ಇಂದಿನಿಂದ ಸೆಂಟ್ರಲ್ ಮಾರ್ಕೆಟ್‌ನಲ್ಲೇ ವ್ಯಾಪಾರ: ಸಗಟು ವ್ಯಾಪಾರಸ್ಥರ ನಿರ್ಧಾರ
ಅವಕಾಶ ನೀಡುವುದಿಲ್ಲ ಎಂದ ಪಾಲಿಕೆ; ಬಿಗಿ ಪೊಲೀಸ್ ಬಂದೋಬಸ್ತ್
Team Udayavani, Jun 9, 2020, 5:21 AM IST
ಮಹಾನಗರ: ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನಿಂದ ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್ ಗೆ ಎರಡೂವರೆ ತಿಂಗಳ ಹಿಂದೆ ಸ್ಥಳಾಂತರ ಗೊಂಡಿದ್ದ ಸಗಟು ವ್ಯಾಪಾರಸ್ಥರು ಇದೀಗ ಜೂ. 9ರಿಂದ ಮತ್ತೆ ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನಲ್ಲಿಯೇ ವ್ಯಾಪಾರ ಮುಂದುವರಿಸಲು ತೀರ್ಮಾನಿಸಿದ್ದಾರೆ.
ನಗರದಲ್ಲಿ ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಮುಸ್ತಾಫ ಕುಂಞಿ, “ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸೆಂಟ್ರಲ್ ಮಾರ್ಕೆಟ್‌ನಲ್ಲಿ ಅಸಾಧ್ಯವೆಂಬ ಕಾರಣಕ್ಕೆ ಪಾಲಿಕೆಯು ಸಗಟು ವ್ಯಾಪಾರಸ್ಥರನ್ನು ಎ. 8ರಂದು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಿತ್ತು. ಇದೀಗ ಲಾಕ್‌ಡೌನ್ ಮುಕ್ತಾಯಗೊಳ್ಳುತ್ತಿದೆ. ಹಾಗಾಗಿ ಜೂ. 9ರಿಂದ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ನಾವೆಲ್ಲ ಸಿದ್ಧರಾಗಿದ್ದೇವೆ. ಇದಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅವಕಾಶ ನೀಡಬೇಕು. ಜತೆಗೆ ಪೊಲೀಸ್ ಭದ್ರತೆ ಕೂಡ ಒದಗಿಸಬೇಕು ಎಂದು ಹೇಳಿದರು.
ಸೆಂಟ್ರಲ್ ಮಾರ್ಕೆಟ್‌ನಲ್ಲಿ ಒಟ್ಟು 151 ಮಂದಿ ಸಗಟು ವ್ಯಾಪಾರಸ್ಥರು ಹಾಗೂ 337 ಮಂದಿ ಚಿಲ್ಲರೆ ವ್ಯಾಪಾರಸ್ಥರಿದ್ದರು. ಸಗಟು ವ್ಯಾಪಾರಸ್ಥರು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರವಾಗಿದ್ದರು. ಚಿಲ್ಲರೆ ವ್ಯಾಪಾರಸ್ಥರು ಇಂದಿನವರೆಗೂ ಮನೆಯಲ್ಲಿಯೇ ಇದ್ದಾರೆ. ಜೂ. 9ರಂದು ಸಗಟು ವ್ಯಾಪಾರಸ್ಥರು ವ್ಯಾಪಾರ ಆರಂಭಿಸುತ್ತೇವೆ. ಅನಂತರ ಚಿಲ್ಲರೆ ವ್ಯಾಪಾರಸ್ಥರಿಗೂ ಅವಕಾಶ ಮಾಡಿ ಕೊಡಲು ಪಾಲಿಕೆಯನ್ನು ಒತ್ತಾಯಿಸುತ್ತೇವೆ. ಈ ವಿಚಾರದಲ್ಲಿ ನಾವೆಲ್ಲ ವ್ಯಾಪಾರಸ್ಥರೂ ಒಂದಾಗಿದ್ದೇವೆ ಎಂದು ಮುಸ್ತಾಫ ಹೇಳಿದರು.
ಸಾಮಾಜಿಕ ಅಂತರಕ್ಕೆ ಸಮಸ್ಯೆಯಾಗದು
ಸಗಟು ವ್ಯಾಪಾರಸ್ಥರು ಮಾರುಕಟ್ಟೆಯ ಒಳಭಾಗ ದಲ್ಲಿ ವ್ಯಾಪಾರ ನಡೆಸುವುದಿಲ್ಲ. ಮಾರುಕಟ್ಟೆಯ ಹೊರಭಾಗದಲ್ಲಿ ವ್ಯಾಪಾರ ಮಾಡುತ್ತಾರೆ. ಹಾಗಾಗಿ ಸಾಮಾಜಿಕ ಅಂತರ ಪಾಲನೆಗೆ ಸಮಸ್ಯೆಯಾಗದು. ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೆ ನಗರದ ಆರ್ಥಿಕತೆಯ ಮೇಲೆಯೂ ಹೊಡೆತ ಬೀಳುತ್ತಿದೆ. ಹಾಗಾಗಿ ಜಿಲ್ಲಾಡಳಿತ ಸಹಕರಿಸಬೇಕು ಎಂದವರು ಮನವಿ ಮಾಡಿದರು.
ಸೆಂಟ್ರಲ್ ಮಾರ್ಕೆಟ್‌ನಲ್ಲಿ ಯಾರೂ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರಲಿಲ್ಲ. ಎಲ್ಲ ವ್ಯಾಪಾರಸ್ಥರಿಗೂ ಪಾಲಿಕೆ ಪರವಾನಿಗೆ ನೀಡಿತ್ತು. ಬಾಡಿಗೆ ಕೂಡ ಪಾವತಿಸಲಾಗುತ್ತಿತ್ತು. 103 ಮಂದಿ ಚಿಲ್ಲರೆ ವ್ಯಾಪಾರಸ್ಥರು ಮಾರುಕಟ್ಟೆಯೊಳಗೆ ಸ್ಟಾಲ್‌ಗಳಲ್ಲಿ ಹಾಗೂ 234 ಮಂದಿ ಚಿಲ್ಲರೆ ವ್ಯಾಪಾರಸ್ಥರು ಮಾರುಕಟ್ಟೆಯೊಳಗೆ ಯಾರ್ಡ್ ನಲ್ಲಿ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿಸಿದರು.
ಹೈಕೋರ್ಟ್ ತಡೆಯಾಜ್ಞೆ
ಸಂಘದ ಕಾನೂನು ಸಲಹೆಗಾರ ಮನ್‌ಮೋಹನ್ ಜೋಯಿಸ್ ಮಾತನಾಡಿ, ವ್ಯಾಪಾರಿಗಳ ಸ್ಥಳಾಂತರ ಹಾಗೂ ಸೆಂಟ್ರಲ್ ಮಾರ್ಕೆಟ್ ಅನ್ನು ಕೆಡವಿ ಹೊಸ ಕಟ್ಟಡ ಕಟ್ಟುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಗಾಗಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆ ಅಡ್ಡಿಪಡಿಸಲು ಅವಕಾಶವಿಲ್ಲ. ಅಲ್ಲದೆ ಸೆಂಟ್ರಲ್ ಮಾರ್ಕೆಟ್ ಸಬ್ ಯಾರ್ಡ್ ಆಗಿದೆ. ಹಾಗಾಗಿ ಅದರ ಮೇಲೆ ಪಾಲಿಕೆಗೆ ಅಧಿಕಾರವಿಲ್ಲ. ಸರಕಾರದಿಂದ ಪೂರ್ವಾನುಮತಿ ಪಡೆದರೆ ಮಾತ್ರ ಅಧಿಕಾರ ಬರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲ್ಯಾನ್, ಉಪಾಧ್ಯಕ್ಷ ಎ.ಜೆ. ಶೇಖರ್, ನ್ಯೂ ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.
ಸೆಂಟ್ರಲ್ ಮಾರ್ಕೆಟ್‌ಗೆ ಬೀಗ
ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಹಾಗೂ ಮಾರುಕಟ್ಟೆಯ ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಸಗಟು ವ್ಯಾಪಾರಸ್ಥರನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಚಿಲ್ಲರೆ ವ್ಯಾಪಾರಸ್ಥರಿಗಾಗಿ ನೆಹರೂ ಮೈದಾನದ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಆರಂಭಿಸಲಾಗಿತ್ತು. ಇದರ ನಿರ್ಮಾಣಕ್ಕೆ ಕೆಲವು ತಿಂಗಳುಗಳು ಬೇಕಾಗುವುದರಿಂದ ಅಲ್ಲಿಯವರೆಗೆ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲು ಪುರಭವನ, ಲೇಡಿಗೋಶನ್ ಎದುರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ ತಮಗೆ ಮಾಡಿಕೊಟ್ಟ ಶೆಡ್ ಅಸಮರ್ಪಕವಾಗಿದೆ. ಅದರಲ್ಲಿ ವ್ಯಾಪಾರ ಮಾಡಲು ಬೇಕಾದ ಮೂಲ ಸೌಕರ್ಯಗಳೇ ಇಲ್ಲ ಎಂದು ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ಮಾಡಲು ನಿರಾಕರಿಸಿದ್ದಾರೆ. ಹಾಗಾಗಿ ಶೆಡ್‌ಗಳು ಪಾಳುಬಿದ್ದಿವೆ. ಸೆಂಟ್ರಲ್ ಮಾರ್ಕೆಟ್‌ಗೆ ಸದ್ಯ ಬೀಗ ಹಾಕಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ.
ವ್ಯಾಪಾರಕ್ಕೆ ಅವಕಾಶವಿಲ್ಲ
ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಬಾಳಿಕೆ ಮುಗಿದಿರುವ ಬಗ್ಗೆ, ಅದನ್ನು ಕೆಡವು ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಹಾಗೂ ಎನ್‌ಐಟಿಕೆ ವರದಿ ನೀಡಿವೆ. ಅದರಂತೆ ಹೊಸ ಕಟ್ಟಡ ನಿರ್ಮಿಸಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಲಾಗುವುದು. ಅದುವರೆಗೆ ತಾತ್ಕಾಲಿಕವಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪ್ರಸ್ತುತ ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಸೆಂಟ್ರಲ್ ಮಾರ್ಕೆಟ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಜೂ.9ರಂದು ಸೆಂಟ್ರಲ್ ಮಾರ್ಕೆಟ್‌ಗೆ ವ್ಯಾಪಾರಕ್ಕೆ ತೆರಳುವ ಬಗ್ಗೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ಗೆ ಪೊಲೀಸರಿಗೆ ತಿಳಿಸಲಾಗಿದೆ.
-ಸಂತೋಷ್ ಕುಮಾರ್
ಉಪ ಆಯುಕ್ತ, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.