ಬಿಜೆಪಿ-ಬಿಎಸ್‌ವೈ= ಶೂನ್ಯ; ಕಾಂಗ್ರೆಸ್-ಸಿದ್ದರಾಮಯ್ಯ= ಶೂನ್ಯ
Team Udayavani, Mar 10, 2020, 3:08 AM IST
ವಿಧಾನ ಪರಿಷತ್ತು: ರಾಜಕೀಯ ನಾಯಕರಿಲ್ಲದಿದ್ದರೆ, ವಿವಿಧ ಪಕ್ಷಗಳಿಗೆ ಆವರಿಸಬಹುದಾದ “ಶೂನ್ಯ’ದ ಮೇಲಿನ ಸ್ವಾರಸ್ಯಕರ ಚರ್ಚೆಗೆ ಸೋಮವಾರ ಮೇಲ್ಮನೆ ವೇದಿಕೆಯಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಭಾಷಣ ದಲ್ಲಿ “ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ’ ಎಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ, ಈ ಚರ್ಚೆಗೆ ಪೀಠಿಕೆ ಹಾಕಿದರು.
ಇದಕ್ಕೆ ದನಿ ಗೂಡಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, “ಮೌನವಾಗಿರುವುದು ನೋಡಿ ದರೆ, ಒಪ್ಪಿಕೊಂಡಂತಿದೆ’ ಎಂದು ಆಡಳಿತ ಪಕ್ಷದ ಮೌನವನ್ನು ಕೆಣಕಿದರು. ಇದು ಕಿಡಿ ಹೊತ್ತಿಕೊಳ್ಳಲು ಕಾರಣವಾಯಿತು. ತಕ್ಷಣ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, “ಯಡಿಯೂರಪ್ಪ ಒಂದು ದೈತ್ಯಶಕ್ತಿ. ಅವರಿಲ್ಲದಿದ್ದರೆ ಬಿಜೆಪಿ ಶೂನ್ಯ ಎಂದು ನಾವು ಒಪ್ಪಿಕೊಂಡರೆ, ಸಿದ್ದ ರಾಮಯ್ಯ ಇಲ್ಲದಿದ್ದರೆ, ಕಾಂಗ್ರೆಸ್ ಶೂನ್ಯ ಎಂದು ನೀವು ಒಪ್ಪಿಕೊಳ್ಳುವಿರಾ?’
ಎಂದು ಕೇಳಿದರು. ಮತ್ತೂಬ್ಬರು “ಎಚ್.ಡಿ. ದೇವೇ ಗೌಡ ಅಥವಾ ಕುಮಾರಸ್ವಾಮಿ ಇಲ್ಲದಿದ್ದರೆ, ಜೆಡಿಎಸ್ ಶೂನ್ಯ ಎಂದು ಒಪ್ಪಿಕೊಳ್ಳುವಿರಾ’ ಎಂದು ಕೇಳಿದರು. ಮಧ್ಯ ಪ್ರವೇಶಿಸಿದ ಜೆಡಿಎಸ್ ಸದಸ್ಯ ಬೋಜೇ ಗೌಡ, “ಬಿಜೆಪಿ-ಬಿಎಸ್‌ವೈ= 0′ ಸರಿಯೋ ತಪ್ಪೋ ಹೇಳಿ ಎಂದಷ್ಟೇ ಹೇಳುವಂತೆ ಲೆಕ್ಕ ಕೇಳಿದರು. ಆಗ ಪ್ರಾಣೇಶ್, “ನೀವು (ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ) ಎಸ್.ಆರ್. ಪಾಟೀಲ, ಬಸವರಾಜ ಹೊರಟ್ಟಿ ಅವ ರನ್ನು ಈ ಹಿಂದಿನ ಸರ್ಕಾರದಲ್ಲಿ ಸಂಪುಟದಿಂದ ಕೈಬಿಟ್ಟು ಝೀರೋ ಮಾಡಲಿಲ್ಲವೇ?’ ಎಂದು ಕಾಲೆಳೆದರು.
ಮುಂದುವರಿದು, “ಸೋನಿಯಾ ಗಾಂಧಿ ಇಲ್ಲದಿದ್ದರೆ, ಕಾಂಗ್ರೆಸ್ ಶೂನ್ಯ ಎಂದು ಹೇಳಬಹುದಾ? ಅಷ್ಟಕ್ಕೂ ಆಯಾ ಕಾಲ ಘಟ್ಟದಲ್ಲಿ ನಮ್ಮ ಪಕ್ಷದಲ್ಲಿ ಯಾವಾಗಲೂ ಒಬ್ಬೊಬ್ಬ ಹೀರೋ ಅನ್ನು ನೋಡ ಬಹುದು. ಈ ಹಿಂದೆ ವಾಜಪೇಯಿ ಹೀರೋ ಆಗಿದ್ದರು. ಈಗ ಮೋದಿ, ಯಡಿ ಯೂರಪ್ಪ ಹೀರೋ ಆಗಿದ್ದಾರೆ. ನಮ್ಮಲ್ಲಿ ಝೀರೋ ಇಲ್ಲವೇ ಇಲ್ಲ’ ಎಂದು ತಿರುಗೇಟು ನೀಡಿದರು.
ದನಿಗೂಡಿಸಿದ ಬಿಜೆಪಿ ಸದಸ್ಯ ಲೆಹರ್ ಸಿಂಗ್, “ಕಾಂಗ್ರೆಸ್‌ನಲ್ಲಿದ್ದರೆ ಝೀರೋ ಆಗ್ತಾರೆ. ಅವರೇ ಆಚೆಗೆ ಬಂದ್ರೆ ಹೀರೋ ಆಗ್ತಾರೆ’ ಎಂದು ಚಟಾಕಿ ಹಾರಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕ ಟೇಶ್ ಮಾತನಾಡಿ, “ಇದು (ಬಿಜೆಪಿ ಸರ್ಕಾರ) ಅಲ್ಪಾಯುಷಿ ಮಗು. ಎಲ್ಲ ವನ್ನೂ ಬೇಗ ಅನುಭವಿಸಿ ಬಿಡಿ’ ಎಂದು ಆಡಳಿತ ಪಕ್ಷಕ್ಕೆ ಸಲಹೆ ಮಾಡಿದರು.
15 ಮಂದಿ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆದಿದ್ರಾ?
ವಿಧಾನಸಭೆ: ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿದ 15 ಮಂದಿ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿದ್ರಾ? ಸಂವಿಧಾನ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್ ಪಾಲ್ಗೊಂಡು ಮಾತ ನಾಡುವಾಗ ಕೆ.ಎಸ್. ಈಶ್ವರಪ್ಪ ಅವರಿಗೆ ಎಚ್.ಕೆ.ಪಾಟೀಲ್ ಕೇಳಿದ ಪ್ರಶ್ನೆಯಿದು.
ಡಾ.ಜಿ.ಪರಮೇಶ್ವರ್ ಮಾತನಾಡುವಾಗ, “ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯು ಒಂದೇ ಒಂದು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡ ಲಿಲ್ಲ’ ಎಂದು ಹೇಳಿದರು. ಆಗ, ಗೃಹ ಸಚಿವ ಬಸವರಾಜ ಬೊಮ್ಮಾಯಿ, “ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿ ಖಾನ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ, ಮಂತ್ರಿ ಮಾಡಿದ್ದರು’ ಎಂದು ನೆನಪಿಸಿದರು.
ಕೆ.ಎಸ್.ಈಶ್ವರಪ್ಪ ಅವರು, ನನ್ನ ಕ್ಷೇತ್ರ ಶಿವಮೊಗ್ಗದಲ್ಲಿ 12 ಮುಸ್ಲಿಂ ಬೂತ್‌ಗಳಿವೆ. 1989 ರಲ್ಲಿ ನಾನು ಚುನಾವಣೆಗೆ ನಿಂತು ಗೆದ್ದಾಗಲೂ ನನಗೆ ಒಂದೇ ಒಂದು ಮತ ಹಾಕಿರಲಿಲ್ಲ. ಮೂರ್‍ನಾಲ್ಕು ಚುನಾವಣೆಗಳಲ್ಲೂ ನನಗೆ ಮತ ಬರಲಿಲ್ಲ, ಆದರೂ ನಾನು ಆ ಸಮುದಾಯದವರು ಸಮಸ್ಯೆ ಹೇಳಿಕೊಂಡು ಬಂದಾಗ ಪರಿಹಾರ ಕಲ್ಪಿಸುತ್ತಿದ್ದೆ. ನನ್ನ ಪ್ರಯತ್ನ ನಾನು ಮಾಡುತ್ತಿದ್ದೆ, ಕಳೆದ ಚುನಾವಣೆಯಲ್ಲಿ 362 ಮತ ಬಂದಿದೆ. ಕಾಂಗ್ರೆಸ್‌ನವರು ಬಿಜೆಪಿಗೆ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಅವರು ನಮ್ಮತ್ತ ಬರುತ್ತಿರಲಿಲ್ಲ, ಆದರೆ, ಅವರಿಗೆ ವಾಸ್ತವ, ಸತ್ಯ ಗೊತ್ತಾದ ಮೇಲೆ ಬಂದೇ ಬರುತ್ತಾರೆ ಎಂದರು.
ಆಗ, ಪರಮೇಶ್ವರ್, ನೀವೇ ಮುಸ್ಲಿಂ ಸಮುದಾಯದವರಿಗೆ ಬಿಜೆಪಿ ಟಿಕೆಟ್ ಬೇಕು ಎಂದರೆ ಬಿಜೆಪಿ ಕಚೇರಿಯಲ್ಲಿ ನಾಲ್ಕೈದು ವರ್ಷ ಕಸ ಗುಡಿಸಬೇಕು ಎಂದು ಹೇಳಿದ್ದೀರಿ ಎಂದು ನೆನಪಿಸಿದರು. ಹೌದು, ನಾನು ಹೇಳಿದ್ದೆ ಎಂದು ಈಶ್ವರಪ್ಪ ಸಮರ್ಥಿಸಿಕೊಂಡು ಮುಸ್ಲಿಂರಷ್ಟೇ ಅಲ್ಲ ಯಾರಿಗೆ ಟಿಕೆಟ್ ಬೇಕಾದರೂ ಕಸ ಹೊಡೆಯಬೇಕಾಗುತ್ತದೆ ಎಂದರು.
ಆಗ, ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್, ಉಪ ಚುನಾವಣೆಯಲ್ಲಿ 15 ಮಂದಿಗೆ ಟಿಕೆಟ್ ಕೊಟ್ಟಿàರಲ್ಲಾ, ಅವರೆಲ್ಲಾ ಕಸ ಗುಡಿಸಿದ್ರಾ ಎಂದು ಪ್ರಶ್ನಿಸಿದರು. ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಧ್ವನಿಗೂಡಿಸಿರು. ಆಗ ಈಶ್ವರಪ್ಪ, ಈಗ ಕಸ ಗುಡಿಸುತ್ತಾರೆ. ಕಸ ಹೊಡೆಯುವುದು ಎಂದರೆ ಪೊರಕೆ ಹಿಡಿಯುವುದಲ್ಲ, ಪಕ್ಷ ಕಟ್ಟುವ ಕೆಲಸ ಮಾಡುವುದು ಎಂದರು. ಆಗ, ಪರಮೇಶ್ವರ್, ಈಗ ಕಸ ಗುಡಿಸುತ್ತೀರಾ? ಹಾಗಾದರೆ ಸರಿ ಎಂದು ಲೇವಡಿ ಮಾಡಿದರು. ಸಚಿವ ಬೈರತಿ ಬಸವರಾಜ್ ಮಾತನಾಡಿ, ನಾವು ಕಸ ಹೊಡೆಯಲು ರೆಡಿ ಇದ್ದೇವೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.