ಬೆಳಗಾವಿ ಅಭಿವೃದ್ಧಿಯತ್ತ ಗಮನಹರಿಸುವಂತೆ ಆಗ್ರಹಿಸಿ ಪಾಲಿಕೆ ಪಕ್ಷೇತರ ಸದಸ್ಯ ಶಂಕರ ಪಾಟೀಲ ಸೈಕಲ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾರೆ.
ಸದ್ಯ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಾಕಿ ಉಳಿದಿರುವ 9.30 ಕೋಟಿ ರೂ. ಅನುದಾನದ ಹಂಚಿಕೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಟಾಪಟಿ ಶುರುವಾಗಿದ್ದು, ಅನುದಾನ ಇಲ್ಲದೇ ಸೊರಗಿರುವ ಪಾಲಿಕೆಯತ್ತ ರಾಜ್ಯ ಸರ್ಕಾರ ಗಮನಹರಿಸಬೇಕಿದೆ. ಹೀಗಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರನ್ನು ಭೇಟಿಯಾಗಿ ಅನುದಾನ ಒದಗಿಸುವಂತೆ ಮನವಿ ಮಾಡಲು ವಾರ್ಡ್ ಸಂಖ್ಯೆ 7ರ ಪಕ್ಷೇತರ ಸದಸ್ಯ ಶಂಕರ ಪಾಟೀಲ ಸೈಕಲ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ವಿಶೇಷ ಅನುದಾನದಿಂದ ಪ್ರತಿ ವರ್ಷ 125 ಕೋಟಿ ರೂ. ಅನುದಾನ ಮಹಾನಗರ ಪಾಲಿಕೆಗೆ ಸಿಗುತ್ತಿತ್ತು. ಈಗ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಒಂದೂವರೆ ವರ್ಷದಿಂದ ಅನುದಾನವನ್ನೇ ನೀಡಿಲ್ಲ. ಪಕ್ಷದ ಚಿಹ್ನೆ ಮೇಲೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪಾಲಿಕೆಗೆ ಸರ್ಕಾರ ಅನುದಾನವನ್ನೇ ಕಲ್ಪಿಸಿಲ್ಲ. ಇದರಿಂದ ಬೆಳಗಾವಿ ನಗರದ ಅಭಿವೃದ್ಧಿ ಗಗನಕುಸುಮವಾಗಿದೆ.
ಅಭಿವೃದ್ಧಿ ಇಲ್ಲದೇ ಜನ ಹೈರಾಣ: 15ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರತಿ ವಾರ್ಡ್‌ಗೆ ಕೇವಲ 11 ಲಕ್ಷ ರೂ. ಅನುದಾನ ಮಾತ್ರ ಸಿಕ್ಕಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಅಭಿವೃದ್ಧಿ ಮಾಡುವುದಾದರೂ ಹೇಗೆ? ಅಭಿವೃದ್ಧಿ ಕೆಲಸಗಳಿಲ್ಲದೇ ವಾರ್ಡ್‌ನ ಜನರು ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಲ್ಲದೇ ಜನರು ರೋಸಿ ಹೋಗಿದ್ದಾರೆ. ಇದರಿಂದ ಸದಸ್ಯರು ಇತ್ತ ಅನುದಾನ ಇಲ್ಲದೇ ಸಾರ್ವಜನಿಕರ ತರಾಟೆಗೆ ಒಳಗಾಗುತ್ತಿದ್ದಾರೆ.
ಪಾಲಿಕೆಗೆ ಪ್ರತಿ ವರ್ಷ ಬರುತ್ತಿದ್ದ ಅನುದಾನವಷ್ಟೇ ನೀಡಿದರೂ ಎಲ್ಲ 58 ವಾರ್ಡ್‌ಗಳಿಗೆ ಸಮನಾಗಿ ಹಂಚಿಕೆ ಮಾಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹು ದಾಗಿದೆ. ಆದರೆ ಒಂದೂವರೆ ವರ್ಷದಿಂದ ಅನುದಾನವೇ ಇಲ್ಲದೇ ಪರಿತಪಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಪಕ್ಷೇತರ ಸದಸ್ಯ ಶಂಕರ ಪಾಟೀಲ ಬೆಂಗಳೂರಿಗೆ ತೆರಳಿ ಸಚಿವರನ್ನು ಭೇಟಿಯಾಗಿ ಅನುದಾನ ಕೊಡುವಂತೆ ಮನವಿ ಮಾಡಲಿದ್ದಾರೆ.
ನಗರಾಭಿವೃದ್ಧಿ ಸಚಿವರಿಗೆ ಮನವಿ: ನಮ್ಮ ವಾರ್ಡ್ ಗಳಲ್ಲಿ ಹೋದರೆ ಜನ ಪ್ರಶ್ನಿಸುತ್ತಿದ್ದಾರೆ. ಕೆಲಸ ಮಾಡಿ ಕೊಡುವಂತೆ ಕೇಳಿದರೆ ನಮ್ಮ ಬಳಿ ಉತ್ತರ ಇಲ್ಲವಾಗಿದೆ. ಅನೇಕ ಸಲ ನಾವು ಮೇಯರ್ ಹಾಗೂ ಪಾಲಿಕೆ ಆಯುಕ್ತರ ಬಳಿ ಮನವಿ ಮಾಡಿದ್ದೇವೆ. ಅನುದಾನ ಇಲ್ಲದೇ ಅವರೂ ಕೈಚೆಲ್ಲಿ ಕುಳಿತಿದ್ದಾರೆ. ಈಗ ಅನಿವಾರ್ಯವಾಗಿ ನಾನು ಸರ್ಕಾರದ ಬಳಿ ನಿಯೋಗ ಹೊರಟಿದ್ದೇನೆ. ನಗರಾಭಿವೃದ್ಧಿ ಸಚಿವರು ಭೇಟಿಯಾಗಲು ಸಮಯ ನಿಗದಿಪಡಿಸಿದಾಗ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಮೇಲೆ
ತೆರಳಲಿದ್ದೇನೆ ಎಂದು ಸದಸ್ಯ ಶಂಕರ ಪಾಟೀಲ ತಿಳಿಸಿದ್ದಾರೆ.
9.30 ಕೋಟಿ ರೂ. ಅನುದಾನದಲ್ಲಿ ಜಟಾಪಟಿ
2022-23ರಲ್ಲಿ 20 ಕೋಟಿ ರೂ. ಅನುದಾನ ಇತ್ತು. ಇದರಲ್ಲಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರಕ್ಕೆ ತಲಾ 10 ಕೋಟಿ ರೂ. ನಿಗದಿ ಮಾಡಲಾಗಿತ್ತು. ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಅವರು ತಮ್ಮ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿಯೂ 10 ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನಿಲ ಬೆನಕೆ ಈ 10 ಕೋಟಿ ರೂ. ಹಣವನ್ನು ಬಳಕೆ ಮಾಡಿಕೊಳ್ಳಲಿಲ್ಲ. ಇದರಲ್ಲಿ ಕೇವಲ 70 ಲಕ್ಷ ರೂ. ಮಾತ್ರ ಬಳಸಿಕೊಂಡು 9.30 ಕೋಟಿ ರೂ. ಹಣ ಬಾಕಿ ಉಳಿದಿತ್ತು. 2023-24ರಲ್ಲಿಯೂ ಈ ಹಣ ಬಳಕೆ ಆಗಲಿಲ್ಲ. ಈಗ ಒಟ್ಟು 9.30 ಕೋಟಿ ರೂ. ಹಣವನ್ನು ಎಲ್ಲ ವಾರ್ಡ್‌ಗಳಿಗೂ ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿ ವಾರ್ಡ್‌ಗೆ 36 ಲಕ್ಷ ರೂ. ಹಂಚಿಕೆ ಮಾಡಲು ನಿಗದಿಗೊಳಿಸಲಾಗಿದೆ. ಈ ಅನುದಾನದಲ್ಲಿಯೂ ವಿರೋಧ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ನಿಯೋಗದಲ್ಲಿ ತೆರಳಲು ಆಡಳಿತ-ವಿರೋಧ ಪಕ್ಷಕ್ಕೆ ಇಚ್ಛಾಶಕ್ತಿ ಕೊರತೆ
ಅನುದಾನ ಕೇಳಲು ಪಾಲಿಕೆಯ ಎಲ್ಲ ಸದಸ್ಯರೂ ಪಕ್ಷಾತೀತವಾಗಿ ಸರ್ಕಾರದ ಬಳಿ ನಿಯೋಗ ತೆರಳಬೇಕಿತ್ತು. ಆದರೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಇಚ್ಛಾಶಕ್ತಿ ಕೊರತೆ ಕಂಡು ಬರುತ್ತಿದೆ. ಇತ್ತ ಕಾಂಗ್ರೆಸ್ ಸರ್ಕಾರ ಅ ಧಿಕಾರದಲ್ಲಿ ಇರುವುದರಿಂದ ವಿರೋಧ ಪಕ್ಷದವರು ಹಿಂದೇಟು ಹಾಕುತ್ತಿದ್ದರೆ, ಇತ್ತ ಬಿಜೆಪಿ ಸದಸ್ಯರಿಗೆ ನಾವೇಕೆ ಸರ್ಕಾರದ ಬಳಿ ಕೈ ಒಡ್ಡುವುದು ಎಂಬ ಪ್ರತಿಷ್ಠೆ ಕಾಡುತ್ತಿದೆ. ಹೀಗಾಗಿ ಅನುದಾನ ಇಲ್ಲದೇ ಪಾಲಿಕೆ ಸಂಪೂರ್ಣವಾಗಿ ಸೊರಗುತ್ತಿದೆ. ಹೀಗಾಗಿ ಪಕ್ಷೇತರ ಸದಸ್ಯ ಶಂಕರ ಪಾಟೀಲ ಒಬ್ಬರೇ ಸರ್ಕಾರದ ಬಳಿ ಬೆಳಗಾವಿ ಅಭಿವೃದ್ಧಿಗಾಗಿ ಅನುದಾನ ಕೇಳಲು ಸೈಕಲ್ ಮೂಲಕ ತೆರಳುತ್ತಿರುವುದು ವಿಶೇಷ.
ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಗಡಿ ಭಾಗದಲ್ಲಿರುವ ಬೆಳಗಾವಿಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಪ್ರತಿವರ್ಷ ಬರುತ್ತಿದ್ದ 125 ಕೋಟಿ ರೂ. ಅನುದಾನ ನೀಡಿದರೆ ಸಮಗ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಲು ಸೈಕಲ್ ಮೂಲಕ ಬೆಂಗಳೂರಿಗೆ ತೆರಳಲು ನಿರ್ಧರಿಸಿದ್ದೇನೆ.
*ಶಂಕರ ಪಾಟೀಲ, ಪಾಲಿಕೆ ಪಕ್ಷೇತರ ಸದಸ್ಯ
■ ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.