BJP: ಕಾಂಗ್ರೆಸ್ ಅಶ್ವಮೇಧದ ಕುದುರೆ ಕಟ್ಟಲು ವಿಜಯೇಂದ್ರ ನೇಮಕ
Team Udayavani, Nov 11, 2023, 12:21 AM IST
ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಮರಳಿ ಕಟ್ಟಲು ಮತ್ತೆ ಲಿಂಗಾಯತ ಮತ ಬ್ಯಾಂಕ್‌ನತ್ತ ವಾಲಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸುವ ಮೂಲಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ದಾಳ ಉರುಳಿಸಿದ್ದಾರೆ.
ಕಳೆದ ಬಾರಿ ಗೆದ್ದ 25 ಸ್ಥಾನಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಳಿಸಿಕೊಳ್ಳಬೇಕೆಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಆದರೆ ಬಿಜೆಪಿಯ ಸಂಘಟನ ಬಲವೊಂದನ್ನೇ ಆಶ್ರಯಿಸಿಕೊಂಡು ಈ ಸಾಧನೆ ಕಷ್ಟ ಎಂಬುದು ಬಿಜೆಪಿ ವರಿಷ್ಠರಿಗೆ ಅರ್ಥವಾಗಿದೆ. ಹೀಗಾಗಿ “ಸಮೂಹ ನಾಯಕ’ನ ಹುಡುಕಾಟದಲ್ಲಿದ್ದ ಬಿಜೆಪಿಗೆ ಯಡಿಯೂರಪ್ಪ ನಾಯಕತ್ವದಲ್ಲಿ ಪಳಗಿದ, ಅವರ ಪ್ರಭಾವಲಯ ಹೊಂದಿರುವ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದೆ. ಮುಂದಿನ ಕೆಲವು ವರ್ಷಗಳವರೆಗೆ ನಾಯಕತ್ವದ ನಿರ್ವಾತ ಸೃಷ್ಟಿಯಾಗದಂತೆ ನಿರ್ವಹಿಸುವ ಲೆಕ್ಕಾಚಾರವೂ ಅಡಗಿದೆ.
ಬಿಜೆಪಿ ವರಿಷ್ಠರು ಅದರಲ್ಲಿಯೂ ಮುಖ್ಯವಾಗಿ ಅಮಿತ್ ಶಾ ಮೊದಲಿನಿಂದಲೂ ವಿಜಯೇಂದ್ರ ಅವರ ಪರ ಇದ್ದರು. ಇದಕ್ಕೆ ವಿಜಯೇಂದ್ರರಲ್ಲಿ ನಾಯಕತ್ವ ಸಾಮರ್ಥ್ಯ ಸಾಧ್ಯತೆ ಗುರುತಿಸಿದ್ದೂ ಕಾರಣವಿರಬಹುದು. 2018ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ವಿಷಯದಲ್ಲೂ ಶಾ ಸಕಾರಾತ್ಮಕವಾಗಿದ್ದರು. ಕೊನೆಗೆ ಅವರ ಮಧ್ಯಸ್ಥಿಕೆಯಲ್ಲೇ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ನಿವಾಸಕ್ಕೆ ಉಪಾಹಾರಕ್ಕೆ ತೆರಳಿದ್ದ ಶಾ ಅವರು ಯಡಿಯೂರಪ್ಪ ಬಳಿಕ ವಿಜಯೇಂದ್ರ ಅವರನ್ನು ಮುಂಚೂಣಿಗೆ ತರುವ ಮುನ್ಸೂಚನೆ ನೀಡಿದ್ದರು. ಅದಾಗಿಯೂ ಪಕ್ಷದಲ್ಲಿ ಈ ಬಗ್ಗೆ ಆಕ್ಷೇಪಗಳಿದ್ದವು. ಅಂತಿಮವಾಗಿ ವರಿಷ್ಠರು ಅಳೆದು ತೂಗಿ ವಿಜಯೇಂದ್ರ ನೇಮಕಕ್ಕೆ ಅಸ್ತು ಎಂದಿದ್ದಾರೆ.
ಸುಲಭದ ದಾರಿಯಲ್ಲ
ವಿಜಯೇಂದ್ರ ಅವರಿಗೆ ಪಕ್ಷ ಮುನ್ನಡೆಸುವುದು ಹೂವಿನ ಹಾದಿಯಲ್ಲ. ಪಕ್ಷದಲ್ಲಿ ಯುವ ತಲೆಮಾರಿನ ಜತೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಒಳಗೊಂಡಂತೆ ಹಿರಿ ತಲೆಗಳನ್ನು ಸಂಭಾಳಿಸಬೇಕಾದ ಸವಾಲಿದೆ. ಯತ್ನಾಳ್ ಅವರಂಥವರನ್ನೂ ಜತೆಗೆ ಕರೆದೊಯ್ಯಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್‌ಗೆ ಎದೆಕೊಟ್ಟು ನಿಲ್ಲಬೇಕಿದೆ. ಇದಕ್ಕೆ ಸಂಘಟನೆಯ ಜತೆಗೆ ತನು-ಮನ-ಧನವೂ ವ್ಯಯಿಸಬೇಕಾದೀತು.
ಆದರೆ ಯಡಿಯೂರಪ್ಪ ಪುತ್ರ ಎಂಬ ಶ್ರೀರಕ್ಷೆಯ ಜತೆಗೆ ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡ ಹತ್ತಿಸುವ ಮೂಲಕ ವಿಜ ಯೇಂದ್ರ ತಮ್ಮ ನಾಯಕತ್ವ ಗುಣ ಪ್ರದರ್ಶಿಸಿದ್ದರು. ರಾಜ್ಯದ ಎಲ್ಲ ಜಿಲ್ಲೆ ಯಲ್ಲೂ ಕಾರ್ಯಕರ್ತರ ಪಡೆಯೂ ಇದ್ದು, ಸಂಘಟನಾತ್ಮಕವಾಗಿ ಪಕ್ಷಕ್ಕೆ ವಿಜಯೇಂದ್ರ ಶಕ್ತಿ ಕೊಡಬಲ್ಲರು ಎಂಬುದು ವರಿಷ್ಠರ ಲೆಕ್ಕಾಚಾರ.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದರಿಂದ ಒಕ್ಕಲಿಗ ಮತ್ತು ಲಿಂಗಾಯತ ಜಾತಿ ಸಮೀ ಕರಣದ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್‌ನ ಅಹಿಂದ ಅಸ್ತ್ರಕ್ಕೆ ಇದು ಪ್ರತ್ಯಸ್ತ್ರವಾಗಬಹುದು ಎನ್ನುವುದು ಬಿಜೆಪಿ ನಿರೀಕ್ಷೆ.
ಜಾತಿಗಣತಿ ಸಹಿತ ಹಲವು ವಿಷಯಗಳಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಸರಕಾರದ ಬಗ್ಗೆ ಮುನಿಸಿಕೊಂಡಿದೆ. ಈ ಹಂತದಲ್ಲಿ ಅದೇ ಸಮು ದಾಯದ ವಿಜಯೇಂದ್ರ ಅವರಿಗೆ ಮಣೆ ಹಾಕಿದರೆ ಲೋಕಸಭಾ ಚುನಾ ವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಬಹುದೆಂಬುದು ಬಿಜೆಪಿ ವರಿಷ್ಠರು ಲೆಕ್ಕ ಹಾಕಿದ್ದಾರೆ. ಜತೆಗೆ ಯಡಿಯೂರಪ್ಪ ಮುನಿಸನ್ನು ಈ ಮೂಲಕ ಕಡಿಮೆ ಮಾಡುವುದೂ ಬಿಜೆಪಿ ವರಿಷ್ಠರ ತಂತ್ರ.
ಇವೆಲ್ಲದರ ಮಧ್ಯೆ ವಿಜಯೇಂದ್ರ ನೇಮಕದ ಮೂಲಕ ಬಿಜೆಪಿ ವರಿಷ್ಠರು ಕೆಲವು ಟೀಕೆಗಳನ್ನೂ ಎದುರಿಸಬೇಕಾಗಿದೆ. ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಹಿಂದಿನಿಂದಲೂ ಟೀಕಿಸುತ್ತಿದ್ದಾರೆ. ಆದರೆ ಈಗ ಅದೇ ವಿಷಯವನ್ನು ಕಾಂಗ್ರೆಸ್ ಸಹ ಟೀಕೆಗೆ ಬಳಸುವ ಸಾಧ್ಯತೆ ಇದೆ.
ಕೋರ್ ಕಮಿಟಿ ಬದಲಾವಣೆ
ಇದರ ಜತೆಗೆ ಬಿಜೆಪಿ ಕೋರ್ ಕಮಿಟಿಯನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಳವಾಗಿದೆ. ಕೋರ್ ಕಮಿಟಿಯಲ್ಲಿ ಬೆರಳೆಣಿಕೆಯಷ್ಟು ಹಿರಿಯರಿಗೆ ಅವಕಾಶ ನೀಡಿ, ಜಾತಿ ಸಮೀಕರಣದೊಂದಿಗೆ ಹೊಸಬರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.