Politics: ಮಂಡ್ಯದಲ್ಲಿ ಭಗವಾಧ್ವಜ ತೆರವು- ಕೆರಗೋಡ ಗ್ರಾಮದಲ್ಲಿ ಕೋಲಾಹಲ
ವಿಪಕ್ಷಗಳ ಕೈಗೆ ಮತ್ತೂಂದು ಅಸ್ತ್ರ - ಬಿಜೆಪಿ, ಜೆಡಿಎಸ್, ಬಜರಂಗದಳ ಪ್ರತಿಭಟನೆ
Team Udayavani, Jan 28, 2024, 11:03 PM IST
ಮಂಡ್ಯ/ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡ ಗ್ರಾಮದ ಧ್ವಜಸ್ತಂಭದಲ್ಲಿ ಹಾಕಲಾಗಿದ್ದ ಭಗವಾಧ್ವಜವನ್ನು ಜಿಲ್ಲಾಡಳಿತವು ತ್ವರಿತವಾಗಿ ಇಳಿಸಿ ರಾಷ್ಟ್ರಧ್ವಜ ಹಾರಿಸಿದ್ದು, ಅದು ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಕ್ರಮದ ವಿರುದ್ಧ ರೊಚ್ಚಿಗೆದ್ದಿರುವ ಬಿಜೆಪಿ, ಜೆಡಿಎಸ್, ಬಜರಂಗ ದಳದ ಕಾರ್ಯಕರ್ತರು ಗ್ರಾಮಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದ್ದಲ ಗಲಾಟೆಯ ನಡುವೆಯೇ ರಾಷ್ಟ್ರಧ್ವಜವನ್ನು ಕೆಳಕ್ಕಿಳಿಸಿ ಕೇಸರಿ ಹನುಮ ಧ್ವಜ ಹಾರಿಸುವ ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಜತೆಗೆ ವಾಗ್ವಾದ, ತಳ್ಳಾಟ ನಡೆದಿದೆ.
ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಜತೆಗೆ ಆರ್. ಅಶೋಕ್, ಅಶ್ವತ್ಥನಾರಾಯಣ ಸಹಿತ ಪ್ರಮುಖರನ್ನು ಬಂಧಿಸಿ, ಅನಂತರ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ನಡೆಸಲು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ಕೆರಗೋಡ ಗ್ರಾಮದ ಘಟನೆ ಖಂಡಿಸಿ ರಾಜ್ಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.
ಪ್ರಕರಣದ ವಿವರ
ಕೆರಗೋಡ ಗ್ರಾಮದ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ಭಗವಾಧ್ವಜವನ್ನು ತೆರವುಗೊಳಿಸುವ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದರು. ಅದರಂತೆ ರವಿವಾರ ಮುಂಜಾನೆಯೇ ಸ್ಥಳಕ್ಕೆ ಧಾವಿಸಿದ ಉಪವಿಭಾಗಾ ಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ, ಗ್ರಾಪಂ ಪಿಡಿಒ, ಪೊಲೀಸರ ಬಿಗಿಬಂದೋಬಸ್ತ್ ನಲ್ಲಿ ಭಗವಾಧ್ವಜವನ್ನು ತೆರವುಗೊಳಿಸಿ, ರಾಷ್ಟ್ರಧ್ವಜವನ್ನು ಹಾರಿಸಿದರು.
ಸಂಜೆಯ ವರೆಗೂ ಹೈಡ್ರಾಮಾ
ಭಗವಾಧ್ವಜವನ್ನು ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಲು ಮುಂದಾದ ಪೊಲೀಸರಿಗೆ ಬಿಜೆಪಿ, ಜೆಡಿಎಸ್ ಹಾಗೂ ಬಜರಂಗದಳ ಕಾರ್ಯಕರ್ತರು ಅಡ್ಡಿಪಡಿಸಿದರು. ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜ ಹಾರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ರಾಷ್ಟ್ರಧ್ವಜ ಹಾರಿಸಲು ನಿಯಮಗಳಿವೆ. ಅದನ್ನು ಪಾಲಿಸದೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ ಎಂದು ಆರೋಪಿಸಿದರು. ಇದು ಸಂಜೆ 4ರ ವರೆಗೂ ಮುಂದುವರಿಯಿತು. ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡದೆ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ತಳ್ಳಾಟ, ನೂಕಾಟಗಳು ನಡೆದವು.
ರಸ್ತೆ ತಡೆದು ಆಕ್ರೋಶ
ಪೊಲೀಸರು, ಸರಕಾರ, ಅಧಿಕಾರಿಗಳ ವಿರುದ್ಧ ಬಿಜೆಪಿ, ಜೆಡಿಎಸ್, ಬಜರಂಗದಳ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಶಾಸಕ ಪಿ. ರವಿಕುಮಾರ್ ಗೌಡ ಗಣಿಗರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ತ್ರಿವರ್ಣ ಧ್ವಜ ಹಾರಾಟ
ಸಂಜೆ 4 ಗಂಟೆಯಾಗುತ್ತಿದ್ದಂತೆ ಪೊಲೀಸರು ಹೆಚ್ಚಿನ ಸಿಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡು ಧ್ವಜಸ್ತಂಭದ ಸುತ್ತಲೂ ಬ್ಯಾರಿಕೇಡ್ ನಿರ್ಮಿಸಿದರು. ಈ ಸಂದರ್ಭದಲ್ಲಿ ತಡೆಯಲು ಬಂದವರ ವಿರುದ್ಧ ಲಾಠಿಚಾರ್ಜ್ ಮಾಡಿ ಚದುರಿಸಿದರು. ಅನಂತರ ಪೊಲೀಸರೇ ರಾಷ್ಟ್ರಧ್ವಜವನ್ನು ಹಾರಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್ಗ್ರಾಮದಲ್ಲಿ ಉಂಟಾಗಿರುವ ಧ್ವಜ ವಿವಾದ ವಿಕೋಪಕ್ಕೆ ಹೋಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಫೆ. 9ರಂದು ಮಂಡ್ಯ ನಗರ ಬಂದ್
ಸರಕಾರದ ಕ್ರಮವನ್ನು ಖಂಡಿಸಿ ಬಜರಂಗದಳ ಫೆ. 9ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಿದೆ. ಅಲ್ಲದೆ, ಜ. 29ರಂದು ಕೆರಗೋಡಿನಿಂದ ಜಿಲ್ಲಾ ಧಿಕಾರಿ ಕಚೇರಿವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ಹನುಮಧ್ವಜ ಇಳಿಸಿದ್ದಕ್ಕೆ ಬಿಜೆಪಿ ನಾಯಕರು ಕಿಡಿ
ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನಿರ್ಮಿಸಿದ್ದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರುತ್ತಿದ್ದ ಹನುಮಧ್ವಜವನ್ನು ಪೊಲೀಸರ ಸಹಾಯದಿಂದ ಕೆಳಗಿಳಿಸಿದ್ದಕ್ಕೆ ಪ್ರತಿಭಟನೆ ವ್ಯಕ್ತವಾಗಿದ್ದು, ಲಾಠಿಪ್ರಹಾರ ನಡೆದ ಹಿನ್ನೆಲೆಯಲ್ಲಿ ಇಡೀ ಗ್ರಾಮ ಉದ್ವಿಗ್ನಗೊಂಡಿದೆ.
ಗ್ರಾಮಸ್ಥರ ಪ್ರತಿಭಟನೆಗೆ ಬಿಜೆಪಿಯೂ ಬೆಂಬಲ ವ್ಯಕ್ತಪಡಿಸಿದ್ದು, ಸರಕಾರದ ನಡೆಯನ್ನು ಖಂಡಿಸಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಈ ನಡುವೆ ರಾಷ್ಟ್ರಧ್ವಜ ಹಾರಿಸುವ ಷರತ್ತಿನೊಂದಿಗೆ ಧ್ವಜಸ್ತಂಭ ನಿರ್ಮಿಸಿ, ಅದರಲ್ಲಿ ಹನುಮಧ್ವಜ ಹಾರಿಸಿದ್ದರಿಂದ ಕಾನೂನು ಪ್ರಕಾರ ಕೈಗೊಳ್ಳಲಾಗಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ. ಆದರೆ ಇಡೀ ಊರಿನ ಜನರು ಸ್ವಯಂಪ್ರೇರಿತರಾಗಿ, ಒಗ್ಗಟ್ಟಾಗಿ ಈ ಕಾರ್ಯ ಮಾಡಿದ್ದು, ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‌ನ 22 ಸದಸ್ಯರ ಪೈಕಿ 20 ಸದಸ್ಯರ ಬೆಂಬಲವಿತ್ತು. ಸರಕಾರ ಜನರ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವತ್ಥನಾರಾಯಣಸ್ವಾಮಿ ಸಹಿತ ಹಲವು ನಾಯಕರು ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ಕೊಟ್ಟಿದ್ದಾರೆ.
ಸರಕಾರದ ವರ್ತನೆ ಅಕ್ಷಮ್ಯ
ಹನುಮಧ್ವಜ ವಿಷಯದಲ್ಲಿ ಪೊಲೀಸರು, ರಾಜ್ಯ ಕಾಂಗ್ರೆಸ್ ಸರಕಾರದ ವರ್ತನೆ ಅಕ್ಷಮ್ಯ ಹಾಗೂ ಅನಾಗರಿಕ. ಕಾಂಗ್ರೆಸ್‌ನ ಕಣ-ಕಣದಲ್ಲೂ ಜನದ್ವೇಷವೇ ತುಂಬಿದೆ. ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮಂಡ್ಯದ ಕೆರಗೋಡಿನಲ್ಲಿ ಯುವಕರ ಮೇಲೆ ದಬ್ಟಾಳಿಕೆ ನಡೆಸಿ ಲಾಠೀಚಾರ್ಜ್ ಮಾಡಿಸಲಾಗಿದೆ. ಆ ಗ್ರಾಮದ ಯುವಕರ ಬೆಂಬಲಕ್ಕೆ ನಾನಿದ್ದೇನೆ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಹನುಮನನ್ನು ಕಂಡರೂ ಆಗುವುದಿಲ್ಲ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಾಯಿಮಾತಿನಲ್ಲಿ ರಾಮನಾಪ ಜಪ ಮಾಡಿದರು ಸಾಲದು. ಅವರ ಹೃದಯದಲ್ಲಿ ರಾಮನಿಲ್ಲ. ಬದಲಿಗೆ ಟಿಪ್ಪುವೇ ತುಂಬಿಕೊಂಡಿದ್ದು, ರಾಮನ ಮೇಲೆ ದ್ವೇಷವಿದೆ. ಹನುಮನನ್ನು ಕಂಡರೂ ಆಗುವುದಿಲ್ಲ.
ಆರ್.ಅಶೋಕ, ವಿಧಾನಸಭೆ ವಿಪಕ್ಷ ನಾಯಕ
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ಮಂಡ್ಯದಲ್ಲಿ ಹನುಮ ಧ್ವಜ ಕಿತ್ತು ಹಾಕಿರುವ ಸರಕಾರ ಓಲೈಕೆ ರಾಜಕಾರಣ ಮಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ರಕ್ಷಣೆ ನೀಡುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಹಿಂದೂಗಳ ನಂಬಿಕೆ ಮೇಲೆ ಯಾಕಿಷ್ಟು ತಾತ್ಸಾರ?
ಸಿಎಂ ಸಿದ್ದರಾಮಯ್ಯ ಅವರಿಗೆ ಹಿಂದೂಗಳ ನಂಬಿಕೆ ಮೇಲೆ ಯಾಕಿಷ್ಟು ತಾತ್ಸಾರ? ಹನುಮನ ನಾಡಿನಲ್ಲಿ ಹನುಮಧ್ವಜಕ್ಕೆ ಸಮ್ಮತಿ ಇಲ್ಲವೇ? ಸರ್ವಜನಾಂಗದ ಶಾಂತಿಯ ತೋಟ ಎಂದು ಪುಂಗಿ ಊದುವ ಕಾಂಗ್ರೆಸ್ ಕರ್ನಾಟಕದಲ್ಲಿ ಏನು ಮಾಡುತ್ತಿದೆ? ಕಾಂಗ್ರೆಸ್‌ನ ತುಷ್ಟೀಕರಣ ನೀತಿಗೆ ಜನ ಉತ್ತರ ಕೊಡುವ ಕಾಲ ದೂರವಿಲ್ಲ.
– ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಪಂಚಾಯತ್ ಅನುಮತಿ ಕೊಟ್ಟಿತ್ತು
ಗ್ರಾಮದ ಜನರು ಸ್ವಯಂಪ್ರೇರಿತರಾಗಿ ಹನುಮಧ್ವಜ ಹಾರಿಸಿದ್ದಾರೆ. ಯಾರದ್ದೂ ವಿರೋಧ ಇರಲಿಲ್ಲ. ಸ್ಥಳೀಯ ಪಂಚಾಯತ್ ಅನುಮತಿ ಕೊಟ್ಟಿದ್ದರೂ ಧ್ವಜವನ್ನು ಕೆಳಗಿಳಿಸಿದ್ದೇಕೆ? ಸ್ವತಃ ಸಿಎಂ ಸಿದ್ದರಾಮಯ್ಯರಿಗೆ ಕೇಸರಿ ಕಂಡರೆ ಆಗುವುದಿಲ್ಲ. ನಾಡಿನಲ್ಲಿ ಎಲ್ಲೆಂದರಲ್ಲಿ ಇರುವ ಗೋರಿ, ಹಸುರು ಬಾವುಟವನ್ನು ಹೀಗೇ ಕೆಳಗಿಳಿಸುತ್ತೀರಾ? ಈ ಸರಕಾರ ಒಂದು ಹನುಮಧ್ವಜ ಇಳಿಸಿದರೆ ಸಾವಿರಾರು ಹಾರಿಸಬೇಕಾಗುತ್ತದೆ.
-ವಿ.ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.