ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿ ಶಾಸಕರ ಅವಿಶ್ವಾಸ
Team Udayavani, Mar 4, 2020, 3:08 AM IST
ಬೆಂಗಳೂರು: ವಿಧಾನಸಭೆ ಉಪಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಪ್ರಾಯ ಪಡೆದು ಸದನದ ಗಮನಕ್ಕೆ ತರಲು ಸ್ಪೀಕರ್ ನಿರ್ಧರಿಸಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ರಮೇಶ್ ಕುಮಾರ್ ಸಭಾಧ್ಯಕ್ಷರಾಗಿ ಹಾಗೂ ಜೆಡಿಎಸ್‌ನ ಎಂ.ಕೃಷ್ಣಾರೆಡ್ಡಿ ಅವರನ್ನು ಉಪ ಸಭಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಮೈತ್ರಿ ಪತನ ನಂತರ ರಮೇಶ್ ಕುಮಾರ್ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ರಾಜೀನಾಮೆ ನೀಡದೇ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಅವರಿಗೂ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿ ಗೌರವಯುತವಾಗಿ ಸ್ಥಾನ ಬಿಟ್ಟು ಕೊಡುವಂತೆ ಸಿಎಂ ಸೂಚಿಸಿದ್ದಾರೆಂದು ಹೇಳಲಾಗಿದ್ದು, ಆದರೂ, ಕೃಷ್ಣಾ ರೆಡ್ಡಿ ಅವರು ಅದೇ ಸ್ಥಾನದಲ್ಲಿ ಮುಂದುವರಿದಿರುವುದರಿಂದ ಬಿಜೆಪಿ ಶಾಸಕರು ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್‌ಗೆ ಸೂಚನಾ ಪತ್ರ ನೀಡಿದ್ದಾರೆ. ಶಾಸಕರು ನೀಡಿರುವ ಪತ್ರದ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ.
ಸಹಿ ಹಾಕಿದವರು: ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ನೇತೃತ್ವದಲ್ಲಿ ಮಹಾಂತೇಶ್ ದೊಡಗೌಡ, ಅನಿಲ್ ಬೆಣಕೆ, ಬೆಳ್ಳಿಪ್ರಕಾಶ್, ಅಮೃತ್ ದೇಸಾಯಿ, ಅಭಯ್ ಪಾಟೀಲ್, ಸಂಜೀವ್ ಮಠಂದೂರು, ಮಸಾಲೆ ಜಯರಾಮ್, ಸಿ.ಎಂ. ನಿಂಬಣ್ಣವರ್, ಡಾ.ಅವಿನಾಶ್ ಜಾಧವ್, ಪರಣ್ಣ ಮುನವಳ್ಳಿ, ಮಹೇಶ್ ಕುಮಠಳ್ಳಿ, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ, ಕೆ.ಬಿ.ಅಶೋಕ್ ನಾಯ್ಕ, ಪ್ರೀತಂ ಗೌಡ, ಎಂ.ಎಸ್.ಯಾದವಾಡ, ಸಿದ್ದು ಸವದಿ, ಶಂಕರ ಪಾಟೀಲ್ ಮುನೇನಕೊಪ್ಪ,
ಬಿ.ಹರ್ಷವರ್ಧನ ಸೇರಿದಂತೆ 24 ಜನ ಬಿಜೆಪಿ ಸದಸ್ಯರು ಅವಿಶ್ವಾಸ ಮಂಡನೆ ಸೂಚನಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಂವಿಧಾನದ 179ಸಿ ಮತ್ತು ಕರ್ನಾಟಕ ವಿಧಾನಸಭೆ ಕಾರ್ಯ ವಿಧಾನ, ನಡಾವಳಿ ನಿಯಮ 169 ರನ್ವಯ ವಿಧಾನಸಭಾ ಉಪಾಧ್ಯಕ್ಷರಾದ ಕೃಷ್ಣಾರೆಡ್ಡಿ ವಿರುದ್ಧ ವಿಧಾನಸಭೆ “ಉಪಾಧ್ಯಕ್ಷರು ಸದನದ ವಿಶ್ವಾಸ ಕಳೆದುಕೊಂಡಿ ದ್ದಾರೆ’ ಎಂದು ಅವಿಶ್ವಾಸ ನಿರ್ಣಯ ಮಂಡಿ ಸಲು ಅನುಮತಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮನವೊಲಿಕೆ ಯತ್ನ: ಸದನದಲ್ಲಿ ಉಪ ಸಭಾಧ್ಯಕ್ಷರಂತಹ ಸಂವಿಧಾನಿಕ ಹುದ್ದೆಗಾಗಿ ಚುನಾವಣೆ ನಡೆಸುವುದು ಒಳ್ಳೆಯ ಸಂಪ್ರದಾಯವಲ್ಲ ಎನ್ನುವ ಕಾರಣಕ್ಕೆ ಕೃಷ್ಣಾರೆಡ್ಡಿ ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸುವಂತೆ ಅವರ ಮನವೊಲಿಕೆಗೆ ಸಿಎಂ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ. ದೇವರಾಜ ಅರಸು ಅವರ ಕಾಲದಲ್ಲಿ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ಹಾಗೂ ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನವನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು.
ಆದರೆ, ಅವರ ಅಧಿಕಾರವಧಿ ನಂತರ ಆಡಳಿತ ಪಕ್ಷದವರೇ ಬಹುಮತದ ಆಧಾರದಲ್ಲಿ ಎರಡೂ ಸ್ಥಾನ ಪಡೆಯುವ ವ್ಯವಸ್ಥೆ ಮುಂದುವರಿದಿದೆ. ಈಗ ಕೃಷ್ಣಾರೆಡ್ಡಿ ಅವರ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಪತ್ರ ನೀಡಿದ್ದರೂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈ ವಿಷಯವನ್ನು ವಿಧಾನಸಭೆ ಕಲಾಪ ಕಾರ್ಯ ಸೂಚಿಯಲ್ಲಿ ಪ್ರಕಟಿಸಿ ಸದನದ ಗಮನಕ್ಕೆ ತಂದಾಗ ಅಧಿಕೃತವಾಗಿ ಪ್ರಕ್ರಿಯೆಗೆ ಚಾಲನೆ ದೊರೆತಂತಾಗುತ್ತದೆ.
ಆನಂದ ಮಾಮನಿ ಕಣ್ಣು: ಉಪ ಸಭಾಧ್ಯಕ್ಷ ಸ್ಥಾನದ ಮೇಲೆ ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಕಣ್ಣಿಟ್ಟಿದ್ದು, ಈ ಕುರಿತು ಈಗಾಗಲೇ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಮುಖ್ಯಮಂತ್ರಿ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕರು ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್ ನೀಡಿದ್ದರೂ, ವಿಧಾನಸಭೆ ಘನತೆ ಕಾಪಾಡಲು ಸ್ಪೀಕರ್ ಈ ವಿಷಯವನ್ನು ಸದನ ಸಲಹಾ ಸಮಿತಿಯಲ್ಲಿ ಚರ್ಚಿಸಿ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವುದು ಸೂಕ್ತ.
-ವಿ.ಆರ್.ಸುದರ್ಶನ್, ಮಾಜಿ ಸಭಾಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.