ಆ ಮೂವತ್ತು ನಿಮಿಷ.. ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

ಕಟ್ಟೇರಿಯ ಕಣ್ಣೀರ ಕಥೆ

Team Udayavani, Dec 9, 2021, 7:20 AM IST

ಆ ಮೂವತ್ತು ನಿಮಿಷ.. ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

ಸಮಯ: ಮಧ್ಯಾಹ್ನ 12ರ ಆಸುಪಾಸು
ಸ್ಥಳ: ಕಟ್ಟೇರಿ ಅರಣ್ಯ ಪ್ರದೇಶ
ಊಟಿಗೆ ಸನಿಹವಿರುವ ಕಟ್ಟೇರಿ ಎಂಬ ಪುಟ್ಟ ಕಾಡಿನೂರು ಎಂದಿನಂತೆ ಮೌನ ತಬ್ಬಿಕೊಂಡು ತಣ್ಣಗಿತ್ತು. ಚಹಾ ತೋಟಗಳ ಆಚೆಈಚೆ ಬೀಳುವ ಪುಟಾಣಿ ಎಲೆಯ ಸದ್ದೂ ಈ ಕಾಡಿನ ಪಕ್ಷಿಗಳ ಕಿವಿಗೆ ಭಾರ. ಅಂಥದ್ದರಲ್ಲಿ ಆಗಸದ ದಿಕ್ಕಿನಿಂದ ಕಿವಿಗಡಚಿಕ್ಕುವ ಸದ್ದೊಂದು ಮೌನ ಛೇದಿಸಿ, ಇಡೀ ಕಾಡನ್ನು ಒಂದು ಯಮಕಂಪನಕ್ಕೆ ತಳ್ಳಿತು. ಕಾನನದ ನೆತ್ತಿ ಮೇಲೆ ಸೇನೆಯ “ಎಂಐ17-5′ ಹೆಲಿಕಾಪ್ಟರ್‌ ಹಾರುತ್ತಿದೆ ಎಂಬ ಸಂಗತಿ ಅಲ್ಲಿದ್ದ ಚಹಾ ತೋಟಗಳ ಬುಡಕಟ್ಟು ಸಮುದಾಯದ ಯಾವ ಕಾರ್ಮಿಕನಿಗೂ ಆ ಹೊತ್ತಿಗೆ ಸ್ಪಷ್ಟವಾಗಲೇ ಇಲ್ಲ.

ಆಕಾಶದಿಂದ ಏನೋ ಗಿರಕಿ ಹೊಡೆದು, ದೊಪ್ಪನೆ ಬಿತ್ತು ಅನ್ನೋ ದನ್ನು ಕೆಲವರು ಊಹಿಸಿದರೆ, ಯಾವುದೋ ಹೆಮ್ಮರದ ಕೊಂಬೆ ಕಳಚಿ ಕೆಳಕ್ಕೆ ಬಿದ್ದಿರಬಹುದು ಅಂತ ಮತ್ತೆ ಕೆಲವರು ಕಲ್ಪಿಸಿ ಸುಮ್ಮನಾದರು. ಉತ್ಸಾಹಿ ಹುಡುಗರು ಸನಿಹದ ಬಂಡೆಯನ್ನೇರಿ, ಕಣ್ಣಗಲಿಸಿ, ಬಲುದೂರದ ತನಕ ದೃಷ್ಟಿಹರಿಸಿದರು. ಮೋಡ ಕಟ್ಟಿದ ನಭದ ಕತ್ತಲಲ್ಲಿ, ಕವಿದ ದಟ್ಟದ ಹಿಮದ ನಡುವೆ ಕಂಡಿದ್ದು ಬರೀ ಶೂನ್ಯ.

ಇವೆಲ್ಲ ಘಟಿಸಿ ನಿಮಿಷಗಳು ಕಳೆದಿರಲಿಲ್ಲ..ದೊಡ್ಡ ಸದ್ದು ಅಪ್ಪಳಿಸಿದ ದಿಕ್ಕಿನಿಂದ ಅದೇ ಊರಿನವರ ಕೂಗೂ ಬೆನ್ನೇರಿ ಬಂತು. ಹೆಲಿಕಾಪ್ಟರ್‌ ಮರಕ್ಕೆ ಢಿಕ್ಕಿ ಹೊಡೆದು ಧಗಧಗನೆ ಉರಿಯುತ್ತಿದ್ದುದ್ದನ್ನು ಕಂಡು, ಸನಿಹದ ಕೆಲವು ಪ್ರತ್ಯಕ್ಷದರ್ಶಿಗಳು ಬೊಬ್ಬೆ ಹೊಡೆಯ ತೊಡಗಿದರು. ಬೆಂಕಿ ನಂದಿಸುವ ಸಣ್ಣಪುಟ್ಟ ಸಾಹಸಕ್ಕೂ ಕೈಹಾಕಿ ಸೋತರು. ಕಾಡಿನ ಮರ ಗಳೆತ್ತರವನ್ನೂ ಮೀರಿಸುವಂತೆ ಜ್ವಾಲಾಗ್ನಿಯ ಹೊಗೆ ಮೇಲೆ ದ್ದಿತ್ತು. ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್‌ ಗರ್ಭದಿಂದ ಇದ್ದಕ್ಕಿದ್ದಂತೆ ಸ್ಫೋಟ ಗೊಂಡ ಮೂರ್ನಾಲ್ಕು ಬೆಂಕಿಚೆಂಡು, ನಾಲ್ಕು ದಿಕ್ಕಿಗೆ ಹಾರಿದವು.

ಈ ಅಗ್ನಿ ಅವಾಂತರಗಳ ನಡುವೆ ವಿಚಿತ್ರ ಆಕ್ರಂದನ. ಅರೆಜೀವದಲ್ಲಿದ್ದ ಮೂವರು ಪ್ರಯಾಣಿಕರು ಹೊರಗೆ ಬಂದು ಸಹಾಯಕ್ಕಾಗಿ ಅಂಗಲಾಚಿದರು. ಧಗಧಗನೆ ಉರಿಯುತ್ತಿದ್ದ ಆ ದೇಹಗಳು ನಾಲ್ಕಾರು ಹೆಜ್ಜೆ ನಡೆಯುವ ಹೊತ್ತಿಗೆ ಧಸಕ್ಕನೆ ಕುಸಿದು ಬಿದ್ದ ಕ್ಷಣ ನಿಜಕ್ಕೂ ಕರುಳು ಹಿಂಡುವಂಥದ್ದು. ಹಾಗೆ ಸುಟ್ಟು ಕರಕಲಾದ ಜೀವಗಳು ನಮ್ಮ ದೇಶದ ವೀರಯೋಧರೆಂಬ ಸಂಗತಿ ಆ ಕ್ಷಣಕ್ಕೂ ಅಲ್ಲಿನವರಿಗೆ ತಿಳಿಯದಾಯಿತು.

ಸುದ್ದಿ ತಿಳಿಸಿದ್ದು ಬುಡಕಟ್ಟು ಯುವಕ!: ಈ ಘಟನೆ ದಿಗ್ಭ್ರಮೆ ಹುಟ್ಟಿಸುತ್ತಿದ್ದಂತೆ ದಿಕ್ಕುತೋಚದ ಕಟ್ಟೇರಿ ಊರಿನ ಬುಡಕಟ್ಟು ಸಮುದಾಯದ ಕುಮಾರ್‌ ಎಂಬ ಯುವಕ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಸುದ್ದಿಮುಟ್ಟಿಸಿದ. 12.35ರ ಹೊತ್ತಿಗೆ ಘಟನೆ ನಡೆದ ಸ್ಥಳದತ್ತ ನೀಲಗಿರಿ ಜಿಲ್ಲಾ ಪೊಲೀಸರು ಮತ್ತು ಅಧಿಕಾರಿಗಳು ಧಾವಿಸಿ ದರು. ರಕ್ಷಣ ಕಾರ್ಯಕ್ಕೆ ಯೋಜನೆಗಳನ್ನು ಹೆಣೆಯಲಾಯಿತು.

ಬೆಂಕಿ ನೋಡಿಯೇ ಬೆಚ್ಚಿದೆವು!: ಹೆಲಿಕಾಪ್ಟರ್‌ ದುರಂತಕ್ಕೀಡಾಗಿದ್ದು ಬುಡಕಟ್ಟು ಆವಾಸತಾಣದ ಕಾಲುಬುಡದಲ್ಲೇ. ಕೇವಲ ಮೂವತ್ತು ನಿಮಿಷದಲ್ಲಿ ಅಲ್ಲಿ ಮಾರಣಹೋಮ ಮುಗಿದುಹೋಗಿತ್ತು. ಇದನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿ ಪಿ. ಕೃಷ್ಣಸ್ವಾಮಿ ವಿವರಿಸುವುದು ಹೀಗೆ: “ಘಟನೆಯ ವೇಳೆ ನಾನು ಮನೆಯಲ್ಲಿದ್ದೆ. ನನ್ನ ಮನೆಯಿಂದ 100 ಮೀಟರ್‌ ದೂರದಲ್ಲಿಯೇ ದುರಂತ ನಡೆದಿದೆ. ಮೊದಲಿಗೆ ಜೋರಾದ ಶಬ್ದ ಕೇಳಿಬಂತು. ಮನೆಯಿಂದ ಹೊರಗೆ ಬಂದು ನೋಡಿದೆ.

ಹೆಲಿಕಾಪ್ಟರ್‌ ಕೆಳಗೆ ಬರುತ್ತಾ ಬರುತ್ತಾ, ಮರವೊಂದಕ್ಕೆ ಢಿಕ್ಕಿ ಹೊಡೆಯಿತು. ಬೆಂಕಿ ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್‌ನಿಂದ ಒಂದಿಷ್ಟು ಮಂದಿ ಹೊರಗೆ ಬಂದು, ಸಹಾಯಕ್ಕಾಗಿ ಚೀರಾಡುತ್ತಿದ್ದರು. ಆದರೆ ಬೆಂಕಿ ದೊಡ್ಡ ಪ್ರಮಾಣದಲ್ಲಿ ದಹಿಸುತ್ತಿತ್ತು. ದಟ್ಟ ಹೊಗೆ ತುಂಬಿಕೊಂಡಿತ್ತು. ನಾವು ಹತ್ತಿರಕ್ಕೂ ಹೋಗಲಾಗಲಿಲ್ಲ. ಅಷ್ಟೊತ್ತಿಗಾಗಲೇ ನಮ್ಮ ಊರಿನ ಕುಮಾರ್‌ ಹೆಸರಿನ ಯುವಕ ಈ ವಿಚಾರವನ್ನು ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ದಳಕ್ಕೆ ಮುಟ್ಟಿಸಿದ. ಅದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಎರಡು- ಮೂರು ಮಂದಿ ಕೆಳಗೆ ಬಿದ್ದಿದ್ದನ್ನು ನಾನು ನೋಡಿದೆ’ ಎಂದಿದ್ದಾರೆ.

ಗುರುತೂ ಸಿಗದ ರಾವತ್‌!
ದುರ್ಘ‌ಟನೆ ನಡೆದ ಸ್ಥಳದಲ್ಲಿ ರಕ್ಷಣ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಕೂಡ ಸುಟ್ಟು ಕರಕಲಾಗಿ ಹೋಗಿದ್ದರು. ಅವರ ಸಿಡಿಎಸ್‌ ಹುದ್ದೆಯ ಬ್ಯಾಡ್ಜ್ ಗಳು, ಪದವಿ ಗುರುತುಗಳೆಲ್ಲ ಕ್ಷಣಮಾತ್ರದಲ್ಲಿ ಉರಿದು ಹೋಗಿದ್ದವು. ಸಿಡಿಎಸ್‌ ಸೇರಿದಂತೆ ಪತನಗೊಂಡ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿಯನ್ನು ಹೊರಗೆ ತರುವ ಸಾಹಸ ಅಷ್ಟು ಸುಲಭದ್ದಾಗಿರಲಿಲ್ಲ. ಆಘಾತಕಾರಿ ಸಂಗತಿಯೆಂದರೆ, ದುರಂತದ ಸ್ಥಳಕ್ಕೆ ತತ್‌ಕ್ಷಣ ಧಾವಿಸಲು ಸರಿಯಾದ ದಾರಿಗಳೇ ಇರಲಿಲ್ಲ. ಎಷ್ಟೋ ನಿಮಿಷಗಳ ಬಳಿಕ ಸ್ಥಳೀಯರು, ಬುಡಕಟ್ಟು ಸಮುದಾಯದ ದೇಗುಲ ಸಮೀಪ ಒಂದು ದಾರಿ ಮಾಡಿಕೊಟ್ಟರು. ನಜ್ಜುಗುಜ್ಜಾದ ಲೋಹದ ವಸ್ತುಗಳು, ಸುಟ್ಟುಕರಕಲಾದ ಕೊಂಬೆಗಳನ್ನೂ ಸ್ಥಳೀಯರೇ ಬದಿಗೆ ಸರಿಸಿದರು.

ಅಷ್ಟರಲ್ಲಾಗಲೇ ಪೈಲಟ್‌ ವಿಂಗ್‌ ಕಮಾಂಡರ್‌ ಪೃಥ್ವಿ ಸಿಂಗ್‌ ಚೌಹಾಣ್‌ ಜೀವ ತ್ಯಜಿಸಿಯಾಗಿತ್ತು. ಶೇ.80ರಷ್ಟು ದೇಹ ಕರಕಲಾಗಿ ಅರೆಜೀವದಲ್ಲಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ರನ್ನು ಮೊದಲು ಅಗ್ನಿಶಾಮಕ ತಂಡ ರಕ್ಷಿಸಿತು. ಬಳಿಕ ಉಳಿದ 13 ಮಂದಿಯನ್ನೂ ಹೊರಗೆ ತಂದು, ಆ್ಯಂಬುಲೆನ್ಸ್‌ಗಳ ಮೂಲಕ 6-7 ಕಿ.ಮೀ. ದೂರದ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳನ್ನು ರಕ್ಷಿಸಲು ವೈದ್ಯರು ಎಷ್ಟೇ ಯತ್ನಿಸಿದರೂ, ವಿಧಿಯ ಇಚ್ಛೆ ಬೇರೆಯದ್ದೇ ಆಗಿತ್ತು.

ಹಾದಿಯುದ್ದಕ್ಕೂ ಕಾರ್ಮೋಡ
ಕೂನೂರು ಸನಿಹದ ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಸಿಡಿಎಸ್‌ ಬಿಪಿನ್‌ ರಾವತ್‌ ಪಾಲ್ಗೊಳ್ಳಬೇಕಿತ್ತು. ಇದಕ್ಕಾಗಿ ಬುಧವಾರ 9 ಗಂಟೆಗೆ ದಿಲ್ಲಿಯಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪತ್ನಿ ಜತೆಗೆ ಹೊರಟಿದ್ದ ಅವರು, ಕೊಯಮತ್ತೂರಿನ ಸೂಲೂರು ಐಎಎಫ್ ಸ್ಟೇಷನ್‌ನಲ್ಲಿ ಇಳಿದಿದ್ದರು. 11.35ರ ಸುಮಾರಿಗೆ, ನಿಗದಿಯಾಗಿದ್ದ “ಎಂಐ17-ವಿ5′ ಹೆಲಿಕಾಪ್ಟರ್‌ ಮೂಲಕ ವೆಲ್ಲಿಂಗ್ಟನ್‌ನ ದಾರಿ ಹಿಡಿದಿ ದ್ದರು. ಊಟಿ ಸನಿಹದ ವೆಲ್ಲಿಂಗ್ಟನ್‌ನ ವರ್ಷದುದ್ದಕ್ಕೂ ಹಿಮಾವೃತವಾಗಿಯೇ ಕಂಗೊಳಿಸುತ್ತದೆ. ಆದರೆ, ಬುಧವಾರ ಇದರೊಂದಿಗೆ ದಟ್ಟ ಕಾರ್ಮೋಡವೂ ವಾತಾವರಣವನ್ನು ಬಿಗಡಾಯಿಸುವಂತೆ ಮಾಡಿತ್ತು. “ಹೆಲಿಕಾಪ್ಟರ್‌ ಹಾರಾಡುತ್ತಿದ್ದ ವೇಳೆ ಈ ಪ್ರದೇಶದಲ್ಲಿ ಹೆಚ್ಚು ಮೋಡವಿತ್ತು’ ಎಂದು ಕಟ್ಟೇರಿ ಊರಿನ ಇನ್ನೊಬ್ಬ ನಿವಾಸಿ ಪಿ. ಚಂದ್ರಕುಮಾರ್‌ ಮಾಧ್ಯಮ ಗಳಿಗೆ ತಿಳಿಸಿದ್ದಾರೆ. ಇಂಥ ದುರ್ಗಮ ವಾತಾವರಣ ಛೇದಿಸಿಕೊಂಡ “ಎಂಐ17-ವಿ5′ ಹೆಲಿಕಾಪ್ಟರ್‌, ಕಾರ್ಯಕ್ರಮ ಸ್ಥಳಕ್ಕೆ 10 ಕಿ.ಮೀ. ಇರುವ ಮೊದಲೇ ಪತನ ಕಂಡಿದೆ. ಅಪರಾಹ್ನ 3 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಯಿತು.

ಪಾಕಿಸ್ಥಾನದಲ್ಲಿ ಸಂಭ್ರಮಿಸಿದ ಕಿಡಿಗೇಡಿಗಳು!
ದೇಶವೇ ರಕ್ಷಣ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿ ಅಸುನೀಗಿದ್ದರಿಂದ ದೇಶವೇ ದುಃಖ  ದಲ್ಲಿದೆ. 2016ರಲ್ಲಿ ಸರ್ಜಿಕಲ್‌ ದಾಳಿ ಮೂಲಕ ಪಾಕಿಸ್ಥಾನಕ್ಕೆ ಸರಿಯಾಗಿ ಬಿಸಿ ಮುಟ್ಟಿಸಿದ್ದರು ಜ| ರಾವತ್‌. ಅವರು ಅಸುನೀಗಿದ ಬಗ್ಗೆ ಪಾಕಿಸ್ಥಾನದ ಕೆಲವು ಕಿಡಿಗೇಡಿ ಗಳು ಸಂತೋಷ ವ್ಯಕ್ತಪಡಿಸಿದ್ದಾರೆ. “ಇದು ಅತೀ ಸಂತಸದ ಸುದ್ದಿ, ಇದು ಜನರು ಅವರ ಬಾಸ್‌ ಅನ್ನು ನಾಟಕೀಯ ವಾಗಿ ಹೇಗೆ ಕೊಲೆ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿ’, “ರೆಸ್ಟ್‌ ಇನ್‌ ಹೆಲ್‌’ ಹೀಗೆ ಅನೇಕ ರೀತಿಯಲ್ಲಿ ಪಾಕಿಸ್ಥಾನೀಯರು ಟ್ವೀಟ್‌ ಮಾಡಿದ್ದಾರೆ. ದುರಂತದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದಕ್ಕೂ ಪ್ರತಿಕ್ರಿಯಿಸಿದ್ದ ಪಾಕಿಸ್ಥಾನೀಯರು, ನಗುವ ಇಮೋಜಿಯನ್ನು ಪೋಸ್ಟ್‌ಗಳಿಗೆ ಹಾಕಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದರು. ಪಾಕಿಸ್ಥಾನಿಗಳ ಈ ಕಿಡಿ ಗೇಡಿತನಕ್ಕೆ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ.

ಜ| ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌ ಸಾವಿನಿಂದ ಆಘಾತಗೊಂಡಿದ್ದೇನೆ. ಅಸುನೀಗಿದವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ರಕ್ಷಣ ಸಚಿವರ ಜತೆಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದೇನೆ.
– ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಜ| ಬಿಪಿನ್‌ ರಾವತ್‌, ಅವರ ಪತ್ನಿ ಮತ್ತು ಇತರ ಸಿಬಂದಿ ಅಸುನೀಗಿದ ಬಗ್ಗೆ ದುಃಖ ವ್ಯಕ್ತಪಡಿಸುತ್ತೇನೆ. ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿರುವ ಅವರ ಕುಟುಂಬ ಸದಸ್ಯರ ಜತೆಗೆ ನಾವೆಲ್ಲರೂ ಇದ್ದೇವೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ. ಗಾಯಗೊಂಡಿರುವ ಕ್ಯಾ| ವರುಣ್‌ ಸಿಂಗ್‌ ಶೀಘ್ರ ಗುಣಮುಖರಾಗಲಿ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಜ| ರಾವತ್‌ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು. ವೆಲ್ಲಿಂಗ್ಟನ್‌ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
– ರಾಜನಾಥ್‌ ಸಿಂಗ್‌, ರಕ್ಷಣ ಸಚಿವ

ಜ| ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಹಾಗೂ ಸಿಬಂದಿ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇದು ಹಿಂದೆಂದೂ ಕಂಡರಿಯದ ದುರಂತ. ಈ ಕಷ್ಟ ಸಮಯದಲ್ಲಿ ನಮ್ಮ ಆಲೋಚನೆಗಳು ಅವರ ಕುಟುಂಬದೊಂದಿಗೆ ಇದೆ. ತಮ್ಮ ಪ್ರಾಣ ಕಳೆದುಕೊಂಡ ಉಳಿದವರಿಗೂ ಹೃದಯಪೂರ್ವಕ ಸಂತಾಪಗಳು.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಜ| ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಸೇರಿದಂತೆ 13 ಮಂದಿ ಅಸುನೀಗಿರುವ ಸುದ್ದಿ ಕೇಳಿ ಆಘಾತವಾಗಿದೆ. ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ.
– ಎಸ್‌. ಜೈಶಂಕರ್‌, ವಿದೇಶಾಂಗ ಸಚಿವ

 

ಟಾಪ್ ನ್ಯೂಸ್

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.