ವಂದೇ ಭಾರತ್‌ಗೆ ಬೆಳಗಾವಿ ಜನರ ಅಸಮಾಧಾನ-ಪುಣೆಯಿಂದ ಹುಬ್ಬಳ್ಳಿಗೆ ಹೊಸ ರೈಲು
ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಆರಂಭ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
Team Udayavani, Sep 13, 2024, 1:55 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಹುಬ್ಬಳ್ಳಿಯಿಂದ ಬೆಳಗಾವಿ ಮೂಲಕ ಪುಣೆವರೆಗೆ ನೂತನ ವಂದೇ ಭಾರತ್ ರೈಲು ಸಂಚಾರ ಸುದ್ದಿ ಗಡಿ ಭಾಗದ ಬೆಳಗಾವಿ ಜನರಲ್ಲಿ ಮತ್ತೆ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲಿನ ನಿರೀಕ್ಷೆಯಲ್ಲಿದ್ದ ಜನರು ಜಿಲ್ಲೆಯ ರಾಜಕೀಯ ನಾಯಕರ ಇಚ್ಛಾಶಕ್ತಿ ಬಗ್ಗೆ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ಹುಬ್ಬಳ್ಳಿ ಭಾಗದ ರಾಜಕೀಯ ನಾಯಕರು ಇಚ್ಛಾಶಕ್ತಿ ತೋರಿಸುತ್ತಿದ್ದರೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜಕೀಯ ಪ್ರತಿಷ್ಠೆ ಎಲ್ಲದಕ್ಕೂ ಸಮಸ್ಯೆಯಾಗುತ್ತಿದೆ. ಪರಸ್ಪರ ಸಹಕಾರದ ಕೊರತೆ ಎದ್ದುಕಾಣುತ್ತಿದೆ. ವರ್ಷದ ಹಿಂದೆ ಬೆಂಗಳೂರಿನಿಂದ ಬೆಳಗಾವಿಯವರೆಗೆ ಯಶಸ್ವಿ ಪ್ರಾಯೋಗಿಕ ಚಾಲನೆಗಳ ಹೊರತಾಗಿಯೂ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆಗಳು ನೇರವಾಗಿ ಬೆಳಗಾವಿ ನಿವಾಸಿಗಳಿಗೆ ಲಭ್ಯವಿಲ್ಲ ಎಂಬ ಸುದ್ದಿ ಸಹಜವಾಗಿಯೇ ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗಿದೆ.
ಪ್ರಸ್ತುತ ಹೈಸ್ಪೀಡ್ ರೈಲು ಬೆಂಗಳೂರು ಮತ್ತು ಧಾರವಾಡ ನಡುವೆ ಕಾರ್ಯನಿರ್ವಹಿಸುತ್ತಿದ್ದರೂ ಇದೇ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ಇಲಾಖೆ ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ತಾಂತ್ರಿಕ ಕಾರಣಗಳನ್ನು ಒಡ್ಡುತ್ತಲೇ ಬಂದಿದೆ. ಆದರೆ ಈಗ ಹುಬ್ಬಳ್ಳಿಯಿಂದ ಬೆಳಗಾವಿ ಮೂಲಕ ಹಾದು ಹೋಗುವ ಪುಣೆ ಮತ್ತು ಹುಬ್ಬಳ್ಳಿ (570 ಕಿಮೀ) ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಪ್ರಾರಂಭ ಜಿಲ್ಲೆಯ ಜನರಲ್ಲಿ ಅಚ್ಚರಿ ಮತ್ತು ಅಸಮಾಧಾನ ಹುಟ್ಟುಹಾಕಿದೆ.
ನಿರಂತರ ಮನವಿಗಳ ನಡುವೆಯೂ ಬೆಂಗಳೂರು-ಧಾರವಾಡ ವಂದೇ ಭಾರತ್ ಸೇವೆಯನ್ನು ಬೆಳಗಾವಿಗೆ (610 ಕಿಮೀ) ವಿಸ್ತರಣೆ
ಮಾಡುತ್ತಿಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಲೇ ಬಂದರು. ಆಗ ಜನರೂ ಈ ಅಭಿಪ್ರಾಯಕ್ಕೆ ತಲೆಬಾಗಿ ಸುಮ್ಮನಾದರು. ಆದರೆ ಈಗ ಅದೇ ವಂದೇ ಭಾರತ್ ರೈಲು ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳ್ಳಿಗೆ
ಸಂಚರಿಸುವುದಾದರೆ ಅದಕ್ಕೆ ಯಾವ ತಾಂತ್ರಿಕ ಸಮಸ್ಯೆಗಳೂ ಬರುವದಿಲ್ಲವೇ ಎಂಬುದು ಜನರ ಪ್ರಶ್ನೆ.
ಮುಖ್ಯವಾಗಿ ಪುಣೆ ಮತ್ತು ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ ಇದುವರೆಗೆ ನಡೆದಿಲ್ಲ. ಹೀಗಿದ್ದರೂ ಅದಕ್ಕೆ ರೈಲ್ವೆ ಸಚಿವರು ಅನುಮೋದನೆ ಕೊಡಲು ಕಾರಣ ಏನು, ಇದರ ಹಿಂದೆ ಯಾವ ಪ್ರಭಾವ ಕೆಲಸ ಮಾಡಿತು ಎಂಬ ಅನುಮಾನ ಹುಟ್ಟಿಕೊಂಡಿದೆ.
ಮಾಹಿತಿ ಪ್ರಕಾರ ಧಾರವಾಡ ಮತ್ತು ಬೆಳಗಾವಿ ನಡುವಿನ ಪ್ರಯಾಣದ ಸಮಯ ಎರಡೂ ದಿಕ್ಕುಗಳಲ್ಲಿ ಸುಮಾರು 1 ಗಂಟೆ 40 ನಿಮಿಷಗಳು ಎಂದು ಅಂದಾಜಿಸಲಾಗಿದೆ. ರೈಲ್ವೆ ಮಂಡಳಿ ಪ್ರಕಾರ ಬೆಂಗಳೂರು ಮತ್ತು ಬೆಳಗಾವಿ ನಡುವಿನ ಪ್ರಯಾಣಕ್ಕೆ 7 ಗಂಟೆ 45 ನಿಮಿಷಗಳ ಸಮಯ ಬೇಕು. ಅದೇ ಪುಣೆ-ಹುಬ್ಬಳ್ಳಿ ವಂದೇ ಭಾರತ್ ಸೇವೆ 8 ಗಂಟೆ 30 ನಿಮಿಷಗಳ ಪ್ರಯಾಣದ ಅವಧಿಯನ್ನು ಹೊಂದಿದೆ. ಹೀಗಿರುವಾಗ ಯಾವ ಮಾನದಂಡದ ಮೇಲೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಆರಂಭ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಮರೆಯಾದ ಸಿಹಿಸಂಭ್ರಮ: ಕಳೆದ ನವೆಂಬರ್‌ನಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕವಾಗಿ ಗಡಿನಾಡು ಬೆಳಗಾವಿಗೆ ಬಂದಾಗ ರಾಜಕೀಯ ಪಕ್ಷಗಳಿಂದ ವಿಜಯೋತ್ಸವವೇ ನಡೆದಿತ್ತು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ವಿಜಯೋತ್ಸವದ ಜತೆಗೆ ವಂದೇ ಭಾರತ್ ರೈಲಿನ ಹಿಂದೆ ಎರಡು ಪ್ರಮುಖ ಪಕ್ಷಗಳ ನಾಯಕರ ನಡುವೆ ಕ್ರೆಡಿಟ್ ವಾರ್ ಸಹ ಜೋರಾಗಿ ನಡೆದಿತ್ತು. ಕಾರ್ಯಕರ್ತರು ಸಹ ತಮ್ಮ ನಾಯಕರ ಶ್ರಮದ ಫಲ ಎಂದೇ ಬಿಂಬಿಸಿಕೊಂಡಿದ್ದರು.
ನಂತರ ವಿಜಯೋತ್ಸವ ಮಾಡಿದವರು ಸುಮ್ಮನಾದರು. ಈ ಕಡೆ ಬೆಂಗಳೂರಿನಿಂದ ಬೆಳಗಾವಿಗೆ ಸಂಚಾರ ಆರಂಭಿಸಬೇಕಾಗಿದ್ದ ವಂದೇ ಭಾರತ್ ರೈಲಿಗೆ ತಾಂತ್ರಿಕ ಕಾರಣದ ನೆಪ ಮುಂದೆ ಮಾಡಲಾಯಿತು. ಆನಂತರ ಈ ರೈಲು ಸಂಚಾರದ ಕಥೆ ಏನಾಯಿತು ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ರಾಜಕೀಯ ಆರೋಪ-ಪ್ರತ್ಯಾರೋಪಗಳು ಮಾತ್ರ ನಿರಂತರವಾಗಿ ನಡೆದವು.
ಈ ರಾಜಕೀಯ ಕಿತ್ತಾಟದ ನಡುವೆ ಈಗ ಅಚ್ಚರಿ ಎನ್ನುವಂತೆ ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗುತ್ತಿದೆ. ಇದಕ್ಕೆ ಕಳೆದ ಒಂದು ವರ್ಷದಿಂದ ಪ್ರಯತ್ನ ನಡೆದಿತ್ತು. ಈಗ ಈ ರೈಲು ಬೆಳಗಾವಿ ಮೇಲೆ ಹಾದು ಹೋಗುತ್ತದೆ. ಇಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂಬುದೇ ಇಲ್ಲಿನ ಜನರ ಸಮಾಧಾನ ಅಷ್ಟೆ. ಬೆಳಗಾವಿ ಜನರು ಮತ್ತು
ಉದ್ಯಮಿಗಳು ನೇರವಾಗಿ ಬೆಳಗಾವಿ ಮತ್ತು ಪುಣೆ ನಡುವೆ ವಂದೇ ಭಾರತ್ ರೈಲಿಗೆ ಬೇಡಿಕೆ ಇಟ್ಟಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಪುಣೆಯಿಂದ ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಈಗ ಅದು ಈಡೇರಿದೆ. ಇನ್ನು ಬೆಂಗಳೂರಿನಿಂದ ಧಾರವಾಡದವರೆಗೆ ಬರುವ ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು
ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಸದ್ಯದಲ್ಲೇ ರೈಲ್ವೆ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ.
ಜಗದೀಶ ಶೆಟ್ಟರ, ಬೆಳಗಾವಿ ಸಂಸದ
ಈ ಹಿಂದೆ ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲಿನ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಆಗ ರೈಲ್ವೆ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಹೇಳಿದ ಕಾರಣ ವಂದೇ ಭಾರತ್ ರೈಲು ಸಂಚಾರ ಆರಂಭವಾಗದೆ ನಿರಾಸೆಯಾಗಿತ್ತು. ಈಗ ಯಾವುದೇ ಪ್ರಾಯೋಗಿಕ ಸಂಚಾರ ಇಲ್ಲದೆ ಪುಣೆ-ಹುಬ್ಬಳ್ಳಿ ವಂದೇ ಭಾರತ್ ಸಂಚಾರ ಆರಂಭಿಸಲಾಗುತ್ತಿದೆ. ಹಾಗಾದರೆ ಈ ರೈಲು ಸಂಚಾರಕ್ಕೆ ತಾಂತ್ರಿಕ ಸಮಸ್ಯೆ ಕಾಣಿಸಲಿಲ್ಲವೇ? ಈ ರೀತಿಯ ತಾರತಮ್ಯ ಸರಿಯೇ?
ಪ್ರಸಾದ ಕುಲಕರ್ಣಿ, ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ
* ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ನ 22 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿಯಿಂದ ಧರಣಿ
BIMS: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಕುಟುಂಬಿಕರ ಪ್ರತಿಭಟನೆ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.