ಸಾ.ರಾ.ಮಹೇಶ್ ಜತೆ ಮಾತುಕತೆಗೆ ಬಿಜೆಪಿ ಹೈಕಮಾಂಡ್ ಗರಂ
Team Udayavani, Jul 13, 2019, 3:09 AM IST
ಬೆಂಗಳೂರು: ಅವಕಾಶ ಸಿಕ್ಕರೆ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದಾಗಲೇ ಜೆಡಿಎಸ್ ಸಚಿವ ಸಾ.ರಾ. ಮಹೇಶ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತುಕತೆ ಸಂಬಂಧ ಬಿಜೆಪಿ ಹೈಕಮಾಂಡ್ ಗರಂ ಆಗಿದೆ.
ಈ ಬೆಳವಣಿಗೆ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಮುರಳೀಧರ ರಾವ್ ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ತೆರಳಿದರು. ಭೇಟಿ ಕುರಿತು ಪಕ್ಷದಲ್ಲೂ ಅಪಸ್ವರ ಕೇಳಿಬಂದಿದ್ದು, ರಾಜ್ಯ ನಾಯಕರೂ ಈ ವಿಚಾರಕ್ಕೆ “ಇತಿಶ್ರೀ’ ಹಾಡಲು ಯತ್ನಿಸಿದರು.
ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದನ್ನು ಸಾಬೀತುಪಡಿಸಲು, ಅತೃಪ್ತ ಶಾಸಕರನ್ನು ಸೆಳೆಯಲು ಹಾಗೂ ಸರ್ಕಾರವನ್ನು ಅಸ್ಥಿರಗೊಳಿಸಲು ಸಿಕ್ಕ ಅವಕಾಶಗಳನ್ನೆಲ್ಲ ಬಳಸಿಕೊಂಡು ಬಿಜೆಪಿ ಐದಾರು ಪ್ರಯತ್ನ ನಡೆಸಿದ್ದು, ವಿಫಲವಾಗಿತ್ತು. ಎರಡು ವಾರದಿಂದೀಚೆಗಿನ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿದಿದೆ.
ಸದ್ಯ ಕಾಂಗ್ರೆಸ್, ಜೆಡಿಎಸ್‌ನ 14 ಶಾಸಕರ ರಾಜೀನಾಮೆ, ಬಿಎಸ್‌ಪಿ ಶಾಸಕ ಎನ್.ಮಹೇಶ್ ತಟಸ್ಥವಾಗಿರುವುದು. ಇಬ್ಬರು ಪಕ್ಷೇತರರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸಿರುವುದಾಗಿ ಘೋಷಿಸಿರುವುದರಿಂದ ಮೈತ್ರಿ ಸರ್ಕಾರದ ಸಂಖ್ಯಾಬಲ 119ರಿಂದ 100ಕ್ಕೆ ಇಳಿಕೆಯಾಗಿದ್ದರೆ, ಬಿಜೆಪಿ ಶಾಸಕ ಬಲ 107ಕ್ಕೆ ಏರಿಕೆಯಾಗಿದೆ.
ಲೆಕ್ಕಾಚಾರ ಏರುಪೇರು: ಈ ಎಲ್ಲ ಬೆಳವಣಿಗೆಯಿಂದಾಗಿ ರಾಜ್ಯ ಬಿಜೆಪಿ ನಾಯಕರಲ್ಲಿ ಮತ್ತೆ ಸರ್ಕಾರ ರಚನೆ ಆಸೆ ಚಿಗುರೊಡೆದ ರಣೋತ್ಸಾಹದಲ್ಲಿತ್ತು. ಬಿಜೆಪಿ ಆತ್ಮವಿಶ್ವಾಸ ಯಾವ ಮಟ್ಟಿಗಿತ್ತು ಎಂದರೆ ಕೆಲ ನಾಯಕರು ಜಾತಿ, ಪ್ರಾದೇಶಿಕತೆ ಆಧಾರದಲ್ಲಿ ತಮಗೆ ಯಾವ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು.
ವಿಧಾನಸೌಧದಲ್ಲಿ ಗುರುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಕೆಲ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಣುಕು ಪ್ರದರ್ಶನ ನಡೆಸಿ ಸಂಭ್ರಮಿಸಿದ್ದರು. ಆದರೆ ಆ ಸಭೆ ಮುಗಿದು ಕೆಲವೇ ಗಂಟೆ ಕಳೆಯುವುದರೊಳಗೆ ಲೆಕ್ಕಾಚಾರಗಳು ತುಸು ಏರುಪೇರಾಗಿದ್ದವು.
ಸಚಿವರ ಭೇಟಿ : ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಮುರಳೀಧರರಾವ್, ಈಶ್ವರಪ್ಪ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿದ್ದರು. ಜೆಡಿಎಸ್‌ನ ಒಂದು ಗುಂಪಿನೊಂದಿಗೆ ಬಿಜೆಪಿ ಬೆಂಬಲಿಸಿ ಸರ್ಕಾರ ರಚಿಸುವುದು, ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗದಷ್ಟು ಸಂಖ್ಯೆಯ ಜೆಡಿಎಸ್ ಶಾಸಕರೇ ಬಿಜೆಪಿ ಬೆಂಬಲಿಸುವ ಮೂಲಕ ಸುರಕ್ಷಿತ ಹೆಜ್ಜೆ ಇಡುವ ಬಗ್ಗೆ ಚರ್ಚೆಯಾದರೂ ಮಾತುಕತೆ ಫಲಪ್ರದವಾಗಲಿಲ್ಲ ಎಂಬ ಮಾತುಗಳಿವೆ.
ಈ ಹಿಂದೆ 20-20 ಸರ್ಕಾರ ರಚನೆಯಾದಾಗ 20 ತಿಂಗಳ ಅಧಿಕಾರ ಮುಗಿಸಿದ ಬಳಿಕ ಕುಮಾರಸ್ವಾಮಿಯವರು ಅಧಿಕಾರ ಹಸ್ತಾಂತರಿಸದೆ ವಿಧಾನಸಭೆ ವಿಸರ್ಜಿಸಿದ್ದರಿಂದ ಕೆರಳಿದ ಬಿ.ಎಸ್.ಯಡಿಯೂರಪ್ಪ ಅವರು ಇದೇ ವಿಚಾರವನ್ನಿಟ್ಟುಕೊಂಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಹೀಗಿರುವಾಗ ಗುರುವಾರದ ಮಾತುಕತೆಯು ಬಿಜೆಪಿ ಮತ್ತೆ ಜೆಡಿಎಸ್‌ನೊಂದಿಗೆ ಸರ್ಕಾರ ರಚಿಸುವ ಪ್ರಯತ್ನ ನಡೆಸಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿತ್ತು.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದ ಬಿಜೆಪಿಯು ರಾಜ್ಯಪಾಲರಿಗೂ ಮನವಿ ಸಲ್ಲಿಸಿತ್ತು. ಹೀಗಿರುವಾಗ ಮತ್ತೆ ಜೆಡಿಎಸ್‌ನೊಂದಿಗೆ ಮಾತುಕತೆ ನಡೆದಿದೆ ಎನ್ನಲಾದ ಬೆಳವಣಿಗೆ ಕಮಲ ಪಕ್ಷದ ವರ್ಚಸ್ಸನ್ನು ತುಸು ಮಂಕಾಗಿಸಿದೆ.
ಕಾರ್ಯತಂತ್ರ?: ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿದ್ದ ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರು ಆಡಳಿತ ಪಕ್ಷಗಳ ಯಾವ ನಾಯಕರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್‌ನ ಕೆಲ ನಾಯಕರು ಕಾರ್ಯತಂತ್ರವೊಂದನ್ನು ಹೆಣೆದಿದ್ದರು. ಬದಲಾದ ಸನ್ನಿವೇಶದಲ್ಲಿ ಜೆಡಿಎಸ್, ಬಿಜೆಪಿಯನ್ನೂ ಬೆಂಬಲಿಸಿ ಸರ್ಕಾರದ ಭಾಗವಾಗಿರಲಿದೆ ಎಂಬ ಸಂದೇಶ ರವಾನಿಸುವ ಉದ್ದೇಶದಿಂದ ಸಚಿವ ಸಾ.ರಾ. ಮಹೇಶ್ ಈ ಮಾತುಕತೆಗೆ ಮುಂದಾಗಿದ್ದರು.
ವರಿಷ್ಠರಿಂದ ತರಾಟೆ: ಘಮ ಘಮ ಎನ್ನುವ ರುಚಿಕರ ಪಾಯಸ ಸಿದ್ಧವಾಗುತ್ತಿತ್ತು. ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಪಾಯಸದಲ್ಲಿ ಬಾಲ ಅಲ್ಲಾಡಿಸಿದರು ಎಂಬ ಮಾತಿನಂತೆ ಘಟನೆಯೊಂದು ನಡೆದಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಮಾತುಕತೆ ಅಗತ್ಯವಿರಲಿಲ್ಲ. ಈ ಸಂಬಂಧ ವರಿಷ್ಠರು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
MUST WATCH
ಹೊಸ ಸೇರ್ಪಡೆ
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.