ಭರದಿಂದ ಸಾಗಿದೆ ಬಿಳಿಗಿರಿರಂಗನಾಥ, ಚಾಮರಾಜೇಶ್ವರ ದೇವಳದ ಬ್ರಹ್ಮರಥಗಳ ನಿರ್ಮಾಣ ಕಾರ್ಯ
ತಲಾ 1 ಕೋಟಿ ರೂ. ವೆಚ್ಚದಲ್ಲಿ ಬಿಳಿಗಿರಿರಂಗನಾಥ, ಚಾಮರಾಜೇಶ್ವರ ರಥ ನಿರ್ಮಾಣ ಕಾರ್ಯ
Team Udayavani, Sep 10, 2020, 11:40 AM IST
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ಬ್ರಹ್ಮರಥ ಹಾಗೂ ಚಾಮರಾಜನಗರ ಪಟ್ಟಣದ ಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಭಕ್ತರ ಆಶಯದಂತೆ ಮುಂಬರುವ ರಥೋತ್ಸವದ ವೇಳೆಗೆ ಈ ಎರಡೂ ರಥಗಳು ಸಿದ್ಧಗೊಳ್ಳುವ ನಿರೀಕ್ಷೆಯಿದೆ.
ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ಹಾಗೂ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರಣದಿಂದ ಕಳೆದ 4 ವರ್ಷಗಳಿಂದ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ಬಿಳಿಗಿರಿರಂಗನನಾಥಸ್ವಾಮಿ ಬ್ರಹ್ಮ ರಥೋತ್ಸವ ಸ್ಥಗಿತಗೊಂಡಿತ್ತು. ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ರಥ ಸುಟ್ಟುಹೋಗಿ ಕಳೆದ 4 ವರ್ಷಗಳಿಂದ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವ ನಿಂತು ಹೋಗಿತ್ತು. ಇದರಿಂದ ಭಕ್ತಾದಿಗಳಿಗೆ ಬಾರಿ ನಿರಾಶೆಯಾಗಿತ್ತು.
ರಥ ನಿರ್ಮಾಣ ಕೆಲಸವನ್ನು ಬೇಗ ಕೈಗೊಳ್ಳುವಂತೆ ಸಾಕಷ್ಟು ಒತ್ತಾಯವು ಭಕ್ತರಿಂದ, ಸಾರ್ವಜನಿಕರಿಂದ ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಬಿಳಿಗಿರಿರಂಗನಾಥ ಸ್ವಾಮಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥ ನಿರ್ಮಾಣಕ್ಕೆ ಮುಂದಾಗಿ ಲೋಕೋಪಯೋಗಿ ಇಲಾಖೆಗೆ ನಿರ್ಮಾಣ ಕಾಮಗಾರಿ ಹೊಣೆಯನ್ನು ವಹಿಸಿದೆ.
96, 99 ಲಕ್ಷ ವೆಚ್ಚದಲ್ಲಿ ರಥ ನಿರ್ಮಾಣ: ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥವನ್ನು 96 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥವನ್ನು 99 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆದು ಬೆಂಗಳೂರಿನ ರಥಶಿಲ್ಪಿ ಬಿ.ಎಸ್ ಬಡಿಗೇರ ಮತ್ತು ಸನ್ಸ್ ರವರಿಗೆ ಬ್ರಹ್ಮರಥ ನಿರ್ಮಾಣ ಕಾಮಗಾರಿಯನ್ನು ನಿರ್ಮಿಸಲು ಕಾರ್ಯಾದೇಶ ನೀಡಲಾಗಿದೆ. ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥಕ್ಕಾಗಿ ಬೇಕಾಗುವ 706.65 ಘನ ಅಡಿ ಬಿ ದರ್ಜೆಯ ತೇಗ ಮರ ಹಾಗೂ ಚಾಮರಾಜೇಶ್ವರ ಬ್ರಹ್ಮರಥಕ್ಕಾಗಿ ಅಗತ್ಯವಿರುವ 691.91 ಘನ ಅಡಿ ಬಿ ದರ್ಜೆಯ ತೇಗ ಮರವನ್ನು ಕಾರವಾರ ಜಿಲ್ಲೆಯ ಕಿರವತ್ತು ಸರ್ಕಾರಿ ಮರಮುಟ್ಟು ಸಂಗ್ರಹಾಲಯದಿಂದ ಖರೀದಿಸಲಾಗಿದೆ.
ಖರೀದಿಸಿದ ಈ ಮರವನ್ನು ಸುಮಾರು ಎರಡೂವರೆ ತಿಂಗಳ ಕಾಲ ಕತ್ತರಿಸಿ ಒಣಗಿಸಲು ಇಡಲಾಗಿತ್ತು. ಕತ್ತರಿಸಿ ಒಣಗಿಸಿದ ಬಳಿಕ ರಥದ ನಿರ್ಮಾಣ ಕಾಮಗಾರಿ ನಿರ್ವಹಿಸಲಿರುವ ಬಿ.ಎಸ್.ಬಡಿಗೇರ ಅವರ ಬೆಂಗಳೂರಿನಲ್ಲಿರುವ ವರ್ಕ್‌ಶಾಪ್‌ಗೆ ಸಾಗಿಸಲಾಗಿದ್ದು, ಅಲ್ಲಿಯೇ ರಥದ ನಿರ್ಮಾಣ ಕೆಲಸ ಭರದಿಂದ ನಡೆದಿದೆ.
ಕೆತ್ತನೆ ಕಾರ್ಯ: ಪ್ರಧಾನ ಶಿಲ್ಪಿ ಬಿ.ಎಸ್. ಬಡಿಗೇರ ಹಾಗೂ ಇತರೆ ಮುಖ್ಯ ಶಿಲ್ಪಿ ಶಿವಕುಮಾರ ಬಡಿಗೇರ, ಎಚರೇಶ ಬಡಿಗೇರ ಅವರ ನೇತೃತ್ವದಲ್ಲಿ 10 ರಿಂದ 13 ಶಿಲ್ಪಿಗಳು ರಥದ ನಿರ್ಮಾಣ, ಕೆತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಬಿಳಿಗಿರಿರಂಗನಾಥಸ್ವಾಮಿ ರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 29 ಫ್ರೇಮ್ ಗಳು ಬರಲಿವೆ. ಈಗಾಗಲೇ ಈ ಎಲ್ಲಾ 29 ಫ್ರೇಮ್‌ಗಳ ಕೆಲಸ ಪೂರ್ಣವಾಗಿದೆ. ಚಾಮರಾಜೇಶ್ವರ ಬ್ರಹ್ಮರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 26 ಫ್ರೇಮ್‌ಗಳು ಇರಲಿವೆ. ಇದರಲ್ಲಿ ಈಗಾಗಲೇ 20 ಫ್ರೇಮ್‌ಗಳು ಪೂರ್ಣಗೊಂಡಿವೆ.
ಫ್ರೇಮ್ ಕೆಲಸಗಳ ಬಳಿಕ ಪುರಾಣದಲ್ಲಿ ಬರುವ ದೇವತೆಗಳ ವಿಗ್ರಹ ಇತರೆ ಕುಸರಿ ಕೆತ್ತನೆ ಕೆಲಸ ಆರಂಭಿಸಬೇಕಿದೆ. ಇದಕ್ಕೂ ಮೊದಲು ರಥ ನಿರ್ಮಾಣ ವಾಗುತ್ತಿರುವ ಕಾರ್ಯಾಗಾರಕ್ಕೆ ದೇಗುಲದ ಆಗಮಿಕರನ್ನು ಕರೆದೊಯ್ದು ರಥ ನಿರ್ಮಾಣ ಕಾರ್ಯ ಪರಿಶೀಲಿಸಿ ಸೂಕ್ತ ಸಲಹೆ ಪಡೆಯುವಂತೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಮುಂಬರುವ ರಥೋತ್ಸವಕ್ಕೆ ರಥಗಳು ಸಿದ್ಧ: ಜಿಲ್ಲಾಧಿಕಾರಿ ಭಕ್ತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಚಾರಿತ್ರಿಕ, ಪುರಾಣ ಪ್ರಸಿದ್ಧ ಚಾಮರಾಜೇಶ್ವರ ಹಾಗೂ ಬಿಳಿಗಿರಿರಂಗನಾಥ ಸ್ವಾಮಿ ರಥ ನಿರ್ಮಾಣ ಕೆಲಸ ವೇಗದಿಂದ ನಡೆದಿದೆ. ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುವ ಚಿತ್ತಾ ನಕ್ಷತ್ರ ಪುಣ್ಯ ದಿನದಂದು ಬಿಳಿಗಿರಿರಂಗ ನಾಥಸ್ವಾಮಿ ಬ್ರಹ್ಮ ರಥೋತ್ಸವ ನಡೆದು ಕೊಂಡುಬಂದಿದೆ. ಅದೇರೀತಿ ಚಾಮರಾಜೇಶ್ವರ ರಥೋತ್ಸವವು ಆಷಾಢ ಮಾಸದಲ್ಲಿ ನಡೆಯಲಿದೆ. ಈ ಎರಡೂ ರಥಗಳ ನಿರ್ಮಾಣ ಕೆಲಸವು ಪೂರ್ಣಗೊಂಡು ನೂತನ ರಥಗಳೊಂದಿಗೆ ಮುಂಬರುವ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Cooperation: ನಬಾರ್ಡ್ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.