ಸಕಾಲದಲ್ಲಿ ರಂಗ ಪ್ರವೇಶಕ್ಕೆ ಬಿಜೆಪಿ ಸಿದ್ಧತೆ
Team Udayavani, Jun 17, 2019, 3:09 AM IST
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೇಳುವ ಲಕ್ಷಣ ಕಾಣುತ್ತಿದ್ದರೂ ಮುಂದಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಬಿಜೆಪಿಯು ರಂಗ ಪ್ರವೇಶಕ್ಕೆ ಸಕಾಲದ ನಿರೀಕ್ಷೆಯಲ್ಲಿದ್ದು, ಎಚ್ಚರಿಕೆಯ ಹೆಜ್ಜೆಯನ್ನಿಡಲು ತೀರ್ಮಾನಿಸಿದೆ.
ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಿರಂಗವಾಗಿ ಸರ್ಕಾರ ಹಾಗೂ ಪಕ್ಷಗಳ ಮುಖಂಡರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಆದರೆ ಅತೃಪ್ತರ ಪೈಕಿ ರಾಜೀನಾಮೆ ನೀಡುವ ಶಾಸಕರ ಸಂಖ್ಯೆ ಆಧರಿಸಿ ರಾಜಕೀಯ ದಾಳ ಉರುಳಿಸಲು ಕಮಲ ಪಾಳೆಯ ಚಿಂತಿಸಿದೆ. ಸದ್ಯಕ್ಕೆ ಮೈತ್ರಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುತ್ತಲೇ ಜನಾಂದೋಲನ ಕಾರ್ಯ ಮುಂದುವರಿಸಲು ನಿರ್ಧರಿಸಿದಂತಿದೆ.
ಮೈತ್ರಿ ಸರ್ಕಾರ ರಚನೆ ಕಾರಣಕ್ಕೆ ಹಾಗೂ ನಂತರ ಸಚಿವ ಸ್ಥಾನ ಸಿಗದಿರುವುದಕ್ಕೆ ಕಾಂಗ್ರೆಸ್‌ನ ಹಲವು ಶಾಸಕರು ಅತೃಪ್ತಿ ವ್ಯಕ್ತಪಡಿಸುತ್ತಲೇ ಇದ್ದಾರೆ. ಕೆಲವರು ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡುತ್ತಿಲ್ಲವೆಂದು ಆರೋಪಿಸುತ್ತಿದ್ದರೆ, ಇನ್ನೂ ಕೆಲವರು ತಮ್ಮ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹಾಗಾಗಿ ಮೈತ್ರಿ ಸರ್ಕಾರದ ಭವಿಷ್ಯ ಕುರಿತಂತೆ ಅನಿಶ್ಚಿತತೆಯ ಮಾತು ಕೇಳಿಬರುತ್ತಲೇ ಇದೆ.
ನಡೆ ನಿಗೂಢ: ಮೈತ್ರಿ ಸರ್ಕಾರ ಎರಡನೇ ಬಾರಿ ಸಂಪುಟ ವಿಸ್ತರಣೆ ನಡೆಸಿದ ಬೆನ್ನಲ್ಲೇ ಅತೃಪ್ತರು ಬಹಿರಂಗವಾಗಿ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅತೃಪ್ತರೆನ್ನಲಾದ ಹಲವು ಶಾಸಕರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಗಾಗ್ಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಇಷ್ಟಾದರೂ ಅತೃಪ್ತರ ಮುಂದಿನ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿ ಒಂದೂವರೆ ತಿಂಗಳು ಕಳೆದಿದೆ. ಈ ನಡುವೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಆಹ್ವಾವವನ್ನೂ ಮೈತ್ರಿ ಸರ್ಕಾರ ನೀಡಿತ್ತು. ಇಷ್ಟಾದರೂ ರಮೇಶ್ ಜಾರಕಿಹೊಳಿಯವರ ನಿಲುವಿನ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಬಿಜೆಪಿಯು ಸದ್ಯದ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.
ಬಹಿರಂಗ ಆಹ್ವಾನ: ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಅಧಿಕವಾಗಿರುವುದರ ಸುಳಿವು ಪಡೆದಿರುವ ಬಿಜೆಪಿ ನಾಯಕರು ಪಕ್ಷಕ್ಕೆ ಆಹ್ವಾನ ನೀಡುವ ಮೂಲಕ ಪರೋಕ್ಷವಾಗಿ ರಾಜೀನಾಮೆ ನೀಡುವುದು ಸೂಕ್ತವೆಂಬ ಸಂದೇಶ ರವಾನಿಸುವ ಕೆಲಸವನ್ನು ಮಾಡುತ್ತಲೇ ಇದ್ದಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶನಿವಾರ ನಗರದಲ್ಲಿ ಮಾತನಾಡಿ,
“ಸಚಿವ ಸ್ಥಾನ ಸಿಗದೆ ಅತೃಪ್ತರಾದವರು ಪಕ್ಷ ಸೇರಬಹುದು’ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿದ್ದಾರೆ. 10 ದಿನದ ಹಿಂದೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಸಹ ಕಾಂಗ್ರೆಸ್‌ನಲ್ಲಿದ್ದರೆ ಉಳಿಗಾಲವಿಲ್ಲ, ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಗೆ ಬನ್ನಿ ಎಂದು ಕಾಂಗ್ರೆಸ್ ಶಾಸಕರನ್ನು ಉದ್ದೇಶಿಸಿಯೇ ಹೇಳಿಕೆ ನೀಡಿದ್ದರು.
ಕಾದು ನೋಡುವ ಲೆಕ್ಕಾಚಾರ: ಒಂದೆಡೆ ಅತೃಪ್ತ ಶಾಸಕರ ಮುಂದಿನ ನಡೆ ನಿಗೂಢವಾಗಿದ್ದರೆ, ಇನ್ನೊಂದೆಡೆ ಮೈತ್ರಿ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಪ್ರಗತಿ ಪರಿಶೀಲನಾ ಸಭೆ, ಹೊಸ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಗಳಿಗೆ ಒತ್ತು ನೀಡುವ ಮೂಲಕ ಕಾರ್ಯಾಂಗವನ್ನು ಸಕ್ರಿಯವಾಗಿಸುವ ಪ್ರಯತ್ನ ನಡೆಸುತ್ತಿದೆ.
ಹಾಗಾಗಿ ರಂಗ ಪ್ರವೇಶಕ್ಕೆ ಸೂಕ್ತ ರಾಜಕೀಯ ವಾತಾವರಣ ನಿರ್ಮಾಣವಾಗದಂತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಕಾದು ನೋಡುವ ಲೆಕ್ಕಾಚಾರದಲ್ಲಿ ತೊಡಗಿದೆ. ಜನಾಂದೋಲನಕ್ಕೆ ಒತ್ತು: ಮೈತ್ರಿ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿಯು ಈ ಬಗ್ಗೆ ಜನಾಂದೋಲನ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಜಿಂದಾಲ್‌ಗೆ ಭೂಮಿ ಮಾರಾಟ ನಿರ್ಧಾರ ವಿರೋಧಿಸಿ, ಬರ ನಿರ್ವಹಣೆಯಲ್ಲಿನ ವೈಫಲ್ಯವನ್ನು ಖಂಡಿಸಿ 48 ಗಂಟೆ ಕಾಲ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿಯು, ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ಗೆ ಮುತ್ತಿಗೆ ಹಾಕುವ ಮೂಲಕ ಹೋರಾಟ ಮುಕ್ತಾಯಗೊಳಿಸಿದೆ. ಸದ್ಯದಲ್ಲೇ ಜಿಲ್ಲಾಮಟ್ಟದಲ್ಲಿ ಹೋರಾಟ ಆರಂಭಿಸುವ ಮೂಲಕ ಸದ್ಯ ಜನಾಂದೋಲಕ್ಕೆ ಆದ್ಯತೆ ನೀಡಿದೆ.
ಅವಸರದ ತೀರ್ಮಾನವಿಲ್ಲ: ಮೈತ್ರಿ ಸರ್ಕಾರದ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಲ್ಲೇ ಅಸಮಾಧಾನವಿರುವುದು, ಅತೃಪ್ತರ ಸಂಖ್ಯೆ ಹೆಚ್ಚುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಆದರೆ ಸದ್ಯದ ಬೆಳವಣಿಗೆ ಆಧರಿಸಿ ಬಿಜೆಪಿಯು ಆತುರದ ತೀರ್ಮಾನ ಕೈಗೊಳ್ಳುವುದಿಲ್ಲ. ಶಾಸಕರ ರಾಜೀನಾಮೆ ಸಂಖ್ಯೆ ಆಧರಿಸಿ ಮುಂದಿನ ಹೆಜ್ಜೆ ಇಡಲು ಚಿಂತಿಸಲಾಗಿದೆ. ಅಲ್ಲಿಯವರೆಗೆ ಬಿಜೆಪಿ ಪ್ರತಿಪಕ್ಷವಾಗಿ ಮೈತ್ರಿ ಸರ್ಕಾರದ ದುರಾಡಳಿತದ ವಿರುದ್ಧ ಜನಾಂದೋಲ ರೂಪಿಸಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
Karnataka: 50 ವರ್ಷ ಮೀರಿದ ಜಲಾಶಯ ದುರಸ್ತಿಗೆ 10 ಸಾವಿರ ಕೋ.ರೂ.
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.