ಮಹಿಳಾ ಸುರಕ್ಷತಾ ಕಾಳಜಿ ಮೆರೆದ ಬಸ್ ಚಾಲಕ-ನಿರ್ವಾಹಕ!
ರಾತ್ರಿ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಬಿಡದೆ ಮನನೀಯ ಕಾರ್ಯ; ರಾಜ್ಯ ರಸ್ತೆ ಸಾರಿಗೆ ನಿಗಮದ ನಂಬಿಕೆ ಹೆಚ್ಚಿಸಿದ ಸಿಬ್ಬಂದಿ
Team Udayavani, Jul 1, 2022, 4:57 PM IST
ದಾವಣಗೆರೆ: ಚಿಲ್ಲರೆ ಇಲ್ಲವೆಂದು ಮಹಿಳೆ, ವೃದ್ಧರನ್ನು ಬಸ್‌ನಿಂದ ಮಾರ್ಗ ಮಧ್ಯೆಯೇ ಇಳಿಸಿ ಹೋದ ಘಟನೆ, ರಾತ್ರಿ ಹೊತ್ತು ಎಷ್ಟು ಕೋರಿದರೂ ಬೇಕಾದಲ್ಲಿ ಬಸ್ ನಿಲ್ಲಿಸದೆ ಮುಂದೆ ಸಾಗುವ ಘಟನೆಗಳೇ ಹೆಚ್ಚಾಗಿ ಕೇಳಿ ಬರುತ್ತಿರುವ ಇಂಥ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ತಡರಾತ್ರಿ ಒಂಟಿಯಾಗಿ ಬಿಡದೆ ಕುಟುಂಬದವರು ಬರುವವರೆಗೆ ಕಾದು ಮಾನವೀಯತೆ ಮೆರೆದ ಘಟನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಾಕ್ಷಿಯಾಗಿದೆ.
ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಯಾಣದ ನಂತರವೂ ನಿಗಾ ವಹಿಸಿದ ಅದರಲ್ಲಿಯೂ ಮಹಿಳಾ ಪ್ರಯಾಣಿಕರ ಸುರಕ್ಷತೆ ಬಗ್ಗೆ ವಿಶೇಷ ಕಾಳಜಿ ವಹಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗ-1ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸ್ ಚಾಲಕ ಯೋಗೀಶ್ ಜಿ.ಎಂ. ಹಾಗೂ ನಿರ್ವಾಹಕ ಯೋಗೀಶ್ ದಾದಾಪುರ ಮನನೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಏನಿದು ಪ್ರಕರಣ?: ಮೈಸೂರು-ದಾವಣಗೆರೆ ಐರಾವತ್ ಬಸ್‌ನಲ್ಲಿ (ಕೆಎ-17- ಎಫ್ 1147) ರಾತ್ರಿ ಮೈಸೂರಿನಿಂದ ಹತ್ತಿದ ಮಹಿಳಾ ಪ್ರಯಾಣಿಕರೊಬ್ಬರು ಹಿರಿಯೂರು ವೃತ್ತದಲ್ಲಿ ಇಳಿದರು. ಆಗ ನಸು ಮುಂಜಾವು 3:45 ಗಂಟೆ ಆಗಿತ್ತು. ಆ ಮಹಿಳೆ ಜತೆ ಬೇರೆ ಯಾವ ಸಹ ಪ್ರಯಾಣಿಕರೂ ಇಳಿದಿರಲಿಲ್ಲ. ಅತ್ತ ಕುಟುಂಬದವರೂ ವೃತ್ತದ ಬಳಿ ಬಂದಿರಲಿಲ್ಲ. ನಿರ್ಜನ ಪ್ರದೇಶದಲ್ಲಿ ರಾತ್ರಿ ಹೊತ್ತು ಒಂಟಿ ಮಹಿಳೆಯನ್ನು ಬಿಟ್ಟು ಮುಂದೆ ಸಾಗಲು ಬಸ್ ನಿರ್ವಾಹಕ ಹಾಗೂ ಚಾಲಕರಿಗೆ ಮನಸ್ಸಾಗಲಿಲ್ಲ. ಮಹಿಳೆಯ ಕುಟುಂಬದವರು ಬರುವವರೆಗೂ 10 ನಿಮಿಷ ಕಾಯ್ದರು. ಅವರ ಪತಿ ಬಂದ ಬಳಿಕವೇ ಬಸ್ ಓಡಿಸಿದರು. (ಕಾರಣಾಂತರದಿಂದ ಪತಿ ವೃತ್ತದ ಬಳಿ ಬರುವುದು ಸ್ವಲ್ಪ ತಡವಾಗಿತ್ತು) ಚಾಲಕ-ನಿರ್ವಾಹಕರ ಈ ಕಾಳಜಿಯನ್ನು ಬಸ್ ಪ್ರಯಾಣಿಕರು ಹಾಗೂ ನಾಗರಿಕರು ಶ್ಲಾಘಿಸಿದರು.
ಸನ್ಮಾನಿಸಿ ಗೌರವಿಸಿದರು: ಬಸ್ ಚಾಲಕ-ನಿರ್ವಾಹಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸುಮ್ಮನಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಆದರೆ ಆ ಮಹಿಳಾ ಪ್ರಯಾಣಿಕರ ಪುತ್ರ, ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕ ತೋರಿದ ಮಾನವೀಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಗಮನಾರ್ಹ ಸೇವೆ ಬಗ್ಗೆ ನಿಗಮದ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಸಂದೇಶ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ತಲುಪಿತು. ಕೂಡಲೇ ವ್ಯವಸ್ಥಾಪಕ ನಿರ್ದೇಶಕರು ಇಂಥ ಮಾನವೀಯ ಕಾರ್ಯ ಇತರ ಸಿಬ್ಬಂದಿಗೂ ಪ್ರೇರಣೆಯಾಗಬೇಕು ಎಂಬ ದೃಷ್ಟಿಯಿಂದ ಅವರನ್ನು ಅಭಿನಂದಿಸಲು ವಿಭಾಗೀಯ ಅಧಿಕಾರಿಗೆ ಸೂಚಿಸಿದರು. ಆ ಪ್ರಕಾರ ದಾವಣಗೆರೆ ಘಟಕದಲ್ಲಿ ಇಬ್ಬರಿಗೂ ಅಭಿನಂದನಾ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ತಮ್ಮ ಕರ್ತವ್ಯದ ವೇಳೆ ಮಾನವೀಯತೆ ಮೆರೆದ ಚಾಲಕ-ನಿರ್ವಾಹಕ ಸಿಬ್ಬಂದಿಯ ಈ ಕಾರ್ಯದಿಂದ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ಹಾಗೂ ಸೇವೆ ಬಗ್ಗೆ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಇನ್ನಷ್ಟು ಹೆಚ್ಚಾದಂತಾಗಿದೆ.
ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಉತ್ತಮ ನಡವಳಿಕೆ ತೋರಿದ್ದಾರೆ. ಪ್ರಯಾಣಿಕರ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಸಾರಿಗೆ ನಿಗಮದ ಸಿಬ್ಬಂದಿ ಸದಾ ಮುಂಚೂಣಿಯಲ್ಲಿರುತ್ತಾರೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಜತೆಗೆ ಸಾರ್ವಜನಿಕ ವಲಯದಲ್ಲಿ ನಿಗಮದ ಬಗ್ಗೆ ಒಳ್ಳೆಯ ನಂಬಿಕೆ, ಭಾವನೆ ಮೂಡುವಂತೆ ಮಾಡಿದೆ. ಇದು ನಿಗಮದ ಇತರ ಸಿಬ್ಬಂದಿಗೂ ಆದರ್ಶಪ್ರಾಯವಾಗಿದೆ. -ವಿ.ಅನ್ಬು ಕುಮಾರ್, ವ್ಯವಸ್ಥಾಪಕ
ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ನಲ್ಲಿ ಬಂದ ಮಹಿಳೆಯನ್ನು ಹಿರಿಯೂರು ಬಸ್ ನಿಲ್ದಾಣದಲ್ಲಿ ಇಳಿಯಲು ತಿಳಿಸಿದೆವು. ಅವರು ತಮ್ಮ ಕುಟುಂಬದವರು ಸರ್ಕಲ್‌ಗೆ ಬರುತ್ತಾರೆ, ಅಲ್ಲಿ ಇಳಿಸಿ ಎಂದರು. ಆ ಪ್ರಕಾರ ನಾವು ಅವರನ್ನು ಹಿರಿಯೂರು ಸರ್ಕಲ್‌ನಲ್ಲಿ ಇಳಿಸಿದೆವು. ಬೆಳಗಿನ ಜಾವ 3:45 ಗಂಟೆಯಾಗಿದ್ದರಿಂದ ಆಗ ಜನರಾರೂ ಇರಲಿಲ್ಲ. ಅವರನ್ನು ಒಂಟಿಯಾಗಿ ಬಿಟ್ಟು ಹೋಗುವುದು ಸರಿಯಲ್ಲವೆಂದು 5-10 ನಿಮಿಷ ಕಾದೆವು. ಅವರ ಕುಟುಂಬದವರು ಬಂದ ಮೇಲೆ ಬಸ್ ಚಾಲನೆ ಮಾಡಿದೆವು. ಈ ಕಾರ್ಯವನ್ನು ಮೆಚ್ಚಿ ನಿಗಮದಿಂದ ಸನ್ಮಾನಿಸಿ ಅಭಿನಂದಿಸಿರುವುದು ಖುಷಿ ತಂದಿದೆ. –ಯೋಗೀಶ್ ದಾದಾಪುರ, ಬಸ್ ನಿರ್ವಾಹಕ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.