Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್. ಅಶೋಕ್
ಬಂಡಾಯದಿಂದ ನಷ್ಟವಿಲ್ಲ
Team Udayavani, Apr 16, 2024, 7:30 AM IST
ಬೆಂಗಳೂರು: ಪಕ್ಷದಲ್ಲಿರುವ ಬಹುತೇಕ ಅಸಮಾಧಾನವನ್ನು ವರಿಷ್ಠರು ನೀಗಿಸಿದ್ದಾರೆ. ಮೋದಿ ಅವರೇ ಮತ್ತೆ ಪ್ರಧಾನಿಯಾಗಬೇಕೆನ್ನುವ ಗುರಿಯ ಮುಂದೆ ಸಣ್ಣ-ಪುಟ್ಟ ಸಮಸ್ಯೆಗಳು ದೊಡ್ಡ ದಾಗುವುದಿಲ್ಲ. ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧಿಸಿದರೂ ಯಾರ ಮತವನ್ನು ಅವರು ಕಸಿಯುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಒಳ್ಳೆಯದೇ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿರುವ ಅವರು, ಮೊದಲ ಹಂತದ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗಾಗಿ ನಡೆಯುತ್ತಿರುವ ತಂತ್ರಗಾರಿಕೆಗಳ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ಪಕ್ಷದೊಳಗಿನ ಅಸಮಾಧಾನಿತರನ್ನು ಸಮಾಧಾನಪಡಿಸುವಲ್ಲಿ ವಿಫಲರಾಗಿದ್ದೀರಿ ಎನಿಸುವುದಿಲ್ಲವೇ?
ಟಿಕೆಟ್ ಸಿಗದೆ ಇದ್ದಾಗ ಅಸಮಾಧಾನ ಸಹಜ. ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ಪ್ರಯತ್ನಪಟ್ಟು ಶೇ. 95ರಷ್ಟು ಅಸಮಾಧಾನ ಶಮನಗೊಳಿಸಿದ್ದೇವೆ. ಮೋದಿ ಪ್ರಧಾನಿ ಆಗಬೇಕೆನ್ನುವ ಗುರಿಯ ಮುಂದೆ ಸಣ್ಣ-ಪುಟ್ಟ ಸಮಸ್ಯೆಗಳು ದೊಡ್ಡದಾಗುವುದಿಲ್ಲ. ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧಿಸಿದರೂ ಯಾರ ಮತವನ್ನು ಅವರು ಕಸಿಯುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ಈಶ್ವರಪ್ಪ ಅವರ ಸ್ಪರ್ಧೆಯಿಂದ ಬಿಜೆಪಿಗೆ ಒಳ್ಳೆಯದೇ ಆಗಲಿದೆ. ಬಿಜೆಪಿ ಎಂದರೆ ಕಮಲ. ಅದಕ್ಕೆ ಮತ ಬಿದ್ದೇ ಬೀಳುತ್ತದೆ. ಇನ್ನು ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಟಾರ್ ಅವರನ್ನು ಬಿಟ್ಟೇ ನಾವು ಕೆಲಸ ಮಾಡುತ್ತಿದ್ದೇವೆ. ಅವರಿಂದ ಒಂದು ಮತವೂ ಬಿಜೆಪಿಗೆ ಬರುವುದಿಲ್ಲ. ಅವರನ್ನು ನಂಬಿಕೊಂಡು ನಾವಿಲ್ಲ.
ಮೊದಲ ಹಂತದ 14 ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಿಲಿದೆ?
ದೇಶಾದ್ಯಂತ ಮೋದಿ ಪರ ಅಲೆಯಿದೆ. ವಿಶ್ವಮಟ್ಟದಲ್ಲಿ ದೇಶದ ಹೆಸರು ಉಳಿಸುವವರು ಪ್ರಧಾನಿ ಆಗಬೇಕು. ಅವರೇ ಮೋದಿ. 10 ವರ್ಷದಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದಿಡುತ್ತೇವೆ. ಮುಂದಿನ 5 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಪ್ರಕಟಪಡಿಸಿರುವ ಸಂಕಲ್ಪ ಪತ್ರವನ್ನೂ ಜನರೆದುರು ಇಡುತ್ತೇವೆ. ಕಳೆದ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆಗಳು ಬೇರೆ ಸಂಖ್ಯೆಗಳನ್ನೇ ಹೇಳಿದ್ದವು. ನಾವು 25 ಸ್ಥಾನ ಗೆದಿದ್ದೆವು. ಈ ಬಾರಿಯೂ ಚಮತ್ಕಾರಿ ಫಲಿತಾಂಶ ಬರಲಿದೆ.
ಜೆಡಿಎಸ್ ಜತೆಗೆ ಮೈತ್ರಿ ಆದರೂ ಸಮನ್ವಯ ಕೊರತೆ ಕಾಡುತ್ತಿದೆ. ಒಳ ಪೆಟ್ಟು ಬೀಳುವುದಿಲ್ಲವೇ?
ಜೆಡಿಎಸ್ ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ನೆರವು ಸಿಗಲಿದೆ. ನಮ್ಮ-ಅವರ ಕಾರ್ಯಕರ್ತರ ನಡುವೆ ಸಮಸ್ಯೆಗಳಿಲ್ಲ. ಹೀಗಾಗಿ ಸಮನ್ವಯ ಕೊರತೆ ಇಲ್ಲವೇ ಇಲ್ಲ. ಒಳ ಏಟು ಬೀಳುವುದೂ ಇಲ್ಲ. ಅವರ ಮತಗಳು ನಮಗೆ ಸಿಗಲಿವೆ. ಮಂಡ್ಯದಲ್ಲಿ ಸುಮಲತಾ ಬೆಂಬಲ ಸಿಕ್ಕಿದೆ. ಅಂಬರೀಶ್ ಅಭಿಮಾನಿಗಳಿದ್ದಾರೆ. ಮಂಡ್ಯ, ಮೈಸೂರು ಭಾಗದಲ್ಲಿ ನೆರವಾಗಲಿದೆ. ಚಾಮರಾಜನಗರದಲ್ಲೂ ಶ್ರೀನಿವಾಸಪ್ರಸಾದ್ ಅವರು ಬಿಜೆಪಿ ಬೆಂಬಲಿಸುತ್ತಾರೆ. ಮೈಸೂರು ಬಿಡದಂತೆ ಸಿಎಂ ಸಿದ್ದರಾಮಯ್ಯರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಡಿಸಿಎಂ ಬೆಂಗಳೂರು ಗ್ರಾಮಾಂತರ ಬಿಟ್ಟು ಬಾರದಂತೆ ನಾವೇ ಮಾಡಿದ್ದೇವೆ. ಹೃದಯ ಇಲ್ಲದ ಬಂಡೆ ಬೇಕೋ ಹೃದಯವಂತ ವೈದ್ಯ ಬೇಕೋ ಎನ್ನುವ ಸ್ಥಿತಿ ಬೆಂಗಳೂರು ಗ್ರಾಮಾಂತರದಲ್ಲಿದೆ.
ಪ್ರತೀ ಚುನಾವಣೆಯಲ್ಲೂ ಮೋದಿಗೆ ಮತ ಕೇಳುತ್ತೀರಿ, ಸ್ಥಳೀಯ ಸಂಸದರ ಮುಖಕ್ಕೆ ಬೆಲೆ ಇಲ್ಲವೇ? ಕಾಂಗ್ರೆಸಿಗರಿಗೆ ನಾಯಕತ್ವ ಇಲ್ಲ. ಅಬ್ಬೇಪಾರಿ ಪಕ್ಷ. ದ್ರಾಕ್ಷಿಗಾಗಿ ನರಿ ಎಗರಿ ನೋಡಿ, ಹುಳಿ ಎಂದು ಹೋಗುತ್ತದೆ. ಇಂದಿರಾ ಗಾಂಧಿ ಇದ್ದಾಗ ಆಕೆಯನ್ನೇ ಬಿಂಬಿಸಲಿಲ್ಲವೇ? ನಾವು ಮೋದಿಯನ್ನು ಬಿಂಬಿಸಿದರೆ ತಪ್ಪೇ? ರಾಹುಲ್ ಹೆಸರೇಕೆ ಅವರು ಹೇಳುವುದಿಲ್ಲ? ಕಾಣೆಯಾಗಿರುವ ರಾಹುಲ್ ಗಾಂಧಿಯನ್ನು ದೇಶದ ಜನ ಹುಡುಕುವುದನ್ನೇ ಬಿಟ್ಟಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ಕೊಟ್ಟಿದ್ದೀರಿ, ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇತ್ತೇ? ನಾವು ಕಾಂಗ್ರೆಸಿಗರಂತೆ 12 ಮಂದಿ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿಲ್ಲ. ಸಚಿವರ ಮಕ್ಕಳಿಗೆ ಕೊಟ್ಟಿಲ್ಲ. ಪಕ್ಷದ ತೀರ್ಮಾನ. ಸೋಲು, ಗೆಲುವು ಬೇರೆ. ಸೋತವರಿಗೆ ಕೊಡಬಾರದೆಂಬ ನಿಯಮವೇನೂ ಇಲ್ಲ. ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಸ್ತಿಯನ್ನು ತುಲನೆ ಮಾಡಿ ನೋಡಿ. ಯಾರು ಹಣವಂತರು ಎಂಬುದು ಗೊತ್ತಾಗುತ್ತದೆ. ಬೇರೆ ಯಾವ ಅಭ್ಯರ್ಥಿಗಳ ಬಳಿಯೂ ಇವರು ತೋರಿಸುವಷ್ಟು ಆಸ್ತಿ ಇಲ್ಲ. ಅಭ್ಯರ್ಥಿಗಳ ಕೊರತೆ ಇರುವುದರಿಂದಲೇ ಸಚಿವರ ಮಕ್ಕಳನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಚುನಾವಣೆ ಎದುರಿಸುವ ಧೈರ್ಯ ಇಲ್ಲದ ಸಚಿವರು ತಮ್ಮ ಮಕ್ಕಳನ್ನು ಸ್ಪರ್ಧೆಗಿಳಿಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಮುಂದೆ ಮೋದಿಯ ಗ್ಯಾರಂಟಿ ನಡೆಯುವುದಿಲ್ಲ ಎಂಬ ಮಾತಿದೆ, ಇದಕ್ಕೆ ಏನು ಹೇಳುವಿರಿ?
ಸರಕಾರ ಬಂದು ಒಂದು ವರ್ಷವಾಗಿದೆ. ಒಂದೇ ಒಂದು ಅಡಿಗಲ್ಲು ಹಾಕಿಲ್ಲ. ಜನ ಅಭಿವೃದ್ಧಿ ನೋಡುತ್ತಾರೆ. ಇವರು ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ. ನೀರು, ಮೇವು ಸಿಗದೆ ರೈತರು ದನಗಳನ್ನು ಕಟುಕರಿಗೆ ಮಾರುವ ಸ್ಥಿತಿಗೆ ಬಂದಿದೆ. ಇದಕ್ಕಿಂತ ಏನು ವೈಫಲ್ಯ ಬೇಕು? ಇದನ್ನೇ ಜನರಿಗೆ ತಿಳಿಸುತ್ತೇವೆ. ಯಾವುದೇ ಹೊಸ ತೆರಿಗೆ ಹಾಕದೆ ಗ್ಯಾರಂಟಿ ಕೊಟ್ಟಿದ್ದರೆ ಜನ ಒಪ್ಪುತ್ತಿದ್ದರು. ಜನರ ಮೇಲೆ ತೆರಿಗೆ ವಿಧಿಸಿ, ಗಂಡನ ಹಣ ದರೋಡೆ ಮಾಡಿ, ಹೆಂಡತಿಗೆ ಕೊಡುತ್ತಿದ್ದಾರೆ. ಇದು ಜನರಿಗೆ ಅರ್ಥ ಆಗಿದೆ. ಕಾಂಗ್ರೆಸ್ ಬೆಂಬಲಿತ ಸರಕಾರ ಇರುವಲ್ಲಿಯೇ ಭಯೋತ್ಪಾದನ ಕೃತ್ಯಗಳಾಗುತ್ತಿವೆ. ಇವರ ಮೃದು ಧೋರಣೆಗಳು, ತುಷ್ಟೀಕರಣ ನೀತಿಗಳೇ ಇದಕ್ಕೆ ಕಾರಣ. ಮಂಗಳೂರು ಕುಕ್ಕರ್ ಸ್ಫೋಟವನ್ನಾಗಲೀ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನಾಗಲೀ ಕಾಂಗ್ರೆಸ್ ಸರಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮಕ್ಕಳನ್ನು ಕರೆತಂದ ಮೋದಿ ಪ್ರಪಂಚವನ್ನೇ ರಕ್ಷಿಸುತ್ತಿದ್ದಾರೆ. ಈ ದೇಶವನ್ನೂ ರಕ್ಷಿಸುತ್ತಾರೆ.
ಬರ ಪರಿಹಾರ ಕೊಡದ ಕೇಂದ್ರದ ವಿರುದ್ಧ ರಾಜ್ಯ ಸರಕಾರ ಕಾನೂನು ಸಮರ ಸಾರಿದೆ. 25 ಸಂಸದರು ರಾಜ್ಯಕ್ಕೆ ಏನು ಮಾಡಿದ್ದಾರೆ?
ಕೇರಳ ಕೂಡ ನ್ಯಾಯಾಲಯದ ಮೊರೆ ಹೋಗಿತ್ತು, ಛೀಮಾರಿ ಹಾಕಿಸಿಕೊಂಡಿದೆ. ಅವಮಾನ ಯಾರಿಗೆ? ಬರಗಾಲ ಘೋಷಿಸಲು ವಿಳಂಬ ಮಾಡಿದ್ದೇಕೆ? ಸೆಪ್ಟಂಬರ್‌ವರೆಗೂ ಏಕೆ ಕಾಯಬೇಕಿತ್ತು? ತೇವಾಂಶ, ಬೆಳೆ ನಾಶ ಎಲ್ಲವನ್ನೂ ಅಂದಂದಿನ ಅಂಕಿ-ಅಂಶ ಆಧರಿಸಿ ಮಾಡಬೇಕಿತ್ತು? ಹಸುರು ಬರ ಎಂದವರು ಕಾಯಬೇಕಿತ್ತೇ? ಒಂದು ರಾಜ್ಯಕ್ಕೆ ಸೀಮಿತವಾಗಿ ಮಾಡಲಾಗುತ್ತದೆಯೇ? ದೇಶದ ಎಲ್ಲ ರಾಜ್ಯಗಳಿಗೂ ಕೊಡಬೇಕು. ಕರ್ನಾಟಕದಲ್ಲಿ ಒಂದು ಜಿಲ್ಲೆಗೆ ಕೊಟ್ಟು ಮತ್ತೂಂದು ಜಿಲ್ಲೆಗೆ ಕೊಡದಿದ್ದರೆ ಆಗುತ್ತದೆಯೇ? ಕೇಂದ್ರದಿಂದ ಬಂದ ಅನುದಾನಗಳ ಬಗ್ಗೆ ವಿಪಕ್ಷ ನಾಯಕನಾಗಿ ನಾನೂ ನಿರ್ಣಯ ಮಂಡಿಸಿದ್ದೇನೆ. ಸಂಸತ್ತಿನಲ್ಲಿ ರಾಜ್ಯ ಕಾಂಗ್ರೆಸ್‌ಗೆ ಒಬ್ಬ ದೃಷ್ಟಿ ಬೊಂಬೆ ಇದ್ದರಲ್ಲ? ಏಕೆ ಸಂಸತ್ತಿನಲ್ಲಿ ಮಾತನಾಡಿಲಿಲ್ಲ? ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಏಕೆ ಪ್ರಶ್ನಿಸಿಲ್ಲ? ಅವರಿಗೆ ಕಾಳಜಿ ಇರಲಿಲ್ಲವೇ? ಸ್ವಾರ್ಥವೇನಿತ್ತು ಎಂಬುದನ್ನು ಖರ್ಗೆ ಉತ್ತರಿಸಲಿ. ನಮ್ಮನ್ನು ಪ್ರಶ್ನಿಸಲು ಯಾವ ಅಧಿಕಾರವಿದೆ? ಆ ಯೋಗ್ಯತೆ ಉಳಿಸಿಕೊಂಡಿಲ್ಲ. ರಾಜಕೀಯ ಕಾರಣದಿಂದ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಉತ್ತರ ಸಿಗಲಿದೆ.
– ಮೋದಿ ಮತ್ತೆ ಪ್ರಧಾನಿ ಆಗಬೇಕೆನ್ನುವ ಗುರಿಯ ಮುಂದೆ ಸಣ್ಣ-ಪುಟ್ಟ ಸಮಸ್ಯೆ ದೊಡ್ಡದಾಗುವುದಿಲ್ಲ.
-ಜೆಡಿಎಸ್ ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ನೆರವು ಸಿಗಲಿದೆ.
-ಹೃದಯ ಇಲ್ಲದ ಬಂಡೆ ಬೇಕೋ, ಹೃದಯವಂತ ವೈದ್ಯ ಬೇಕೋ ಎಂಬ ಸ್ಥಿತಿ ಬೆಂ. ಗ್ರಾಮಾಂತರದಲ್ಲಿದೆ.
- ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.