BJP: ಪದಾಧಿಕಾರಿಗಳ ನೇಮಕ ವಿಜಯೇಂದ್ರರಿಗೆ ಅಗ್ನಿಪರೀಕ್ಷೆ
ಎರಡು ಆಯಕಟ್ಟಿನ ಪಟ್ಟಿ ಬಿಡುಗಡೆಗೂ ವರಿಷ್ಠರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಸಾಧ್ಯತೆ ಹಿರಿಯರಿಗೆ ಮಣೆ ಅನಿವಾರ್ಯ
Team Udayavani, Nov 23, 2023, 10:50 PM IST
ಬೆಂಗಳೂರು: ಸ್ವಪಕ್ಷೀಯರ ಬಹಿರಂಗ ಹೇಳಿಕೆ ಹಾಗೂ ಆಂತರಿಕ ಅಸಮಾಧಾನಗಳು ಬಿಜೆಪಿ ನೂತನ ಸಾರಥಿ ಬಿ.ವೈ.ವಿಜಯೇಂದ್ರ ಮುಂದೆ ದೊಡ್ಡ ಸವಾಲನ್ನು ಸೃಷ್ಟಿಸಿದ್ದು, ಕೋರ್ ಕಮಿಟಿ ಹಾಗೂ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಭಾರೀ ಅಸಮತೋಲನ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಈ ಎರಡು ಆಯಕಟ್ಟಿನ ಪಟ್ಟಿಯ ಬಿಡುಗಡೆಗೂ ದಿಲ್ಲಿ ವರಿಷ್ಠ
ರನ್ನೇ ಆಶ್ರಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಬಹುದು ಎನ್ನಲಾಗುತ್ತಿದೆ.
ಪಕ್ಷ ನಿಭಾಯಿಸುವುದಕ್ಕೆ ವಿಜಯೇಂದ್ರರಿಗೆ “ಕಿರಿತನ’ವೇ ದೊಡ್ಡ ಸಮಸ್ಯೆಯಾಗಿದ್ದು, ಅನುಭವಿಗಳು ಹಾಗೂ ಹಿರಿಯರು ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಪದಾಧಿಕಾರಿ ಹಾಗೂ ಕೋರ್ ಕಮಿಟಿ ಸಮಿತಿ ಸದಸ್ಯರಾಗುವುದಕ್ಕೆ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಪದಾಧಿಕಾರಿಗಳು, ಅದರಲ್ಲೂ ವಿಶೇಷವಾಗಿ ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಹುದ್ದೆ ತೀರಾ ಆಯಕಟ್ಟಿನದ್ದಾಗಿದ್ದು, ಈ ಆಯ್ಕೆಗೆ ವಿಜಯೇಂದ್ರ ಯಾರಿಗೆ ಮಣೆ ಹಾಕಬಹುದೆಂಬ ಕುತೂಹಲ ಸೃಷ್ಟಿಯಾಗಿದೆ.
ಬಿಜೆಪಿಯಲ್ಲಿ ಸದ್ಯಕ್ಕೆ 12 ಮಂದಿ ಉಪಾಧ್ಯಕ್ಷರಿದ್ದಾರೆ. ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರೂ ಸೇರಿ ಕೋರ್ ಕಮಿಟಿಯಲ್ಲಿ 16 ಮಂದಿ ಸದಸ್ಯರಿದ್ದಾರೆ. 10 ಮಂದಿ ವಕ್ತಾರರು, 10 ಕಾರ್ಯದರ್ಶಿಗಳು, 30 ಜಿಲ್ಲಾಧ್ಯಕ್ಷರು, 8 ಮೋರ್ಚಾಗಳು, 10 ವಿಭಾಗೀಯ ಪ್ರಮುಖರು, 4 ಪ್ರಧಾನ ಕಾರ್ಯದರ್ಶಿಗಳ ನೇಮಕವಾಗಬೇಕಿದೆ. ಹೊಸ ಅಧ್ಯಕ್ಷರು ಬಂದಾಗ ಇವೆಲ್ಲವೂ ಬದಲಾಗಲೇಬೇಕು.
ಸಂಘಟನಾತ್ಮಕವಾಗಿ ಪಕ್ಷದ ಈ ಎಲ್ಲ ಆಯಕಟ್ಟಿನ ಸ್ಥಾನಗಳ ನೇಮಕವನ್ನು ವರಿಷ್ಠರು ಸಂಪೂರ್ಣವಾಗಿ ವಿಜಯೇಂದ್ರ ಸುಪರ್ದಿಗೆ ಬಿಡುವ ಸಾಧ್ಯತೆ ಕಡಿಮೆ. ಹಿರಿಯರು ಮತ್ತೆ ಸ್ಫೋಟಗೊಳ್ಳುವುದನ್ನು ತಡೆಯಬೇಕಿದ್ದರೆ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ಬಣಕ್ಕೆ ಸಮಾನ ಪ್ರಾತಿನಿಧ್ಯ ಸಿಗುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಮೂಲಗಳ ಪ್ರಕಾರ ಪಂಚ ರಾಜ್ಯಗಳ ಚುನಾವಣ ಫಲಿತಾಂಶದ ಬಳಿಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ದಿಲ್ಲಿಯಲ್ಲಿ ಪಕ್ಷದ ಆಂತರಿಕ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮೊದಲು ಪ್ರಧಾನ ಕಾರ್ಯದರ್ಶಿ
ಲಭ್ಯ ಮಾಹಿತಿ ಪ್ರಕಾರ ಮೊದಲು ನಾಲ್ಕು ಪ್ರಧಾನ ಕಾರ್ಯದರ್ಶಿಗಳ ನೇಮಕ ನಡೆಯುವ ಸಾಧ್ಯತೆ ಇದೆ. ಒಬ್ಬ ಪ್ರಧಾನ ಕಾರ್ಯದರ್ಶಿಗೆ ತಲಾ ಎರಡು ವಿಭಾಗ ಹಾಗೂ ಎರಡು ಮೋರ್ಚಾಗಳ ಉಸ್ತುವಾರಿ ನೀಡುವ ಜತೆಗೆ ಪ್ರಮುಖ ನಿರ್ಧಾರಗಳ ಸಂದರ್ಭದಲ್ಲಿ ಅಧ್ಯಕ್ಷರು ಇವರ ಜತೆ ಚರ್ಚೆ ನಡೆಸಬೇಕಾಗುತ್ತದೆ. ಈ ಹುದ್ದೆಗೂ ಜಾತಿ ಸಮೀಕರಣ ನಡೆಸುವ ಸಾಧ್ಯತೆ ಇದ್ದು, ಬ್ರಾಹ್ಮಣ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಅಥವಾ ಪಂಗಡದ ಜತೆಗೆ ಇನ್ನೊಂದು ಸ್ಥಾನವನ್ನು ಉತ್ತರ ಕರ್ನಾಟಕ ಭಾಗದ ಲಿಂಗಾಯತರಿಗೆ ಬಿಟ್ಟುಕೊಡಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು ಎಂದು ಹೇಳಲಾಗುತ್ತಿದೆ. ಎನ್.ರವಿಕುಮಾರ್ ಮಾತ್ರ ಎರಡು ಬಣದ ಪ್ರತಿನಿಧಿಯಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಹಿರಿಯ, ಪ್ರಬಲರ ನೇಮಕ ಸಾಧ್ಯತೆ ಹೆಚ್ಚು
ಈ ಬಾರಿ ಕೋರ್ ಕಮಿಟಿಗೆ ಹಿರಿಯ ಹಾಗೂ ಪ್ರಬಲರನ್ನು ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ವಿ.ಸುನಿಲ್ ಕುಮಾರ್, ಅರವಿಂದ ಬೆಲ್ಲದ್ ಅವರಿಗೆ ಜಾತಿ ಹಾಗೂ ಭವಿಷ್ಯದ ದೃಷ್ಟಿಯಿಂದ ಅವಕಾಶ ಕಲ್ಪಿಸುವುದು ಅನಿವಾರ್ಯವಾಗಬಹುದು. ವಿವಿಧ ಮೋರ್ಚಾಗಳಿಗೂ ಹಿರಿಯರನ್ನೇ ನೇಮಕ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಲೋಕಸಭಾ ಚುನಾವಣೆ ಗೆಲ್ಲುವುದಕ್ಕಿಂತಲೂ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲೇ ಬಿಜೆಪಿಯಲ್ಲಿ ನಿಜವಾದ ಸುಂಟರಗಾಳಿ ಬೀಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee: ಮಹಾರಾಷ್ಟ್ರ ಬಿಜೆಪಿಗರ ಕರ್ನಾಟಕ ಪ್ರವಾಸಕ್ಕೆ ವಿಶೇಷ ವಿಮಾನ: ಡಿ.ಕೆ.ಶಿವಕುಮಾರ್
Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್ ಮುತಾಲಿಕ್
By Election: ಒಂದುವರೆ ವರ್ಷದಿಂದ ಕಾಂಗ್ರೆಸ್ ಸರಕಾರ 1 ಕಿ.ಮೀ.ರಸ್ತೆ ಮಾಡಿಲ್ಲ: ಬಿಎಸ್‌ವೈ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.