“ಗೋಮೂತ್ರ ರಾಜ್ಯ”ಗಳಲ್ಲೇ ಬಿಜೆಪಿಗೆ ಜಯ- DMK ಸಂಸದ ಸೆಂಥಿಲ್ ಆಕ್ಷೇಪಾರ್ಹ ಹೇಳಿಕೆ
ಹಿಂದಿ ಭಾಷಿಕ ರಾಜ್ಯಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಬಳಿಕ ಕ್ಷಮೆಯಾಚನೆ
Team Udayavani, Dec 6, 2023, 12:01 AM IST
ಹೊಸದಿಲ್ಲಿ: ಹಿಂದಿ ಭಾಷಿಕ ರಾಜ್ಯಗಳನ್ನು “ಗೋಮೂತ್ರ ರಾಜ್ಯಗಳು’ ಎಂದು ಕರೆಯುವ ಮೂಲಕ ಡಿಎಂಕೆ ಸಂಸದ ಡಿ.ಎನ್.ವಿ.ಸೆಂಥಿಲ್ ಕುಮಾರ್ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, “ಐಎನ್‌ಡಿಐಎ ಮಿತ್ರಪಕ್ಷದ ನಾಯಕ ಉತ್ತರ ಭಾರತೀಯರನ್ನು ಅವಮಾನ ಮಾಡಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಸೆಂಥಿಲ್ ಕ್ಷಮೆ ಕೇಳಿದ್ದಾರೆ. “ನಾನು ಪದವನ್ನು ಅಸಮರ್ಪಕ ರೀತಿಯಲ್ಲಿ ಬಳಸಿದ್ದೇನೆ. ಯಾವುದೇ ಉದ್ದೇಶವನ್ನಿಟ್ಟು ಕೊಂಡು ಹಾಗೆ ಹೇಳಿಲ್ಲ. ತಪ್ಪರ್ಥವನ್ನು ರವಾನಿಸಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ ಲೋಕಸಭೆಯ ಕಡತದಿಂದ ಅವರ ಹೇಳಿಕೆಯನ್ನು ತೆಗೆದುಹಾಕಲಾಗಿದೆ.
ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆಯ ವೇಳೆ ಸಂಸದ ಸೆಂಥಿಲ್ ಕುಮಾರ್ ಅವರು, “ದೇಶದ ಜನರು ಒಂದನ್ನು ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ, ಬಿಜೆಪಿ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸುತ್ತಿದೆ. ಆ ರಾಜ್ಯಗಳನ್ನು ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳೆಂದು ಕರೆಯುತ್ತೇವೆ. ಬಿಜೆಪಿ ಅಲ್ಲಿ ಮಾತ್ರ ಗೆಲ್ಲಲು ಸಾಧ್ಯವೇ ಹೊರತು ದಕ್ಷಿಣ ಭಾರತದಲ್ಲಿ ಅಲ್ಲ’ ಎಂದಿದ್ದಾರೆ. ಇತ್ತೀಚೆಗೆ ಮುಗಿದ ಪಂಚರಾಜ್ಯ ಚುನಾವಣೆಯನ್ನು ಕೆಲವರು “ಉತ್ತರ-ದಕ್ಷಿಣ ವಿಭಜನೆ’ ಎಂಬರ್ಥದಲ್ಲಿ ವರ್ಣಿಸಿದ ಬಗ್ಗೆ ಪ್ರಸ್ತಾವಿ ಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
“ನೀವು(ಬಿಜೆಪಿ) ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕರ್ನಾಟಕವನ್ನೇ ನೋಡಿ, ಅಲ್ಲೆಲ್ಲ ನಾವೇ ಬಲಿಷ್ಠರು. ದಕ್ಷಿಣದ ಎಲ್ಲ ರಾಜ್ಯಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನೀವು ಆ ಎಲ್ಲ ರಾಜ್ಯಗಳನ್ನೂ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಪರೋಕ್ಷವಾಗಿ ಅಧಿಕಾರ ಚಲಾಯಿಸಲು ಯತ್ನಿಸಿದರೂ ಅಚ್ಚರಿಯೇ ನಿಲ್ಲ’ ಎಂದೂ ಸೆಂಥಿಲ್ ಹೇಳಿದ್ದಾರೆ.
ಸೆಂಥಿಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, “ನಮ್ಮ ಉತ್ತರ ಭಾರತದ ಗೆಳೆಯರನ್ನು ಪಾನಿಪುರಿ ಮಾರಾಟಗಾರರು, ಶೌಚಾಲಯ ಕಟ್ಟುವವರು ಎಂದೆಲ್ಲ ಕರೆದ ಬಳಿಕ, ಈಗ ವಿಪಕ್ಷಗಳ ಮೈತ್ರಿಕೂಟದ ಡಿಎಂಕೆ ಸಂಸದರು, ಗೋಮೂತ್ರ ರಾಜ್ಯಗಳು ಎಂಬ ಹೇಳಿಕೆ ನೀಡಿದ್ದಾರೆ. ಈ ಸಂವೇದನಾರಹಿತ ಹೇಳಿಕೆಯನ್ನು ನಾವು ಖಂಡಿಸುತ್ತೇವೆ’ ಎಂದಿದ್ದಾರೆ. ಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಎಲ್ಲಿಯವರೆಗೆ ಭಾರತೀಯರನ್ನು ಅವಮಾನಿಸುತ್ತವೆ? ಡಿಎಂಕೆ ನಾಯಕನ ಹೇಳಿಕೆಯನ್ನು ರಾಹುಲ್ ಒಪ್ಪುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ದೇಶಕ್ಕೆ 2 ಪ್ರಧಾನಿ, 2 ಸಂವಿಧಾನ ಇರಲು ಹೇಗೆ ಸಾಧ್ಯ?
ಜಮ್ಮು ಮತ್ತು ಕಾಶ್ಮೀರ ಮಸೂದೆಯ ಕುರಿತು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಒಂದು ದೇಶವು ಎರಡು ಪ್ರಧಾನಿಗಳು, ಎರಡು ಸಂವಿಧಾನಗಳು ಮತ್ತು ಎರಡು ಧ್ವಜಗಳನ್ನು ಹೊಂದಿರಲು ಹೇಗೆ ಸಾಧ್ಯ? ಇದನ್ನು ಯಾರು ಮಾಡಿದರೋ, ಅವರು ಮಾಡಿದ್ದು ತಪ್ಪು. ಅದನ್ನು ಪ್ರಧಾನಿ ಮೋದಿಯವರು ಸರಿಪಡಿಸಿದ್ದಾರೆ. ನಾವು 1950ರಿಂದಲೂ, ದೇಶದಲ್ಲಿ “ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ್’ (ಒಂದು ಪ್ರಧಾನಿ, ಒಂದು ಧ್ವಜ, ಒಂದು ಸಂವಿಧಾನ) ಇರಬೇಕೆಂದು ಹೇಳಿಕೊಂಡು ಬಂದಿದ್ದೇವೆ. ಅದನ್ನೇ ಮಾಡಿದ್ದೇವೆ ಕೂಡ’ ಎಂದಿದ್ದಾರೆ.
ಸನಾತನ ಧರ್ಮ: ಎಫ್ಐಆರ್‌ಗೆ ಆಗ್ರಹ
ತಮಿಳುನಾಡು ಸಚಿವರು ಸನಾತನ ಧರ್ಮ ಮತ್ತು ಹಿಂದೂ ಧರ್ಮದ ವಿರುದ್ಧ ದ್ವೇಷ ಭಾಷಣವನ್ನು ಮಾಡಿದ್ದು, ಅವರ ವಿರುದ್ಧ ಸರಕಾರವು ಎಫ್ಐಆರ್ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಜಿವಿಎಲ್ ನರಸಿಂಹ ರಾವ್ ಆಗ್ರಹಿಸಿದ್ದಾರೆ. ರಾಜ್ಯಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಪ್ರತಿ ಧರ್ಮ, ಪ್ರತೀ ವ್ಯಕ್ತಿ ಮತ್ತು ಪ್ರತಿಯೊಂದು ವರ್ಗಕ್ಕೂ ತಮ್ಮದೇ ಆದ ಧರ್ಮವನ್ನು ಅನುಸರಿಸುವ ಅಧಿಕಾರವನ್ನು ಸಂವಿಧಾನ ನೀಡಿದೆ. ಆದರೆ ತ.ನಾಡಿನ ಸಚಿವರೊಬ್ಬರು ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿದ್ದಾರೆ. ಮತ್ತೂಬ್ಬರು, ವಿಪಕ್ಷಗಳ ಮೈತ್ರಿಕೂಟ ರಚನೆಯ ಉದ್ದೇಶವೇ ಸನಾತನ ಧರ್ಮದ ನಿರ್ಮೂಲನೆ ಎಂದು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರ ಪುತ್ರ, ಕರ್ನಾಟಕದ ಸಚಿವರೊಬ್ಬರು ಈ ಹೇಳಿಕೆಗಳನ್ನು ಬೆಂಬಲಿಸಿ ಮಾತನಾಡಿದ್ದಾರೆ. ಇವೆಲ್ಲವೂ ದ್ವೇಷ ಭಾಷಣಕ್ಕೆ ಸಮ. ಹೀಗಾಗಿ ತಮಿಳುನಾಡು ಸರಕಾರವು ತನ್ನ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಸದನದೊಳಕ್ಕೆ ಫಲಕ ತಂದರೆ ಕಠಿನ ಕ್ರಮ
ಸಂಸತ್ ಕಲಾಪ ನಡೆಯುವ ವೇಳೆ ಪ್ರತಿಭಟನಾರ್ಥವಾಗಿ ಫಲಕಗಳನ್ನು, ಭಿತ್ತಿಪತ್ರಗಳನ್ನು ಸದನದೊಳಕ್ಕೆ ತರುವ ಸಂಸದರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದ್ದಾರೆ. ಸದನದಲ್ಲಿ ಎಲ್ಲರೂ ಶಿಸ್ತು ಹಾಗೂ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ರಮೇಶ್ ಬಿಧೂರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಫಲಕವೊಂದನ್ನು ಬಿಎಸ್‌ಪಿ ಸದಸ್ಯ ಡ್ಯಾನಿಶ್ ಅಲಿ ಸೋಮವಾರ ಕುತ್ತಿಗೆಗೆ ನೇತುಹಾಕಿ ಕೊಂಡು ಸದನಕ್ಕೆ ಬಂದ ಬೆನ್ನಲ್ಲೇ ಸ್ಪೀಕರ್ ಬಿರ್ಲಾರಿಂದ ಈ ಖಡಕ್ ಸೂಚನೆ ರವಾನೆಯಾಗಿದೆ. “ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ, ಹೊಸ ಸಂಸತ್ ಭವನದೊಳಕ್ಕೆ ಸಂಸದರು ಪ್ಲೆಕಾರ್ಡ್‌ಗಳನ್ನು ತರುವಂತಿಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ. ಸಂಸತ್‌ನಲ್ಲಿ ಎಲ್ಲರೂ ಶಿಸ್ತು, ಘನತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಫಲಕಗಳನ್ನು ತರುವ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕಾದೀತು’ ಎಂದು ಸ್ಪೀಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.