ಸಂಪುಟ ವಿಸ್ತರಣೆಗೆ ಗುರುಬಲ : ಗುರುವಾರ ನೂತನ ಸಚಿವರ ಪ್ರಮಾಣ ವಚನ
ವಿಸ್ತರಣೆ-ಪುನಾರಚನೆ ಬಗೆಹರಿಯದ ಗೊಂದಲ
Team Udayavani, Feb 3, 2020, 7:00 AM IST
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಸಂಪುಟ ಸರ್ಕಸ್ ಅಂತಿಮಗೊಂಡಿದ್ದು, ಗುರುವಾರ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಮಾರಂಭಕ್ಕೆ ಸಮಯ ನಿಗದಿಯಾಗಿದ್ದರೂ ಆಗುವುದು ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಬಗ್ಗೆ ಸಿಎಂ ಬಿಎಸ್‌ವೈ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.
ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಮಂದಿ ಮತ್ತು ಮೂಲ ಬಿಜೆಪಿಯ ಮೂವರು ಗುರುವಾರ ಸಚಿವರಾಗುವ ಸಾಧ್ಯತೆ ಇದೆ ಎಂದು ಸ್ವತಃ ಸಿಎಂ ಬಿಎಸ್‌ವೈ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಸ್ಪರ್ಧಿಸದಿದ್ದವರು ಮತ್ತು ಸೋತವರಿಗೆ ಸ್ಥಾನ ಇಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ.
ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಮೂಲ ಬಿಜೆಪಿ ಕೋಟಾದಡಿ ಸ್ಥಾನಮಾನಕ್ಕಾಗಿ ಸಚಿವಾಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ಮೂರು ಸ್ಥಾನಗಳಿಗೆ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಒತ್ತಡ ಹೇರಲಾರಂಭಿಸಿದ್ದಾರೆ.
ಇನ್ನೊಂದೆಡೆ ಉಪಚುನಾವಣೆಯಲ್ಲಿ ಗೆದ್ದವರು, ಸೋತವರಿಗೂ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಯಡಿಯೂರಪ್ಪ ಇನ್ನಷ್ಟು ದಿನ ಒತ್ತಡ ಸಹಿಸಿಕೊಳ್ಳುವುದು ಅನಿವಾರ್ಯವೆನಿಸಿದೆ.
ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಎಚ್. ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜ್ ಈಗ ಮತ್ತಷ್ಟು ದಿನ ಸ್ಥಾನಮಾನಕ್ಕಾಗಿ ಕಾಯುವಂತಾಗಿದ್ದು, ವಿಶ್ವನಾಥ್ ಅವರಂತೂ ಸಿಎಂ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಮಾತುಕತೆಯ ವಿವರದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಯಡಿಯೂರಪ್ಪ ರವಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಪಡಿಸಿರುವುದನ್ನು ಘೋಷಿಸಿದರು.
13 ಮಂದಿ ಪ್ರಮಾಣ
ಫೆ. 6ರಂದು ಬೆಳಗ್ಗೆ 10.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ರಾಜಭವನದಲ್ಲಿ ನಡೆಯಲಿದೆ. ಸದ್ಯ ಉಪಚುನಾವಣೆಯಲ್ಲಿ ಗೆದ್ದ 10 ಮಂದಿ ಮತ್ತು ಮೂಲ ಬಿಜೆಪಿಯ ಮೂವರಿಗೆ ಸ್ಥಾನ ನೀಡುವ ಬಗ್ಗೆ ಚಿಂತಿಸಲಾಗಿದೆ. ಸದ್ಯದಲ್ಲೇ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ ವಾಗಲಿರುವುದರಿಂದ ಖಾತೆ ಹಂಚಿಕೆಯನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದರು.
ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಸಿಗದು ಎಂದ ಯಡಿಯೂರಪ್ಪ, ಉಪಚುನಾವಣೆಯಲ್ಲಿ ಗೆದ್ದ ಬೆಳಗಾವಿಯ ಮೂವರಿಗೂ ಸಚಿವ ಸ್ಥಾನ ಸಿಗುವುದೇ ಎಂಬ ಬಗ್ಗೆಯೂ ನೋಡೋಣ ಎಂದಷ್ಟೇ ತಿಳಿಸಿದರು.
ಸೋತವರಿಗೆ ಸ್ಥಾನವಿಲ್ಲ
17 ಮಂದಿಯ ರಾಜೀನಾಮೆಯಿಂದಾಗಿ ನಾನು ಇಲ್ಲಿ ಕುಳಿತಿದ್ದೇನೆ. ಆರ್. ಶಂಕರ್ ಅವರನ್ನು ಮುಂದೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವರನ್ನಾಗಿಸಲಾಗುವುದು. ಯಾರಿಗೆ ಏನು ಭರವಸೆ ನೀಡಿದ್ದೇನೆಯೋ ಅದರಂತೆ ಮಾಡುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸೋತವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಹೇಳಿಕೆ ಬೆನ್ನಲ್ಲೇ ರವಿವಾರ ಮಧ್ಯಾಹ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಧವಳಗಿರಿ ನಿವಾಸದಲ್ಲಿ ಭೇಟಿ ಯಾಗಿ ಚರ್ಚಿಸಿದರು.
ಸಿಎಂ ಭೇಟಿ ಮಾಡಿದ ಎಂಟಿಬಿ
ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಹೇಳಿಕೆ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ಭೇಟಿಯಾಗಿ ಚರ್ಚಿಸಿದರು. ತನಗೆ ಸಚಿವ ಸ್ಥಾನ ನೀಡಬೇಕು ಇಲ್ಲವೇ ತನ್ನ ಸೋಲಿಗೆ ಕಾರಣರಾದ ಸಂಸದ ಬಿ.ಎನ್. ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ಮೂಲಕ ಒತ್ತಡ ತಂತ್ರ ಅನುಸರಿಸಿದ್ದಾರೆ.
ಸಚಿವ ಸ್ಥಾನ ಸಿಗದಿದ್ದರೆ ಬೇಸರವಿಲ್ಲ. ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆದುಕೊಂಡು ಇರುತ್ತೇನೆ ಎಂಬುದಾಗಿ ಶಾಸಕ ಮಹೇಶ್ ಕುಮಟಳ್ಳಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರೆ, ಶಾಸಕ ಶ್ರೀಮಂತ ಪಾಟೀಲ್, ಗೆದ್ದ ಎಲ್ಲರನ್ನು ಸಚಿವರನ್ನಾಗಿ ಮಾಡದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.
ಸಚಿವ ಸ್ಥಾನ ಅಸಾಧ್ಯ
ಉಪಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡಲು ಸುಪ್ರೀಂ ಕೋರ್ಟ್ ಆದೇಶದಂತೆ ಅವಕಾಶ ಇಲ್ಲ. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಅನಂತರ ಸಚಿವ ಸ್ಥಾನ ನೀಡಲು ಅವಕಾಶ ಇದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ. ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.
ಅದರ ಅರ್ಥ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ ಬನ್ನಿ. ಒಂದೊಮ್ಮೆ ವಿಧಾನಸಭೆಗೆ ಆಯ್ಕೆಯಾಗದಿದ್ದರೂ ಪರಿಷತ್‌ಗಾದರೂ ಆಯ್ಕೆಯಾಗಲೇಬೇಕು. ಸಚಿವ ಸ್ಥಾನ ನೀಡಿ ಅನಂತರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲು ನ್ಯಾಯಾಲಯದ ತೀರ್ಪಿನ ಪ್ರಕಾರ ಕಷ್ಟಸಾಧ್ಯ ಎಂದು ಹೈಕೋರ್ಟ್‌ನ ಹಿರಿಯ ವಕೀಲರೂ ಆದ ಕಾನೂನು ತಜ್ಞರೊಬ್ಬರು ಹೇಳಿದ್ದಾರೆ.
ವಿಶ್ವನಾಥ್ ಅಸಮಾಧಾನ
ಅತ್ತ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಬಿಎಸ್‌ವೈ ಹೇಳಿಕೆ ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್‌ಗೆ ನಿರಾಸೆ ತಂದಿದೆ. ಆರ್. ಶಂಕರ್ ಕೂಡ ಜೂನ್‌ವರೆಗೆ ಕಾಯಬೇಕಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ನಾವು ಬಾವುಟ ಹಿಡಿದು ನಿಂತಿದ್ದವರು. ಸೋತು ಸುಣ್ಣವಾಗಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಲಿಲ್ಲವೇ? ನಾವೇನು ಮಾಡಿದ್ದೇವೆ ಎಂದು ಎಚ್. ವಿಶ್ವನಾಥ್ ಮೈಸೂರಿನಲ್ಲಿ ಮಾತನಾಡುತ್ತಾ ಅಸಮಾಧಾನ ಹೊರಹಾಕಿದ್ದಾರೆ.
ಯಾರಿಗೆಲ್ಲ ಸ್ಥಾನ?
ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಆನಂದ್ ಸಿಂಗ್, ಗೋಪಾಲಯ್ಯ, ಡಾ| ಕೆ. ಸುಧಾಕರ್, ಮಹೇಶ್ ಕುಮಟಳ್ಳಿ / ಶ್ರೀಮಂತ ಪಾಟೀಲ್, ಶಿವರಾಮ್ ಹೆಬ್ಟಾರ್, ನಾರಾಯಣಗೌಡ.
ಮೂಲ ಬಿಜೆಪಿಗರು (ಮೂವರು ಮಾತ್ರ)
ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್ ಅಥವಾ ಯೋಗೇಶ್ವರ್.
ಮೂಲ ಬಿಜೆಪಿಗರ ಒತ್ತಡ
ಮೂಲ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡುವ ಚಿಂತನೆ ಇದೆ ಎಂದು ಬಿಎಸ್‌ವೈ ಹೇಳುತ್ತಿದ್ದಂತೆ ಆಕಾಂಕ್ಷಿಗಳಾದ ಆನಂದ್ ಮಾಮನಿ, ಎಂ.ಪಿ. ಕುಮಾರಸ್ವಾಮಿ ಒತ್ತಡ ಹೇರಲಾರಂಭಿಸಿದ್ದಾರೆ. ಶಿವರಾಮ ಹೆಬ್ಟಾರ್ ಅವರಿಗೆ ಸಚಿವಗಿರಿ ನೀಡಿದರೆ ಉತ್ತರ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ ಸಿಗಲಿದೆ.
ಒತ್ತಡ ತಂತ್ರ
ವಿಧಾನ ಪರಿಷತ್‌ಗೆ ತನ್ನನ್ನೇ ಕಳುಹಿಸಬೇಕು ಎಂದು ಆರ್.ಶಂಕರ್ ಸಿಎಂ ಬಿಎಸ್‌ವೈ ಮೇಲೆ ಒತ್ತಡ ಹೇರಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿ ಹೆಸರು ಅಂತಿಮಗೊಳಿಸಿದೆ. ಇದು ಶಂಕರ್‌ಗೆ ಆತಂಕ ಮೂಡಿಸಿದೆ.
ಜೂನ್‌ವರೆಗೂ ಕಾಯಿರಿ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಈಗಲೇ ಸಚಿವ ಸ್ಥಾನ ಸಿಗದಿರುವುದಕ್ಕೆ ತನ್ನ ಆಪ್ತರ ಬಳಿ ಶಂಕರ್ ಬೇಸರ ಹೊರಹಾಕಿದ್ದಾರೆ.
ವಿಸ್ತರಣೆಯೋ? ಪುನಾರಚನೆಯೋ?
ಗುರುವಾರ ನಡೆಯುವುದು ವಿಸ್ತರಣೆಯೋ ಪುನಾರಚನೆಯೋ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಮೂಲ ಬಿಜೆಪಿಗರ ಪೈಕಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಒಲಿಯುವ ಮಾತು ಕೇಳಿಬಂದಿದೆ. 17 ಶಾಸಕರ ವಿಶ್ವಾಸ ಗಳಿಸಿ ರಾಜೀನಾಮೆ ನೀಡಿದ ಅನಂತರವೂ ಅವರು ಒಗ್ಗಟ್ಟಾಗಿ ಇರುವಂತೆ ನೋಡಿಕೊಂಡು ಸಹಕರಿಸಿದ ಸಿ.ಪಿ. ಯೋಗೇಶ್ವರ್ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂಬುದಾಗಿ ವರಿಷ್ಠರ ಸೂಚನೆ ಇದ್ದಂತಿದೆ. ಆದರೆ ಇದಕ್ಕೆ ಹಿರಿಯ ಶಾಸ ಕರು ಅಸ ಮಾ ಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಇವರನ್ನು ಸಿಎಂ ಬಿಎಸ್‌ವೈ ಸಮಾಧಾನ ಪಡಿಸಿದ್ದಾರೆ ಎನ್ನಲಾಗುತ್ತಿದೆ.
ಹಾಲಿ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಇನ್ನೂ 6 ತಿಂಗಳು ಪೂರ್ಣಗೊಂಡಿಲ್ಲ. ಹಾಗಾಗಿ ಪುನಾರಚನೆ ಸಾಧ್ಯತೆ ಬಹಳ ಕಡಿಮೆ.
ಖಾತೆಗಳು ಬದಲಾವಣೆಯಾಗಬಹುದು. ಜೂನ್‌ನಲ್ಲಿ ವಿಧಾನ ಪರಿಷತ್‌ನ 12 ಸ್ಥಾನ ತೆರವಾಗಲಿದ್ದು, ಆ ಹೊತ್ತಿಗೆ ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Mahalingpur: ಹೊಸ ಬಸ್ ನಿಲ್ದಾಣದಲ್ಲಿ ಹಳೆ ಸಮಸ್ಯೆಗಳು
Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
MUST WATCH
ಹೊಸ ಸೇರ್ಪಡೆ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Mahalingpur: ಹೊಸ ಬಸ್ ನಿಲ್ದಾಣದಲ್ಲಿ ಹಳೆ ಸಮಸ್ಯೆಗಳು
Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.