ಪೊಲೀಸ್-ಸಾರ್ವಜನಿಕರ ರಕ್ಷಕ “ಬಾಡಿ ಕೆಮರಾ’ !
ವಾಹನ ತಪಾಸಣೆ ವೇಳೆ ಬಳಕೆ; ದುರ್ವರ್ತನೆ ತೋರಿದರೆ ಆಪತ್ತು
Team Udayavani, Oct 5, 2021, 5:18 AM IST
ಮಹಾನಗರ: ವಾಹನ ತಪಾಸಣೆ ವೇಳೆ ಪೊಲೀಸರು ಮತ್ತು ಸಾರ್ವಜನಿಕರಿಗೆ “ರಕ್ಷಣೆ’ ಒದಗಿಸಬಲ್ಲ “ಬಾಡಿ ಕೆಮರಾ’ ಗಳನ್ನು ಈಗ ಹೆಚ್ಚಾಗಿ ಬಳಸಲು ಮಂಗಳೂರು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.
ವಾಹನಗಳ ತಪಾಸಣೆ ವೇಳೆ ಸಾರ್ವ ಜನಿಕರು ಆಕ್ರೋಶಭರಿತರಾಗಿ ವರ್ತಿಸುವುದು, ಪೊಲೀಸರು ದರ್ಪದಿಂದ, ಒರಟಾಗಿ ನಡೆದುಕೊಳ್ಳುವುದು, ಮಾತಿನ ಚಕಮಕಿ, ಸಂಘರ್ಷದ ವಾತಾವರಣ ಉಂಟಾಗುವುದು ಮೊದಲಾದವುಗಳನ್ನು ತಪ್ಪಿಸಲು “ಬಾಡಿ ಕೆಮರಾ’ ನೆರವಿಗೆ ಬರುತ್ತಿದೆ. ಸದ್ಯ ಮಂಗಳೂರು ಪೊಲೀಸರ ಬಳಿ ಕೆಲವೇ ಸಂಖ್ಯೆಯ ಬಾಡಿ ಕೆಮರಾಗಳಿದ್ದು ಇನ್ನಷ್ಟು ಬಾಡಿ ಕೆಮರಾಗಳಿಗೆ ಬೇಡಿಕೆ ಇದೆ.
ಕಾರ್ಯನಿರ್ವಹಣೆ ಹೇಗೆ?
“ಬಾಡಿ ಕೆಮರಾ’ಗಳು ಧ್ವನಿ ಮತ್ತು ದೃಶ್ಯ ಎರಡನ್ನೂ ಚಿತ್ರೀಕರಿಸಿಕೊಳ್ಳುತ್ತವೆ. ಅದನ್ನು ಅಗತ್ಯ ಬಿದ್ದಾಗ ಪರಿಶೀಲಿಸಬಹುದಾಗಿದೆ. ಸಾರ್ವಜನಿಕರು ಅಥವಾ ಕರ್ತವ್ಯದಲ್ಲಿರುವ ಪೊಲೀಸರು ದುರ್ವರ್ತನೆ ತೋರಿದರೆ ಅದು “ಬಾಡಿ ಕೆಮರಾ’ದಲ್ಲಿ ದಾಖಲಾಗುವುದರಿಂದ ತಪ್ಪು ಮಾಡಿದವರು ಅವರ ತಪ್ಪನ್ನು ಅಲ್ಲಗಳೆಯಲು ಅವಕಾಶ ಇರುವುದಿಲ್ಲ. ಈಗಾಗಲೇ ಸಂಚಾರಿ ಪೊಲೀಸರಿಗೂ ಸಂಯಮದ ವರ್ತನೆಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರೂ ಸಹಕರಿ ಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಅನಪೇಕ್ಷಿತ ಘಟನೆಗಳು ನಡೆಯುವ ಸಾಧ್ಯತೆಗಳು ಇರುವುದರಿಂದ “ಬಾಡಿ ಕೆಮರಾ’ಗಳನ್ನು ಬಳಸುವುದು ಸೂಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:RSS ವಿರುದ್ಧ ಹೇಳಿಕೆ : ಜಾವೇದ್ ಅಖ್ತರ್ ವಿರುದ್ಧ ಎಫ್‍ಐಆರ್
ಹಲವು ಘಟನೆಗಳು
ಈಗಾಗಲೇ ನಗರದಲ್ಲಿ ಟೋಯಿಂಗ್ ಸಂದರ್ಭ ಪೊಲೀಸರ ಜತೆ ಮಾತಿನ ಚಕಮಕಿಯ ಘಟನೆಗಳು ನಡೆದಿದ್ದವು. ಅಲ್ಲದೆ ಕಳೆದ ತಿಂಗಳು ಸಿಗ್ನಲ್ ಜಂಪ್ ಮಾಡಿದ ಓರ್ವನನ್ನು ಪೊಲೀಸರು ವಿಚಾರಿಸಿದಾಗ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ದೂರು ದಾಖಲಾಗಿತ್ತು. ಕಳೆದ ವಾರ ಹೆಲ್ಮೆಟ್ ಹಾಕದೆ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ನಿಲ್ಲಿಸಿದ ಗೃಹರಕ್ಷಕ ಮಹಿಳಾ ಸಿಬಂದಿಯನ್ನು ನಿಂದಿಸಲಾಗಿತ್ತು. ಹಲವೆಡೆ ಪೊಲೀಸರು ಸಂಯಮ ಕಳೆದುಕೊಂಡು ವರ್ತಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.
ತುಂಬಾ ಉಪಯೋಗ
ಕೆಲವು ಪಾಯಿಂಟ್‌ಗಳಲ್ಲಿ ಒಬ್ಬೊಬ್ಬರೇ ಕೆಲಸ ಮಾಡುವಾಗ ಮೊಬೈಲ್‌ನಿಂದ ರೆಕಾರ್ಡ್ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭ ನಮಗೆ ಬಾಡಿ ಕೆಮರಾ ತುಂಬಾ ಉಪಯೋಗಕ್ಕೆ ಬರುತ್ತದೆ. ಕರ್ತವ್ಯಕ್ಕೆ ಅಡ್ಡಿ ಪಡಿಸುವವರ ದೃಶ್ಯ ದಾಖಲಾಗುವುದರಿಂದ ನಮಗೆ ಸಾಕ್ಷಿ ದೊರೆಯುತ್ತದೆ ಎನ್ನುತ್ತಾರೆ ಸಂಚಾರಿ ಪೊಲೀಸ್ ಸಿಬಂದಿ.
ಠಾಣೆಗೆ 2-4 ಕೆಮರಾ
ಸಂಚಾರ ವಿಭಾಗದ ಪ್ರತಿ ಪೊಲೀಸ್ ಠಾಣೆಗೆ 2ರಿಂದ 4 ಬಾಡಿ ಕೆಮರಾ ನೀಡಲಾಗಿದೆ. ಈಗ ಪ್ರಮುಖ ಸ್ಥಳಗಳಲ್ಲಿ ಮಾತ್ರ ಇವುಗಳನ್ನು ಬಳಸಲಾಗುತ್ತಿದೆ. ವಾಹನಗಳ ಸಂಖ್ಯೆ, ತಪಾಸಣೆ ಹೆಚ್ಚುತ್ತಿರುವುದರಿಂದ ಬಾಡಿ ಕೆಮರಾಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಪೊಲೀಸ್ ಸಿಬಂದಿಯ ಬೇಡಿಕೆ.
ಕರ್ತವ್ಯ ನಿರ್ವಹಣೆಗೆ ಪೂರಕ
ಬಾಡಿ ಕೆಮರಾಗಳ ಅಗತ್ಯದ ಬಗ್ಗೆ ಸರಕಾರ, ನ್ಯಾಯಾಲಯಗಳು ಕೂಡ ಹೇಳಿವೆ. ಮಂಗಳೂರಿನಲ್ಲಿ ಸದ್ಯ ಕಡಿಮೆ ಸಂಖ್ಯೆಯಲ್ಲಿ ಬಾಡಿ ಕೆಮರಾ ಬಳಕೆ ಮಾಡಲಾಗುತ್ತಿದೆ. ಬೇಡಿಕೆ ಹೆಚ್ಚಿದ್ದು ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಇಂತಹ ಕೆಮರಾಗಳು ಕರ್ತವ್ಯ ನಿರತ ಪೊಲೀಸರ ಸುರಕ್ಷತೆ ದೃಷ್ಟಿಯಿಂದಲೂ ಪೂರಕವಾಗಿವೆ.
-ಎಂ.ಎ. ನಟರಾಜ್,
ಎಸಿಪಿ, ಸಂಚಾರಿ ಉಪವಿಭಾಗ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.